ಕ್ವೀನ್ ಆಫ್ ಎಲಿಫೆಂಟ್ಸ್ | ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮಹಿಳಾ ಆನೆ ಮಾವುತ ಬಗ್ಗೆ ನಿಮಗೆಷ್ಟು ಗೊತ್ತು?

Most read

ಭಾರತದ ಮೊದಲ ಮಹಿಳಾ ಆನೆ ಮಾವುತ (ಕ್ವೀನ್ ಆಫ್ ಎಲಿಫೆಂಟ್ಸ್) ಎಂದೇ ಖ್ಯಾತವಾಗಿರುವ ಪರ್ಬತಿ ಬರುವಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

67 ವರ್ಷದ ಪರ್ಬತಿ ವರುವಾ ಅವರು ಅಸ್ಸಾಂನ ರಾಜ ಮನೆತನದಲ್ಲಿ ಜನಿಸಿದವರು. ಹಿಂದಿನ ಕಾಲದಲ್ಲಿ ಆನೆಗಳನ್ನು ಸಾಕುವುದು ಶ್ರೀಮಂತಿಕೆಯ ಸಂಕೇತವಾಗಿತ್ತು. ಆದರೆ ಬರುವಾ ಅವರು ಅದನ್ನು ಮೀರಿದ ಸಂಬಂಧವನ್ನು ಆನೆಗಳೊಂದಿಗೆ ಹೊಂದಿದ್ದರು. ಪರ್ಬತಿ ಬರುವಾ ಅವರು ಮನೆಯವರ ಜೊತೆ ತೊಡಗಿಕೊಂಡಿದಕ್ಕಿಂತ ಆನೆಗಳೊಂದಿಗೆ ಇದ್ದದ್ದೆ ಹೆಚ್ಚು. ದಿನಕಳೆದಂತೆ ಆನೆಯನ್ನು ಸಾಕಲು ಮತ್ತದನ್ನು ತರಬೇತಿ ನೀಡಲು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು.

ಪರ್ಬತಿ ಬರುವಾ ಅವರ ತಂದೆ ಪ್ರಕೃತಿಶ್ ಚಂದ್ರ ಬರುವಾ ಅವರು ಆಕೆಗೆ 14ನೇ ವಯಸ್ಸಿನಲ್ಲಿ ಇದ್ದಾಗ ಆನೆ ಸಾಕುವುದು ಮತ್ತದನ್ನು ತರಬೇತಿ‌ ನೀಡುವ ಕ್ಷೇತ್ರವನ್ನು ಪರಿಚಯಸಿದ್ದರು. ಅಂದು ಅವರ ಬಳಿ ಸುಮಾರು 40ಕ್ಕೂ ಹೆಚ್ಚು ಆನೆಗಳಿದ್ದವು. ಪ್ರಕೃತಿಶ್ ಚಂದ್ರ ಬರುವಾ ಅವರು ಆನೆಗಳ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಅಪ್ಪನ ಈ ಒಂದು ಚಟುವಟಿಕೆ ಹಾಗೂ ಆನೆಯೊಂದಿಗಿನ ಸಂಬಂಧವನ್ನು ಮಗಳು ಪರ್ಬತಿ ಬರುವಾ ಕೂಡ ಮೈಗೂಡಿಸಿಕೊಂಡು ತನ್ನ 14ನೇ ವಯಸ್ಸಿನಲ್ಲಿ ಅಸ್ಸಾಂನ ಕೂಚುಗಾಂವ್ ಅರಣ್ಯದಲ್ಲಿ ಮೊದಲ ಬಾರಿಗೆ ಒಂದು ಆನೆಯನ್ನು ಸಾಕಿ ಅದಕ್ಕೆ ತರಬೇತಿ ಕೂಡ ನೀಡಿದ್ದರು.

ನಂತರ 1975-78 ರ ಸಮಯದಲ್ಲಿ ಎರಡು ಪ್ರತ್ಯೇಕ ಅರಣ್ಯಗಳಾದ ಅಸ್ಸಾಂ ಕೂಚುಗಾಂವ್ ಹಾಗೂ ಉತ್ತರ ಬಂಗಾಳದ ಡಾರ್ಜಿಲಿಂಗ್‌ ಅರಣ್ಯದಲ್ಲಿ 14 ಆನೆಗಳನ್ನು ಪಳಗಿಸಿದ್ದರು. ಅಂತಹ ಆನೆಗಳಿಗೆ ತಾವೇ ಲಾಲನೆ, ಪಾಲನೆ ನೀಡಿ ಅರಣ್ಯ ಅಧಿಕಾರಿಗಳ ಜೊತೆ ನಿಲ್ಲುತ್ತಿದ್ದರು.

