Wednesday, November 26, 2025

ಮೊಗಳ್ಳಿಯವರ ‘ಅನ್‌ಟಚಬಲ್’- ವಿವಿಗಳಲ್ಲಿನ ನವ-ಅಸ್ಪೃಶ್ಯತೆ

Most read

‘ಅನ್‌ಟಚಬಲ್’ ಕಥೆಯು ಕೇವಲ ಒಂದು ಸಂಶೋಧನಾ ವಿದ್ಯಾರ್ಥಿಯ ಗೋಳಲ್ಲ; ಅದು ‘ಜಾಗತೀಕರಣ ಮತ್ತು ಮಾನವೀಕರಣ’ದ ಸಂಘರ್ಷದ ಕಾಲದಲ್ಲಿ, ಜ್ಞಾನದ ದೇಗುಲಗಳಾಗಿರಬೇಕಾದ ವಿಶ್ವವಿದ್ಯಾಲಯಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು, ರಾಜಕೀಯದ ಬೇಟೆಗಾರರಿಗೆ, ಅಧಿಕಾರದ ದಲ್ಲಾಳಿಗಳಿಗೆ ಮತ್ತು ನರಭಕ್ಷಕ ಅಭಿರುಚಿಯ ಮನುಷ್ಯರಿಗೆ ಆಶ್ರಯ ತಾಣಗಳಾಗಿ ಪರಿವರ್ತನೆಯಾದ ದುರಂತವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ -ಡಾ. ರವಿ ಎಂ. ಸಿದ್ಲಿಪುರ

ಜ್ಞಾನದ ಆಲಯಗಳು ಧರ್ಮ, ಆಳುವವರ ಸೈದ್ಧಾಂತಿಕತೆಗಳನ್ನು ಪ್ರತಿಪಾದಿಸುವ ಅಖಾಡಗಳಾಗಿ, ವಾಣಿಜ್ಯ ಸಂಕೀರ್ಣಗಳಾಗಿ, ಪ್ರತಿಭೆಗಳ ಸೃಷ್ಟಿ ಕೇಂದ್ರಗಳು ಕರಾಳ ಶೋಷಣೆಯ ಬೀಡಾಗಿ ಪರಿವರ್ತನೆಯಾಗುತ್ತಿರುವ ವಿಷಾದಕರ ವಿದ್ಯಮಾನಗಳ ನಡುವೆ, ಇತ್ತೀಚೆಗೆ ಅಗಲಿದ ಮೊಗಳ್ಳಿ ಗಣೇಶರ ‘ಅನ್‌ಟಚಬಲ್’ ಕಥೆಯು ಭಾರತದ ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಮತ್ತು ವೃತ್ತಿಪರ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿಭೆಗಳನ್ನು ಅರಳಿಸಬೇಕಾದ ‘ಗುರು’ಗಳು, ಜಾತಿ-ಮತ-ಹಣ-ಪ್ರಭುತ್ವದ ಸಿದ್ಧಾಂತಗಳ ಪ್ರಚಾರಕರಾಗಿ ಮತ್ತು ಶೈಕ್ಷಣಿಕ ಹಗರಣಗಳ ಪಾಲುದಾರರಾಗಿ ಬದಲಾಗಿದ್ದಾರೆ.

