ಸಂಡೂರು: ಮೋದಿ ಅಚ್ಚೆ ದಿನ್ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ವಿದೇಶದಿಂದ ಕಪ್ಪು ಹಣ ತರಲಿಲ್ಲ, ನಿಮ್ಮ ಖಾತೆಗೆ 15 ಲಕ್ಷ ಹಾಕಲಿಲ್ಲ. ಬರೀ ಭಾಷಣದಲ್ಲೇ ಮೋದಿಯವರು ಎಲ್ಲಾ ಮುಗಿಸಿ ಹೋದರು. ಪ್ರಧಾನಿ ಮೋದಿ ಅವರು ಅವರು ಹೇಳಿದ ಸುಳ್ಳಿಗೆ ಪ್ರತಿಯಾಗಿ ನಾನು ಹಾಕಿದ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ ಗಳಿಂದ ಪ್ರಧಾನಿ ಮೋದಿಯವರರೆಗೂ ಸರಣಿ ಸುಳ್ಳು ಗಳನ್ನು ಹೇಳಿದರು. ನೀವು ಆರೋಪ ಸಾಬೀತಿಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದರು.
ನಾನು ಮೂರು ದಿನಗಳ ಕಾಲ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಮ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಮ್ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದೂ ನನಗೂ ಗೊತ್ತು. ಈಗ ತುಕಾರಾಮ್ ಅವರು ಒಳ್ಳೆ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ ಎಂದರು. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
2014-2018 ರಲ್ಲಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಗಳನ್ನು ನೆನಪಿಸಿಕೊಳ್ಳಿ. ಅವುಗಳಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ ? ಮೋದಿಯವರು ನಿಮಗೆ ಈ ಮಟ್ಟದ ಮೋಸ ಮಾಡಿದ್ದಾರಲ್ಲಾ ಇದನ್ನು ಪ್ರಶ್ನಿಸಬೇಕಿದೆ. ಬಳ್ಳಾರಿ ಜಿಲ್ಲೆಯ ಜನತೆಯನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನ ರೆಡ್ಡಿಯವರಿಗೆ ಬಿಜೆಪಿ ಈ ಚುನಾವಣೆಯ ಉಸ್ತುವಾರಿ ವಹಿಸಿತ್ತು. ಆದರೆ, ಸಂಡೂರಿನ ಜನತೆ ರೆಡ್ಡಿಯವರ ಹಣಕ್ಕೆ, ಭಯಕ್ಕೆ, ಆಮಿಷಕ್ಕೆ, ಸುಳ್ಳುಗಳಿಗೆ, ಅಪಪ್ರಚಾರಕ್ಕೆ ಸೋಲಲಿಲ್ಲ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣ ಮತ್ತು ಸತ್ಯದ ರಾಜಕಾರಣವನ್ನು ಗೆಲ್ಲಿಸಿದ್ದೀರಿ. ಇದು ಸಂಡೂರಿನ ಘನತೆಯನ್ನು ಹೆಚ್ಚಿಸಿದೆ ಎಂದರು.
ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ ಗಳ ವರೆಗೂ ಎಲ್ಲರೂ ಸರಣಿ ಸುಳ್ಳು ಅಪಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ ಎಂದು ವ್ಯಂಗ್ಯವಾಡಿದರು.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಡೂರು ಜನತೆಗೆ ಅಭಿನಂದಿಸಿ ಭಾಷಣ ಮಾಡುವ ವೇಳೆ ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡುವುದಾಗಿ ಘೋಷಿಸಿದರು