ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಅಲ್ಪಸಂಖ್ಯಾತರು ಶಾಪಗ್ರಸ್ತರು. ಎಲ್ಲರೂ ಅಲ್ಲದಿದ್ದರೂ, ಬಹುಸಂಖ್ಯಾತರಲಿರುವ ರೋಗಗ್ರಸ್ತ ಮನಸ್ಥಿತಿಯವರು ಬಹಳಷ್ಟು ಬಾರಿ ಕಾರಣವೇ ಇಲ್ಲದೆ ಅಲ್ಪಸಂಖ್ಯಾತರನ್ನು ಪೀಡಿಸುತ್ತಾರೆ. ಪ್ರತಿಯೊಬ್ಬ ಅಲ್ಪಸಂಖ್ಯಾತನು ಸಾಮಾಜಿಕ, ರಾಜಕೀಯ, ಧಾರ್ಮಿಕ ಪೀಡನೆಗೆ ಒಳಗಾಗಿಯೇ ಒಳಗಾಗುತ್ತಾನೆ. ಇದರ ಅರಿವು ಮೂಡಬೇಕಾದರೆ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತನಾಗಿ ಬದುಕಿ ಗೊತ್ತಿರಬೇಕು – ಮುಷ್ತಾಕ್ ಹೆನ್ನಾಬೈಲ್, ಬರಹಗಾರರು
ಇಡೀ ಜಗತ್ತಿನ ಯಾವುದೇ ರಾಷ್ಟ್ರದ ಅಲ್ಪಸಂಖ್ಯಾತರನ್ನು ನೋಡಿ, ಅವರು ದಮನಿತರು ಶೋಷಿತರು ಆಗಿಯೇ ಇರುತ್ತಾರೆ. ಹಾಗೆಯೇ, ಯಾವುದೇ ದೇಶದ ಬಹುತೇಕ ಬಹುಸಂಖ್ಯಾತರು ತಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ದಮನಿತರು, ಶೋಷಿತರು ಎನ್ನುವುದನ್ನು ಒಪ್ಪುವುದೇ ಇಲ್ಲ. ಹಾಗಂತ, ಬಹುಸಂಖ್ಯಾತರೆಲ್ಲರೂ ಅಲ್ಪಸಂಖ್ಯಾತರನ್ನು ಶೋಷಿಸುತ್ತಾರೆ ಎಂದಲ್ಲ. ಹೆಚ್ಚಿನ ದೇಶಗಳಲ್ಲಿ ಅಲ್ಪಸಂಖ್ಯಾತರ ಕಷ್ಟಗಳನ್ನು ಸೂಕ್ತವಾಗಿ ಅರಿತು ಸ್ಪಂದಿಸುವ ವರ್ಗ ಬಹುಸಂಖ್ಯಾತರಲ್ಲಿ ಇರುತ್ತದೆ. ಭಾರತದಲ್ಲಿ ಈ ವರ್ಗ ದೊಡ್ಡ ಸಂಖ್ಯೆಯಲ್ಲಿದೆ. ಆದರೂ ಬಹುಸಂಖ್ಯಾತರಲ್ಲಿರುವ ಕೆಲವು ಮನಸ್ಥಿತಿಗಳು ಅಲ್ಪಸಂಖ್ಯಾತರನ್ನು ನಿರಂತರ ಶೋಷಿಸುತ್ತವೆ. ಇದೊಂದು ದೇಶಾತೀತ ಸಮಸ್ಯೆ..
