ಸ್ಮರಣೆ | ಅನಾಥರ ಬಾಳಿಗೆ ಬೆಳಕಾದ ಗಾನಯೋಗಿ

Most read

ಗದುಗಿನ ಪಂಚಾಕ್ಷರಿ ಗವಾಯಿಗಳು ಕನ್ನಡ ನಾಡಿನಲ್ಲಿ ಮನೆಮಾತು. ಪ್ರಸಿದ್ಧ ಗಾನಯೋಗಿ, ಸಂಗೀತಸಾಗರ, ಅಂಧರ, ಅನಾಥರ ಬಾಳಿಗೆ ಬೆಳಕಾದ ಪುಣ್ಯ ಪುರುಷ ಇವರು. ಸರ್ಕಾರ ಅಥವಾ ವಿಶ್ವವಿದ್ಯಾನಿಲಯ ಮಾಡದಂತಹ ಕಾರ್ಯವನ್ನು ಮಾಡಿತೋರಿಸಿದ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ ಇವರದು.  ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕರು.

 ಜನನ

ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಡಶೆಟ್ಟಿ ಹಳ್ಳಿಯಲ್ಲಿ ಫೆಬ್ರವರಿ 2, 1892 ರಂದು. ತಂದೆ, ಗುರುಪಾದಯ್ಯ ತಾಯಿ, ನೀಲಮ್ಮ. ಇವರ ಹುಟ್ಟು ಹೆಸರು ಗದಿಗೆಯ್ಯ. ಇವರ ಅಣ್ಣ ಗುರುಬಸ್ಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಂಗೀತ ಶಿಕ್ಷಣ ಪಡೆದ ಇವರು ಶ್ರೀ ಹಕ್ಕಲಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದಾಗ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಇವರನ್ನು ಗುರುತಿಸಿ, ಆಶ್ರಯ ನೀಡಿದರು.

 ಸಂಗೀತ ಶಿಕ್ಷಣ

ಹಾನಗಲ್ ಶ್ರೀಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ `ನೆಲವಿಗಿ’ಯಲ್ಲೊಂದು ಶಿವಯೋಗಮಂದಿರ ಸ್ಥಾಪಿಸಿ, ಇತರ ಹುಡುಗರ ಜೊತೆಗೆ ಈ ಇಬ್ಬರು ಸಹೋದರರು ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸ್ಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದರು. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ `ಪಂಚಾಕ್ಷರಿ ಗವಾಯಿ’ ಎಂದು ಉದ್ಘೋಷಿತರಾದರು. ಪುನಃ ನಾಲ್ಕು ವರ್ಷ ಹಿಂದುಸ್ಥಾನಿ ಸಂಗೀತ ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೇ `ಸಮಾಜಸೇವೆ’ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮ ಮಾರ್ಗದಲ್ಲಿ ಮುನ್ನಡೆದರು.

