Sunday, September 8, 2024

ಮೋದಿ-ಲೈ ಚಿಂಗ್ ಭಾಯಿಭಾಯಿ, ಸಿಟ್ಟಿಗೆದ್ದ ಚೀನಾಗೆ ತಿರುಗೇಟು ನೀಡಿದ ತೈವಾನ್

Most read

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ತೈವಾನ್ ಅಧ್ಯಕ್ಷ ಲೈ ಚಿಂಗ್-ಟೆ ಅಭಿನಂದಿಸಿದ್ದು ಮತ್ತು ಅದಕ್ಕೆ ಮೋದಿ ಪ್ರತಿಕ್ರಿಯಿಸಿದ್ದರ ಹಿನ್ನೆಲೆಯಲ್ಲಿ ಚೀನಾ ಕಣ್ಣು ಕಂಪಾಗಿದ್ದು ಅಸಮಾಧಾನ ಹೊರಹಾಕಿದೆ.
ಚೀನಾದ ಅಸಮಾಧಾನವನ್ನು ಟೀಕಿಸಿರುವ ತೈವಾನ್, ಇಬ್ಬರು ನಾಯಕರ ನಡುವಿನ ಸಂದೇಶಗಳ ವಿನಿಮಯಕ್ಕೆ ಇಷ್ಟೆಲ್ಲ ಸಿಟ್ಟು ಯಾಕೆ ಎಂದು ಪ್ರಶ್ನಿಸಿದೆ. ತೈವಾನ್ ಉಪ ವಿದೇಶಾಂಗ ಸಚಿವ ಟೀನ್ ಚುಂಗ್-ಕ್ವಾಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬೀಜಿಂಗ್ (ಚೀನಾ) ಪ್ರತಿಕ್ರಿಯೆ ಸಕಾರಣವಿಲ್ಲದ ಹಸ್ತಕ್ಷೇಪ ಎಂದು ಹೇಳಿದ್ದಾರೆ.
ತೈವಾನ್ ನೂತನ ಅಧ್ಯಕ್ಷರಾದ ಲೈ ಚಿಂಗ್-ಟೆ ಭಾರತದ ಪ್ರಧಾನಿಯಾಗಿ ಮೂರನೇ ಬಾರಿ ಆಯ್ಕೆಯಾದ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ಮೋದಿಯವರು ಕೂಡ ಎಕ್ಸ್ ಮೂಲಕ ಇದಕ್ಕೆ ಪ್ರತಿಕ್ರಿಯೆ ನೀಡಿದರು. ಒಬ್ಬರನ್ನೊಬ್ಬರು ಅಭಿನಂದಿಸುವುದು ಸಹಜ ಪ್ರಕ್ರಿಯೆ. ಈ ಬಗ್ಗೆ ಇನ್ಯಾರಿಗೋ ಇನ್ನೇನೋ ಹೇಳಲು ಏನಿರುತ್ತದೆ? ನನಗೆ ಅರ್ಥವಾಗುತ್ತಿಲ್ಲ ಎಂದಿರುವ ಅವರು, ಚೀನಾ ಪ್ರತಿಕ್ರಿಯೆಯು ಸಕಾರಣವಿಲ್ಲದ ಹಸ್ತಕ್ಷೇಪ ಎಂದು ಬಣ್ಣಿಸಿದ್ದಾರೆ.
ಜೂ.5ರಂದು ತೈವಾನ್ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದರು. ತೈವಾನ್ ಮತ್ತು ಭಾರತದ ನಡುವಿನ ಸಂಬಂಧ, ಸಹಭಾಗಿತ್ವ ಹೆಚ್ಚಿಸುವ ಕುರಿತು ಎದುರು ನೋಡುತ್ತಿರುವುದಾಗಿಯೂ, ವ್ಯಾಪಾರ, ತಾಂತ್ರಿಕತೆ ಮತ್ತು ಇತರ ಕ್ಷೇತ್ರಗಳಲ್ಲಿಒಟ್ಟಾಗಿಹೋಗುವ ಅವಶ್ಯಕತೆ ಇದ್ದು, ಇದು ಇಂಡೋ ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ತೈವಾನ್ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ್ದಲ್ಲದೆ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹೆಚ್ಚಿಸುವ, ತನ್ಮೂಲಕ ಉಭಯ ದೇಶಗಳ ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪರಸ್ಪರರಿಗೆ ಲಾಭವಾಗಲಿದೆ ಎಂದು ಹೇಳಿದ್ದರು.
ತೈವಾನ್ ಅಧ್ಯಕ್ಷರು ಮತ್ತು ಭಾರತ ಪ್ರಧಾನಿ ನಡುವಿನ ಈ ಸಂದೇಶಗಳ ವಿನಿಮಯ ಚೀನಾ ಆಡಳಿತದ ಕಣ್ಣು ಕೆಂಪಗಾಗಿಸಿತ್ತು. ಮಾರನೇ ದಿನವೇ ಮಾಧ್ಯಮ ಗೋಷ್ಠಿಯೊಂದನ್ನು ನಡೆಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತೈವಾನ್ ಭಾಗದಲ್ಲಿ `ಅಧ್ಯಕ್ಷರು’ ಎಂಬ ಪದವಿ ಇಲ್ಲ ಎಂದು ಹೇಳಿದರು.
ಚೀನಾ ದೇಶದ ಆಡಳಿತವು ತೈವಾನ್ ದೇಶವನ್ನು ತನ್ನ ದೇಶದ ಅವಿಭಾಜ್ಯ ಅಂಗ ಎಂದು ಮೊದಲಿನಿಂದಲೂ ಪರಿಗಣಿಸುತ್ತ ಬಂದಿದೆ. ಇನ್ನೊಂದೆಡೆ ತೈವಾನ್ ತನ್ನನ್ನು ತಾನು ಸ್ವಯಂ ಆಡಳಿತದ ಸ್ವತಂತ್ರ ದ್ವೀಪರಾಷ್ಟ್ರ ಎಂದು ಕರೆದುಕೊಳ್ಳುತ್ತದೆ. ಉಭಯ ದೇಶಗಳ ನಡುವಿನ ವಿರಸ ಹೆಚ್ಚುತ್ತಲೇ ಇದ್ದು ಇಂಡೋ ಪೆಸಿಫಿಕ್ ವಲಯದಲ್ಲಿ ಸದಾ ಜಟಾಪಟಿಗೆ ಕಾರಣವಾಗಿದೆ.

More articles

Latest article