ಮೋದಿ ಚಿತ್ತ ಮತ್ತೆ ಮತಾಂಧತೆಯತ್ತ

Most read

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ  ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ ಒಂದಾದರೂ ಸತ್ಯವಿದೆಯೇ? ಮುಸ್ಲಿಮರಿಗೆ ಈ ದೇಶದ ಭೂಮಿ ಸಂಪತ್ತು ಸಂಪನ್ಮೂಲಗಳನ್ನು ಹಂಚಿಕೊಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿ ಹೇಳಿದೆ? _ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಸ್ವಘೋಷಿತ ವಿಶ್ವಗುರುಗಳು ಮೊದಲ ಹಂತದ ಮತದಾನದ ಪೂರ್ವಭಾವಿ ಸರ್ವೇ ರಿಪೋರ್ಟ್ ನೋಡಿ ಕನಲಿ ಹೋಗಿದ್ದಾರೆ. ಈ ಸಲದ ಚುನಾವಣೆ ಫಲಿತಾಂಶದ ಕುರಿತು ಎಕ್ಸಿಸ್ ಇಂಡಿಯಾ ಸರ್ವೆ ವರದಿ ‘ ಈ ಸಲ NDA ಗೆ ಸ್ಪಷ್ಟ ಬಹುಮತ ಬರುವುದಿಲ್ಲ’ ಎಂದು ಪ್ರಕಟಿಸಿದ ಮೇಲಂತೂ ಚೌಕೀದಾರನಿಗೆ ತನ್ನ ಅಧಿಕಾರದ ಅವಧಿ ಮುಗಿಯುತ್ತಿದೆ ಎಂದು ತಿಳಿದು ಗಾಬರಿಯಾಗಿದೆ. ಇನ್ನು ಉಳಿದ ಆರು ಹಂತಗಳ ಲೋಕಸಭಾ ಚುನಾವಣೆಯಲ್ಲಿಯಾದರೂ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಲು ಪ್ರಧಾನಿಗಳು ಧರ್ಮಾಂಧತೆಯ ಅಸ್ತವನ್ನು ಬಾಯಿಗೆ ಬಂದಂತೆ ಬಿಡುತ್ತಿದ್ದಾರೆ. ಮತ್ತೆ ತಮ್ಮ ಹಳೆಯ ಹಿಂದುತ್ವವಾದಿ ಸಿದ್ಧಾಂತ ಹಾಗೂ ಮುಸ್ಲಿಂ ದ್ವೇಷ ಪ್ರಚಾರಕ್ಕೆ ಈಗ ಹೋದಲ್ಲೆಲ್ಲಾ ಪ್ರಾಮುಖ್ಯತೆ ನೀಡುತ್ತಿದ್ದಾರೆ. 

ಮೋದಿ

ಮೊನ್ನೆ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಮೋದಿ ಮಹಾರಾಜರ ಭಾಷಣವನ್ನು ಅವಲೋಕಿಸಬಹುದಾಗಿದೆ. ‘ಕರ್ನಾಟಕದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ’ ಎಂದು ಹೇಳುವ ಮೂಲಕ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ಕುರಿತು ತಮ್ಮ ಧರ್ಮದ್ವೇಷವನ್ನು ಕಾರುತ್ತಾ  ಕಾಂಗ್ರೆಸ್ ಸರಕಾರದ ವಿಫಲತೆಯನ್ನು ಪ್ರಸ್ತಾಪಿಸಿದರು. ಆದರೆ ಇವರದೇ ಬಿಜೆಪಿ ಸರಕಾರ ಆಡಳಿತದಲ್ಲಿರುವ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ದುರಂತವನ್ನು ಮರೆಮಾಚಿದರು. ಅವರದೇ ಸರಕಾರ ಇರುವ ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಅತೀ ಹೆಚ್ಚು ಅಂದರೆ ವರ್ಷಕ್ಕೆ 67 ಸಾವಿರದಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದನ್ನು ಮರೆತೇ ಬಿಟ್ಟರು. ತಮ್ಮದೇ ತವರು ರಾಜ್ಯ ಗುಜರಾತಿನಲ್ಲಿ ಬಿಲ್ಕಿಸ್ ಭಾನು ಹಾಗೂ ಆಕೆಯ ಕುಟುಂಬದ ಮೇಲೆ ಬರ್ಬರತೆ ಮೆರೆದು ಜೈಲಿಗೆ ಸೇರಿದ್ದ  ಬ್ರಾಹ್ಮಣ ಸಮುದಾಯದ ಘಾತುಕರನ್ನು ಬಿಜೆಪಿ ಸರಕಾರ ಅವಧಿ ಪೂರ್ವ ಬಿಡುಗಡೆಗೊಳಿಸಿ ಮೆರವಣಿಗೆ ಮಾಡಿ ಸನ್ಮಾನ ಮಾಡಿದಾಗ ಮಹಿಳೆಯರ ಅಸುರಕ್ಷತೆ ಹೋಗಿ ಸುಭಿಕ್ಷೆಯಾಗಿತ್ತಾ?.  ಮಹಿಳಾ ಕುಸ್ತಿ ಪಟುಗಳ ಮೇಲೆ ಬಿಜೆಪಿ ಎಂಪಿ ಬ್ರಿಜ್ ಭೂಷಣ್ ಮಾಡಿದ ಅನಾಚಾರ ಅತ್ಯಾಚಾರಗಳತ್ತ ಇವರ ಗಮನವೇ ಇಲ್ಲ.

