ತಿರುವನಂತಪುರಂ: ಕರ್ನಾಟಕ ಸರ್ಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕ ಜಾರಿಗೆ ತರಲು ಹೊರಟ ಬೆನ್ನಲ್ಲೇ ಕೇರಳ ಸರ್ಕಾರದ ಕೈಗಾರಿಕಾ ಸಚಿವ ಪಿ.ರಾಜೀವ್, ಬನ್ನಿ ಕೇರಳದಲ್ಲಿ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಕರೆ ನೀಡಿ, ನಗೆಪಾಟಲಿಗೆ ಈಡಾಗಿದ್ದಾರೆ.
ನಿನ್ನೆ ಆಂಧ್ರಪ್ರದೇಶ ಸರ್ಕಾರದ ಮಂತ್ರಿ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಉದ್ಯಮಿಗಳನ್ನು ವಿಶಾಖಪಟ್ಟಣಂ ನಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ ಬೆನ್ನಲ್ಲೇ ಕೇರಳ ಕೈಗಾರಿಕಾ ಸಚಿವ ಪಿ.ರಾಜೀವ್ ಕೂಡ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉದ್ಯಮಿಗಳನ್ನು ಆಹ್ವಾನಿಸುವ ಪೋಸ್ಟ್ ಹಾಕಿದ್ದರು.
ಕೇರಳದಲ್ಲಿ ಹೂಡಿಕೆ ಮಾಡಿ. ಉದ್ಯೋಗಿಗಳ ಪ್ರತಿಭೆ ಮತ್ತು ಅರ್ಹತೆ ಮಾತ್ರ ನೇಮಕಾತಿಗೆ ಮಾನದಂಡವಾಗಿದೆ. ಕಂಪನಿಗಳಿಗೆ ಕೇರಳವನ್ನು ಆಯ್ದುಕೊಳ್ಳಲು ಇದು ಸರಿಯಾದ ಸಮಯ, ಅತ್ಯುತ್ತಮ ಹವಾಮಾನ ಮತ್ತು ಯಾವ ಅಡಚಣೆಯೂ ಇಲ್ಲದ ಮುಕ್ತ ಪರಿಸರ ಕೇರಳದಲ್ಲಿದೆ. ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ರಾಜೀವ್ ಪೋಸ್ಟ್ ಮಾಡಿದ್ದರು.
ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಕೇರಳ ಸಚಿವರ ಕರೆಯನ್ನು ಗೇಲಿ ಮಾಡಿದ್ದಾರೆ. ನೂತನ ಎಂಬುವವರು ಕಮೆಂಟ್ ಮಾಡಿದ್ದು, ಮೊದಲು ಬೆಂಗಳೂರಿನಲ್ಲಿರುವ ‘ಮಲ್ಲು’ (ಮಲಯಾಳಿ) ಜನರನ್ನು ಹಿಂದಕ್ಕೆ ಕರೆಯಿಸಿಕೊಳ್ಳಿ ಎಂದು ಲೇವಡಿ ಮಾಡಿದ್ದಾರೆ.
ಕೇರಳ ಸರ್ಕಾರವು 2016-2024 ರ ನಡುವೆ ಸುಮಾರು 6000 ಉದ್ಯೋಗಗಳನ್ನು ಮಾತ್ರ ಸೃಷ್ಟಿಸಿದೆ. ಕೇರಳ ಕೂಡ ಕೇಂದ್ರದ ಬಳಿ ಬೇಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಮತ್ತು ಭಾರತದಾದ್ಯಂತ ಹೆಚ್ಚು ನುರಿತ ತಂತ್ರಜ್ಞರಿದ್ದಾರೆ. ಅವರು ತಮ್ಮ ರಾಜ್ಯಕ್ಕೆ ಹಿಂತಿರುಗುವುದಿಲ್ಲ. ಸ್ವಲ್ಪ ಸಂವೇದನಾಶೀಲರಾಗಿರಿ ಎಂದು ಶಿವ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ಜಸ್ಟಿನ್ ಪಪ್ಪಲಿನ್ ಎಂಬುವವರು ಪ್ರತಿಕ್ರಿಯಿಸಿದ್ದು, ನಾವು ಇನ್ಫೋಪಾರ್ಕ್‌ಗೆ ಸಾಗುವ ಹಾದಿಯಲ್ಲಿ ದೈನಂದಿನ ಪ್ರಯಾಣದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಸ್ತೆಗಳು ಅತ್ಯಂತ ಕಳಪೆ ಸ್ಥಿತಿಯಲ್ಲಿವೆ. ಹೊಸ ಉದ್ಯಮಗಳನ್ನು ಆಹ್ವಾನಿಸುವ ಮೊದಲು ದಯವಿಟ್ಟು ಈ ಸಮಸ್ಯೆಗಳನ್ನು ಸರಿಪಡಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಬೆಂಗಳೂರು ಭವಿಷ್ಯದಲ್ಲೂ ಭಾರತದ ಸಿಲಿಕಾನ್ ವ್ಯಾಲಿಯಾಗಿ ಉಳಿಯಲಿದೆ. ಬೆಂಗಳೂರಿನಲ್ಲಿ ಲಭ್ಯವಿರುವ ಪ್ರತಿಭೆಗಳು ಬೃಹತ್ ಪ್ರಮಾಣದಲ್ಲಿದೆ ಮತ್ತು ಯಾವುದೇ ನಗರಗಳು ಅಥವಾ ರಾಜ್ಯಗಳು ಬೆಂಗಳೂರಿನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅರುಣ್ ಶಿವರಾಂ ಹೇಳಿದ್ದಾರೆ.
ಉದ್ದಿಮೆಗಳು ಕೇರಳಕ್ಕೆ ಏಕೆ ಬರುತ್ತಿಲ್ಲ? ದಯವಿಟ್ಟು ಈ ಅಂಶದ ಬಗ್ಗೆ ಚಿಂತಿಸಿ. ವಿದ್ಯಾರ್ಥಿಗಳು ಬೇರೆ ರಾಜ್ಯ, ದೇಶಗಳಿಗೆ ಹೋಗುತ್ತಿದ್ದಾರೆ. ನಾವು ವಿದೇಶಿ ವಿನಿಮಯದಿಂದ ಬದುಕುವಂತಾಗಿದೆ ಎಂದು ಸುಬ್ರಹ್ಮಣ್ಯ ಎಂಬುವವರು ಕಮೆಂಟ್ ಮಾಡಿದ್ದಾರೆ.
ಇಡೀ ಕೇರಳವೇ ಬಂದು ಬೆಂಗಳೂರು, ಮೈಸೂರಿನಲ್ಲಿ ತುಂಬಿಕೊಂಡಿದೆ. ಕೇರಳದಲ್ಲಿ ಉಳಿದಿರುವವರಾದರೂ ಯಾರು? ಹಿರಿಯ ವಯಸ್ಕರು ಮಾತ್ರ ಎಂದು ವಿನಯ್ ಎಂಬುವವರು ಗೇಲಿ ಮಾಡಿದ್ದಾರೆ.

 
                                    
