ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನಿಸುವ ಸಿನೆಮಾ “Radical”

Most read

“Radical” ಚಲನಚಿತ್ರದ ಆಶಯವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಮುಂದಿನ ತಲೆಮಾರು ಪ್ರಬುದ್ಧವಾಗುತ್ತದೆ, ಅಧ್ಯಯನಶೀಲವಾಗುತ್ತದೆ, ವಿಚಾರವಂತಿಕೆ ರೂಢಿಸಿಕೊಳ್ಳುತ್ತದೆ. ನಮ್ಮ ಕನ್ನಡ ಚಲನಚಿತ್ರ ನಿರ್ಮಾತೃಗಳು ಹೊಡಿ ಬಡಿ ಎನ್ನುವ ಹಿಂಸಾತ್ಮಕ ಸಿನೆಮಾಗಳನ್ನು ಬಿಟ್ಟು ‘ರ್ಯಾಡಿಕಲ್’ ನಂತಹ ಸಿನೆಮಾಗಳನ್ನು ನಿರ್ಮಿಸಿದರೆ ಸಮಾಜ ಸುಧಾರಣೆ ಆಗಬಹುದು. ಮುಂದಿನ ಪೀಳಿಗೆಯಾದರೂ ಹಿಂಸೆಗಿಳಿಯದೇ ವಿವೇಚನೆಯುಳ್ಳವರಾಗಬಹುದು – ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಮೆಕ್ಸಿಕೋ ದೇಶದ ಸ್ಪ್ಯಾನಿಷ್ ಭಾಷೆಯ ಅತ್ಯುತ್ತಮ ಚಲನಚಿತ್ರ “ರ್ಯಾಡಿಕಲ್” ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ಜೋಶುವಾ ದಾವಿಸ್ ರವರ “A Radical Way of Unleashing a Generation of Geniuses” ಎನ್ನುವ ಲೇಖನವನ್ನು ಆಧರಿಸಿ ಕ್ರಿಸ್ಟೋಪರ್ ಜಲ್ಲಾ ರವರು ಚಿತ್ರಕಥೆ ರಚಿಸಿ ನಿರ್ದೇಶಿಸಿದ ಈ ಸಿನೆಮಾ ಮೆಕ್ಸಿಕೋ ದೇಶದಲ್ಲಿ ಬಾಕ್ಸ್ ಆಫೀಸ್ ಸೂರೆ ಮಾಡಿತ್ತು.  ಇದೊಂದು ಸತ್ಯಕಥೆ ಆಧಾರಿತ ಸಿನೆಮಾ ಎನ್ನುವುದು ವಿಶೇಷ.

ಶಿಕ್ಷಣ ವ್ಯವಸ್ಥೆಯ ನ್ಯೂನತೆಗಳ ಬಗ್ಗೆ ಬೇಕಾದಷ್ಟು ಚರ್ಚೆಗಳನ್ನು ಮಾಡಲಾಗಿದೆ. ಪಠ್ಯಕ್ರಮ ಸರಿ ಇಲ್ಲ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಇಲ್ಲ, ಕಲಿಕೆಗೆ ಪೂರಕವಾದ ವಾತಾವರಣವಿಲ್ಲ ಎನ್ನುವ ಆರೋಪಗಳನ್ನು ಸ್ವತಃ ಶಿಕ್ಷಕರೇ ಮಾಡುತ್ತಿರುತ್ತಾರೆ. ಆದರೆ ನಿಜವಾದ ಸಮಸ್ಯೆ ಇರುವುದು ಶಿಕ್ಷಕರು ಕಲಿಸುವ ರೀತಿಯಲ್ಲಿ ಎಂಬುದನ್ನು ಈ ಸಿನೆಮಾ ಮನಮುಟ್ಟುವಂತೆ ಹೇಳುತ್ತದೆ.

