ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದರೂ ನ್ಯಾಯಾಂಗ ತಟಸ್ಥವಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಹಿರಿಯ ಸಾಹಿತಿ ಬೌದ್ಧ ವಿದ್ವಾಂಸ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಪ್ಲಾನೆಟ್ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಭಾರತ ಸಂವಿದಾನ ಸಂಭ್ರಮ-75 ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದೊಂದು ಬಾರಿ ಅಧಿಕಾರಕ್ಕೆ ಬಂದಾಗಲೆಲ್ಲಾ ಹೇಗೆ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಾ ಬರಲಾಯಿತು ಎಂದು ಪಟ್ಟಿ ಮಾಡಿದ ಅವರು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಸವಾರಿ ಆರಂಭಿಸಿದೆ. ಯುಜಿಸಿ ನಿಯಮಗಳನ್ನೇ ಬದಲಾಯಿಸಿ ರಾಜ್ಯ ಪಟ್ಟಿಯಲ್ಲಿರುವ
ವಿಶ್ವವಿದ್ಯಾಲಯಗಳ ಮೇಲೆ ತನ್ನ ಪ್ರತಿನಿಧಿಯಾದ ರಾಜ್ಯಪಾಲರನ್ನು ಕೂರಿಸಲು ಪ್ರಯತ್ನ ನಡೆಯುತ್ತಿರುವುದು ಇತ್ತೀಚಿನ ದಾಳಿ ಎಂದರು. ಪ್ರಜಾಪ್ರಭುತ್ವ ಶಿಥಿಲವಾಗುತ್ತಿದೆ. ಅಂಬೇಡ್ಕರ್ ಜಾತಿ ವಿನಾಶ ಆಗಬೇಕು ಎಂದರು, ಆದರೆ ಮೇಲ್ಜಾತಿಗಳಿಗೆ ಜಾತಿ ವ್ಯವಸ್ಥೆ
ಉಳಿದುಕೊಳ್ಳಬೇಕು. ಇದು ಜಾತಿ ಅನುಕೂಲಸ್ಥರು ಮಾಡಿಕೊಂಡಿರುವ ವ್ಯವಸ್ಥೆ ಎಂದು ಮೇಲ್ಜಾತಿಗಳ ಸಂಚನ್ನು ಬಿಚ್ಚಿಟ್ಟರು.
ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ ಅವರಿಗೆ ಇದುವರೆಗೂ ಓರ್ವ ಮುಸಲ್ಮಾನನನ್ನು ಕನಿಷ್ಠ ಪಂಚಾಯಿತಿ ಸದಸ್ಯನನ್ನು ಮಾಡಲು ಸಾಧ್ಯವಾಗಿಲ್ಲ. ಇವರಿಗೆ ಸಂವಿಧಾನದಲ್ಲಿ ಇರುವ ಒಳಗೊಳ್ಳುವಿಕೆ ಏನೆಂದು ಅರ್ಥವೇ ಆಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಚುನಾವಣೆಯನ್ನು ಮಾತ್ರ ಸಂವಿಧಾನಬದ್ಧವಾಗಿ ಮಾಡುತ್ತಾರೆ. ಆದರೆ ಟಿಕೆಟ್ ಹಂಚಿಕೆಯನ್ನು ಮಾತ್ರ ಜಾತಿ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದೆ ಎಂದರು. ಅಂಬೇಡ್ಕರ್ ಸಂವಿಧಾನವೇ ಬೇರೆ. ಮನು ಸಂವಿಧಾನವೇ ಬೇರೆ. ಇವರು ಮನಸ್ಮೃತಿಯನ್ನು ಜಾರಿಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಬಲಪಂಥೀಯರೂ ಏನೆಲ್ಲಾ ಹುನ್ನಾರ ರೂಪಿಸಿದರೂ ಸಂವಿಧಾನ ಬದಲಾವಣೆ ಸುಲಭ ಅಲ್ಲ, ಸಾಧ್ಯವೂ ಇಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ನೆಲ್ಲುಕುಂಟೆ ಮಾತನಾಡಿ, ಸಂವಿಧಾನ ಬಿಕ್ಕಟ್ಟಿನಲ್ಲಿದೆ. ಮತ್ತೊಂದು ಕಡೆ ಅಂಬೇಡ್ಕರ್ ಅವರ ಮೇಲೆ ದಾಳಿ ನಡೆಯುತ್ತಿದೆ. ಒಮ್ಮೊಮ್ಮೆ ಪ್ರತ್ಯೇಕವಾಗಿ ಒಮ್ಮೊಮ್ಮೆ ಒಟ್ಟಿಗೆ ದಾಳಿ ನಡೆಯುತ್ತಿದ್ದು, ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಸಂವಿಧಾನದ ಪ್ರಸ್ತಾವನೆಯನ್ನೇ ಹೇಗೆ ಬದಲಾಯಿಸಲಾಗುತ್ತಿದೆ ಎನ್ನುವುದರ ಒಳಸುಳಿಗಳನ್ನು ಅವರು ಎಳೆಎಳೆಯಾಗಿ ವಿವಿರಿಸಿದರು. ಕನ್ನಡದಲ್ಲಿ ಇಂಗ್ಲೀಷ್ ನ secular ಪದಕ್ಕೆ ಜಾತ್ಯಾತೀತ ಎಂದು ಕನ್ನಡದಲ್ಲಿ, ತೆಲುಗಿನಲ್ಲಿ ಸರ್ವಧರ್ಮ ಸಮಭಾವ ಮತ್ತು ಸಂಸ್ಕೃತದಲ್ಲಿ ಧರ್ಮ ನಿರಪೇಕ್ಷತಾ ಎಂಬ ಅರ್ಥವಿತ್ತು. ಆದರೆ 2021-22 ರಲ್ಲಿ ಕ್ರಮವಾಗಿ ಸರ್ವಧರ್ಮ ಸಮಭಾವ ಮತ್ತು ಪಂಥ ನಿರಪೇಕ್ಷತಾ ಎಂದು ಬದಲಾಯಿಸಲಾಯಿತು.
ಮೇಲ್ನೋಟಕ್ಕೆ ಮಹತ್ವದ ವ್ಯತ್ಯಾಸ ಕಾಣದಿದ್ದರೂ ಒಳನೋಟದಲ್ಲಿ ಅಪಾರ ವ್ಯತ್ಯಾಸ ಇದೆ. ಇಂಗ್ಲೀಷ್ ನ belief ಎಂಬ ಶಬ್ಧಕ್ಕೆ ನಂಬಿಕೆ ಎಂಬ ಅರ್ಥವಿತ್ತು. ಆದರೆ 2021-22 ರಲ್ಲಿ ಅಖಂಡತೆ ಎಂದು ಬದಲಾಯಿಸಲಾಯಿತು. ಇಲ್ಲಿ ಭೌಗೋಳಿಕ ಅರ್ಥವನ್ನು ತೆಗೆದುಕೊಳ್ಳಲಾಯಿತೇ ಹೊರತು ಇಲ್ಲಿನ ನಿವಾಸಿಗಳನ್ನು ಕಡೆಗಣಿಸಲಾಯಿತು ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಸಣ್ಣೀರಪ್ಪ ಮಾತನಾಡಿ ಕನ್ನಡ ಪ್ಲಾನೆಟ್ ಹೇಗೆ ಕನ್ನಡ ಮತ್ತು ಕರ್ನಾಟಕದ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದೆ ಎಂದು ಸ್ಮರಿಸಿಕೊಂಡರು. ತಮ್ಮ ಭಾಷಣದುದ್ದಕ್ಕೂ ಪ್ಲಾನೆಟ್ ನ ಸಾಮಾಜಿಕ ಬದ್ಧತೆಯನ್ನು ಕೊಂಡಾಡಿದರು. ಧಾರವಾಡದ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸಂಘಟನೆಯ ನಾಯಕಿ ವೈಶಾಲಿ ಎನ್ ಬ್ಯಾಳಿ ಮಾತನಾಡಿ ಲಿಂಗತ್ವ ಅಲ್ಪ ಸಂಖ್ಯಾತರ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಲಿಂಗತ್ವ ಅಲ್ಪ ಸಂಖ್ಯಾತರ ಹೋರಾಟಕ್ಕೆ ಬೆಂಬಲ ಕೋರಿದರು.
ಈ ಸಂವಿಧಾನ ಸಂಭ್ರಮ ಮತ್ತು ಕನ್ನಡ ಪ್ಲಾನೆಟ್ ಕಾನ್ ಕ್ಲೇವ್ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಯೂತ್ ಫೆಡರೇಷನ್ ಸಹಯೋಗ ನೀಡಿತ್ತು. ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಪ್ಲಾನೆಟ್ ಪ್ರಧಾನ ಸಂಪಾದಕರಾದ ದಿನೇಶ್ ಕುಮಾರ್ ಎಸ್.ಸಿ, ಹರ್ಷಕುಮಾರ್ ಕುಗ್ವೆ
ಮತ್ತು ಅಂಬೇಡ್ಕರ್ ಯೂತ್ ಫೆಡರೇಷನ್ ಸಂಚಾಲಕ ರುದ್ರು ಪುನೀತ್ ಉಪಸ್ಥಿತರಿದ್ದರು.