ಸಕಲೇಶಪುರ: ಮುಂಗಾರು ಮಳೆಯ ರುದ್ರನರ್ತನದಿಂದಾಗಿ ಕಾಫಿತೋಟಗಳಲ್ಲಿ ಬಾರಿ ಪ್ರಮಾಣದ ಫಸಲು ನೆಲಕಚ್ಚುತ್ತಿದ್ದು, ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಸಾಧಾರಣವಾಗಿ ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಆರಂಭವಾಗುವ ಮಳೆ ಈ ಬಾರಿ ಮೇ 7 ರಿಂದಲೇ ಶುರುವಾಗಿತ್ತು. ಜುಲೈ 1ರಿಂದ ಮಳೆಯ ರುದ್ರನರ್ತನವೇ ಆರಂಭವಾಗಿದ್ದು ನಿಲ್ಲುವ ಸೂಚನೆ ಕಂಡುಬರುತ್ತಿಲ್ಲ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭೂಮಿ ಶೀತಪೀಡಿತಗೊಂಡಿದ್ದು ಹಲವು ಕಾಫಿತೋಟಗಳಲ್ಲಿ ಬಾರಿ ಪ್ರಮಾಣದ ಕೊಳೆರೋಗ ಕಾಣಿಸಿಕೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಫಸಲು ನೆಲಸೇರುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಚಿಂತೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಕಳೆದ ಎರಡು ದಿನಗಳ ಹಿಂದೆ ಬಿರುಸು ಕಳೆದುಕೊಂಡಿದ್ದ ಮುಂಗಾರಿನಿಂದ ತಾಲೂಕಿನ ಹಲವೆಡೆ ಬಿಸಿಲಿನ ದರ್ಶನವಾಗಿತ್ತು. ಈ ವಾತವಾರಣದಿಂದ ಸಂತಸಗೊಂಡಿದ್ದ ಬೆಳೆಗಾರರು ಕೊಳೆರೋಗ ನಿರ್ಮೂಲನಗೆ ಚಿಂತನೆ ನಡೆಸಿದ್ದರು. ಆದರೆ, ಮತ್ತೆ ಮುಂಗಾರು ಬಿರುಸು ಪಡೆದುಕೊಂಡಿರುವುದರಿಂದ ಬೆಳೆಗಾರರ ವಲಯದಲ್ಲಿ ನಿರಾಸೆ ಮನೆಮಾಡಿದೆ.
ಕಳೆದ ಎರಡು ದಿನಗಳಿಂದ ಬಿರುಸು ಪಡೆದಿರುವ ನಿರಂತರ ಗಾಳಿ ಮಳೆಗೆ ಹಲವಡೆ ಮರಗಳು ಧರೆಗೆ ಉರುಳಿದ್ದರೆ ಪಟ್ಟಣ ಸಮೀಪದ ಬಾಳೆಗದ್ದೆ ಬಡಾವಣೆ ಸಮೀಪ ಭೂಮಿ ಕುಸಿದು ನಾಲ್ಕು ಮನೆಗಳು ಅಪಾಯದ ಸ್ಥಿತಿ ತಲುಪಿವೆ. ಆನೇಮಹಲ್ ಗ್ರಾಮದಲ್ಲೂ ಬಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದು ಒಂದು ಬದಿಯ ಚತುಷ್ಪಥ ಹೆದ್ದಾರಿ ಬಂದ್ ಆಗಿದೆ. ಬುಧವಾರ ರಾತ್ರಿ ಬೀಸಿದ ಗಾಳಿಗೆ ಪಟ್ಟಣದ ಹಲವೆಡೆ ವಾಣಿಜ್ಯ ಮಳಿಗೆಗಳ ನಾಮಫಲಕಗಳು, ಫ್ಲೆಕ್ಸ್ ಗಳು ಹಾರಿಹೋಗಿವೆ.
ಅಪಾಯದ ಮಟ್ಟ ಮೀರಿ ಹರಿಯತ್ತಿರುವ ಹೇಮಾವತಿ ನದಿ ನೀರು ಶ್ರೀ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದ ಒಳಪ್ರವೇಶಿಸಲು ಇನ್ನೊಂದು ಮೆಟ್ಟಿಲಷ್ಟೆ ಬಾಕಿ ಇದೆ. ಗಂಟೆಗಂಟೆಗೂ ಹೆಚ್ಚುತ್ತಿರುವ ನದಿ ನೀರಿನಿಂದಾಗಿ ತಾಲೂಕು ಆಡಳಿತ ಪಟ್ಟಣದ ಅಜಾದ್ ರಸ್ತೆ ನಿವಾಸಿಗಳಿಗೆ ಬೇರೆಡೆ ತೆರಳುವಂತೆ ಎಚ್ಚರಿಕೆ ನೀಡುತ್ತಿದೆ. ಈಗಾಗಲೇ ಅಂಬೇಡ್ಕರ್ ಭವನದಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ. ಭಾರಿ ಮಳೆಗೆ ಹೆಬ್ಬನಹಳ್ಳಿ ಶಾಲೆಯ ಗೋಡೆಕುಸಿದಿದೆ. ತಾಲೂಕಿನ ಚಿಕ್ಕಲ್ಲೂರು ಹಾಗೂ ಯಡಕೇರಿ ಸಂಪರ್ಕಿಸುವ ಸೇತುವೆ ಮೇಲೆ ಐಗೂರು ಹೊಳೆಉಕ್ಕಿ ಹರಿಯುತ್ತಿದೆ.