ಕೆಲವು ವರ್ಷಗಳ ಹಿಂದೆ ಅಮೀರ್ ಖಾನ್ ರವರ ತ್ರೀ ಈಡಿಯಟ್ ಸಿನೆಮಾ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಸಿನೆಮಾದ ಕಥೆಗೂ ಹಾಗೂ ರ್ಯಾಡಿಕಲ್ ಕತೆ ಮತ್ತು ಸಿನೆಮಾ ನಿರೂಪಣಾ ಕ್ರಮಕ್ಕೂ ಯಾವುದೇ ಹೋಲಿಕೆ ಇಲ್ಲವಾದರೂ ಈ ಎರಡೂ ಚಲನಚಿತ್ರಗಳ ಆಶಯ ಒಂದೇ ಆಗಿದೆ. ವಿದ್ಯಾರ್ಥಿಗಳಿಗೆ ಶುಷ್ಕವಾದ ನಿಸ್ಸಾರ ಪಾಠಗಳನ್ನು ಯಾಂತ್ರಿಕವಾಗಿ ಮಾಡಿ ಸಮಯ ವ್ಯರ್ಥ ಮಾಡದೇ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲವನ್ನು ಹುಟ್ಟಿಸುವ ಮೂಲಕ ಅವರ ಆಲೋಚನಾ ಕ್ರಮವನ್ನು ಬದಲಾಯಿಸುವುದೇ ಈ ಎರಡೂ ಚಲನಚಿತ್ರಗಳ ಉದ್ದೇಶವಾಗಿದೆ.

ಮೆಕ್ಸಿಕೋ ದೇಶದ ಗಡಿಯಲ್ಲಿರುವ ಪಟ್ಟಣದಲ್ಲಿ ‘ಜೋಸ್ ಉರ್ಬಿನಾ ಲೋಪೆಜ್’ ಎನ್ನುವ ಶಾಲೆ. ಸದಾ ಹಿಂಸೆಯ ಕುಲುಮೆಯಲ್ಲಿ ಬೇಯುತ್ತಿರುವ ಈ ಪಟ್ಟಣದ ಶಾಲೆಯ ಮಕ್ಕಳಲ್ಲೂ ಅದೇ ಗುಣಗಳು ಬಂದಿದ್ದರಿಂದಾಗಿ ಅವರಿಗೆ ಪಾಠ ಹೇಳುವುದೇ ಶಿಕ್ಷಕರಿಗೆ ಸವಾಲಿನ ಕೆಲಸ. ಆ ಶಾಲೆಯ ಫಲಿತಾಂಶವಂತೂ ಅತ್ಯಂತ ಕಳಪೆಯಾಗಿದ್ದು, ಮಿತಿಮೀರಿದ ಶಿಸ್ತೂ ಸಹ ವಿದ್ಯಾರ್ಥಿಗಳನ್ನು ಬದಲಾಯಿಸಲು ಅಸಾಧ್ಯವಾಗಿತ್ತು. ಅಂತಹ ಆತಂಕಕಾರಿ ಸಂದರ್ಭದಲ್ಲಿ ಸೆರ್ಗಿಯೋ ಎನ್ನುವ ವಿಕ್ಷಿಪ್ತ ವ್ಯಕ್ತಿ ಆರನೇ ತರಗತಿಗೆ ಶಿಕ್ಷಕನಾಗಿ ಬರುತ್ತಾನೆ. ಶಾಲೆಯ ಪಠ್ಯ ನಿರೂಪಣಾ ಶಿಸ್ತುಗಳನ್ನು ಕಡೆಗಣಿಸಿ ಮಕ್ಕಳಿಗೆ ಪ್ರಶ್ನಿಸುವ ಸ್ವಾತಂತ್ರ್ಯ ಕೊಡುತ್ತಾನೆ. ಕುತೂಹಲಕಾರಿ ಕಥಾನಕದ ಮೂಲಕ ವೈಜ್ಞಾನಿಕ ವಿಷಯಗಳನ್ನು ಮನದಟ್ಟು ಮಾಡಿಕೊಡುತ್ತಾನೆ. ಮಕ್ಕಳು ಸ್ವಂತವಾಗಿ ಆಲೋಚಿಸುವಂತೆ ಪ್ರೇರೇಪಿಸುತ್ತಾನೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತೊಡಗಿಸಿ ಕೊಳ್ಳುವಂತೆ ಪ್ರಚೋದಿಸುತ್ತಾನೆ. ಮಕ್ಕಳ ಜೊತೆ ಮಕ್ಕಳಂತೆಯೇ ವರ್ತಿಸುತ್ತಾನೆ. ಮೊದಮೊದಲು ತಂಟೆ ತಕರಾರು ಮಾಡಿ ರಂಪಾಟ ಮಾಡುತ್ತಿದ್ದ ವಿದ್ಯಾರ್ಥಿಗಳು ಬರಬರುತ್ತಾ ಶಿಕ್ಷಕನ ಪಾಠದ ಶೈಲಿಗೆ ಆಕರ್ಷಿತರಾಗುತ್ತಾರೆ. ಈ ಬದಲಾವಣೆಯಿಂದ ಸಂತಸಗೊಂಡ ಶಾಲೆಯ ನಿರ್ದೇಶಕ ಕೂಡಾ ಸೆರ್ಗಿಯೋ ಜೊತೆಗೆ ನಿಲ್ಲುತ್ತಾನೆ. ಆದರೆ ಈ ರೀತಿಯ ವಿಭಿನ್ನ ಪಾಠದ ಕ್ರಮವನ್ನು ಅಶಿಸ್ತು ಎಂದು ಪರಿಗಣಿಸಿದ ಪರಿವೀಕ್ಷಕ ಸೆರ್ಗಿಯೋ ನನ್ನು ಎರಡು ವಾರಗಳ ಕಾಲ ಶಾಲೆಯಿಂದ ಅಮಾನತ್ತು ಮಾಡುತ್ತಾನೆ. ಡ್ರಗ್ಸ್ ಜಾಲಕ್ಕೆ ಸಿಕ್ಕು ಪೆಡ್ಲರ್ ಆಗಿದ್ದ ವಿದ್ಯಾರ್ಥಿಯೊಬ್ಬ ಗ್ಯಾಂಗ್ ವಾರಿನ ಗುಂಡಿನ ದಾಳಿಗೆ ಸಿಕ್ಕು ಸಾಯುತ್ತಾನೆ. ಈ ಎರಡೂ ಘಟನೆಗಳಿಂದ ಜರ್ಜರಿತನಾದ ಸೆರ್ಗಿಯೋ ಶಿಕ್ಷಕ ವೃತ್ತಿಯನ್ನೇ ಬಿಡಲು ಯೋಚಿಸುತ್ತಾನೆ. ಶಾಲೆ ಬಿಟ್ಟ ವಿದ್ಯಾರ್ಥಿನಿಯೊಬ್ಬಳ ಸಂಶೋಧನೆ ಮತ್ತು ಬದುಕನ್ನು ನೋಡಿ ಆತಂಕಗೊಂಡು ಮತ್ತೆ ಶಾಲೆಗೆ ಬರುವ ಶಿಕ್ಷಕನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ಶಾಲೆಗೆ ಕೀರ್ತಿ ತರುತ್ತಾರೆ. ಇದು ಈ ಸಿನೆಮಾದ ಸಂಕ್ಷಿಪ್ತ ಕಥೆ.

