ಹೊಸದಿಲ್ಲಿ: ಲೋಕಸಭಾ ಚುನಾವಣೆ ದಿನಾಂಕಗಳು ಘೋಷಣೆಯಾಗುವುದಕ್ಕೂ ಮುನ್ನ ಭಾರತೀಯ ಜನತಾ ಪಕ್ಷ ಭರ್ಜರಿ ತಯಾರಿ ಆರಂಭಿಸಿದ್ದು, ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಉನ್ನತ ಮಟ್ಟದ ನಾಯಕರ ಸಭೆ ನಿನ್ನೆ ನಡುರಾತ್ರಿ ನಡೆಯಿತು.
ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಘೋಷಿಸುವುದಕ್ಕೂ ಮುನ್ನವೇ ಮೊದಲ ಪಟ್ಟಿ ಬಿಡುಗಡೆ ಮಾಡಿ, INDIA ಮೈತ್ರಿಕೂಟದ ಮೇಲೆ ಒತ್ತಡ ಹೇರುವ ತಂತ್ರವನ್ನು ಬಿಜೆಪಿ ಹೆಣೆದಿದ್ದು, INDIA ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಸಮಸ್ಯೆಗಳ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ.
ನಿನ್ನೆ ನಡೆದ ನಡುರಾತ್ರಿ ಸಭೆಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ಪಕ್ಷದ ಚುನಾವಣಾ ಚತುರ, ಗೃಹಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ಮುಖಂಡ ರಾಜನಾಥ್ ಸಿಂಗ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಪಕ್ಷ ಕಣಕ್ಕೆ ಇಳಿಸಲಿರುವ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿದರು.
ಹಿರಿಯ ಮುಖಂಡರಾದ ದೇವೇಂದ್ರ ಫಡ್ನವಿಸ್, ಪ್ರಕಾಶ್ ಜಾವಡೇಕರ್, ಮನ್ಸುಖ್ ಬಾಯ್ ಮಾಂಡವಿಯ, ಪುಶ್ಕರ್ ಧಾಮಿ, ಪ್ರಮೋದ್ ಸಾವಂತ್, ಭೂಪೇಂದ್ರ ಯಾದವ್, ಜೋತಿರಾದಿತ್ಯ ಸಿಂಧ್ಯ, ಕೇಶವ್ ಮೌರ್ಯ, ಯೋಗಿ ಆದಿತ್ಯನಾಥ್ ಅವರುಗಳು ಕೂಡ ನಿನ್ನೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡುರಾತ್ರಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತಿಸ್ ಗಡ, ಕೇರಳ, ತೆಲಂಗಾಣ, ರಾಜಸ್ತಾನ, ಗೋವಾ, ಗುಜರಾತ್ ರಾಜ್ಯಗಳ ಕಡೆ ಗಮನ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಅಭ್ಯರ್ಥಿಗಳ ಆಯ್ಕೆಗೆ ಮೈತ್ರಿಕೂಟದ ಪಕ್ಷಗಳ ಜೊತೆ ಮಾತುಕತೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವುದು ಅನುಮಾನ.
ಭಾರತೀಯ ಜನತಾ ಪಕ್ಷ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಬಹುದಾದ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಮೊದಲ ಹಂತದಲ್ಲೇ ಶೇ.50ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸುವ ಸಂಭವವಿದೆ. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ʻಗೆಲ್ಲುವ ಸಾಧ್ಯತೆʼ ಇರುವವರನ್ನೇ ಪರಿಗಣಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
2019ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲೂ ಚುನಾವಣೆಗಳು ಘೋಷಣೆಯಾಗುವುದಕ್ಕೆ ವಾರಗಳು ಇರುವಂತೆಯೇ 164 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಬಿಜೆಪಿ ಅಚ್ಚರಿ ಮೂಡಿಸಿತ್ತಲ್ಲದೆ, ಎದುರಾಳಿ ಪಕ್ಷಗಳಿಗೆ ತಳಮಳ ಹುಟ್ಟಿಸಿತ್ತು.
ಈ ನಡುವೆ, ಮಹಾರಾಷ್ಟ್ರದಲ್ಲಿ ʻಮಹಾ ವಿಕಾಸ್ ಅಘಾಡಿʼ ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ಕುರಿತಂತೆ ಇಂದು ಸಂಜೆ ಮುಂಬೈನಲ್ಲಿ ಸಭೆಯೊಂದು ನಡೆಯಲಿದ್ದು, ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷವು ಅತಿಶೀಘ್ರವೇ ಸೀಟು ಹಂಚಿಕೆ ಸೂತ್ರ ಇತ್ಯರ್ಥವಾಗಲಿದೆ ಎಂಬ ವಿಶ್ವಾಸದಲ್ಲಿದೆ.