ಪ್ರಜಾತಂತ್ರದ ನಾಶಕ್ಕೆ ಮಾಧ‍್ಯಮಗಳ ಪೌರೋಹಿತ್ಯ

Most read

ಸ್ವತಂತ್ರ ಭಾರತದ ಇತಿಹಾಸದಲ್ಲಿ, ಅಧಿಕಾರದಲ್ಲಿರುವಾಗಲೇ ವಿಪಕ್ಷದ ಒಬ್ಬ ಮುಖ್ಯಮಂತ್ರಿಯನ್ನು ಜೈಲಿಗೆ ಸೇರಿಸಿದ ಮೊದಲ ಉದಾಹರಣೆಯನ್ನು ನಾವು ಮೊನ್ನೆಯಷ್ಟೇ ನೋಡಿದೆವು. ವಿವಾದಾಸ್ಪದ ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೈಲು ಸೇರಿದ ಬಳಿಕವೂ ಮುಖ್ಯಮಂತ್ರಿಯಾಗಿಯೇ ಮುಂದುವರಿದಿದ್ದಾರೆ. ಇದುವರೆಗೆ ಅವರಿಗೆ ಜಾಮೀನು ಸಿಕ್ಕಿಲ್ಲ. ಹಿಂದಿನ ಅನುಭವದಲ್ಲಿ ಹೇಳುವುದಾದರೆ, ಸದ್ಯದಲ್ಲಿ ಅವರಿಗೆ ಜಾಮೀನು ಸಿಗುವ ಸಾಧ‍್ಯತೆಯೂ ಇಲ್ಲ.

ಕೆಲವು ವಾರಗಳ ಹಿಂದೆಯಷ್ಟೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ರನ್ನು ಇದೇ Prevention of Money Laundering Act  (PMLA) ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು. ಅವರು ಈಗಲೂ ಜೈಲಿನಲ್ಲಿ ಇದ್ದಾರೆ. ಅವರಿಗೂ ಜಾಮೀನು ಸಿಕ್ಕಿಲ್ಲ.

ಬಿಜೆಪಿ ಸೇರಿದರೆ ಸುರಕ್ಷಿತ

ಇವರೆಲ್ಲ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳು ಎನ್ನುವುದು ಗಮನಾರ್ಹ. ಅದೆಷ್ಟೇ ದೊಡ್ಡ ಭ್ರಷ್ಟಾಚಾರಿಯಿರಲೀ, ಬಿಜೆಪಿ ಸೇರಿದಾಕ್ಷಣ ಅವರ ಮೇಲಿನ ಕೇಸುಗಳು ಕೊನೆಗೊಳ್ಳುವುದನ್ನು ನಾವು ನೋಡಿಯೇ ಇದ್ದೇವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಈಗ ಬಿಜೆಪಿ ಸೇರಿ ಸುರಕ್ಷಿತವಾಗಿದ್ದಾರೆ. ಪಿಎಂಎಲ್ಎ ಕಾನೂನಿನ ಅಡಿಯಲ್ಲಿ ಇದುವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ 95% ಪ್ರಕರಣಗಳು ವಿಪಕ್ಷಗಳ ಮೇಲೆಯೇ ದಾಖಲಾಗಿವೆ ಎಂದು ವರದಿಗಳು ಹೇಳಿವೆ. ಇದನ್ನು ನೋಡುವಾಗ ಬಿಜೆಪಿಯಲ್ಲಿರುವವರೆಲ್ಲರೂ ಸತ್ಯಹರಿಶ್ಚಂದ್ರರೇನೋ ಎಂಬ ಅನುಮಾನ ಮೂಡಬೇಕು.

