Saturday, July 27, 2024

ಬಿಸಿ ಊಟದಲ್ಲಿ ಹಲ್ಲಿ ಎಂಬ ತಪ್ಪು ಮಾಹಿತಿ : ಗಾಬರಿಗೊಂಡು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ಪೋಷಕರು!

Most read

ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದೆ ಎಂದು ತಪ್ಪು ಮಾಹಿತಿಯನ್ನು ನಂಬಿ ಗಾಬರಿಗೊಳಗಾದ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಂಜನಗೂಡು ತಾಲೂಕು ಸಾಲುಂಡಿ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲೂಕು ಸಾಲುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 34 ಮಕ್ಕಳಿದ್ದು, ಎಂದಿನಂತೆ ಗುರುವಾರ ಮಧ್ಯಾಹ್ನ 1 ಗಂಟೆಯಲ್ಲಿ ಬಿಸಿಯೂಟವನ್ನು ಮಕ್ಕಳು ಸೇವಿಸಿದ್ದಾರೆ. ಈ ವೇಳೆ ಓರ್ವ ವಿದ್ಯಾರ್ಥಿನಿ ಊಟ ಮಾಡುವಾಗ ಹಲ್ಲಿ ಆಕಾರದ ತರಕಾರಿ ನೋಡಿ ಆತಂಕಗೊಂಡು ಮುಖ್ಯ ಶಿಕ್ಷಕಿ ಪುಷ್ಪಾ ಅವರಿಗೆ ತೋರಿಸಿದ್ದಾಳೆ. ಶಿಕ್ಷಕಿ ಅದನ್ನು ಪರಿಶೀಲಿಸಿದಾಗ ತರಕಾರಿಯ ಕೊನೆಯ ಭಾಗವೆಂದು ತಿಳಿಸಿದ್ದಾರೆ.

ಆದರೆ, ಮಕ್ಕಳು ಗಾಬರಿಗೊಂಡು ಪಾಲಕರಿಗೆ ನಡೆದ ವಿಷಯ ಮುಟ್ಟಿಸಿದ್ದಾರೆ. ಭಯಗೊಂಡ ಪಾಲಕರು ಮಕ್ಕಳನ್ನು ಮುನ್ನೆಚ್ಚರಿಕೆಯಾಗಿ ತಿ.ನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಆಡಳಿತ ವೈದ್ಯಾಧಿಕಾರಿ ಜಗನ್ನಾಥ್ ಹಾಗೂ ಮಕ್ಕಳ ತಜ್ಞೆ ಮಾನಸಾ, ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಮುನ್ನೆಚ್ಚರಿಕೆಯಾಗಿ ತೀವ್ರ ನಿಗಾ ಘಟಕದಲ್ಲಿ ಕಾಯ್ದಿರಿಸಿದ್ದು ನಂತರ ಮನೆಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸುವ ಮೊದಲು ನಾನು ಸೇವಿಸುತ್ತೇನೆ. ಇಂದು ಸಹ ನಾನೇ ಮೊದಲು ಊಟ ಮಾಡಿದ್ದೇನೆ. ಮಕ್ಕಳು ತರಕಾರಿಯ ತುಂಡೊಂದನ್ನು ಹಲ್ಲಿ ಎಂದು ಭಾವಿಸಿ ಗಾಬರಿ ಮಾಡಿಕೊಂಡಿದ್ದಾರೆ. ನನಗೆ ಅದನ್ನು ಮಕ್ಕಳು ತೋರಿಸಿದಾಗ ಪರಿಶೀಲಿಸಿ ಅದು ಹಲ್ಲಿಯಲ್ಲ ಎಂದು ಸ್ಪಷ್ಟಪಡಿಸಿದ್ದೆ. ಆದರೆ, ಪಾಲಕರು ಗಾಬರಿಯಾಗಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಪಾಲಕರು ಆತಂಕಪಡುವ ಅಗತ್ಯ ಇಲ್ಲ ಎಂದರು.

More articles

Latest article