ಪುಸ್ತಕ ಪರಿಚಯ
ಸಾವಿರಾರು ವರ್ಷಗಳ ಹಿಂದಿನಿಂದಲೂ ತನ್ನ ನಂಬಿ ಬಂದ ಆರ್ಯರನ್ನು, ಮುಸ್ಲಿಂರನ್ನು, ಕ್ರೈಸ್ತರನ್ನು, ಪಾರ್ಸಿಗಳನ್ನು ತನ್ನೊಡಲ ಮೂಲ ನಿವಾಸಿಗಳ ಜೊತೆಯಲ್ಲೇ ತನ್ನದೇ ಮಕ್ಕಳಂತೆ ಕಂಡು ಕೇಳಿದ ಹಿರಿಮೆ ಭಾರತಾಂಬೆಯದು. ಹಾಗಾಗಿಯೇ ಇಲ್ಲಿ ಒಂದು ನಿರ್ದಿಷ್ಟ ಧರ್ಮ, ಜಾತಿ ಜನಾಂಗಗಳಿಲ್ಲ. ವೈವಿಧ್ಯತೆಯೇ ಭಾರತದ ಏಕತೆಯ ಶ್ರೇಷ್ಟತೆ ಎಂಬುದನ್ನು ನಮ್ಮ ಶಿಕ್ಷಕರಾದಿ ಹಿರಿಯರು ನಮಗೆ ಹೇಳಿಕೊಟ್ಟ ಭಾವೈಕ್ಯತೆಯ ಬೀಜಮಂತ್ರ. ಆದರೆ ಅಂದಿನ ಬಹುತ್ವ ಭಾರತದ ಬುಡಕ್ಕೆ ಧರ್ಮ ರಾಜಕಾರಣದ ಗೆದ್ದಲು ಸಣ್ಣದಾಗಿ ಹಬ್ಬುತ್ತಿರುವುದು ನಮ್ಮೆಲ್ಲರ ಗಮನಕ್ಕಿದೆ. ಅಂಬೇಡ್ಕರ್ ಕನಸು ಕಂಡ ಜಾತ್ಯಾತೀತ ತತ್ವಗಳು, ಸಂವಿಧಾನದಡಿಯಲ್ಲಿ ಎಲ್ಲರೂ ಸರಿಸಮಾನರು ಎಂಬ ಸಿದ್ಧಾಂತಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಾ, ಜಾತೀಯತೆ, ಧರ್ಮಗಳೇ ಮುನ್ನೆಲೆಗೆ ಬರುತ್ತಾ, ಅಸಮಾನತೆಯ ಭೂತ ನರ್ತನ ಮತ್ತೆ ಕುಣಿಯತೊಡಗಿರುವುದು ನಮ್ಮೆಲ್ಲರ ಅನುಭವಕ್ಕೆ ನಿಲುಕುವಂತದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಎಳೆಯ ಶಾಲಾ ಮಕ್ಕಳಿಗೆ, ಗೃಹಿಣಿಯರಿಗೆ, ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ, ಸಾಂವಿಧಾನಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಎಚ್ ಎನ್ ನಾಗಮೋಹನದಾಸ್ ಅವರು ಈ ಹಿಂದೆ “ಸಂವಿಧಾನ ಓದು” ಪುಸ್ತಕ ಬರೆದಿದ್ದು, ನಾನೂ ಆ ಪುಸ್ತಕವನ್ನು ಓದಿದ್ದೆ.
ಸನ್ಮಾನ್ಯರ “ಸಂವಿಧಾನ ಓದು” ಪುಸ್ತಕದ ಕುರಿತಾಗಿ “ಸಂವಿಧಾನ ಓದು ಅಭಿಯಾನ”ವನ್ನು ಉತ್ತರ ಕನ್ನಡದಲ್ಲಿ ವಿಠ್ಠಲ ಭಂಡಾರಿಯವರ “ಸಹಯಾನ” ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು ಹಾಗೂ ನಮ್ಮ ಉತ್ತರ ಕನ್ನಡದ ಹಲವು ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಆನಂತರದ ದಿನಗಳಲ್ಲಿ ಈ ಅಭಿಯಾನ ನಾಡಿನ ಉದ್ದಗಲಕ್ಕೂ ಹಬ್ಬಿದ್ದು, ಸಂವಿಧಾನದ ಕುರಿತು ಜನಸಾಮಾನ್ಯರಲ್ಲೂ ಅರಿವು ಮೂಡಿಸುವ ಕ್ರಮಗಳು ಹಲವು ಸಂಘಟನೆಗಳ ಮುಖಾಂತರ ನಡೆದವು. ನಿಜದಲ್ಲಿ ನಮ್ಮ ಸಂವಿಧಾನದ ಬಗ್ಗೆ ಹೆಚ್ಚಿನ ಸಂಗತಿಗಳು ಶಿಕ್ಷಿತ ಸಮುದಾಯಕ್ಕೇ ಗೊತ್ತಿಲ್ಲದಿರುವಾಗ ಇನ್ನು ಜನಸಾಮಾನ್ಯರಲ್ಲಿ ಸಂವಿಧಾನದ ಕುರಿತು ಎಷ್ಟು ಜ್ಞಾನವಿರಲು ಸಾಧ್ಯ? ಸಂವಿಧಾನದ ವಿಧಿ ವಿಧಾನಗಳ ಕುರಿತು, ಅನುಚ್ಛೇದ, ಪರಿಚ್ಛೇದಗಳ ಕುರಿತು ಎಷ್ಟು ತಿಳುವಳಿಕೆಗಳು ಇರಲು ಸಾಧ್ಯ? ವಿದ್ಯಾರ್ಥಿ ಜೀವನದಲ್ಲಿ ಸಾಮಾನ್ಯವಾಗಿ ನಾವೆಲ್ಲ ಕಲಿಯುವುದು ಕೇವಲ ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ, ಕಠಿಣ ಸಂವಿಧಾನ, ನಮ್ಮ ಪೂರ್ವ ಪೀಠಿಕೆ, ನಮ್ಮ ಹಕ್ಕುಗಳು ಕರ್ತವ್ಯಗಳು ಇತ್ಯಾದಿಗಳನ್ನು ಮಾತ್ರ. ಸಂವಿಧಾನದ ಮೂಲ ಆಶಯಗಳೇನು, ಪರಿಕಲ್ಪನೆಗಳೇನು ಇತ್ಯಾದಿಗಳ ಕುರಿತಾಗಿ ಯಾವ ತಿಳುವಳಿಕೆಯೂ ಇರಲಿಲ್ಲ. ಮತ್ತು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ನೆಲೆಯಲ್ಲಿ ಸಂವಿಧಾನದ ಕುರಿತು ಅಧ್ಯಯನ ವಸ್ತುವಾಗಿ ಇರುವ ಪಠ್ಯಕ್ರಮದ ಹೊರತಾಗಿ ಸಾರ್ವಜನಿಕ ನೆಲೆಯಲ್ಲಿ ನಮ್ಮ ಸಂವಿಧಾನದ ಪರಿಚಯ ಮಾಡಿಕೊಡುವ ಕಾರ್ಯಾಗಾರಗಳನ್ನಾಗಲೀ, ಇತರೇ ಕ್ರಮಗಳನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಇದು ಆಗಬೇಕಾದ ಮತ್ತು ಆಗು ಮಾಡಬೇಕಾದ ಕೆಲಸ. ಯಾಕೆಂದರೆ ಒಂದು ನಿರ್ದಿಷ್ಟ ರಾಜಕೀಯ, ಸಾಮಾಜಿಕ ನಿಲುವುಗಳು ರೂಪುಗೊಳ್ಳುವುದು ಅದು ವಿದ್ಯಾರ್ಥಿ ಜೀವನದಲ್ಲಿ. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿ ಜೀವನವು ಒಂದು ಸಮಯೋಜಿತ ಸಮಯ. ಆ ಹಿನ್ನೆಲೆಯಲ್ಲಿ “ಸಂವಿಧಾನ ಓದು ಅಭಿಯಾನ” ಒಂದು ಚಳುವಳಿಯ ಮಟ್ಟಿಗೆ ಜನಸಾಮಾನ್ಯರಲ್ಲಿ ಸಂವಿಧಾನದ ಅರಿವು ಜಾಗೃತಿಗೆ ಕಾರಣವಾಗಿತ್ತು ಎನ್ನಬಹುದು. ಇಂದಿನ ರಾಜಕೀಯ ಸಾಮಾಜಿಕ ವಿಪ್ಲವದ ಕಾಲಘಟ್ಟದಲ್ಲಿ ದೇವರು, ಧರ್ಮದ ಹೆಸರಿನಲ್ಲಿ ಯುವ ಸಮುದಾಯವನ್ನು ಮೌಢ್ಯಕ್ಕೆ ನೂಕುತ್ತಾ ವಿಚಾರ ಕ್ರಾಂತಿಯನ್ನು ತಡೆಯುತ್ತಾ ಅದೇ ಮೂಲಭೂತವಾದಿ ಸಮಾಜವನ್ನು ಬಲವಾಗಿ ಕಟ್ಟುತ್ತಿರುವ ಸತ್ಯ ವಿರೋಧಿ ಚಟುವಟಿಕೆಗಳಿಗೆ ಈ ಅಭಿಯಾನ ಒಂದು ಪರ್ಯಾಯದ ಮಾರ್ಗವನ್ನು ಸೂಚಿಸುತ್ತಾ, ಇದೇ ಸತ್ಯವಲ್ಲ ಎಂಬ ಸತ್ಯವನ್ನು ದಾಟಿಸಲು ಮಾಡಿದ ಪ್ರಯತ್ನದಂತಿತ್ತು.
ಖ್ಯಾತ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ನಿವೃತ್ತ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಎಚ್ ಎನ್ ನಾಗಮೋಹನದಾಸ್ ಈಗಾಗಲೇ ನಾಡಿನ ಪ್ರಾಮಾಣಿಕ ಹಾಗೂ ಸತ್ಚಿಂತನೆಗಳ ಚಿಂತಕರಾಗಿ, ನ್ಯಾಯ ನಿಲುವುಗಳ ಪ್ರತಿಪಾದಕರಾಗಿ, ಸಾಮಾಜಿಕ ವ್ಯಕ್ತಿಯಾಗಿ ಪ್ರಸಿದ್ಧರು. ಕಳೆದ ತಿಂಗಳು ಇವರ ಹೊಸ ಪುಸ್ತಕ “ಮೆಮೊರಬಲ್ ಟ್ರಯಲ್” ಕೃತಿಯು ದಾಂಡೇಲಿಯಲ್ಲಿ ಎರಡನೇ ಬಾರಿಗೆ ಬಿಡುಗಡೆಗೊಂಡಿತು. ಈ ಕೃತಿಯನ್ನು ಪರಿಚಯ ಮಾಡಿಕೊಡುವ ಭಾಗ್ಯ ನನ್ನ ಪಾಲಿಗೆ ಬಂತು. ನನಗದು ಸಂತೋಷದ ಹಾಗೂ ಅಷ್ಟೇ ಹೆಮ್ಮೆಯ ಸಂಗತಿ.

“ಮೆಮೊರಬಲ್ ಟ್ರಯಲ್” ಇದನ್ನು ಓದಲು ಕೂತಾಗ ನನ್ನಲ್ಲಿ ಹುಟ್ಟಿಕೊಂಡ ಹಲವು ಜಿಜ್ಞಾಸೆಗಳು, ಸ್ವವಿಮರ್ಶೆಯ ಸಂಗತಿಗಳು, ಪ್ರಜಾಸತ್ತೆಯ ನಿಲುವುಗಳು ಹೇಗಿರಬೇಕು ಎಂಬುದರ ಕುರಿತಾಗಿ ಎದ್ದ ತುಮುಲಗಳು ಬಹುಶಃ ಈ ಪುಸ್ತಕ ಓದಿದ ಹಲವರಿಗೆ ಆಗಿರಬಹುದು ಮತ್ತು ಇನ್ನು ಓದುವವರಗೆ ಕೂಡಾ ಆ ಅನುಭವ ದಕ್ಕಬಹುದು ಎಂಬುದು ನನ್ನ ಭಾವನೆ. ಒಬ್ಬ ನ್ಯಾಯಾಧೀಶರಾಗಿ, ರಾಜಕೀಯ ಚಿಂತಕರಾಗಿ ಸಾಮಾಜಿಕ ಹೋರಾಟಗಾರರಾಗಿ ಅಷ್ಟೇ ಒಳ್ಳೆಯ ಬರೆಹಗಾರರಾಗಿ ನಾಡಿಗೆ ಪರಿಚಿತರಾಗಿರುವ ಮಾನ್ಯ ನಾಗಮೋಹನದಾಸ್ ಕೃತಿಕಾರರ ನುಡಿಯಲಿ ವ್ಯಕ್ತಪಡಿಸಿರುವ ಒಂದು ಸಾಲು ಗಮನ ಸೆಳೆಯುತ್ತದೆ. ಅಂದರೆ “ಈ ಕೃತಿ ರಚನೆಯ ಹಿಂದೆ ಇಂದಿನ ರಾಜಕೀಯ ಸಾಮಾಜಿಕ ವಿಪ್ಲವದ ಸಂದರ್ಭದಲ್ಲಿ ಒಬ್ಬ ಬರೆಹಗಾರನಾಗಿ ತಮ್ಮ ಕೃತಿ ಓದುಗನಲ್ಲಿ ಒಂದು ಆರೋಗ್ಯಪೂರ್ಣ ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ಮಾಡಿಕೊಟ್ಟಲ್ಲಿ ತನ್ನ ಕೆಲಸ ಸಾರ್ಥಕವಾಗುವುದು” ಎನ್ನುತ್ತಾರೆ. ಅಂತಹ ಒಂದು ಒಳಚರ್ಚೆಯನ್ನು, ಚಿಂತನೆಯನ್ನು ಜ್ಞಾನದ ಹಿಗ್ಗನ್ನು ಸಂಚಲನವನ್ನು ಹುಟ್ಟುಹಾಕುತ್ತದೆ ಈ ಕೃತಿ.