ಆನೆಗಳ ರಾಣಿ ಪರ್ಬತಿ ಬರುವಾ 

 ಬರುವಾ ಅವರ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ಕಾಡು ಆನೆಗಳ ಸಂರಕ್ಷಣೆ, ಸಾಕುವಿಕೆ, ಯೋಗಕ್ಷೇಮ, ತರಬೇತಿ ನೀಡಿದ್ದು, ಆಕೆಯ ಅಪಾರ ಕೊಡುಗೆಯನ್ನು ಮೆಚ್ಚಿ 1989 ರಲ್ಲಿ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಪ್ರಶಸ್ತಿ, “ಗ್ಲೋಬಲ್ 500 – ರೋಲ್ ಆಫ್ ಆನರ್” ಪ್ರಶಸ್ತಿಯನ್ನು ನೀಡಲಾಗಿದೆ.

ಮಾರ್ಚ್ 2000ರಲ್ಲಿ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಗೆ ಆನೆ ಗಣತಿಗಾಗಿ ಕೆಲಸಕ್ಕೆ ಕೈ ಹಾಕಿದಾಗ ಪರ್ಬತಿ ಬಹುವಾ ಅವರ ನೆರವು ಪಡೆದಿತ್ತು‌.  ಮಾವುತರು ಮತ್ತು ಕ್ಷೇತ್ರ ಸಿಬ್ಬಂದಿಗೆ ಬರುವಾ ಅವರು ಅತ್ಯುತ್ತಮ ತರಬೇತಿ ನೀಡಿ ಗಣತಿಗೂ ಅಪಾರ ಕೆಲಸ ಮಾಡಿದ್ದರಯ. ಅಸ್ಸಾಂ ಸರ್ಕಾರವು 11 ಜನವರಿ 2003 ರಂದು ಆನೆಗಳಿಗಾಗಿ ತನ್ನ ಜೀವನದ ಅತ್ಯಮೂಲ್ಯ ವಯಸ್ಸನ್ನು ಮುಡಿಪಾಗಿಟ್ಟ ಬರುವಾ ಅವರಿಗೆ ” ಗೌರವದಿಂದ ಚೀಫ್ ಎಲಿಫೆಂಟ್ ವಾರ್ಡನ್ ಆಫ್ ಅಸ್ಸಾಂ” ಎಂದು ಗೌರವಿಸಿತು.

ಪರ್ಬತಿ ಬರುವಾ ಅವರು ಇಂಗ್ಲಿಷ್, ಬೆಂಗಾಲಿ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಆನೆಗಳ ಕುರಿತು ಅನೇಕ ಜನಪ್ರಿಯ ಲೇಖನಗಳನ್ನು ಬರೆದಿದ್ದಾರೆ ಮತ್ತದು ಜನಪ್ರಿಯಗೊಂಡಿದೆ. ಅವರು ಭಾರತದ ವಿವಿಧ ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬರುವಾ ಅವರು ಗೋಲ್ಪರಣ್ ಜಾನಪದ ನೃತ್ಯದ ಪರಿಣಿತರು ಕೂಡ.

ಮ್ಯಾಂಕಿಲ್ಲರ್ ಆನೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಏಕೈಕ ಮಹಿಳಾ ಆನೆ ಮಾವುತ ಬರುವಾ. ಅವರು ICUN ನ ಏಷ್ಯನ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್ ಮತ್ತು ಅಸ್ಸಾಂ ಸರ್ಕಾರದ “ಮನುಷ್ಯ-ಆನೆ ಸಂಘರ್ಷ” ಕಾರ್ಯಪಡೆಯ ಸದಸ್ಯರಾಗಿದ್ದಾರೆ.

ಮಾರ್ಕ್ ಶಾಂಡ್ ಅವರ ಕಂಪ್ಯಾನಿಯನ್ ಪುಸ್ತಕದೊಂದಿಗೆ BBC ಕ್ವೀನ್ ಆಫ್ ಎಲಿಫೆಂಟ್ಸ್ ಎಂಬ ಶೀರ್ಷಿಕೆಯಡಿ ಬರುವಾ ಅವರ ಜೀವನವನ್ನು ಆಧರಿಸಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ನಂತರ ಪರ್ಬತಿ ಬರುವಾ ವಿಶ್ವಾದ್ಯಾಂತ ಜನಪ್ರಿಯಗೊಂಡರು. ಆಕೆಯ ಗಣನೀಯ ಕೊಡುಗೆ ಗಮನದಲ್ಲಿಟ್ಟುಕೊಂಡು, ಆಕೆಗೆ 67ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

More articles

Latest article