ಅಲ್ಪಸಂಖ್ಯಾತರ ಬವಣೆಯನ್ನು ಅರಿಯಬೇಕಿದ್ದರೆ ಅಲ್ಪಸಂಖ್ಯಾತರಾಗಿ ಬದುಕಿದ ಅನುಭವ ಇರಬೇಕು. ಇಲ್ಲದಿದ್ದರೆ ಅಲ್ಪಸಂಖ್ಯಾತರ ನೋವು ಭಾವನೆಗಳು ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ. ತಮ್ಮ ದೇಶಗಳಲ್ಲಿ ಅಲ್ಪಸಂಖ್ಯಾತರು ಸುಖವಾಗಿದ್ದಾರೆ ಎನ್ನುವುದಕ್ಕೆ ಬಹುಸಂಖ್ಯಾತರಲ್ಲಿ ಬಹಳಷ್ಟು ತರ್ಕಗಳಿರುತ್ತವೆ. ಅದರಲ್ಲಿ ಹೆಚ್ಚಿನವು ಕುತರ್ಕಗಳು..
ಸದ್ಯಕ್ಕೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇನು ಹೊಸ ವಿಷಯವಲ್ಲ. ಜಗತ್ತಿನ ಸುಮಾರು 100 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಮುಸ್ಲಿಮರು, ಹೆಚ್ಚುಕಡಿಮೆ ಅಷ್ಟೇ ಸಂಖ್ಯೆಯ ದೇಶಗಳಲ್ಲಿ ಕ್ರೈಸ್ತರು, ಸುಮಾರು 10 ರಿಂದ 15 ದೇಶಗಳಲ್ಲಿ ಹಿಂದೂಗಳು, ಆಯಾಯ ದೇಶಗಳ 2ನೇ ಅಥವ 3ನೇ ಸ್ಥಾನದಲ್ಲಿರುವ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯಗಳು. ಜನಸಂಖ್ಯೆಯಲ್ಲಿ ಈ ಸ್ಥಾನಗಳಲ್ಲಿರುವ ಎಲ್ಲ ಸಮುದಾಯಗಳಿಗೂ, ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹುಸಂಖ್ಯಾತರ ಪಾರಮ್ಯದ ಶೋಷಣೆಯ ಬಿಸಿ ತಟ್ಟಿರುತ್ತದೆ..
ಬಾಂಗ್ಲಾದೇಶದ ಉದಾಹರಣೆಯನ್ನು ತೆಗೆದುಕೊಂಡರೆ, ಅಲ್ಲಿನ ಬಹುಸಂಖ್ಯಾತರು ಅಲ್ಪಸಂಖ್ಯಾತರಿಗೆ ಶೋಷಣೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ರಾಷ್ಟ್ರದ ರಾಷ್ಟ್ರಗೀತೆಯೇ ರವೀಂದ್ರನಾಥ ಠಾಗೋರ್ ಎನ್ನುವ ಹಿಂದೂ ಕವಿ ಬರೆದಿದ್ದು, ರಾಷ್ಟ್ರದ ರಾಜಧಾನಿಯ ಹೆಸರು ಢಾಕಾ ಎಂದಿರುವುದು ಢಾಕೇಶ್ವರಿ ಎಂಬ ಹಿಂದೂ ದೇವಾಲಯದ ಕಾರಣಕ್ಕೋಸ್ಕರವಾಗಿದೆ, ನಾವು ಪಟ್ಟಣ, ಬೀದಿ, ಕಟ್ಟಡಗಳ ಹೆಸರು ಮಾತ್ರವಲ್ಲ ನದಿಗಳ ಹೆಸರುಗಳನ್ನೂ ಕೂಡ ಹಿಂದೂ ಹೆಸರುಗಳೊಂದಿಗೇ ಉಳಿಸಿಕೊಂಡಿದ್ದೇವೆ. ಹೀಗಿರುವಾಗ ಇಲ್ಲಿರುವ ಅಲ್ಪಸಂಖ್ಯಾತರು ಅಗೌರವಕ್ಕೆ ತುತ್ತಾಗಿರುವುದು ಹೇಗೆ? ಬೇರೆ ಯಾವ ದೇಶದಲ್ಲಿ ಈ ಗೌರವವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ? ಎಂಬಂತಹ ಪ್ರಶ್ನೆಗಳು ಅಲ್ಲಿಯ ಬಹುಸಂಖ್ಯಾತರ ಕುತರ್ಕಗಳ ಮಾಲಿಕೆಯಲ್ಲಿ ಕಂಡುಬಂದರೂ ಬರಬಹುದು..