“ಮೆಮೊರಬಲ್ ಟ್ರಯಲ್ಸ್” ಒಟ್ಟು ಮೂರು ಭಾಗಗಳಲ್ಲಿ ಬರೆಯಲ್ಪಟ್ಟಿದೆ. ಮೊದಲ ಭಾಗವು ಒಟ್ಟು 9 ಜನ ಅಂತರಾಷ್ಟ್ರೀಯ ತತ್ವಜ್ಞಾನಿಗಳು, ರಾಜಕೀಯ ನಾಯಕರು, ಚಿಂತಕರು, ಹಾಗೂ ಸಾಮಾನ್ಯರು ಹೇಗೆ ಸತ್ಯವನ್ನೂ ಪ್ರಾಮಾಣಿಕ ನಿಲುವುಗಳನ್ನು ಹೊಂದಿಯೂ ಮೂಲಭೂತವಾದಿ ಆಡಳಿತಾರೂಢ ಸರಕಾರದ ಕಾರಣ ನ್ಯಾಯದ ದೃಷ್ಟಿಯಲ್ಲಿ ಹೇಗೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ ಎಂಬುದನ್ನು ಹೇಳುತ್ತದೆ. ಸತ್ಯವನ್ನು ಕಾಯುವ ಅದೇ ಕಾನೂನುಗಳು, ಕ್ರಿಮಿನಲ್ಗಳನ್ನು ಹೇಗೆ ರಕ್ಷಿಸುತ್ತವೆ ಎಂಬುದಕ್ಕೂ ಇಲ್ಲಿಯ ಪ್ರಕರಣಗಳು ಸಾಕ್ಷಿಯಾಗುತ್ತವೆ. ಜನಸಾಮಾನ್ಯರಿಗೆ ನ್ಯಾಯದ ಬಗ್ಗೆ ಇರುವ ಭರವಸೆಗೆ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೇಗೆ ತಿರುವು ಮುರುವು ಮಾಡಿ, ಪಾಪಿಗಳನ್ನು ರಕ್ಷಿಸಲಾಗುತ್ತದೆ ಎಂಬುದಕ್ಕೆ ಉದಾಹರಣೆಗಳು, ಘಟನೆಗಳು ಸಿಗುತ್ತವೆ.
ಪುಸ್ತಕದ ಮೊದಲ ಬರಹವೇ ಸಾಕ್ರಟಿಸ್ ಬಗ್ಗೆ. ಪ್ರಪಂಚವನ್ನು ಪ್ರಶ್ನಿಸುವುದರ ಮೂಲಕವೇ ನಾವು ಪಾಠ ಕಲಿಯುತ್ತೇವೆ ಎಂಬ ಸತ್ಯವನ್ನು, ಜ್ಞಾನವೇ ಪ್ರಗತಿಯ ಮೂಲ ಎಂದು ಸಾರಿದ ಸಾಕ್ರೆಟಿಸ್ನ ಧೋರಣೆಯನ್ನು, ರಾಷ್ಟ್ರದ್ರೋಹ, ಧರ್ಮದ್ರೋಹದ ಆರೋಪದ ಮೇಲೆ, ಯುವಕರನ್ನು ದಾರಿತಪ್ಪಿಸುತ್ತಿರುವ ಆರೋಪವನ್ನು ಹೊರಿಸಿ ಹೆಮಲಾಕ್ ಎಂಬ ವಿಷವನ್ನು ಕುಡಿಸಿ ಸಾಯಿಸಲಾಗುತ್ತದೆ. ಆದರೆ 2400 ವರ್ಷಗಳ ನಂತರವೂ ಸಾಕ್ರೆಟಿಸ್ ಇನ್ನೂ ಬದುಕಿರಲು ಸಾಧ್ಯವಾದದ್ದು ಯಾವುದು ಎಂದರೆ ಅದೇ ಸತ್ಯದ ಪ್ರತಿಪಾದನೆ.