ಸಂಗೀತ ಪ್ರಚಾರ

ಪಂಚಾಕ್ಷರಿ ಗವಾಯಿಗಳು ನಾಡಿನಾದ್ಯಂತ ಸಂಚರಿಸುತ್ತ ಒಂದು ಸಂಚಾರಿ ಪಾಠಶಾಲೆಯನ್ನೇ ಪ್ರಾರಂಭಿಸಿದರು. 1944 ರಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನಿಡಗುಂದಿ ಕೊಪ್ಪದಲ್ಲಿ `ಶಿವಯೋಗ ಮಂದಿರ’ ಸ್ಥಾಪಿಸಿದರು. ಶಾಖೆಯಾಗಿ ಸಂಗೀತ ಶಾಲೆ ಆರಂಭಿಸಿ, ಕನ್ನಡ ಮತ್ತು ಸಂಸ್ಕೃತ ಬೋಧಿಸುತ್ತಾ ಸಂಗೀತವನ್ನು ಕಲಿಸುತ್ತಿದ್ದರು. ಇವರ ಶಿಷ್ಯರ ಬಳಗದಲ್ಲಿ ಉತ್ತರಾಧಿಕಾರಿಯಾಗಿ ದೊರೆತವರು ಪುಟ್ಟರಾಜಗವಾಯಿಗಳು. ಸಂಗೀತ ಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿ ಆರಂಭಿಸಿ ಕೈ ಸುಟ್ಟುಕೊಂಡರು. ಈ ಸಂದರ್ಭದಲ್ಲಿ 1930ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದಿದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರನ್ನು ಬದುಕಿಸಲು ಪಟ್ಟಪಾಡು ಅಷ್ಟಿಷ್ಟಲ್ಲ. ಸಂದರ್ಭೋಚಿತ ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ತಮ್ಮ ಜಾಗದಲ್ಲಿಯೇ ಒಂದು ತಗಡಿನ ಶೆಡ್ ಹಾಕಿಸಿ, ಧನ-ಧಾನ್ಯದ ಸಹಾಯ ನೀಡಿ ಸಂಗೀತ ಶಾಲೆಗೆ ನೆರವಾದರು. ಈ ಸಂಗೀತ ಶಾಲೆಗೆ ಗವಾಯಿಗಳು `ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂದು ಹೆಸರಿಟ್ಟರು.

 ಶ್ರೀ ವೀರೇಶ್ವರ ಪುಣ್ಯಾಶ್ರಮ

ಸಂಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕೂ ಸಂಚರಿಸಿ, 1933ರಲ್ಲಿ ರಾವ್‍ಬಹದ್ದೂರಮಾನವಿ ಹಾಗೂ ಬಸರಿಗಿಡದ ವೀರಪ್ಪನವರ ಸಹಾಯ, ಸಹಕಾರದಿಂದ ಗದುಗಿನಲ್ಲಿ “ಶ್ರೀ ವೀರೇಶ್ವರ ಪುಣ್ಯಾಶ್ರಮ” ಆರಂಭಗೊಂಡಿತು.  ಅಂದಿನಿಂದ ಇಂದಿನವರೆಗೆ ಸರ್ಕಾರ ಮಾಡದಂತಹ ಕಾರ್ಯವನ್ನು ಈ ಪುಣ್ಯಾಶ್ರಮ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಇದಕ್ಕೆಲ್ಲ ಮೂಲ ಚೇತನಶಕ್ತಿ ಪಂಚಾಕ್ಷರಿ ಗವಾಯಿಗಳು. ಅವರ ನಂತರ ಪುಟ್ಟರಾಜ ಗವಾಯಿಗಳು.  ಈಗ ಪುಣ್ಯಾಶ್ರಮವು ಕಲ್ಲಯ್ಯಜ್ಜ ನವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಅನಾಥರಿಗೆ ಬೆಳಕಾದ ಪುಣ್ಯಾಶ್ರಮ

ಈ ಆಶ್ರಮವು ಸುಮಾರು ಏಳು ದಶಕಗಳ ಕಾಲ ಅಂಧ-ಅನಾಥರ, ಅಂಗವಿಕಲರ ಬಾಳಿಗೆ ಬೆಳಕಾಗಿ ಅವಿರಿತ ಸೇವೆ ಮುಂದುವರಿಸಿದೆ.  ಪ್ರಸ್ತುತ ಸುಮಾರು 600ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ, ವಿದ್ಯೆ, ತ್ರಿವಿಧ ದಾಸೋಹ ಕಾರ್ಯ ಮುಂದುವರೆಸಿದೆ. ಬೆಳಿಗ್ಗೆ ಹಾಗೂ ಸಂಜೆ 4 ತಾಸು ಮಕ್ಕಳಿಗೆ ಪಾಠ, ಭಕ್ತರಿಗೆ ಪುರಾಣ ಪಠಣ ಹಾಗೂ ಪೌರಾಣಿಕ ನಾಟಕಗಳ ಮಾರ್ಗದರ್ಶನ, ಆಶ್ರಮಕ್ಕೆ ಬಂದ ಭಕ್ತರ ಯೋಗಕ್ಷೇಮದಂತಹ ಜ್ಞಾನದಾಸೋಹ – ಅನ್ನದಾಸೋಹ ಕಾರ್ಯ ನಡೆಯುತ್ತಿದೆ.  ಪುಣ್ಯಾಶ್ರಮದ ಆಸ್ತಿ ಎಂದರೆ ಹಾನಗಲ್ ಕುಮಾರಸ್ವಾಮಿಗಳು ನೀಡಿದ ದಂಡ ಮತ್ತು ಜೋಳಿಗೆ, ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು, ಆಶ್ರಮದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಆಶ್ರಮದಲ್ಲಿ ಕಲಿತು ಹೋಗಿ ನಾಡಿನಾದ್ಯಂತ ಇರುವ ಸಂಗೀತ ದಿಗ್ಗಜರು.