ಹಿಂದೆ ನಾವು ಸಿಬಿಐ, ಐಟಿ ಮೊದಲಾದ ಕೇಂದ್ರೀಯ ತನಿಖಾ ಸಂಸ್ಥೆಗಳ ಬಗ್ಗೆ ಬಹುವಾಗಿ ಕೇಳುತ್ತಿದ್ದೆವು. ಆದರೆ ಈಗ ದಿನ ಬೆಳಗಾದರೆ ನಮಗೆ ಕೇಳಿಸುವುದು ಒಕ್ಕೂಟ ಸರಕಾರದ ಬಹುಮುಖ್ಯ ಅಸ್ತ್ರವಾದ ಈಡಿ (ED- Enforcement Directorate) ಬಗ್ಗೆ ಮಾತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕರ ನಡುವೆ ನಡೆಯುವ ಅಕ್ರಮ ಹಣ ವರ್ಗಾವಣೆ ತಡೆಯಲು ಹಿಂದಿನ ಯುಪಿಎ ಸರಕಾರ ತಂದ ಪಿಎಂಎಲ್ ಎ ಕಾನೂನು ಈಗ ಕೇಂದ್ರ ಸರಕಾರದ ಬಹುದೊಡ್ಡ ಮಾರಕಾಸ್ತ್ರ. ಪ್ರಜಾತಾಂತ್ರಿಕ ಸಂಪ್ರದಾಯಗಳಿಗೆಲ್ಲ ಎಂದೋ ತಿಲಾಂಜಲಿ ನೀಡಿರುವ ಮೋದಿ ನೇತೃತ್ವದ ಒಕ್ಕೂಟ ಸರಕಾರ ತಮ್ಮ ಎದುರಾಳಿಗಳನ್ನೆಲ್ಲ ಈಡಿಯನ್ನು ಬಳಸಿಕೊಂಡು ಜೈಲು ಸೇರಿಸುತ್ತಿದೆ. ನ್ಯಾಯಾಂಗವನ್ನು ಸೇರಿಕೊಂಡ ಬಲಪಂಥೀಯ ಒಲವಿನ ನ್ಯಾಯಾಧೀಶರುಗಳೂ ಈ ಅನ್ಯಾಯಕ್ಕೆ ತಮ್ಮ ಸಮ್ಮತಿಯ ಮೊಹರು ಒತ್ತಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದ್ದಾರೆ.

ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯವನ್ನೇ ಪುಡಿಗೈಯುವತ್ತ ಇರಿಸಿದ ಸ್ಪಷ್ಟ ಮತ್ತು ಭಯಾನಕ ಹೆಜ್ಜೆ ಎಂಬುದರಲ್ಲಿ ಅನುಮಾನವಿಲ್ಲ. ಈಗ ಭಾರತವು ಪ್ರಜಾತಂತ್ರ ದೇಶ ಎಂಬ ಮುಖವಾಡ ಕೂಡ ಉಳಿಸಿಕೊಂಡಿಲ್ಲ. ನಾವೀಗ ಸರ್ವಾಧಿಕಾರಿ ವ್ಯವಸ್ಥೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ‘ದೇಶದ ಪಾಲಿಗೆ ಇದು ಕೊನೆಯ ಚುನಾವಣೆಯಾದರೂ ಅಚ್ಚರಿಯಿಲ್ಲ’ ಎಂದು ರಾಜಕೀಯ ಇತಿಹಾಸ ಪರಿಣತರು ಎಚ್ಚರಿಸಿದ್ದಾರೆ. ಒಂದು ವೇಳೆ ಈಗಿನ ಫ್ಯಾಸಿಸ್ಟ್ ಪಕ್ಷ ಚುನಾವಣೆ ಸೋತರೂ ಅಧಿಕಾರ ಹಸ್ತಾಂತರ ಸಲೀಸಾಗಿರುವುದಿಲ್ಲ ಎಂದು ಈಗಾಗಲೇ ಅವರು ಎಚ್ಚರಿಸಿದ್ದಾರೆ (ಅಮೆರಿಕದ ಟ್ರಂಪ್ ಬೆಂಬಲಿಗರು ಏನು ಮಾಡಿದರು ಎನ್ನುವುದು ನಮಗೆ ಗೊತ್ತೇ ಇದೆ). ನಾವು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ!!

ಮಾಧ್ಯಮಗಳು ಪ್ರಶ್ನಿಸಿವೆಯೇ?