ಎರಡನೇಯ ಲೇಖನ ಶಾಂತಿದೂತ ಏಸುವಿನ ಕುರಿತಾದದ್ದು. ಯೇಸುವನ್ನೂ ಕೂಡಾ ದೇವನಿಂದನೆಯ ಆರೋಪ ಹೊರಿಸಿಯೇ ಗಲ್ಲಿಗೇರಿಸಲಾಯಿತು. ಆರೋಪದ ಬಗ್ಗೆ ಆರೋಪಿಗೆ ತಿಳಿಸದೇ, ಸಾಕ್ಷಿಗಳನ್ನು ವಿಚಾರಿಸದೇ, ಆರೋಪವನ್ನು ಸಾಬೀತು ಪಡಿಸಲಾಗದೇ ಇದ್ದರೂ, ಧರ್ಮಗುರುಗಳ ಒತ್ತಡದಿಂದ ಯೇಸುವಿಗೆ ಮರಣದಂಡನೆಯನ್ನು ನೀಡಲಾಗುತ್ತದೆ. “Father forgive them for they know not what they do”. ಅತೀವ ಯಾತನೆಯ ಸಮಯದಲ್ಲೂ ಕೂಡಾ ಯೇಸು ಹೇಳುವ ಈ ಮಾತು ಬಹಳ ಪ್ರಸಿದ್ಧವಾದದ್ದು. ರಾಷ್ಟ್ರಕವಿ ಗೋವಿಂದ ಪೈಗಳ ಗೋಲ್ಗೋಥಾ ಖಂಡಕಾವ್ಯದಲ್ಲಿ ಕನ್ನಡದಲ್ಲಿ ಹೀಗೆ ಹೇಳಿದ್ದಾರೆ. “ತಂದೆಯೇ ಇವರನ್ನು ಕ್ಷಮಿಸು, ತಾವು ಮಾಡುತ್ತಿರುವುದು ಏನೆಂದು ಇವರು ಅರಿಯರು”. ಈ ಪುಸ್ತಕ ಓದುತ್ತಿದ್ದರೆ ಇಂತಹ ಪ್ರಕರಣಗಳು ಬಿಚ್ಚಿಕೊಡುವ ಒಳಪದರುಗಳು, ಹೊಳವುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಮೊದಲ ಭಾಗದಲ್ಲಿಯೇ ಬರುವ ಇತರ ಲೇಖನಗಳು ಥಿಯೋ ಸೆಂಟ್ರಿಸಂ ಪ್ರತಿಪಾದಿಸಿದ ಗೇಲಿಲಿಯೋನನ್ನು ಆಜೀವ ಪರ್ಯಂತ ಬಂಧನಕ್ಕೆ ಗುರಿಪಡಿಸಿದ ಬಗ್ಗೆ, ಜಾರ್ಜಸ್ಟೈನಿ ಎಂಬ ಎಳೆ ಹರೆಯದ 14 ವರ್ಷದ ಕರಿಯ ಬಾಲಕ, ಬಿಳಿಯ ಹುಡುಗಿಯರಿಗೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪದ ಮೇಲೆ ಅತನನ್ನು ಬಂಧಿಸಿ, ನಿರ್ದಿಷ್ಟ ಸಾಕ್ಷಿಗಳು ಇಲ್ಲದಿದ್ದಾಗಲೂ ಕೂಡಾ ಮರಣದಂಡನೆ ನೀಡಿದ ಬಗ್ಗೆ, ಸರ್ವಾಧಿಕಾರಿ ಸರಕಾರದ ವಿರುದ್ಧ ದಂಗೆ ಎದ್ದ ಉತ್ತರ ಅಮೇರಿಕಾ ಖಂಡದ ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೋ ಅನುಭವಿಸಿದ ಯಾತನೆಗಳ ಬಗ್ಗೆ, ತನ್ನ ದೇಶವನ್ನು ತಮ್ಮವರಿಗಾಗಿ ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ದಂಗೆ ಎದ್ದು 27 ವರ್ಷಗಳ ಸುದೀರ್ಘ ಜೈಲುವಾಸ ಅನುಭವಿಸಿದ ದಕ್ಷಿಣ ಆಫ್ರಿಕಾದ ಸೂರ್ಯ ನೆಲ್ಸನ್ ಮಂಡೇಲಾ ಬಗ್ಗೆ, ಕರಿಯರ ಮೇಲಿನ ದಬ್ಬಾಳಿಕೆಯನ್ನು ವಿರೋಧಿಸಿ, ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸುತ್ತಿದ್ದ ಮಾರ್ಟಿನ್ ಲೂಥರ್ ಕಿಂಗ್ನನ್ನು ಗುಂಡಿಟ್ಟು ಕೊಂದ ಬಿಳಿಯರ ಪಿತೂರಿಯ ಬಗ್ಗೆ ಓದುತ್ತಾ, ನಿರಂಕುಶ ಪ್ರಭುತ್ವ ಜನಪರ ಹೋರಾಟದ ಬಾಯಿಯನ್ನು ಮುಚ್ಚಿಸಲು ಏನೆಲ್ಲ ಕಸರತ್ತುಗಳ ಮಾಡಬಹುದು ಎಂಬುದಕ್ಕೆ ಉದಾಹರಣೆಗಳಾಗಿ ನಿಲ್ಲುತ್ತವೆ ಈ ಪ್ರಕರಣಗಳು.
