ಕೋಲಾರ: ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಿರಿವಂತ ಉದ್ಯಮಿಗಳ 16 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡಿದೆ. ಈ ಹಣದಿಂದ ಶ್ರಮಿಕರಿಗೆ 25 ವರ್ಷಗಳ ಕಾಲ ಕೂಲಿ ನೀಡಬಹುದು. ಸಿರಿವಂತರಿಗೆ ಮಾಡಿದ ಸಾಲಮನ್ನಾ ಈ ದೇಶದ ಶ್ರಮಿಕರಿಗೆ, ರೈತರಿಗೆ ಮಾಡಿದ ಮೋಸ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ಮಾಲೂರಿನಲ್ಲಿಂದು ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಅದಾನಿ, ಅಂಬಾನಿಗಳ ಸರ್ಕಾರ. ಅದಾನಿಗೆ ಈ ಸರ್ಕಾರ ರೈತರ ಬೆಳೆಯ ಗೋಡೋನನ್ನೇ ಕೊಟ್ಟಿದೆ. ಮುಂಬೈ ವಿಮಾನ ನಿಲ್ದಾಣವನ್ನೇ ಕೊಟ್ಟಿದೆ. ಅಲ್ಲಿ ನಿರ್ವಹಿಸುತ್ತಿದ್ದ ಸಂಸ್ಥೆಯ ಮುಖ್ಯಸ್ಥರಿಗೆ ಐಟಿ, ಇಡಿ ಮೂಲಕ ಬೆದರಿಸಿ ವಿಮಾನ ನಿಲ್ದಾಣ ಕೊಡಿಸಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದರು.
ಕರ್ನಾಟಕ ಜನರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಹುಲ್ ತಮ್ಮ ಅಜ್ಜಿ ಇಂದಿರಾ ಗಾಂಧಿ ಜತೆ ಕೆಜಿಎಫ್ ಗೆ ಬಂದಿದ್ದನ್ನು ಸ್ಮರಿಸಿಕೊಂಡರು. ಕೆಜಿಎಫ್ ನಲ್ಲಿ ಅಲ್ಲಿ ಕಾರ್ಮಿಕರ ಜತೆ ಮಾತಾಡಿರುವ ನೆನಪು ಇದೆ. ನಮ್ಮ ಅಜ್ಜಿಯ ಮಾತುಗಳೇ ನನಗೆ ರಾಜಕೀಯ ಪ್ರೇರಣೆ. ನಮ್ಮ ಅಜ್ಜಿ ಇಂದಿರಾ ಗಾಂಧಿ ಒಂದು ಮಾತು ಹೇಳಿದ್ದರು. ಅದೇ ನನಗೆ ರಾಜಕೀಯ ಜೀವನದ ಪಾಠವಾಗಿದೆ. ಎಂದಿಗೂ ಭಯ ಪಡಬಾರದು , ಹೆಜ್ಜೆ ಹಿಂದೆ ಇಡಬಾರದು ಎಂಬುದು ಇಂದಿರಾಗಾಂಧಿಯವರ ಮಾತಾಗಿತ್ತು ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮಾತಾಡುತ್ತಿಲ್ಲ. ಜನ ಬೆಲೆಏರಿಕೆ ಮತ್ತು ನಿರುದ್ಯೋಗ ಸಮಸ್ಯೆ, ಎಲೆಕ್ಟ್ರಾಲ್ ಬಾಂಡ್ ನಂಥ ಭ್ರಷ್ಟಾಚಾರದಿಂದ ಕಂಗೆಟ್ಟಿದ್ದಾರೆ. ಅದರ ಬಗ್ಗೆ ಮಾತಾಡುವ ಬದಲು ಜನರ ಗಮನ ಬೇರೆ ಕಡೆ ಸೆಳೆಯಲು ಅವರು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಮೇಲ್ವರ್ಗದ ಹುದ್ದೆಗಳಲ್ಲಿ ಒಬಿಸಿ, ದಲಿತರಿಲ್ಲ, ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ಅನ್ಯಾಯ, ತಾರತಮ್ಯ ಹೆಚ್ಚಾಗಿದೆ. ಉದ್ಯಮಿಗಳ ಸಾಲ ಮನ್ನಾ ಮೂಲಕ ರೈತರಿಗೆ ಅಪಮಾನಿಸಲಾಗುತ್ತಿದೆ. ರೈತರು ಸಾಲ ಮನ್ನಾ ಕೇಳಿದಾಗ ಕೇಂದ್ರ ಮಾಡಲಿಲ್ಲ. ದೇಶದ ಅತಿಶ್ರೀಮಂತ 25 ಉದ್ಯಮಿಗಳ ಆಸ್ತಿ ದೇಶದ 72 ಕೋಟಿ ಜನರ ಆಸ್ತಿಗೆ ಸಮ. ಅಂಥವರ ಸಾಲ ಮನ್ನಾ ಮಾಡೋ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದರು.