ಸ್ಮಾರಕ ನಿರ್ಮಾಣ: ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನಪಿನಲ್ಲಿ ಬೆಂಗಳೂರಿನಲ್ಲಿ ಸಂಗೀತ ಸಂಜೆ

Most read

ಬೆಂಗಳೂರು: ತಮಿಳುನಾಡಿನ ಚೆನ್ನೈ ನಲ್ಲಿ ನಿರ್ಮಾಣಗೊಳ್ಳಲಿರುವ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಡಿಸೆಂಬರ್ 8ರಂದು ನಗರದ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಪಿ. ಚರಣ್ ಈ ವಿಷಯ ಹಂಚಿಕೊಂಡಿದ್ದಾರೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಇತರ ಗಾಯಕರು ಹಾಡಿ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಡಿ.8ರಂದು ನಡೆಯುವ ಸಂಗೀತ ಕಾರ್ಯಕ್ರಮದ
ಮೂಲಕ ನಿಧಿಯನ್ನು ಸಂಗ್ರಹಿಸಿ ಅದನ್ನು ಸ್ಮಾರಕ, ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಬಳಸಲಾಗುತ್ತದೆ. ಆಸಕ್ತರು ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಖ್ಯಾತ ವಾಸ್ತುಶಿಲ್ಪಿ ವಿನು ಡೇನಿಯಲ್ ಅವರು ಸ್ಮಾರಕದ ವಿನ್ಯಾಸ ಮಾಡಲಿದ್ದಾರೆ. ಸ್ಮಾರಕವನ್ನು 12 ಸವಿತಾ ಹಳೆಯ ಟೈರ್ ಗಳಿಂದ ನಿರ್ಮಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಲ್ಪಿಗಳು ಕೆಲಸ ಆರಂಭಿಸಿದ್ದಾರೆ. ಗೋಡೆಗಳನ್ನು ನಿರ್ಮಿಸಲು ಟೈರ್ ಗಳನ್ನು ಬಳಕೆ ಮಾಡಲಾಗುತ್ತದೆ.
ಹಳೆಯ ಟೈರ್ ಗಳನ್ನು ಮಣ್ಣಿನಿಂದ ತುಂಬಿ ಮಣ್ಣಿನಿಂದಲೇ ಪ್ಲಾಸ್ಟಿಂಗ್ ಮಾಡಲಾಗುತ್ತದೆ. ಇದರಿಂದ ಹೊರಗಡೆಗಿಂತ ಒಳಗೆ 5-6 ಡಿಗ್ರಿಗಳಷ್ಟು ಬಿಸಿ ಹವೆ ಕಡಿಮೆಯಾಗಲಿದೆ. ಯಾವುದೇ ಹವಾ ನಿಯಂತ್ರಣಗಳ ಅವಶ್ಯಕತೆ ಉಂಟಾಗದು ಎಂದು ಚರಣ್ ತಿಳಿಸಿದ್ದಾರೆ.

ಸ್ಮಾರಕದಲ್ಲಿ ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಆಂಪಿಥಿಯೇಟರ್, ಸಮಾಧಿ ಮತ್ತು ಕೆಫೆಟೇರಿಯಾ ಇರಲಿದೆ. ಸಂಗ್ರಹಾಲಯದಲ್ಲಿ ಖ್ಯಾತ ಬಾಲಿವುಡ್ ಗಾಯಕ ಮಹಮದ್ ರಫಿ ಅವರ ಫಿಯಟ್ ಕಾರನ್ನು ಪ್ರದರ್ಶಿಸಲಾಗುತ್ತದೆ. ಈ ಕಾರನ್ನು ಮಹಮದ್ ರಫಿ ಅವರ ಕುಟುಂಬ ಅಪ್ಪನಿಗೆ ನೀಡಿತ್ತು. ನಿಜ ಹೇಳಬೇಕೆಂದರೆ ಈ ಕಾರನ್ನು ಇಟ್ಟು ಕೊಳ್ಳಬೇಕೆಂಬುದು ಅಪ್ಪನ ಆಸೆಯೂ ಆಗಿತ್ತು ಎಂದು ಚರಣ್ ಹೇಳಿದರು.

More articles

Latest article