ಆದರೆ, ನೇಹಾ ಕೊಲೆಗಾರನೊಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಇಡೀ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಲ್ಲ  ಎಂದು ಮೋದಿ ಭಾಷಣ ಮಾಡಿದರು. ಬಂಟ್ವಾಳದಲ್ಲಿ ಪದ್ಮರಾಜ್ ಎನ್ನುವ ಬಿಜೆಪಿ ಕಾರ್ಯಕರ್ತ ಗೌರಿ ಎನ್ನುವ ಮಹಿಳೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದಾಗ ಇವರಿಗೆ ಮಹಿಳಾ ಸುರಕ್ಷತೆಯ ಬಗ್ಗೆ ನೆನಪಾಗಲಿಲ್ಲವಾ? ಮೈಸೂರಿನ ಮುಸ್ಲಿಂ ಯುವತಿ ರುಕ್ಸಾನಾಳನ್ನು ಪ್ರದೀಪ್ ಎನ್ನುವ ನೀಚ ಗರ್ಭಿಣಿ ಮಾಡಿ ಹಸಿ ಬಾಣಂತಿಯಾದಾಗ ತುಮಕೂರಿನ ಹತ್ತಿರ ಕೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಾಗ ಮಹಿಳಾ ಸುರಕ್ಷತೆಯ ಬಗ್ಗೆ  ಕಾಳಜಿ ಬರಲಿಲ್ಲವಾ?. ಉಡುಪಿಯಲ್ಲಿ ಗಗನಸಖಿ ಮನೆಗೆ ನುಗ್ಗಿದ ಪ್ರವೀಣ್ ಚೌಗಲೆ ಎಂಬ ಭಗ್ನಪ್ರೇಮಿ  ಆ ಮುಸ್ಲಿಂ ಯುವತಿಯ ಜೊತೆಗೆ ಆಕೆಯ ಕುಟುಂಬದ ಮೂವರನ್ನು ಬರ್ಬರವಾಗಿ ಕೊಂದಾಗ ಮಹಿಳಾ ಸುರಕ್ಷತೆ ಇವರಿಗೆ ಕಾಡಲಿಲ್ಲ. ಯಾಕೆಂದರೆ ಆಗ ಇವರದೇ ಡಬಲ್ ಇಂಜೀನ್ ಸರಕಾರ ಇತ್ತಲ್ವಾ. ಹಿಂದೂ ಪುರುಷರು ಕೊಂದಾಗ ಇಲ್ಲದ ಮಹಿಳಾ ಸುರಕ್ಷತೆಯ ಕಾಳಜಿ ಕಳಕಳಿ ಈಗ ಮುಸ್ಲಿ ಯುವಕ ಕೊಲೆಗಾರ ಎಂದ ಕೂಡಲೇ ಜಾಗೃತವಾಗಲು ಕೋಮುದ್ವೇಷ ಹಾಗೂ ಮತ ಪಿಪಾಸುತನ ಕಾರಣ ಅಲ್ಲವೇ?. ಬಿಜೆಪಿ ಸರಕಾರ ಇದ್ದಾಗ ಮಹಿಳಾ ಹತ್ಯೆಗಳು ನಡೆದಾಗ ಜಾಣ ಮೌನಕ್ಕೆ ಶರಣಾದ ಈ ಶವರಾಜಕೀಯ ಪ್ರವೀಣರು ಈಗ ಹುಬ್ಬಳ್ಳಿ ನೇಹಾ ಹತ್ಯೆಯ ಪ್ರಕರಣದಲ್ಲಿ ರಣಹದ್ದುಗಳ ಹಾಗೆ ಹಾರಿ ಬಂದು ರಾಜಕೀಯ ಮಾಡುತ್ತಿವೆ. ಸ್ವತಃ ಪ್ರಧಾನಿಗಳೇ ಅದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ.