ಪ್ರತಿಯೊಬ್ಬ ಶಿಕ್ಷಕರೂ ಈ ಮೆಕ್ಸಿಕನ್ ಸಿನೆಮಾ ನೋಡಲೇ ಬೇಕಿದೆ. ಇರುವ ಪಠ್ಯದ ಚೌಕಟ್ಟಿನೊಳಗೇ ಸಾಂಪ್ರದಾಯಿಕ ಪಾಠಪ್ರವಚನದ ಕ್ರಮ ಬಿಟ್ಟು ಹೇಗೆ ವಿಭಿನ್ನ ನಿರೂಪಣಾ ರೀತಿಯನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿದೆ. ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಲು ಮೊದಲು ಶಿಕ್ಷಕರು ಅದಕ್ಕೆ ತಯಾರಿ ಮಾಡಿಕೊಳ್ಳಬೇಕಿದೆ. ‘ಶಿಕ್ಷಕ ವೃತ್ತಿ ಎಂಬುದು ಕೇವಲ ಸಂಬಳ ಪಡೆಯುವ ಕೆಲಸವಲ್ಲ ಅಧ್ಯಯನ ಪ್ರಜ್ಞೆ ಇರುವ ತಲೆಮಾರನ್ನು ಸೃಷ್ಟಿಸುವ ಕಾಯಕ’ ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರೂ ಅರಿಯಬೇಕಿದೆ. ಮೌಖಿಕ ಪಾಠಗಳಿಗೆ ಪ್ರಯೋಗಶೀಲತೆಯನ್ನು ಅಳವಡಿಸಿ ಹೇಗೆ ಮಕ್ಕಳಿಗೆ ಮನದಟ್ಟಾಗುವಂತೆ ಪಾಠ ಮಾಡಬೇಕು ಎಂಬುದನ್ನು ಶಿಕ್ಷಕರು ಕಲಿಯಬೇಕಿದೆ. ಅದಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕಿದೆ. ಶಿಕ್ಷಣ ಇಲಾಖೆಯು ಶಿಕ್ಷಕರ ತರಬೇತಿ ಕೇಂದ್ರಗಳಲ್ಲಿ ಈ ‘ರ್ಯಾಡಿಕಲ್’ ಸಿನೆಮಾವನ್ನು ಪ್ರದರ್ಶಿಸಿ ಮಕ್ಕಳ ಸ್ನೇಹಿ ಶಿಕ್ಷಕರಾಗುವ ಬಗೆ ಹೇಗೆ ಎಂದು ಹೇಳಿಕೊಡಬೇಕಿದೆ. ಸೆರ್ಗೊಯೋ ರಂತಹ ಶಿಕ್ಷಕರು ಪ್ರತಿ ಶಾಲೆಗೊಬ್ಬರಾದರೂ ಇರಲೇಬೇಕಿದೆ.