ಈ ಪ್ರಕ್ಷುಬ್ಧ ಸನ್ನಿವೇಶದಲ್ಲಿ, ಈ ಕಥೆಯು ಕೇವಲ ಒಂದು ಕಲ್ಪಿತವಲ್ಲ; ಅದೊಂದು ತೀವ್ರವಾದ ಸಾಹಿತ್ಯಕ ಎಚ್ಚರಿಕೆ. ಸುತ್ತೋಲೆಗಳ ಮೂಲಕ ಶಿಸ್ತು ತರಲು ಹೆಣಗಾಡುವ ವಿಶ್ವವಿದ್ಯಾಲಯಗಳ ಆಡಳಿತ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧದ ವಿದ್ಯಾರ್ಥಿಗಳ ಆರ್ತನಾದಗಳ ನಡುವೆ, ಗುರು-ಶಿಷ್ಯ ಸಂಬಂಧದ ಪವಿತ್ರತೆಯೇ ಕಳಚಿಬಿದ್ದು, ಅದು ‘ಒಡೆಯ-ಜೀತದಾಳು’ ಪದ್ಧತಿಯಾಗಿ ರೂಪಾಂತರಗೊಂಡಿದೆ. ಈ ಹೊಸ ವ್ಯವಸ್ಥೆಯಲ್ಲಿ, ಮಾರ್ಗದರ್ಶಕರು ಸಂಶೋಧಕ ವಿದ್ಯಾರ್ಥಿಗಳ ಬೌದ್ಧಿಕ ಶ್ರಮವನ್ನು ‘ಕಟ್ ಅಂಡ್ ಪೇಸ್ಟ್’ ದಂಧೆಯ ಸರಕಾಗಿಸಿ, ತಮ್ಮ ‘ಪಿಎಚ್‌ಡಿ ಕಾರ್ಖಾನೆ’ಗಳಲ್ಲಿ ಅವರನ್ನು ಕಚ್ಚಾ ವಸ್ತುವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಸಮಕಾಲೀನ ದುರಂತದ ಕರಾಳತೆಯನ್ನು ಕಥೆಯು ಸಾಕುನಾಯಿ ಮತ್ತು ಶೂದ್ರ ಶಿಷ್ಯನ ಸಂಕೇತಗಳ ಮೂಲಕ ಅತ್ಯಂತ ಸೂಕ್ಷ್ಮವಾಗಿ ಮತ್ತು ನಿರ್ದಯವಾಗಿ ಅನಾವರಣಗೊಳಿಸಿದೆ.

ಕಥೆಯ ಪ್ರಾಧ್ಯಾಪಕ ಪಾತ್ರವು, ಆಧುನಿಕ ಜ್ಞಾನ ಊಳಿಗಮಾನ್ಯ ಪದ್ಧತಿಯ ಪಾಳೇಗಾರನ ಪ್ರತಿರೂಪ. ಹಳ್ಳಿ ಮೂಲದಿಂದ ಬಂದಿದ್ದರೂ, ಸ್ವಜಾತಿ ರಾಜಕಾರಣದ ಏಣಿಯನ್ನೇರಿ ಉನ್ನತ ಸ್ಥಾನಕ್ಕೇರಿದ ಆತ, ಕುಲಪತಿ ಹುದ್ದೆಯ ಅಧಿಕಾರಕ್ಕಾಗಿ ಲಡಾಸು ಬಯೋಡೆಟಾ ಕೈಯಲ್ಲಿಟ್ಟುಕೊಂಡು ರಾಜಕಾರಣಿಗಳ ಕಾಲಿಗೆ ಬೀಳುವುದರಿಂದ ಹಿಡಿದು, ನಿವೃತ್ತಿಯ ನಂತರ ‘ಮೂರು ವೈನ್‌ಶಾಪ್, ಮೂರು ಮಿಲ್ಟ್ರಿ ಹೋಟೆಲ್’ ತೆರೆಯುವ ವ್ಯಾಪಾರಿ ಕನಸು ಕಾಣುವವರೆಗೂ, ಜ್ಞಾನ ಕ್ಷೇತ್ರವು ಹೇಗೆ ನೈತಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸಂಕೇತಿಸುತ್ತಾನೆ. ಆತನ ಪಾಲಿಗೆ ವಿಶ್ವವಿದ್ಯಾಲಯ ಎಂಬುದು ಜ್ಞಾನದ ತಪೋಭೂಮಿಯಲ್ಲ, ಬದಲಿಗೆ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಒಂದು ವ್ಯಾಪಾರಿ ಸಾಮ್ರಾಜ್ಯ. ‘ನನಗೇನ್ರೀ ನಷ್ಟಾ… ಯೂನಿವರ್ಸಿಟಿಗೆ ಕಣ್ರಿ ನಷ್ಟ ಆಗೋದು’ ಎಂಬ ಆತನ ಉದ್ಧಟತನದ ನುಡಿ, ಇಡೀ ಶೈಕ್ಷಣಿಕ ವ್ಯವಸ್ಥೆಯ ಆತ್ಮಸಾಕ್ಷಿಯನ್ನೇ ಪ್ರಶ್ನಿಸುವಂತಿದೆ. ಇದು ‘ಅಕಾಡೆಮಿಕ್ ಹ್ಯುಮಾನಿಸಂ’ ಸತ್ತುಹೋಗಿ, ಕೇವಲ ‘ಅಕಾಡೆಮಿಕ್ ಬ್ಯುಸಿನೆಸ್’ ಉಳಿದಿರುವುದನ್ನು ಸಾಬೀತುಪಡಿಸುತ್ತದೆ. ಇಂತಹ ಪ್ರೊಫೆಸರ್ಸ್ ವಿಶ್ವವಿದ್ಯಾಲಯದ ಹಗರಣಗಳಲ್ಲಿ, ಮಾನ ಹರಾಜಿನ ಸುದ್ದಿಗಳಲ್ಲಿ ಸಿಕ್ಕಿಬಿದ್ದು, ‘ನರಭಕ್ಷಕ ಅಭಿರುಚಿಯ’ ವಲಯದಲ್ಲಿ ಸದಾ ಬೇಟೆ ಆಡುತ್ತಲೇ ಇರುತ್ತಾರೆ. ಇಂತಹ ಗುರುಗಳ ಪಾಲಿಗಿರುವ ಶಿಷ್ಯ, ಕೇವಲ ವೇತನರಹಿತ ಸೇವಕ!

