ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯನ್ನು ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡಾ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತರಲಾಯಿತು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು. ಈ ಉದ್ಯೋಗವನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಉದ್ಯೋಗದ ಹಕ್ಕು ಇಲ್ಲವಾಗಿಸಿದೆ. ನರೇಗಾ ಯೋಜನೆಯನ್ನು ಇಲ್ಲವಾಗಿಸುವುದು ಬಿಜೆಪಿ ನಡೆಸಿರುವ ಸಂಚು ಎಂದು ಆಪಾದಿಸಿದರು.
ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿ ಮಾಡುವ ಹುನ್ನಾರ ಇದಾಗಿದೆ. ಈ ಮೂಲಕ ಮತ್ತೆ ಗಾಂಧೀಜಿ ಅವರನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. 28 ಕೋಟಿ ದಲಿತರಿಗೆ ಇದರಿಂದ ಅನ್ಯಾಯವಾಗಿದೆ. ನಮ್ಮ ಹೋರಾಟ ತೀವ್ರವಾಗಿ ಇರಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ ಎಂದು ಗುಡುಗಿದರು.
ಮನ್ರೆಗಾ ಕಾಯಿದೆ ಮತ್ತೆ ಜಾರಿ ಅಗುವ ರೀತಿ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯ ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನ ತಲುಪಬೇಕು. ಈ ವಿಷಯದ ಬಗ್ಗೆ ಜನರನ್ನೂ ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ. ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ಧು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ ಎಂದರು.