ಮಠಸಾಗರ ಗ್ರಾಮದಲ್ಲೂ ಹಳ್ಳದ ನೀರು ಸೇತುವೆ ಮೇಲೆ ಉಕ್ಕಿ ಹರಿದು ಸಮೀಪ ಅಡಿಕೆತೋಟ ಜಲಾವೃತಗೊಂಡಿದೆ. ಇದಲ್ಲದೆ ಹಲವೆಡೆ ಕಿರುನದಿಗಳು ಭತ್ತದಗದ್ದೆಗಳಿಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದರಿಂದ ಸಾಕಷ್ಟು ಪ್ರದೇಶದಲ್ಲಿ ಸಸಿಮಡಿಗಳು ನೀರುಪಾಲಾಗಿವೆ. ಸಾಧಾರಣವಾಗಿ ತನ್ನ ಪಾತ್ರ ಬಿಟ್ಟು ಹರಿಯದ ಹೇಮಾವತಿ ನದಿ ಸದ್ಯ ಒಂದೇ ವಾರದಲ್ಲಿ ತಾಲೂಕಿನ ಸಾವಿರಾರು ಎಕರೆ ಹಿನ್ನೀರು ಪ್ರದೇಶವನ್ನು ಅಕ್ರಮಿಸಿಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ 75 ಸೇರಿದಂತೆ ತಾಲೂಕಿನ ಬಹುತೇಕ ಲೋಕಪಯೋಗಿ ಇಲಾಖೆ ಹಾಗೂ ಜಿ.ಪಂ ರಸ್ತೆಗಳಿಗೆ ತೊಳಗುಂಡಿ ನಿರ್ಮಿಸದೆ ನಿರ್ಲಕ್ಷ್ಯ ತೋರಿರುವುದು ಹಾಗೂ ಚರಂಡಿ ಇಲ್ಲದ ಕಾರಣ ಕಿಮೀಗಳ ದೂರದವರೆಗೆ ನದಿಯಂತೆ ಮಳೆ ನೀರು ಹರಿಯುತ್ತಿದ್ದರೆ ಹಲವೆಡೆ ರಸ್ತೆಗಳು ಮಳೆನೀರಿನಿಂದ ಆವೃತಗೊಂಡು ಕೆರೆಯಂತೆ ಭಾಸವಾಗುತ್ತಿದೆ.
ತಾಲೂಕು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿದೆ. ಸಕಲೇಶಪುರದಲ್ಲಿ ಹೇಮಾವತಿ ನದಿ ಉಕ್ಕಿಹರಿಯುತ್ತಿದೆ. ತೇಜಸ್ವಿ ಚಿತ್ರಮಂದಿರ ಸಮೀಪದ ಭತ್ತದ ಗದ್ದೆ, ತೋಟ ಜಲಾವೃತವಾಗಿವೆ.
ಈಗ ಗೊರೂರಿನ ಹೇಮಾವತಿ ಜಲಾಶಯದಿಂದ 60-65 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ. ಒಳಹರಿವು ಇನ್ನೂ ಹೆಚ್ಚಾದರೆ 70 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಿನ ನೀರನ್ನು ಅಣೆಕಟ್ಟೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಹಲವೆಡೆ ಭೂ ಕುಸಿತ ಭೀತಿ ಎದುರಾಗಿದ್ದು ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಕಾಮಗಾರಿ ಸಿಬ್ಬಂದಿ ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶಗೊಂಡಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣದಲ್ಲಿ ತಣ್ಣನೆಯ ಚಳಿಯೂ ಆವರಿಸಿಕೊಂಡಿದೆ. ಇದರ ಜತೆಗೆ ಇಡೀ ರಾತ್ರಿ ಮಳೆ ರಭಸವಾಗಿ ಸುರಿದು ತೊರೆ ತೋಡುಗಳಲ್ಲಿ ನೀರು ಏರತೊಡಗಿದೆ. ಹೇಮಾವತಿ ಉಪನದಿಗಳಾದ ಐಗೂರು, ಯಡಕೇರಿ, ಪಾಲಹಳ್ಳಿ ಹೊಳೆಗಳಲ್ಲಿ ನೀರು ರಭಸವಾಗಿ ಹರಿಯತೊಡಗಿದೆ. ಮಳೆ ಇದೇ ರೀತಿ ಮುಂದುವರಿದರೆ ದೊಡ್ಡ ಅಪಾಯ ತಪ್ಪಿದಲ್ಲ ಎಂಬ ಭೀತಿ ಮಲೆನಾಡು ಜನರನ್ನು ಕಾಡುತ್ತಿದೆ.