ಭಾರತದಲ್ಲಿ ಶಿಕ್ಷಕಿಯೊಬ್ಬಳು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ನಿಲ್ಲಿಸಿ ತರಗತಿಯ ಇತರ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡಿದ ಅಥವಾ ಚಪ್ಪಲಿಯಲ್ಲಿ ಹೊಡೆದು ಜೈ ಶ್ರೀ ರಾಮ್ ಹೇಳು ಎಂದು ಒತ್ತಾಯಿಸುವ ವಿಡಿಯೋಗಳನ್ನು ಪ್ರಸಾರ ಮಾಡಿ, ನೋಡಿ, ಭಾರತದಲ್ಲಿ ಹಿಂದೂಗಳು ಮುಸ್ಲಿಮರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಅಲ್ಪಸಂಖ್ಯಾತರ ಮೇಲಿನ ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರಲೂಬಹುದು..
ಹಾಗೆಯೇ, ಪಕ್ಕದ ಪಾಕಿಸ್ತಾನದಲ್ಲಿನ ರಾಷ್ಟ್ರೀಯ ಅಸೆಂಬ್ಲಿಯ 336 ಸೀಟುಗಳಲ್ಲಿ 10 ಸೀಟುಗಳನ್ನು ಅಲ್ಲಿನ ಅಲ್ಪಸಂಖ್ಯಾತರಿಗೆ ಮೀಸಲಾಗಿಡಲಾಗಿದೆ. ಭಾರತದಲ್ಲಿ ರಾಜ್ಯಗಳಿರುವಂತೆ, ಅಲ್ಲಿ ಪ್ರಾವಿನ್ಸ್ ಗಳಿವೆ. ಪ್ರತೀ ಪ್ರಾವಿನ್ಸ್ ನಲ್ಲಿ ನಿರ್ದಿಷ್ಟ ಪ್ರಮಾಣದ ಸೀಟುಗಳನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ. ಪಾಕಿಸ್ತಾನದಲ್ಲಿ ಕೇಂದ್ರ ಸರಕಾರಿ ಮತ್ತು ಪ್ರಾವಿನ್ಸ್ ಗಳ ಸರಕಾರಿ ನೌಕರಿಗಳಲ್ಲಿ ಅಲ್ಪಸಂಖ್ಯಾತರಿಗೆ 5% ಮೀಸಲಾತಿ ಇದೆ. ಪಾಕಿಸ್ತಾನಿ ಬಹುಸಂಖ್ಯಾತರ ಪ್ರಕಾರ, ಪಕ್ಕದ ಭಾರತದಲ್ಲಿ ಮುಸ್ಲಿಮರು ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದರೂ, ದೇಶದ ಯಾವುದೇ ಸದನಗಳಲ್ಲಿ ರಾಜಕೀಯ ಮೀಸಲಾತಿ ಇಲ್ಲ, ವಿಶ್ವದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವುದರ ಹೊರತಾಗಿಯೂ, ಅಷ್ಟು ದೊಡ್ಡ ದೇಶದ ಸರ್ಕಾರದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮಂತ್ರಿಯೂ ಇಲ್ಲ, ಗರ್ಭದೊಳಗಿದ್ದ ಮಗುವನ್ನು ತ್ರಿಶೂಲದಿಂದ ಚುಚ್ಚಿ ಕೊಂದ ಗುಜರಾತ್ ಗಲಭೆಯನ್ನು ನೋಡಿ, ಆಗಷ್ಟೇ ಹುಟ್ಟಿದ ಮಗುವನ್ನು ಗೋಡೆಗೆ ಅಪ್ಪಳಿಸಿ ಕೊಂದು, ಮಗುವಿನ ತಾಯಿಯೂ ಸೇರಿದಂತೆ ಇಡೀ ಕುಟುಂಬದ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿದವರನ್ನು ಮತ್ತು ಅವರು ಜೈಲಿನಿಂದ ಹೊರಬಂದಾಗ ಸನ್ಮಾನ ಮಾಡಿದವರನ್ನು ನೋಡಿ, ಅಲ್ಪಸಂಖ್ಯಾತರಿಗೆ ತಾವು ನೋಡಿಕೊಂಡಷ್ಟು ಚೆನ್ನಾಗಿ ಬೇರೆ ಯಾರೂ ನೋಡಿಕೊಳ್ಳುವುದಿಲ್ಲ ಎಂಬ ಭಾವನೆಯೂ ಅಲ್ಲಿ ಇದ್ದಿರಲೂಬಹುದು..