‘ಶಾಲೆಗಾಗಿ ಮಕ್ಕಳಿಲ್ಲಾ, ಶಿಕ್ಷಕರಿಗಾಗಿ ವಿದ್ಯಾರ್ಥಿಗಳಿಲ್ಲ, ಮಕ್ಕಳಿಗಾಗಿ ಶಿಕ್ಷಕರು ಹಾಗೂ ಶಾಲೆ’ ಎನ್ನುವ ಬೇಸಿಕ್ ತಿಳುವಳಿಕೆಯನ್ನು ಈ ಸಿನೆಮಾ ಮನದಟ್ಟು ಮಾಡುವಂತಿದೆ. ತಂಟೆ ತಕರಾರು ಮಾಡುವ ತುಂಟ ಮಕ್ಕಳಲ್ಲಿ ಕುತೂಹಲವನ್ನು ಹುಟ್ಟಿಸಿ, ಅವರ ಮನಸ್ಸನ್ನು ಹೊಸ ಆಲೋಚನೆಯತ್ತ ತೊಡಗಿಸಿದರೆ ವಿದ್ಯಾರ್ಥಿಗಳಲ್ಲೂ ಕ್ರಿಯಾಶೀಲ ಪ್ರಜ್ಞೆ ಜಾಗೃತವಾಗುತ್ತದೆ ಎಂಬುದೇ ಈ ಸಿನೆಮಾದ ಸಾರವಾಗಿದೆ. ‘ರ್ಯಾಡಿಕಲ್’ ಚಲನಚಿತ್ರದ ಆಶಯವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇ ಆದರೆ ಮುಂದಿನ ತಲೆಮಾರು ಪ್ರಬುದ್ಧವಾಗುತ್ತದೆ, ಅಧ್ಯಯನಶೀಲವಾಗುತ್ತದೆ, ವಿಚಾರವಂತಿಕೆ ರೂಢಿಸಿಕೊಳ್ಳುತ್ತದೆ. ನಮ್ಮ ಕನ್ನಡ ಚಲನಚಿತ್ರ ನಿರ್ಮಾತೃಗಳು ಹೊಡಿ ಬಡಿ ಎನ್ನುವ ಹಿಂಸಾತ್ಮಕ ಸಿನೆಮಾಗಳನ್ನು ಬಿಟ್ಟು ‘ರ್ಯಾಡಿಕಲ್’ ನಂತಹ ಸಿನೆಮಾಗಳನ್ನು ನಿರ್ಮಿಸಿದರೆ ಸಮಾಜ ಸುಧಾರಣೆ ಆಗಬಹುದು. ಮುಂದಿನ ಪೀಳಿಗೆಯಾದರೂ ಹಿಂಸೆಗಿಳಿಯದೇ ವಿವೇಚನೆಯುಳ್ಳವರಾಗಬಹುದು.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article