ಕಾಸ್ಟಿಸಂ, ರೇಸಿಸಂಗಳು ಜಾಗತಿಕ ಸಮಸ್ಯೆಗಳಾಗಿವೆ. ಈ ತರತಮ ಭಾವದ ಹೆಚ್ಚುಗಾರಿಕೆ ಭಾರತದಲ್ಲಿ ಮಾತ್ರವಿಲ್ಲ. ಅದು ಇಡೀ ಜಗತ್ತನ್ನೆ ವ್ಯಾಪಿಸಿದೆ. ““If you are white, you’re all right: If you are brown, stick around: If you are black, get back” ” ಚಿಮಮಾಂದ ಅಧಿಚೀ ಎಂಭ ನೈಜಿರಿಯನ್ ಸಾಹಿತಿ ಉಲ್ಲೇಖಿಸಿದ ಈ ಮಾತು ಇಂಗ್ಲೆಂಡ್ ಅಮೇರಿಕಾದಂತಹ ಬಿಳಿಯರ ಪ್ರಾಬಲ್ಯದ ನಾಡಿನ ಕರಾಳ ಮುಖವನ್ನು ನಮಗೆ ದರ್ಶಿಸುತ್ತದೆ.
ಎರಡನೇಯ ಭಾಗದಲ್ಲಿ ಎಂಟು ಪ್ರಕರಣಗಳ ಬಗ್ಗೆ ಇದೆ. ವಿಶೇಷವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಘಟನೆಗಳನ್ನು ಆಧರಿಸಿ ಬ್ರಿಟಿಷ್ ಸರಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಭಾರತದ ಕೆಚ್ಚೆದೆಯ ಗಂಡುಗಲಿ ವೀರರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ, ಆಜೀವ ಪರ್ಯಂತ ಕಾರಾಗೃಹವಾಸ ಅನುಭವಿಸಿದ, ಬದುಕಿನ ಉಚ್ಛ್ರಾಯದ ಕಾಲವನ್ನೇ ಸೆರೆಮನೆಯಲ್ಲಿ ಕಳೆದ ಆದರೆ ಬಹುತೇಕ ಮುನ್ನೆಲೆಗೆ ಬರದ, ಜನಸಾಮಾನ್ಯರ ಗಮನಕ್ಕೆ ಬರದ ಹಲವು ವೀರರ ಬಗ್ಗೆ ಇಲ್ಲಿ ದಾಖಲು ಸಿಗುತ್ತದೆ. ಅಷ್ಟೇ ಅಲ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಧರ್ಮದ ಜನರು ಹೇಗೆ ರಾಷ್ಟ್ರೀಯತೆಯ ನೆಲೆಯಲ್ಲಿ ಒಗ್ಗೂಡಿ ಹೋರಾಡಿದ್ದರು ಎಂಬುದಕ್ಕೆ ಕಾಕೋರಿ ಪಿತೂರಿ ಲೇಖನದಲ್ಲಿ ಕೃತಿಕಾರರು ಉಲ್ಲೇಖಿಸಿದ ರಾಮಪ್ರಸಾದ ಬಿಸ್ಮಿಲ್ಲಾ ಎಂಬ ಯುವ ತರುಣನ ಸಂದೇಶವಿದೆ. ಮರಣದಂಡನೆಗೆ ಗುರಿಯಾದ ಬಿಸ್ಮಿಲ್ ಜೈಲಿನಿಂದಲೆ ನೀಡಿದ ಕೊನೆಯ ಸಂದೇಶ ಹೀಗಿತ್ತು “ನನ್ನ ದೇಶದ ಜನರಲ್ಲಿ ನನ್ನ ವಿನಂತಿ ಏನೆಂದರೆ ನಮಗೆ ನಿಜಕ್ಕೂ ನೀವು ಶ್ರದ್ಧಾಂಜಲಿ ಸಲ್ಲಿಸಲು ಬಯಸುವುದೇ ಆದರೆ ಹೇಗಾದರೂ ಮಾಡಿ ಹಿಂದೂ ಮುಸ್ಲಿಂ ಏಕತೆಯನ್ನು ಸ್ಫಾಪಿಸಿ. ಇದು ನಮ್ಮ ಕೊನೆಯ ಇಚ್ಚೆ ಎಂದಿದ್ದರಂತೆ.

ಚೌರಿ ಚೌರಾ ಪ್ರಕರಣ, ಕಾಕೋರಿ ಪಿತೂರಿ, ಮೀರತ್ ಪಿತೂರಿ, ಕೆಯ್ಯೂರು, ಈಸೂರಿನ ಗಲಭೆಗಳು, ರಾಮದುರ್ಗದ ಬಂಡಾಯ, ಇಂಡಿಯನ್ ನ್ಯಾಷನಲ್ ಆರ್ಮಿ ಮುಂತಾದ ಘಟನೆಗಳ ಉಲ್ಲೇಖದ ಜೊತೆಗೆ ಅನ್ಯಾಯದ ವಿರುದ್ಧ ಹೋರಾಡಿದ ವೀರರನ್ನು ಸರ್ವಾಧಿಕಾರಿ ಸರಕಾರ ಹೇಗೆ ಗಲ್ಲಿಗೇರಿಸಿತು, ನ್ಯಾಯದ ಹೋರಾಟವನ್ನು ಹೇಗೆ ಪಿತೂರಿ ಮಾಡಿ ನಾಶಪಡಿಸಬಹುದು ಎಂಬುದನ್ನು ಉಲ್ಲೇಖಿಸುತ್ತವೆ.