ಬಿಜೆಪಿ ಎಂಪಿ ಬ್ರಿಜ್ ಭೂಷಣ್ ಮತ್ತು ಸಂತ್ರಸ್ತೆ

ಅದೇ ರೀತಿ ಮೋದಿಯವರ ಮತಾಂಧತೆಯ ವಿಶ್ವದರ್ಶನ ಬೆತ್ತಲಾಗುತ್ತಲೇ ಇದೆ. ರಾಜಸ್ಥಾನದ ಜಲೋರೆ ಮತ್ತು ಬನ್ಸ್ವಾರಾ ದಲ್ಲಿ ಸಾರ್ವಜನಿಕ ಚುನಾವಣೆಯಲ್ಲಿ ಭಾಷಣ ಮಾಡಿದ ಮೋದಿಯವರು ಕಾಂಗ್ರೆಸ್ ಪಕ್ಷ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾ ತಮ್ಮ ಹಿಂದೂ ತುಷ್ಟೀಕರಣವನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ಭರವಸೆಯನ್ನು ಟೀಕಿಸುತ್ತಲೇ ಎಪ್ರಿಲ್ 21 ರಂದು ಅತಿರೇಕದ ಭಾಷಣ ಮಾಡಿದರು. 

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಭೂಮಿ ಚಿನ್ನ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಹಂಚುತ್ತದೆ. ದೇಶದ ಸಂಪನ್ಮೂಲಗಳಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಕಾಂಗ್ರೆಸ್ ಘೋಷಿಸಿದೆ. 

ವ್ಯಕ್ತಿಗಳ ಆಸ್ತಿ, ಮಹಿಳೆಯರ ಒಡೆತನದ ಚಿನ್ನ ಮತ್ತು  ಬುಡಕಟ್ಟು ಕುಟುಂಬಗಳ ಒಡೆತನದ ಬೆಳ್ಳಿಯನ್ನು ಮರುಹಂಚಿಕೆ ಮಾಡಲು ಕಾಂಗ್ರೆಸ್ ಸಮೀಕ್ಷೆ ಮಾಡಿಸುತ್ತದೆ, ಸರ್ಕಾರಿ ನೌಕರರು ಮತ್ತು ಇತರರಿಗೆ ಸೇರಿದ ಭೂಮಿ ಮತ್ತು ಹಣವನ್ನು ಸಹ ಮುಸಲ್ಮಾನರಿಗೆ ವಿತರಿಸಲಾಗುತ್ತದೆ” ಎಂದು   ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿ ತಮ್ಮೊಳಗಿನ ಮುಸ್ಲಿಂ ದ್ವೇಷವನ್ನು ಕಾರಿಕೊಳ್ಳುತ್ತಾ ಹಿಂದೂಗಳನ್ನು ಕಾಂಗ್ರೆಸ್ ಮೇಲೆ ಎತ್ತಿಕಟ್ಟುವ ನೀಚ ಕೆಲಸವನ್ನು ಪ್ರಧಾನಿಗಳು ಉದ್ದೇಶ ಪೂರ್ವಕವಾಗಿಯೇ ಮಾಡಿದರು. “ನೀವು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಆಸ್ತಿಯನ್ನು ಸರ್ಕಾರ ಕಿತ್ತುಕೊಳ್ಳುವುದನ್ನು ನೀವು ಸಹಿಸಿ ಕೊಳ್ಳಬಹುದೇ? ಎಂದೂ ನೆರೆದವರನ್ನು ಪ್ರಶ್ನಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದರು. 