ಮೊಗಳ್ಳಿ ಗಣೇಶ್

ಈ ಕರಾಳ ವ್ಯವಸ್ಥೆಯ ಬಲಿಪಶುವೇ ಸಂಶೋಧಕ ವಿದ್ಯಾರ್ಥಿ ಮತ್ತು ಆತನ ಶೋಷಣೆಯು ಬಹುಸ್ತರಗಳಲ್ಲಿ ತೆರೆದುಕೊಳ್ಳುತ್ತದೆ. ‘ಜಾಗತೀಕರಣ ಮತ್ತು ಮಾನವೀಕರಣ’ ಎಂಬ ಘನವಾದ ವಿಷಯದ ಮೇಲೆ ಸಂಶೋಧನೆ ನಡೆಸುತ್ತಿರುವ ಆತನ ಬದುಕು, ಅಮಾನವೀಯತೆಯ ಕ್ರೂರ ಪ್ರಯೋಗಶಾಲೆಯಾಗುತ್ತದೆ. ಗುರುಗಳ ದಡೂತಿ ಗಂಡು ಮಕ್ಕಳು ಶಿಷ್ಯನನ್ನು ತಮ್ಮ ತಂದೆಯ ‘ಸಾಕುನಾಯಿ’ ಎಂದು ಪರಿಗಣಿಸಿದರೆ, ಐಷಾರಾಮಿ ಬಂಗಲೆಯ ಕತ್ತಲ ಕೋಣೆಗೆ ತಳ್ಳಲ್ಪಟ್ಟ ಆತ, ತಾನೇ ‘ಮನೆ ಕಾಯುವ ನಾಯಿ’ಯಾಗಿ ಬದಲಾದನೇ ಎಂದು ಪರಿತಪಿಸುತ್ತಾನೆ. ಅವನ ಬೌದ್ಧಿಕ ಮತ್ತು ದೈಹಿಕ ಅಗತ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸಿ, ಹುಳುಕು ನುಚ್ಚಕ್ಕಿ ಮತ್ತು ಪಾಚಿಗಟ್ಟಿದ ನೀರನ್ನು ಒದಗಿಸಲಾಗುತ್ತದೆ, ಆದರೆ ಗುರುಗಳ ಮುದ್ದಿನ ನಾಯಿ ‘ರಾಣಿ’ಗೆ ಬಿರಿಯಾನಿ ಮತ್ತು ಪ್ರೀತಿಯ ಆರೈಕೆ ದಕ್ಕುತ್ತದೆ. ಆಕರ್ಷಕವಾದ ಜಾಗತೀಕರಣದ ಥೀಸಿಸ್‌ಗೆ ಒಳಗೆ ಕೊಳೆಯುತ್ತಿರುವ ‘ಮಾನವೀಕರಣ’ದ ಕೊರತೆಯನ್ನು ಈ ದೃಶ್ಯಕಾವ್ಯವು ಕಟ್ಟಿಕೊಡುತ್ತದೆ.