ಇವತ್ತಿಗೆ ಈ ಪುಸ್ತಕ ಯಾಕೆ ಪ್ರಸ್ತುತ ಆಗುತ್ತೆ ಅಂದ್ರೆ ಇಂದಿನ ನಿರಂಕುಶ, ಸರ್ವಾಧಿಕಾರಿ, ಧರ್ಮದ ಅಮಲಿನ ಕಪಿಮುಷ್ಟಿಯಲ್ಲಿ ಜಗತ್ತು, ದೇಶ ಮತ್ತು ದೇಶದ ಜನತೆ ಬಂಧಿಯಾಗಿದೆ. ಸತ್ಯವನ್ನು, ನಿಜವಾದ ದೈವತ್ವದ ಪರಿಕಲ್ಪನೆಗಳನ್ನು, ಸಮಾನತೆಯ ಸಾಮರಸ್ಯತೆಯ ಸಹಜೀವನದ ತತ್ವವನ್ನು, ಪ್ರಜಾಸತ್ತಾತ್ಮಕ ನೆಲೆಯಲ್ಲಿ ದೇಶವನ್ನು ಕಟ್ಟಲು ಹೊರಟ ಪ್ರಯತ್ನಗಳನ್ನು ದೇವರ ಕುರಿತಾದ ಅತೀಕಲ್ಪಿತ ಸಿದ್ಧಾಂತಗಳು, ರಾಜಕೀಯ ನಾಟಕಗಳು, ಗುಲಾಮಿ ಪದ್ಧತಿಯನ್ನು ಪೋಷಿಸುವ, ದೇವರು ಧರ್ಮ ಇತ್ಯಾದಿಗಳ ಮೂಲಕ ಪ್ರತ್ಯೇಕತೆಯನ್ನು ಜೀವಂತವಾಗಿಡುವ ಫಂಡಮೆಂಟಲಿಸ್ಟಿಕ್ ಐಡಿಯಾಲಜಿಗಳು, ಕ್ಲಾಸಿಸಂ ರೇಸಿಸಂಗಳು, ಹೇಗೆ ಶಾಶ್ವತವಾಗಿ ಬಾಯಿ ಮುಚ್ಚಿಸಿದವು ಎಂಬುದನ್ನು ಲೇಖಕರು ಇಲ್ಲಿ ವಿಶ್ಲೇಷಿಸುತ್ತಾರೆ.
ಮೂರನೇ ಭಾಗದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾಲದ ನಮ್ಮ ಬಹುಮುಖ್ಯ ರಾಜಕೀಯ ನೇತಾರರ ಬಗ್ಗೆ ಇದೆ. ಅಲ್ಲಿ ಒಟ್ಟು 5 ಲೇಖನಗಳಿವೆ. ಅರಬಿಂದೋ ಘೋಷ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಭಗತ್ ಸಿಂಗ್, ಉದಾಮ ಸಿಂಗ್ ಮುಂತಾದವರ ಬದುಕಿನ ಪ್ರತಿ ಹೆಜ್ಜೆಯು ಎಂತಹ ಹೋರಾಟದ ಹೆಜ್ಜೆಯಾಗಿತ್ತು. ದೇಶಕ್ಕೋಸ್ಕರ ಅವರ ತ್ಯಾಗ ಹೇಗಿತ್ತು ಎಂಬುದನ್ನು ಚಿತ್ರಿಸಿವೆ. ಇಂದಿನ ಧರ್ಮಾಂಧಿತ ಮನಸ್ಸುಗಳು ಈ ಮಹತ್ತರ ವ್ಯಕ್ತಿತ್ವಗಳ ತೇಜೋವಧೆಯನ್ನು ಎಷ್ಟೊಂದು ಅಸಭ್ಯವಾಗಿ, ಅನೀತಿಯಿಂದ ಮಾಡುತ್ತಿರುವ ಬಗ್ಗೆ ಖೇದವೆನಿಸುತ್ತದೆ. ಇಂದಿನ ರಾಜಕೀಯ ನಾಯಕರ ಧರ್ಮ ಪ್ರಚೋದಿತ ಕುತಂತ್ರದ ರಾಜಕೀಯವೆಲ್ಲಿ? ಅಂದಿನ ಮಹನೀಯರ ತ್ಯಾಗ ಬಲಿದಾನಗಳಿಂದ ಕೂಡಿದ ರಾಜಕಾರಣದ ಹೆಜ್ಜೆಗಳೆಲ್ಲಿ? ಎಂಬ ಪ್ರಶ್ನೆ ಮೂಡಿಸುತ್ತವೆ.