ಪುಣ್ಯಾಶ್ರಮದ ಪೂಜ್ಯರು

 ಶ್ರೀ ವೀರೇಶ್ವರ ಪುಣ್ಯಾಶ್ರಮ-ಗದಗ

ಪಂಚಾಕ್ಷರಿ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳೆಸಿದರು (1914-1944).  ನಂತರ ಪುಟ್ಟರಾಜ ಗವಾಯಿಗಳು (1944-2010) ಪುಣ್ಯಾಶ್ರಮವನ್ನು ಉನ್ನತ ಸ್ಥಿತಿಗೆ ಕೊಂಡೊಯ್ದರು. 2010 ರಿಂದ ಪ್ರಸ್ತುತದಲ್ಲಿ ಕಲ್ಲಯ್ಯಜ್ಜನವರು ಪುಣ್ಯಾಶ್ರಮದ ಮಹಾಕಾರ್ಯಗಳನ್ನು ಮುಂದುವರೆಸಿದ್ದಾರೆ.

ಪಂಚಾಕ್ಷರಿ ಗವಾಯಿಗಳು ಸದಾ ಖಾದಿಯನ್ನೇ ಧರಿಸುತ್ತಿದ್ದರು. ದೇಶ ವ್ಯಾಪಿ ಸಂಚಾರದಲ್ಲಿಯೂ ಕನ್ನಡದಲ್ಲಿಯೇ ಗಾಯನ ಮಾಡಿ ಕನ್ನಡ ಪ್ರೇಮ ಮೆರೆದರು. ಅನಾರೋಗ್ಯವಾಗಿ ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದ ಹೊರತಾಗಿ, ಇಂಗ್ಲೀಷ್ ವೈದ್ಯ ಪದ್ಧತಿಗೆ ಒಪ್ಪಲಿಲ್ಲ. ಕೊನೆಗೆ ಇದೇ ರೋಗಕ್ಕೆ ಬಲಿಯಾಗಿ ಜೂನ್, 11, 1944 ರಂದು ಪಂಚಾಕ್ಷರಿ ಗವಾಯಿಗಳು ವಿಶ್ವ ಸಂಗೀತದಲ್ಲಿ ಲೀನವಾದರು, ನಿಧನ ಹೊಂದಿದರು. ಇಂತಹ ಮಹಾನ್ ಚೇತನವನ್ನು, ಸಮಾಜ ಸೇವಕನನ್ನು, ಗಾನಯೋಗಿಯನ್ನು ಕನ್ನಡನಾಡು ಕಳೆದುಕೊಂಡಿತು. ಸಾವಿರಾರು ಅಂಧರ, ಅನಾಥರ ಬಾಳಿಗೆ ಬೆಳಕು ನೀಡಿದ ಈ ಜ್ಯೋತಿಯನ್ನು ಮರೆಯುವುದು ಅಸಾಧ್ಯದ ಮಾತು.  ಅವರ ಪುಣ್ಯ ದಿನದ ಸ್ಮರಣೆ ಸದಾ ನಮ್ಮ ಹೃದಯದಲ್ಲಿ ಮನೆಮಾಡಿದೆ…..

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.

More articles

Latest article