ರಾಜ್ಯದಲ್ಲಿ ಗೋದ್ರಾ ರೀತಿ ಘಟನೆಗೆ ಪಿತೂರಿ ನಡೆಯುತ್ತಿದೆ ಇತ್ತೀಚಿಗೆ ನೀಡಿದ್ದ ಹೇಳಿಕೆ ಸಂಬಂಧ ತಮ್ಮನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲು ಮುಂದಾಗಿರುವುದಕ್ಕೆ ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂದು ಅರ್ಥವಾಗುತ್ತಿಲ್ಲ. ಮಂಪರು ಪರೀಕ್ಷೆ ಮಾಡಿ ಎಂದು ಪೊಲೀಸರಿಗೆ ಹೇಳಿದ್ದೇನೆ. ಸ್ಟೇಷನ್ ಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಲಿ. ನನ್ನ ಜೊತೆಗೆ ವಿಜಯೇಂದ್ರರನ್ನ ಮಂಪರು ಪರೀಕ್ಷೆಗೆ ಒಳಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ನನ್ನ ಪರಿಸ್ಥಿತಿಯೇ ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಕಥೆ ಏನು? ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಕಲ್ಲಡ್ಕ ಭಟ್ ಪ್ರಚೋದನಕಾರಿ ಹೇಳಿಕೆ ಕೊಟ್ಟರು. ಆಗ ಕಲ್ಲಡ್ಕ ಪ್ರಭಾಕರ್ ಭಟ್ ವಿಚಾರಣೆ ನಡೆಸಿಲ್ಲ. ಈಗ ನನ್ನ ವಿರುದ್ಧ ತನಿಖೆ ನಡೆಸುತ್ತಿರುವುದರ ಹಿಂದೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಶಾಂತಿ ಉಂಟಾಗಬಾರದು ಎಂದು ಹೇಳಿದ್ದೆ. ನಾನು ಪ್ರಚೋದನಕಾರಿ ಹೇಳಿಕೆ ಕೊಟ್ಟಿಲ್ಲ. ವಿಚಾರಣೆ ಮಾಡುವುದಾದರೆ ಠಾಣೆಗೆ ಕರೆದೊಯ್ಯಿರಿ. ಪೊಲೀಸರಿಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ. ಬೇಕಿದ್ದರೆ ಅರೆಸ್ಟ್ ಮಾಡಿ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ನಮ್ಮದೇ ಸರ್ಕಾರದಲ್ಲಿ ನನ್ನ ವಿಚಾರಣೆ ನಡೆದಿದೆ. ನನ್ನ ವಿಚಾರಣೆಗೆ ಒಳಪಡಿಸಿದ್ದು ಆಶ್ಚರ್ಯಕರ. ನನ್ನ ಜೀವನದಲ್ಲಿ ಯಾವುದೇ ಕೇಸ್ ಇರಲಿಲ್ಲ. ಕಾಂಗ್ರೆಸ್ ಮೂರು ಭಾಗವಾದಾಗಲೂ ಪಕ್ಷ ಬಿಟ್ಟಿಲ್ಲ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಗೋಧ್ರಾ ಮಾದರಿಯ ಘಟನೆ ನಡೆಸಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಇತ್ತೀಚಿಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.