ಭಾರತದಲ್ಲಿ ಮುಸ್ಲಿಮರಿಗೆ ರಾಷ್ಟ್ರಪತಿಯಂತಹ ಹುದ್ದೆಯನ್ನು, ಭಾರತರತ್ನದಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ, ಮುಸ್ಲಿಮರು ರಾಜ್ಯಗಳ ಮುಖ್ಯಮಂತ್ರಿಗಳೂ ಆದ ಉದಾಹರಣೆ ಇದೆ, ಸ್ವಾತಂತ್ರ್ಯ ನಂತರದಿಂದ ಹಿಡಿದು ಇಲ್ಲಿಯವರೆಗೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಏರುತ್ತಿದೆ, ಆದರೆ ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ಮುಸ್ಲಿಮರು ಧರ್ಮಾಂತರ ಮಾಡುತ್ತಾರೆ, ಹಿಂದೂಗಳು ಮಾಡುವುದಿಲ್ಲ. ಮುಸ್ಲಿಮರಿಗಾಗಿ ಪಾಕಿಸ್ತಾನದಂತಹ ಪ್ರತ್ಯೇಕ ದೇಶ ಕೊಟ್ಟ ನಂತರವೂ ಕೂಡ, ಇಲ್ಲಿ ಉಳಿದ ಮುಸ್ಲಿಮರಿಗೆ ಬಹಳ ಅನುಕೂಲಗಳನ್ನು ದೇಶ ಮಾಡಿಕೊಟ್ಟಿದೆ, ಕ್ರೈಸ್ತರು ಅತಿಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಲು ದೇಶ ಅನುವು ಮಾಡಿಕೊಟ್ಟಿದೆ. ಇಡೀ ಜಗತ್ತಿನಲ್ಲಿ ಅಲ್ಪಸಂಖ್ಯಾತರು ಸುಖವಾಗಿರುವುದು ಭಾರತದಲ್ಲಿಯೇ ಆಗಿದೆ ಎಂದು ಇಲ್ಲಿನ ಬಹುಸಂಖ್ಯಾತರು ಭಾವಿಸುತ್ತಾರೆ..
ಕಾರಣ ಅಥವಾ ಭಾವನೆಗಳು ಭಿನ್ನ-ಭಿನ್ನವಾದರೂ ಕೂಡ ಬಹುತೇಕ ದೇಶಗಳ ಅಲ್ಪಸಂಖ್ಯಾತರ ಕುರಿತ ಬಹುಸಂಖ್ಯಾತರ ಮನಸ್ಥಿತಿ ಹೆಚ್ಚುಕಡಿಮೆ ಹೀಗೆಯೇ ಇರುತ್ತದೆ. ಆದರೆ ಆಯಾಯ ದೇಶಗಳ ಅಲ್ಪಸಂಖ್ಯಾತರ ಭಾವನೆ ಮತ್ತು ಯಾತನೆಗಳು ಬೇರೆಯೇ ಇರುತ್ತವೆ. ಪ್ರತೀ ದೇಶದ ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರ ಈ ಮೇಲೆ ಉಲ್ಲೇಖಿಸಿದ ವಿಚಾರ- ಭಾವನೆಗಳು ಒಂದು ರೀತಿಯಲ್ಲಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಅವರಿಗೆ ಬಹುಸಂಖ್ಯಾತರ ನಿರಂತರ ಪೀಡನೆ ದಬ್ಬಾಳಿಕೆಗಳಿಂದ ಮುಕ್ತಿ ಪಡೆಯುವುದು ಪ್ರಧಾನ ಆದ್ಯತೆಯಾಗಿರುತ್ತದೆ. ಬದುಕು ಮತ್ತು ಭವಿಷ್ಯದ ಭದ್ರತೆ ಮಾತ್ರವೇ ಬೇಕಿರುತ್ತದೆ..
ಭಾರತದಲ್ಲಿ ಬಹುಸಂಖ್ಯಾತರು ಮಾಡುವ ಕೆಲವು ಅನ್ಯಾಯಗಳಿಗೆ ಪಾಕಿಸ್ತಾನದ ಅಲ್ಪಸಂಖ್ಯಾತನ ಬಳಿ ಕೆಲವರು ಪ್ರಶ್ನಿಸಿ ಪೀಡಿಸಲೂಬಹುದು. ಸಂಬಂಧಪಡದ ವಿಷಯ ಮತ್ತು ಮಾಡದ ತಪ್ಪಿಗೆ, ಪಾಪ.. ಅಲ್ಲಿನ ಅಲ್ಪಸಂಖ್ಯಾತ ಅದಕ್ಕಾಗಿ ನಿತ್ಯ ನಿರಂತರ ಮಾನಸಿಕ ಯಾತನೆಯನ್ನು ಅದೆಷ್ಟು ಅನುಭವಿಸುತ್ತಾನೋ?.. ಬಾಂಗ್ಲಾದ ಅಲ್ಪಸಂಖ್ಯಾತನ ಮೇಲಿನ ಅಲ್ಲಿನ ಬಹುಸಂಖ್ಯಾತರ ಪ್ರತಿಕ್ರಿಯೆಯೂ ಹೆಚ್ಚುಕಡಿಮೆ ಭಾರತದ ಬಹುಸಂಖ್ಯಾತನ ವರ್ತನೆ ಅಥವ ಪ್ರತಿಕ್ರಿಯೆಗಳನ್ನು ಆಧರಿಸಿಯೇ ಇದ್ದರೂ ಇರಬಹುದು..
ಭಾರತದ ಅಲ್ಪಸಂಖ್ಯಾತರಿಗೂ ಕೂಡ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿ ಬಹುಸಂಖ್ಯಾತರು ಮಾಡುವ ಕ್ರಿಯೆಗಳ ಆಧಾರದ ಮೇಲೆ ಮತ್ತು ಅವರು ಪಾಲಿಸುವ ಧರ್ಮದ ಇತಿಹಾಸಗಳ ಆಧಾರದ ಮೇಲೆ ಇಲ್ಲಿನ ಬಹುಸಂಖ್ಯಾತರು ಪ್ರತಿಕ್ರಿಯಿಸುತ್ತಾರೆ. ಈ ಎಲ್ಲ ದೇಶಗಳ ಬಹುಸಂಖ್ಯಾತರು ಪ್ರತಿಕ್ರಿಯಿಸುವುದು, ಆಯಾಯ ದೇಶಗಳ ಅಲ್ಪಸಂಖ್ಯಾತರ ಪ್ರತ್ಯಕ್ಷ ಪರೋಕ್ಷ ಭಾಗೀದಾರಿಕೆಯಿಲ್ಲದ ಮತ್ತು ಅವರಿಗೆ ಸಂಬಂಧವೇ ಪಡದ ವಿಚಾರಗಳ ಮೇಲಾಗಿದೆ..
