ಸಂವಿಧಾನ ಬದಲಿಸಿ ಮನುಸ್ಮೃತಿ ಮರು ಪರಿಚಯಿಸಲು ಷಡ್ಯಂತ್ರ: ಪ್ರಕಾಶ್ ಅಂಬೇಡ್ಕರ್

Most read

ಮುಂಬೈಪಂಜಾಬ್‌ನ ಅಮೃತಸರದಲ್ಲಿ ಗಣರಾಜ್ಯೋತ್ಸವ ದಿನದಂದು ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ವಂಚಿತ್ ಬಹುಜನ ಅಘಾಡಿ ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್, ಸಂವಿಧಾನ ಬದಲಿಸಿ ಮನುಸ್ಮೃತಿ ಮರು ಪರಿಚಯಿಸಲು ರಾಷ್ಟ್ರದಾದ್ಯಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದ್ದಾರೆ.

ದೇಶದಾದ್ಯಂತ ಸಂವಿಧಾನ ಮತ್ತು ಅಂಬೇಡ್ಕರ್‌ ಪ್ರತಿಮೆ ಧ್ವಂಸ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂವಿಧಾನ ಬದಲಿಸಿ ಮನುಸ್ಮೃತಿ ಪರಿಚಯಿಸಲು ಷಡ್ಯಂತ್ರ ನಡೆಯುತ್ತಿದೆ. ಸಂವಿಧಾನ ಮತ್ತು ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸ ಮಾಡುತ್ತಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡುವುದು ಕ್ರಿಮಿನಲ್ ಕೃತ್ಯಕ್ಕಿಂತ ದೊಡ್ಡದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸುಧಾರಣೆ, ರಾಜಕೀಯ ತತ್ವಶಾಸ್ತ್ರ ಮತ್ತು ಶ್ರೀಮಂತ ಪರಂಪರೆಯನ್ನು ತಿರಸ್ಕರಿಸುವವರಿಂದ ಇಂತಹ ಕೆಲಸಗಳು ನಡೆಯುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇಂತಹ ಘಟನೆಗಳು ಆಘಾತ ಉಂಟು ಮಾಡುತ್ತಿವೆ. ಆದರೆ ಇದಕ್ಕಿಂತಲೂ ಆಘಾತವಾಗುತ್ತಿರುವುದು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನವನ್ನು ಭಾರತವು ಅಂಗೀಕರಿಸಿದ ದಿನವಾದ, ವಸಾಹತುಶಾಹಿ ಮತ್ತು ಮನುಸ್ಮೃತಿ ಆಡಳಿತದಿಂದ ಮುಕ್ತಗೊಂಡ ದಿನವಾದ ಗಣರಾಜ್ಯೋತ್ಸವದ ದಿನವೇ ಅಂಬೇಡ್ಕರ್ ಪ್ರತಿಮೆಗೆ ಹಾನಿಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಎಪಿ ನೇತೃತ್ವದ ಪಂಜಾಬ್ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೊಳ್ಳುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

More articles

Latest article