ಇಲ್ಲಿಯ ಲೇಖನಗಳು ವ್ಯಕ್ತಿಯ ಜೀವನ ಚರಿತ್ರೆಗಳ ಘಟನೆಗಳಲ್ಲ. ಅವರ ಜೀವನದ ಅನುಭವ ಪ್ರಕರಣದ ದಾಖಲು ಇದಲ್ಲ. ಆದರೆ ಲೇಖಕರ ಮಾತಲ್ಲಿಯೇ ಹೇಳುವುದಾರೆ “ಕಾನೂನುಗಳ ಉಲ್ಲಂಘನೆ ಮಾಡಿದವರಿಗೆ ನ್ಯಾಯಾಂಗದ ಪ್ರಕ್ರಿಯೆಗಳ ಮೂಲಕ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅದೇ ಕಾನೂನು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಬಳಸಿ ಹೋರಾಟಗಾರರ, ಮುಗ್ಧ ಜನರಿಗೆ ದೇಶ ರಕ್ಷಣೆಗೆ ಸಿಡಿದೆದ್ದ ಕ್ರಾಂತಿಕಾರಿಗಳಿಗೆ ಜೈಲು ಶಿಕ್ಷೆ, ಮರಣದಂಡನೆ ಶಿಕ್ಷೆಗಳನ್ನು ವಿಧಿಸಿದೆ. ಸಾವಿರಾರು ವರ್ಷಗಳಿಂದ ಇಂತಹ ಪಿತೂರಿಗಳು ನಡೆಯುತ್ತಲೇ ಬಂದಿವೆ. ಇಂದಿಗೂ ನಡೆಯುತ್ತಿವೆ. ಸಾವಿರಾರು ವರ್ಷಗಳಿಂದಲೂ ಹೀಗೆ ಸತ್ಯದ ಬಾಯಿ ಕಟ್ಟುವ ಇಲ್ಲವೇ ಶಾಶ್ವತವಾಗಿ ಮುಚ್ಚುವ ಪ್ರಯತ್ನಗಳನ್ನು ಜನವಿರೋಧಿ ಫ್ಯಾಸಿಸ್ಟ್ ಧೋರಣೆಯ ಸರ್ವಾಧಿಕಾರಿ ನಿಲುವಿನ ನಡೆಯನ್ನು, ಅದರ ಅಪಾಯವನ್ನು ಓದುಗರಿಗೆ ದಾಟಿಸಬಯಸುತ್ತಾರೆ ಲೇಖಕರು.
ಈ ಎಲ್ಲ ಬರೆಹಗಳ ಅಂತರ್ಗತ ಆಶಯ ಮತ್ತು ಪ್ರತಿಪಾದನೆ ಬಹು ಸೂಚ್ಯವಾಗಿದೆ. ಸಾಮಾನ್ಯರನ್ನು, ನಿರಪರಾಧಿಗಳನ್ನು ರಕ್ಷಿಸಲು ರಚಿಸಿದ ಸಾಂವಿಧಾನಿಕ ಕಾನೂನುಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ತಮ್ಮ ತಾಳಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಈ ಕಾನೂನುಗಳು ವರವಾಗುವ ಬದಲು ಶಾಪವಾಗುತ್ತವೆ, ಬಹು ಪ್ರಾಚೀನ ಕಾಲದಿಂದಲೂ ಸತ್ಯವನ್ನು ಪ್ರತಿಪಾದಿಸಹೊರಟ ಹಲವು ಪಾತ್ರಗಳ ಬಾಯಿಯನ್ನು ಹೇಗೆ ವ್ಯವಸ್ಥಿತವಾಗಿ ಮೂಲಭೂತವಾದಿ ಧೋರಣೆಗಳು ಮುಚ್ಚಿಸಿದ್ದವು ಎಂಬುದಕ್ಕೆ ಸಾಕ್ಷಿಯಾಗುತ್ತವೆ. ಅಷ್ಟೇ ಅಲ್ಲ ಸತ್ಯದ ಬಾಯಿಯನ್ನು ಮುಚ್ಚಿಸುವುದು ಅಷ್ಟು ಸುಲಭವಲ್ಲ ಎಂಬ ಸತ್ಯವು ಈ ಕೃತಿಯನ್ನು ಓದಿ ಮುಗಿಸಿದಾಗ ನಮ್ಮ ಅರಿವಿಗೆ ಬರುತ್ತದೆ.
ನಾಗರೇಖಾ ಗಾಂವಕರ
ಕನ್ನಡ ಸಾಹಿತ್ಯಲೋಕದ ಬಹುಮುಖಿ ಚಿಂತಕಿ, ಸೃಜನಶೀಲ ಬರಹಗಾರ್ತಿಯಾಗಿರುವ ಇವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ
ಇದನ್ನೂ ಓದಿ- ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ 34 | ರಂಗಭೂಮಿಗೆ ಪ್ರವೇಶ