ಶೋಷಣೆಯ ಪರಾಕಾಷ್ಠೆ ಎಂದರೆ, ಗುರುವು ತನ್ನ ಮಗಳ ಮೇಲಿನ ಮೋಹವನ್ನು ತಡೆಯಲು ಶಿಷ್ಯನಿಗೆ ನಿರಂತರವಾಗಿ ‘ಗಂಡಸ್ತನವೇ ಇಲ್ಲದಂತಾಗೊ ಔಷಧಿ’ ನೀಡಿ, ಅವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ‘ಷಂಡ’ನನ್ನಾಗಿಸುವುದು. ‘ವಡ್ಡಾರಾಧನೆ’ಯ ‘ಚಾಣಾಕ್ಯ ಋಷಿಯ ಕಥೆ’ಯಲ್ಲಿ ಚಾಣಾಕ್ಯ ತನ್ನ ಶಿಷ್ಯ ಚಂದ್ರಭುಕ್ತನನ್ನು ವಿಷಕನ್ಯೆಯರಿಂದ ಪಾರುಮಾಡುವ ಸಲುವಾಗಿ ಆತನಿಗೆ ಬಾಲ್ಯದಿಂದಲೇ ವಿಷವನ್ನು ಉಣಿಸುತ್ತಿರುತ್ತಾನೆ. ಆದರಿಲ್ಲಿ ತನ್ನ ಮಗಳನ್ನು ಶಿಷ್ಯನಿಂದ ಕಾಪಾಡಿಕೊಳ್ಳಲು ಗುರು ‘ಔಷಧಿ’ಯ ನೆಪದಲ್ಲಿ ವಿಷ ನೀಡುತ್ತಿರುತ್ತಾನೆ. ಇದು ಕೇವಲ ಲೈಂಗಿಕ ನಿಯಂತ್ರಣವಲ್ಲ; ಇದು ಒಬ್ಬ ಯುವಕನ ಕನಸು, ಆಕಾಂಕ್ಷೆ ಮತ್ತು ಆತ್ಮವಿಶ್ವಾಸವನ್ನೇ ನಾಶಮಾಡಿ, ಅವನ ಸಂಪೂರ್ಣ ಅಸ್ತಿತ್ವದ ಮೇಲೆ ಹಿಡಿತ ಸಾಧಿಸುವ ಕ್ರಿಯೆಯಾಗಿದೆ. ರಾಣಿ ನಾಯಿಯ ಋತುಚಕ್ರವನ್ನು ಚುಚ್ಚುಮದ್ದಿನಿಂದ ನಿಯಂತ್ರಿಸಿದಂತೆಯೇ, ಶಿಷ್ಯನ ಮಾನವ ಸಹಜ ಭಾವನೆಗಳನ್ನು ರಾಸಾಯನಿಕವಾಗಿ ಹತ್ತಿಕ್ಕುವ ಈ ಕ್ರಿಯೆಯು, ಜ್ಞಾನಕ್ಷೇತ್ರದಲ್ಲಿನ ‘ನರಭಕ್ಷಕ ಅಭಿರುಚಿ’ಯನ್ನು ಬೆತ್ತಲುಗೊಳಿಸುತ್ತದೆ. ಈ ಹೊಸ ಕಾಲದ, ಶೈಕ್ಷಣಿಕ ಅಸ್ಪೃಶ್ಯತೆಯು ಅವನನ್ನು ತನ್ನ ಮಗಳ ‘ಕಾಯುವ ನಾಯಿ’ಯಾಗಿ ಪರಿವರ್ತಿಸುತ್ತದೆ. ಆಕೆ ಎಸೆದ ಚಿತ್ರಾನ್ನದ ತುಣುಕನ್ನು ‘ಆಕಾಶವ ಮುಟ್ಟಿಕೊಂಡೆನೇ’ ಎಂದು ಭಾವಿಸಿದರೂ, ಅದನ್ನು ನುಂಗಲಾರದೆ ನೆತ್ತಿಗೇರಿಸಿಕೊಳ್ಳುವ ದೃಶ್ಯವು ಅವನ ಆಂತರಿಕ ನೋವು ಮತ್ತು ಅಸಹಾಯಕತೆಯ ಶಿಖರವಾಗಿದೆ. ಗುರು ಪುತ್ರಿ ಮರೆತಿಟ್ಟ ‘ಮುಟ್ಟಿನ ಬಟ್ಟೆ’ಗಳನ್ನು ನೋಡಿ ಪುಳಕಿತನಾಗುವ ದೃಶ್ಯವು ಈ ಅಸ್ಪೃಶ್ಯತೆಯ ಅತ್ಯಂತ ಸೂಕ್ಷ್ಮ ಹಂತವನ್ನು ತಟ್ಟುತ್ತದೆ; ಹೊರನೋಟಕ್ಕೆ ಅಸಹ್ಯಕರವಾದರೂ, ಆತನ ಪಾಲಿಗೆ ಅದು ಅವಳ ಅಸ್ತಿತ್ವಕ್ಕೆ ಅತ್ಯಂತ ಹತ್ತಿರವಾದ, ದೇಹಾತೀತವಾದ ‘ಮುಟ್ಟು’ ಆಗಿರುತ್ತದೆ.