ಭಾರತದಲ್ಲಿ ಅಲ್ಪಸಂಖ್ಯಾತರು ಇತರ ಎಲ್ಲ ದೇಶಗಳ ಅಲ್ಪಸಂಖ್ಯಾತ ವರ್ಗಗಳಿಗಿಂತ ಹೆಚ್ಚು ಪೀಡನೆಗೆ ಒಳಗಾಗಲು, ಅವರು ನಿರ್ಣಾಯಕ ರಾಜಕೀಯ ಸಮುದಾಯ ಎನ್ನುವ ಹೆಚ್ಚುವರಿ ಕಾರಣವೂ ಇದೆ. ದೇಶದಲ್ಲಿ ಮತ್ತು ಬಹುತೇಕ ಎಲ್ಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮತ ಅಧಿಕಾರ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಿನ ಕಾರಣಕ್ಕೆ ಇಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಚರಿತ್ರೆ, ಚರ್ಯೆ ಮತ್ತು ಚಲನವಲನಗಳನ್ನು, ಕೃತಕ ಆರೋಪ ಮತ್ತು ಸಂಕಥನಗಳ ಮೂಲಕ ಕೆಲವರು ನಿರೂಪಿಸಿ ರಾಜಕೀಯ ಪೀಠ-ಪುರಸ್ಕಾರಗಳನ್ನು ಸುಲಭದಲ್ಲಿ ಪಡೆಯುತ್ತಾರೆ..
ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಅಲ್ಪಸಂಖ್ಯಾತರು ಶಾಪಗ್ರಸ್ತರು. ಎಲ್ಲರೂ ಅಲ್ಲದಿದ್ದರೂ, ಬಹುಸಂಖ್ಯಾತರಲಿರುವ ರೋಗಗ್ರಸ್ತ ಮನಸ್ಥಿತಿಯವರು ಬಹಳಷ್ಟು ಬಾರಿ ಕಾರಣವೇ ಇಲ್ಲದೆ ಅಲ್ಪಸಂಖ್ಯಾತರನ್ನು ಪೀಡಿಸುತ್ತಾರೆ. ಪ್ರತಿಯೊಬ್ಬ ಅಲ್ಪಸಂಖ್ಯಾತನು ಸಾಮಾಜಿಕ, ರಾಜಕೀಯ, ಧಾರ್ಮಿಕ ಪೀಡನೆಗೆ ಒಳಗಾಗಿಯೇ ಒಳಗಾಗುತ್ತಾನೆ. ಇದರ ಅರಿವು ಮೂಡಬೇಕಾದರೆ ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತನಾಗಿ ಬದುಕಿ ಗೊತ್ತಿರಬೇಕು. ರಾಜಧರ್ಮ ಪಾಲಿಸದ ಆಳುವ ವರ್ಗ ಮತ್ತು ಆಳಿಸಿಕೊಳ್ಳುವವರ ಅಭದ್ರತೆಯ ಭಾವನೆಯೇ ಅಲ್ಪಸಂಖ್ಯಾತರು ಶಾಪಗ್ರಸ್ತರಾಗಲು ಕಾರಣ. ಅಷ್ಟಕ್ಕೂ, ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಸುಖವಾಗಿರುತ್ತಾರೆ ಎನ್ನುವುದು ಅಲ್ಪಸಂಖ್ಯಾತರು ಮಾತ್ರವೇ ನಗಬಹುದಾದ ದೊಡ್ಡ ಜೋಕ್.
ಮುಷ್ತಾಕ್ ಹೆನ್ನಾಬೈಲ್
ಬರಹಗಾರರು
ಇದನ್ನೂ ಓದಿ- ಸಂವಿಧಾನ ವಿರೋಧಿ ಸ್ವಾಮಿಗೋಳು