ಆದರೆ, ಜಗತ್ತಿನ ಅತಿದೊಡ್ಡ ಪ್ರಜಾತಂತ್ರದಲ್ಲಿ, ಅಧಿಕಾರದಲ್ಲಿರುವ ಮುಖ್ಯಮಂತ್ರಿಯ ಬಂಧನ, ಪ್ರಮುಖ ವಿಪಕ್ಷದ ಬ್ಯಾಂಕ್ ಖಾತೆಯ ಸ್ತಂಭನ, ‘ಚುನಾವಣಾ ಬಾಂಡ್’ ಎಂಬ ಅಕ್ರಮ ಹಣ ವರ್ಗಾವಣೆಯ ಅತಿದೊಡ್ಡ ಆರ್ಥಿಕ ಭ್ರಷ್ಟಾಚಾರ (ಇದರ ಅತಿದೊಡ್ಡ ಫಲಾನುಭವಿ ಆಳುವ ಸರಕಾರದ ಪಕ್ಷ) ಇವೆಲ್ಲ ತಪ್ಪು ಎಂದು ನಮ್ಮ ಎಷ್ಟು ಮಾಧ್ಯಮಗಳು ಹೇಳಿವೆ?! (ಒಂದು ವೇಳೆ ಈಗ ಕಾಂಗ್ರೆಸ್ ಸರಕಾರ ಇರುತ್ತಿದ್ದರೆ ಅವುಗಳ ನಿಲುವು ಏನಿರುತ್ತಿತ್ತು?!). ಇಲ್ಲ, ಕೇಜ್ರಿವಾಲ್ ಭ್ರಷ್ಟ ಎಂದು ಸ್ವತಃ ಘೋಷಿಸಿ ಅವು ನಿರಂತರ ಸ್ಟೋರಿಗಳನ್ನು ಪ್ರಸಾರ ಮಾಡುತ್ತಿವೆ. ಬೀದಿಯಲ್ಲಿ ನಿಂತು “ಮತ್ತೊಮ್ಮೆ ಮೋದಿ” ಎಂದು ಅವೇ ಘೋಷಣೆ ಕೂಗುತ್ತಿವೆ. ಈಗಿನ ರಾಜಕೀಯ ಬೆಳವಣಿಗೆಗಳು ಮುಂದೆ ತಂದೊಡ್ಡಬಹುದಾದ ಅಪಾಯಗಳ ಬಗ್ಗೆ (ಆಗ ಮಾಧ್ಯಮ ಸ್ವಾತಂತ್ರ್ಯವೂ ಇಲ್ಲವಾಗುವ ಬಗ್ಗೆ) ಅವುಗಳಿಗೆ ಅರಿವಾಗಲೀ ಕಾಳಜಿಯಾಗಲೀ ಇದ್ದಂತಿಲ್ಲ.!

ಸ್ವಾತಂತ್ರ್ಯ ಹೋರಾಟ ಕಾಲದಿಂದ ಹಿಡಿದು ದಶಕದ ಹಿಂದಿನವರೆಗೂ ಎಲ್ಲ ಕಾಲದಲ್ಲಿಯೂ ಸುದ್ದಿ ಮಾಧ್ಯಮಗಳು ಪ್ರಜಾತಂತ್ರದ ಪಾಲಿಗೆ ಒಂದು ಭರವಸೆಯ ಆಶಾಕಿರಣವಾಗಿದ್ದವು. ಅವು ಜನರ ದನಿಯಾಗಿ, ಅನಧಿಕೃತ ವಿಪಕ್ಷವಾಗಿ, ಸರಕಾರವನ್ನು ಪ್ರಶ್ನಿಸುವ, ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ, ಆಮೂಲಕ ಸರಕಾರವು ಪ್ರಜಾತಂತ್ರದ ಹಾದಿಯಿಂದ ಸರ್ವಾಧಿಕಾರದತ್ತ ಚಲಿಸದಂತೆ ನೋಡಿಕೊಳ್ಳುವ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದವು.