ಕಥೆಯ ಶೋಷಣೆಯ ತಿರುಳು, ಗುರು ಪುತ್ರಿ ಮತ್ತು ಶಿಷ್ಯನ ಕೊನೆಯ ಭೇಟಿಯಲ್ಲಿ ಒಂದು ದುರಂತಮಯ ಆದರೆ ಅಲೌಕಿಕವಾದ ಮಾನವೀಯ ಆಯಾಮವನ್ನು ಪಡೆಯುತ್ತದೆ. ದೈಹಿಕವಾಗಿ ಶಂಡನಾದ ಶಿಷ್ಯ, ತನ್ನ ವಿಫಲ ಪ್ರೇಮವನ್ನು ‘ಪಂಚಮ ಪ್ರೇಮ’ ಎಂದು ಬಣ್ಣಿಸುತ್ತಾನೆ, ಅದು ‘ಮುಟ್ಟುವಂತದ್ದಲ್ಲ.’ ಈ ‘ಮುಟ್ಟಲಾಗದ’ ಪ್ರೇಮವು ಕೇವಲ ದೈಹಿಕ ಷಂಡತ್ವದಿಂದ ಹುಟ್ಟಿದ್ದಲ್ಲ, ಬದಲಿಗೆ ಗುರುಗಳು ಹೇರಿದ ಸಾಮಾಜಿಕ ಮತ್ತು ದೈಹಿಕ ಅಸ್ಪೃಶ್ಯತೆಯಿಂದ ರೂಪಿತವಾದದ್ದು. ಗುರುಗಳು ಅವನ ದೇಹವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೂ, ಅವನ ಆತ್ಮವನ್ನು ಮುಟ್ಟಲು ವಿಫಲರಾಗುತ್ತಾರೆ. ಈ ಸ್ಥಿತಿಯ ತತ್ವಸಾರವು ಗುರುಪುತ್ರಿಯ ಮಾತಿನಲ್ಲಿ ವ್ಯಕ್ತವಾಗುತ್ತದೆ: ‘ದೇಹ ಮುಟ್ಟಿಸಿಕೊಳ್ಳೋದು ಏನು ಮಹಾ… ಏನನ್ನು ಮುಟ್ಟಬೇಕೊ ಅದನ್ನೇ ಮನುಷ್ಯರು ಮುಟ್ಟೋಲ್ಲ.’ ಇದು, ‘ಇಹದ ಈ ಮುಟ್ಟುಚಟ್ಟುಗಳ ಆಚೆಗಿನದನ್ನು ಮುಟ್ಟಲು ಕನಸು ಕಾಣುತ್ತಿದ್ದ’ ಶಿಷ್ಯನ ಮನೋಭಾವದೊಂದಿಗೆ ಅನುರಣಿಸುತ್ತದೆ. ಹೀಗೆ ಶೋಷಣೆಯ ಅಗ್ನಿದಿವ್ಯದಲ್ಲಿ ಬೆಂದ ಶಿಷ್ಯ, ಲೌಕಿಕ ಆಕರ್ಷಣೆಗಳನ್ನು ದಾಟಿ, ‘ಅಸ್ಪೃಶ್ಯ ಪ್ರೇಮದ ದೇವತೆ’ಯ ಸ್ಥಾನವನ್ನು ಪಡೆದು ವಿಮೋಚನೆ ಹೊಂದುತ್ತಾನೆ. ಈ ಮೂಲಕ, ಶೈಕ್ಷಣಿಕ ಪರಿಸರದಲ್ಲಿ ಕಳೆದುಹೋದ ಮಾನವೀಯ ಅಂತಃಕರಣ ಮತ್ತು ಪ್ರೀತಿಯ ಅವಶ್ಯಕತೆಯನ್ನು ಕಥೆಯು ತೀವ್ರವಾಗಿ ಒತ್ತಿ ಹೇಳುತ್ತದೆ. ವಿಶ್ವವಿದ್ಯಾಲಯಗಳು ಜ್ಞಾನವನ್ನು ಸೃಷ್ಟಿಸುವ ಬದಲು, ಇಂತಹ ದುರಂತದ ‘ಅನ್‌ಟಚಬಲ್’ ಜೀವಗಳನ್ನು ಸೃಷ್ಟಿಸಿ ಮೂಲಭೂತ ಮೌಲ್ಯಗಳನ್ನೇ ಮರೆಯುತ್ತಿವೆ ಎಂಬುದು ಕಥೆಯ ತಿರುಳಿನಲ್ಲಿರುವ ಕಟು ವ್ಯಂಗ್ಯವಾಗಿದೆ.