“2006 ರಲ್ಲಿ ಅಂದಿನ ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರು ಮೊದಲ ಹಕ್ಕು ಹೊಂದಿದ್ದಾರೆಂದು ಹೇಳಿದ್ದರು, ಅಂದರೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವವರಿಗೆ ಮತ್ತು ಒಳನುಸುಳುಕೋರರಿಗೆ ಆಸ್ತಿಯನ್ನು ಹಂಚಲಾಗುತ್ತದೆ. ಇದು ನಿಮಗೆ ಸ್ವೀಕಾರಾರ್ಹವೇ” ಎಂದು ಜನತೆಯನ್ನು ಕೇಳಿದ ಮೋದಿ “ಕಾಂಗ್ರೆಸ್ಸಿನ “ನಗರ ನಕ್ಸಲ್” ಸಿದ್ಧಾಂತವು ಮಹಿಳೆಯರ ಮಂಗಳ ಸೂತ್ರದಿಂದಲೂ ವಂಚಿತವಾಗುತ್ತದೆ, ನನ್ನ ತಾಯಂದಿರು ಮತ್ತು ಸಹೋದರಿಯರ ಚಿನ್ನಾಭರಣಗಳು ಕೇವಲ ಪ್ರದರ್ಶನಕ್ಕಾಗಿ ಅಲ್ಲ. ಇದು ಅವರ ಸ್ವಾಭಿಮಾನದ ವಿಚಾರ. ಕಾಂಗ್ರೆಸ್ ಆ ಮಟ್ಟಕ್ಕೆ ಕುಸಿದಿದೆ. ನೀವು ಕಷ್ಟಪಟ್ಟು ದುಡಿದ ಹಣ ಒಳನುಗ್ಗುವವರ ಕೈಗೆ ಹೋಗುವುದನ್ನು ನೀವು ಹೇಗೆ ಸಹಿಸಿಕೊಳ್ಳುತ್ತೀರಿ? ” ಎಂದು ಹೇಳಿದ ಮೋದಿ ಹಿಂದೂ ಮಹಿಳೆಯರ ಭಾವನೆಗಳನ್ನೂ ಪ್ರಚೋದಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ  ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. 

ಮೋದಿ ಮತ್ತು ಮನಮೋಹನ್‌ ಸಿಂಗ್

ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ ಒಂದಾದರೂ ಸತ್ಯವಿದೆಯೇ? ಮುಸ್ಲಿಮರಿಗೆ ಈ ದೇಶದ ಭೂಮಿ ಸಂಪತ್ತು ಸಂಪನ್ಮೂಲಗಳನ್ನು ಹಂಚಿಕೊಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿ ಹೇಳಿದೆ? ಮಹಿಳೆಯರು ಮಂಗಲಸೂತ್ರದಿಂದಲೂ ವಂಚಿತರನ್ನಾಗಿಸುತ್ತೇವೆ ಎಂದು ಯಾವ ನಗರ ನಕ್ಸಲ್ ಯಾವಾಗ ಎಲ್ಲಿ ಹೇಳಿದ್ದಾರೆ? ಎಲ್ಲವೂ ಮೋದಿ ಮೆದುಳಿನ ಕಪೋಲಕಲ್ಪತ ಸೃಷ್ಟಿ ಅಷ್ಟೇ. ಯಾವುದೇ ಆರೋಪ ಆಪಾದನೆಗಳಿಗೂ ಸಾಕ್ಷಿ ಪುರಾವೆಗಳಿಲ್ಲಾ. ಕೇವಲ ಎಲೆಕ್ಷನ್ ಜುಮ್ಲಾ.