ಪ್ರಜಾತಂತ್ರ ನಾಶಕ್ಕೆ ಅಧಿಕೃತ ಪೌರೋಹಿತ್ಯ

ಆದರೆ ಈಗ ಅವು ಆ ಕೆಲಸ ಮಾಡುತ್ತಿವೆಯೇ? ಸುದ್ದಿ ಮಾ‍ಧ್ಯಮವು ಉದ್ಯಮವಾಗಿ ಬದಲಾಗಿ, ದೊಡ್ಡ ದೊಡ್ಡ ಉದ್ಯಮಿಗಳು ಅದನ್ನು ಕೈವಶ ಮಾಡಿಕೊಂಡ ತರುವಾಯ ಅವು ಈಗ ಬಹಿರಂಗವಾಗಿಯೇ ಸರಕಾರದ ಪ್ರಚಾರ ಮಾಧ್ಯಮವಾಗಿವೆ; ಚೀರ್ ಲೀಡರ್ ಅಂತಾರಲ್ಲ ಹಾಗೆ. ಈಗಿನ ಪ್ರಧಾನಿಯವರು ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿದ್ದರೂ ಅದು ಸಮಸ್ಯೆ ಎಂದು ಅವಕ್ಕೆ ಅನಿಸಿಲ್ಲ. ಅವುಗಳ ಒಂದೇ ಒಂದು ಕೆಲಸವೆಂದರೆ ವಿಪಕ್ಷಗಳ ಮೇಲೆ ಧಾಳಿ, ಸರಕಾರದ ಸಮರ್ಥನೆ. ಇತ್ತೀಚೆಗೆ ಇಂಡಿಯಾ ಟುಡೇ ಮಾಧ್ಯಮದ ಮುಖ್ಯಸ್ಥೆ ಕನ್ನಿಕಾಪುರಿ ಮಾಧ್ಯಮದ ಕೆಲಸ ವಿಪಕ್ಷದಂತೆ ಕೆಲಸ ಮಾಡುವುದಲ್ಲ, ವರದಿ ಮಾಡುವುದಷ್ಟೇ ಎಂಬರ್ಥದಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ಪ್ರಧಾನ ಸಂಪಾದಕ ರಾಜ್ ಕಮಲ್ ಝಾ ಅವರು ‘ಕೆಲವು ಮಾಧ್ಯಮ ಮಾಲೀಕರು ಎಷ್ಟು ಕಾಲದಿಂದ ಖುಷಿ ಖುಷಿಯಾಗಿಯೇ ಮಂಡಿಯೂರಿ ಕುಳಿತಿದ್ದಾರೆಂದರೆ ಅವರಿಗೆ ಎದ್ದು ನಿಂತರೆ ಈಗ ನೋವೆನಿಸಬಹುದು’ ಎಂದು ಕುಟುಕಿದ್ದಾರೆ.

ನೆನಪಿರಲಿ, ತಮ್ಮ ಮಾಧ್ಯಮ ಧರ್ಮ ಹಾಗೂ ಸಾಮಾಜಿಕ ಜವಾಬ್ದಾರಿ ಮರೆತ ಮತ್ತು ಸ್ವಾತಂತ್ರ್ಯದ ಅಮೃತಕಾಲದಲ್ಲಿ ದೇಶದ ಪ್ರಜಾತಂತ್ರ ನಾಶದ ಅಧಿಕೃತ ಪೌರೋಹಿತ್ಯ ವಹಿಸಿರುವ ಈ ಮಾಧ್ಯಮಗಳು ಭಾರತ ದೇಶದ ಮತ್ತು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಪಾಲಿನ ಅತಿದೊಡ್ಡ ಶತ್ರುಗಳು. ಮುಂದೊಂದು ದಿನ ಈ ಕಾಲದ ಬಗ್ಗೆ ಇತಿಹಾಸ ಬರೆಯುವಾಗ ಅದರಲ್ಲಿ ಈ ದುಷ್ಟ ಮಾಧ್ಯಮಗಳ ಬಗ್ಗೆಯೇ ಒಂದು ವಿಶೇಷ ಅಧ್ಯಾಯ ಇರಲಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article