ಹೀಗೆ ‘ಅನ್‌ಟಚಬಲ್’ ಕಥೆಯು ಕೇವಲ ಒಂದು ಸಂಶೋಧನಾ ವಿದ್ಯಾರ್ಥಿಯ ಗೋಳಲ್ಲ; ಅದು ‘ಜಾಗತೀಕರಣ ಮತ್ತು ಮಾನವೀಕರಣ’ದ ಸಂಘರ್ಷದ ಕಾಲದಲ್ಲಿ, ಜ್ಞಾನದ ದೇಗುಲಗಳಾಗಿರಬೇಕಾದ ವಿಶ್ವವಿದ್ಯಾಲಯಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು, ರಾಜಕೀಯದ ಬೇಟೆಗಾರರಿಗೆ, ಅಧಿಕಾರದ ದಲ್ಲಾಳಿಗಳಿಗೆ ಮತ್ತು ನರಭಕ್ಷಕ ಅಭಿರುಚಿಯ ಮನುಷ್ಯರಿಗೆ ಆಶ್ರಯ ತಾಣಗಳಾಗಿ ಪರಿವರ್ತನೆಯಾದ ದುರಂತವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಈ ಕಥೆಯು ವಿಶ್ವವಿದ್ಯಾಲಯಗಳು ಹೇಗೆ ತಮ್ಮ ಮೂಲ ಧರ್ಮವಾದ ‘ಜ್ಞಾನದ ಸೃಷ್ಟಿ’ಯನ್ನು ಮರೆತು, ‘ಮಾನವ ಶೋಷಣೆ ಮತ್ತು ಅಸಹಾಯಕತೆಯ’ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ ಎಂಬುದಕ್ಕೆ ಒಂದು ಶಾಶ್ವತವಾದ ಸಾಹಿತ್ಯಕ ದಾಖಲೆಯಾಗಿ ಉಳಿಯುತ್ತದೆ.