ಮೋದಿ ಭಾಷಣಕ್ಕೆ ಕರೆತಂದ ಬಹುತೇಕರು ಕಾಂಗ್ರೆಸ್ ಪ್ರಣಾಳಿಕೆ ಓದಿರುವುದಿಲ್ಲ. ಮೋದಿ ಹೇಳಿದ ಮೇಲೆ ಇದ್ದರೂ ಇರಬಹುದು ಎಂದು ನಂಬುವವರೇ ಹೆಚ್ಚಿದ್ದಾರೆ. ಅದೇ ಈ ಕೇಸರಿ ನಾಯಕನಿಗೆ ಬೇಕಾಗಿರೋದು. ಮತಾಂಧತೆ ಹೆಚ್ಚಿದಷ್ಟೂ ಮತಬೇಟೆ ಸುಲಭ ಎನ್ನುವುದು ಈ ಕೋಮುವಾದಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸುಳ್ಳುಗಳ ಮೇಲೆ ಸುಳ್ಳು ಹೇಳಿ ಜನರನ್ನು ನಂಬಿಸುವುದೇ ಸುಳ್ಳುಕೋರನ ನಿತ್ಯ ಕಾಯಕವಾಗಿದೆ.

ಇದನ್ನೂ ಓದಿ-ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ

ಆದರೆ ಈ ಚನಾವಣಾ ಆಯೋಗ ಅಂತಾ ಒಂದಿದೆಯಲ್ಲಾ. ಅದೇನು ಮಾಡುತ್ತಿದೆ. ಪ್ರಧಾನಿಯೊಬ್ಬ ಸಾರ್ವಜನಿಕವಾಗಿ ಮತಾಂಧತೆಯನ್ನು ಪ್ರಚಾರ ಮಾಡುತ್ತಿರುವಾಗ, ಇಲ್ಲದ ಸುಳ್ಳನ್ನು ಹೇಳಿ ಪ್ರತಿಪಕ್ಷವನ್ನು ನಿಂದಿಸುತ್ತಿರುವಾಗ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೋಮುದ್ವೇಷದ ವಿಷವನ್ನು ಹಂಚುತ್ತಿರುವ ಪ್ರಧಾನಿಗಳಿಗೆ ಯಾಕೆ ಎಚ್ಚರಿಕೆ ಕೊಡುತ್ತಿಲ್ಲ. “ಮೋದಿ ಹೆಸರಿನವರೆಲ್ಲಾ ಯಾಕೆ ಕಳ್ಳರು” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಕ್ಕೆ ದೂರು ದಾಖಲಿಸಿ, ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಿ, ಅವರನ್ನು ಸಂಸತ್ತಿನಿಂದಲೇ ಅಮಾನತ್ತು ಗೊಳಿಸಿದ ಇದೇ ಮೋದಿಯವರು ಈಗ ಇಷ್ಟೊಂದು ಕೋಮು ದ್ವೇಷವನ್ನು ಹಾಡು ಹಗಲೇ ಹಂಚುತ್ತಿರುವಾಗ ಕ್ರಮ ಕೈಗೊಳ್ಳಬೇಕಾದ ಚುನಾವಣಾ ಆಯುಕ್ತರು ಜಾಣ ಕುರುಡರಾಗಿದ್ದಾರೆ. ಮೋದಿಯವರಿಂದಲೇ ಆಯ್ಕೆಯಾದ ಅವರು ಹಲ್ಲು ಕಿತ್ತ ಹಾವಾಗಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಜನರೇ ಈ ಸುಳ್ಳುಕೋರರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕಿದೆ. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲೇಬೇಕಿದೆ. ಪ್ರಜಾಪ್ರಭುತ್ವವಾದಿಗಳು ಎಲ್ಲಾ ಮಾಧ್ಯಮಗಳ ಮೂಲಕ ಮೋದಿ ಪಡೆಯ ಸುಳ್ಳುಗಳನ್ನು ಜನರಿಗೆ ತಿಳಿಸಬೇಕಿದೆ. ಸಂವಿಧಾನವನ್ನು ಉಳಿಸಬೇಕಿದೆ. ಸರ್ವಾಧಿಕಾರಿಯನ್ನು ಪಟ್ಟದಿಂದ ಇಳಿಸಲೇಬೇಕಿದೆ.

 ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article