ಮೈಕ್ರೊ ಫೈನಾನ್ಸ್‌ ಸುಗ್ರೀವಾಜ್ಞೆ ದುರ್ಬಲರು, ರೈತರು, ಮಹಿಳೆಯರಿಗೆ ವರದಾನ: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ದುರ್ಬಲರು, ರೈತರು, ಮಹಿಳೆಯರು, ಸ್ವಯಂಸೇವಾ ಸಂಘಗಳ ಸದಸ್ಯರು ಸಾಲಗಾರರಿಂದ ಪಾರಾಗಲು ಸುಗ್ರೀವಾಜ್ಞೆ ನೆರವಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ 2025′ ಕುರಿತ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯುವಂತಿಲ್ಲ. ಗ್ರಾಹಕರಿಗೆ ವಿಧಿಸುವ ಬಡ್ಡಿ ದರದ ಬಗ್ಗೆ ಪಾರದರ್ಶಕವಾಗಿ ಸಾಲಗಾರರಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು ಎಂಬ ಅಂಶವನ್ನು ಸುಗ್ರೀವಾಜ್ಞೆ ಒಳಗೊಂಡಿದೆ. ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರು ನೀಡುವ ಹೆಚ್ಚಿನ ಬಡ್ಡಿ ದರಗಳಿಂದ ಸಾಲಗಾರರಿಗೆ ಆಗುವ ಹೊರೆ ಮತ್ತು ಬಲವಂತದ ವಸೂಲಾತಿ ಕ್ರಮಗಳಿಂದ ಆಗುವ ಕಿರುಕುಳಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಆರ್‌ಬಿಐ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸುಮಾರು 1.9 ಕೋಟಿ ಜನ ಅಂದಾಜು ರೂ.60 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ನಿಖರ ಮಾಹಿತಿ ಇಲ್ಲದಿದ್ದರೂ ಸುಮಾರು ರೂ.40 ಸಾವಿರ ಕೋಟಿ ಸಾಲ ಪಡೆದಿರಬಹುದು ಎಂದು ಅಂದಾಜು ಮಾಡಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ವ್ಯವಹರಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜಿಲ್ಲಾಧಿಕಾರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸದರಿ ಸಂಸ್ಥೆಗಳು ತಾವು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ, ಸುಸ್ತಿ ಸಾಲಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಅಲ್ಲದೇ, ಮೂರು ತಿಂಗಳಿಗೊಮ್ಮೆ ಮತ್ತು ವರ್ಷದ ವ್ಯವಹಾರ ವಿವರಗಳನ್ನೂ ಸಲ್ಲಿಸಬೇಕು. ಈ ಮಾಹಿತಿ ಸಲ್ಲಿಸದಿದ್ದರೆ, ಆರು ತಿಂಗಳು ಜೈಲು ಅಥವಾ ₹10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಎಂದೂ ಮುಖ್ಯಮಂತ್ರಿಗಳು ಹೇಳಿದ್ದಾರೆ.

More articles

Latest article