ಮೊಗಳ್ಳಿಯವರ ಈ ಕಥೆಯಲ್ಲಿನ ಚಿಕ್ಕಚಿಕ್ಕ ವಾಕ್ಯಗಳು ಕೇವಲ ನಿರೂಪಣೆಯ ಸರಳತೆಯಲ್ಲ. ಅವು ಆಧುನಿಕ ಜೀವನದ ಅತಿಸುಮಾರುತನ, ಶೋಷಣೆಯ ತೀವ್ರತೆ ಮತ್ತು ಪಾತ್ರಗಳ ಆಂತರಿಕ ಪ್ರಕ್ಷುಬ್ಧತೆಯ ಗತಿಯನ್ನು ಬಿಂಬಿಸುತ್ತವೆ. ‘ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದವು. ಕಿಟಕಿಯಿಂದ ನೋಡಿದ. ಚಳಿಗಾಳಿ ಬೀಸುತ್ತಿತ್ತು. ಕೆಳಗಿಳಿದು ಬಾರೊ ಇದೇ ಪಂಚಾಯ್ತಿ ಎಂದು ರೇಗಿಸುತ್ತಿದ್ದವು.’ ಇಂತಹ ತುಂಡರಿಸಿದ, ನಿರ್ಲಿಪ್ತ ವಾಕ್ಯಗಳು, ಪಿಎಚ್‌ಡಿ ಬರಹದ ನಿರಂತರ ಆತಂಕ, ಗುರುವಿನ ಒತ್ತಡ ಮತ್ತು ಪರಿಸರದ ಹಗೆತನದಿಂದ ಬೇಸತ್ತಿರುವ ಶಿಷ್ಯನ ಮನಸ್ಸಿನ ತುಣುಕುಗಳನ್ನು ತಾದಾತ್ಮ್ಯಗೊಳಿಸುತ್ತವೆ. ಉದ್ದನೆಯ ವಿವರಣೆಗಳ ಭಾರವಿಲ್ಲದೆ, ಪ್ರತಿಯೊಂದು ವಾಕ್ಯವೂ ಒಂದು ಘಟನೆಯಂತೆ ನಿಂತು, ಓದುಗನ ಮನಸ್ಸಿನ ಮೇಲೆ ಕತ್ತಿಯ ಮೊನೆಯಂತೆ ಆಳವಾಗಿ ಇರಿಯುತ್ತದೆ. ಈ ತಂತ್ರವು ಕಥೆಗೆ ಒಂದು ಸಾಕ್ಷ್ಯಚಿತ್ರದ ಶೈಲಿಯನ್ನು ನೀಡಿದ್ದು, ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಮರೆಯಾಗಿರುವ ಮಾನವೀಯತೆಯ ದುರಂತವನ್ನು ಎದೆಗೆ ನಾಟುವಂತೆ ಮಾಡಿದೆ.

ಡಾ. ರವಿ ಎಂ ಸಿದ್ಲಿಪುರ

ಸಹಾಯಕ ಪ್ರಾಧ್ಯಾಪಕರು

ಇದನ್ನೂ ಓದಿ- ಗಾಂಧಿಯ ಸ್ವಗತ: ಜಂಟಿ ಪಯಣದ ಭಾವಗೀತೆ

More articles

Latest article