ಮೈಸೂರು: ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರಿಯಣ್ಣ ಎಂದು ಕರೆದಿದ್ದ ವಸತಿ ಸಚಿವ ಜಮೀರ್ ಅಹಮ್ಮದ್ ಕೊನೆಗೂ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಈ ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚರವಹಿಸಿ ಸಚಿವ ಜಮೀರ್ ಮಂಗಳವಾರ ಮಾಧ್ಯಮಗಳ ಜೊತೆ
ಮಾತನಾಡಿ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ನಾನು ಕುಮಾರಸ್ವಾಮಿ ಅವರನ್ನು ಪ್ರೀತಿಯಿಂದ ಕರಿಯಣ್ಣ ಎಂದು ಕರೆದದ್ದು ಇದೇ ಮೊದಲೇನಲ್ಲ. ಪ್ರೀತಿಯಿಂದ ಅವರನ್ನು ಹಾಗೇ ಹಲವು ಸಲ ಕರೆದಿದ್ದೇನೆ. ಅವರೂ ನನ್ನನ್ನು ಕುಳ್ಳ ಎಂದು ಕರೆದಿದ್ದಾರೆ. ಆದರೆ ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಇದನ್ನು ವಿವಾದ ಮಾಡಲಾಗುತ್ತಿದೆ
ಎಂದರು.
ಇನ್ನು ದೇವೇಗೌಡರನ್ನು ಕೊಂಡುಕೊಳ್ಳುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್, ನನಗೆ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಅಪಾರ ಗೌರವ ಇದೆ. ಈ ಹಿಂದೆ ಚುನಾವಣೆಯಲ್ಲಿ ಕುಮಾರಸ್ವಾಮಿ ನನಗೆ ಮುಸ್ಲಿಮರ ಮತಗಳು ಬೇಡ ಎಂದು ಹೇಳಿದ್ದರು. ಈಗ ದುಡ್ಡು ಕೊಟ್ಟು ಮತ ಖರೀದಿಗೆ ಮುಂದಾಗಿದ್ದಾರೆ. ಅದನ್ನು ಉಲ್ಲೇಖಿಸಿ ನಾನು ಹಾಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.