ಕೈಗಾರಿಕೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಐದು ಸಾವಿರ ಕೋಟಿ ಸಾಲಕ್ಕೆ ಮುಂದಾಗಿದೆ: ಎಂಬಿ ಪಾಟೀಲ್

Most read

ಹೊಸ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು ಮತ್ತು ಈಗಿರುವ ಪ್ರದೇಶಗಳಿಗೆ ನದಿ ನೀರು ಸರಬರಾಜು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಪಡೆಯಲು ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಭೂತ ಸೌಕರ್ಯಗಳ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ಇಂಡಿಯಾ ಇನ್ನೋವೇಶನ್ ಶೃಂಗಸಭೆ – ಇನ್ನೋವರ್ಜ್ 2024ರ 20 ನೇ ಆವೃತ್ತಿಯನ್ನು ಅವರು ಉದ್ದೇಶಿಸಿ ಮಾತನಾಡಿ, ಕರ್ನಾಟಕದ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂದು ಹೇಳಿದ ಪಾಟೀಲ್, ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೇಕ ನದಿ ನೀರು ಸರಬರಾಜು ಇಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದರು. ಈ ಕುರಿತು ರಾಜ್ಯ ಹಣಕಾಸು ಇಲಾಖೆ ಜತೆ ಚರ್ಚಿಸಲಾಗುತ್ತಿದೆ ಎಂದರು.

ಕೈಗಾರಿಕಾ ಪ್ರದೇಶಗಳಿಗೆ ನದಿ ನೀರು ಪೂರೈಸಲು ಅಂದಾಜು 2,000 ಕೋಟಿ ರೂಪಾಯಿ, ಹಳೆಯ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಿಗೆ ಭೂ ಸ್ವಾಧೀನಕ್ಕೆ 3,000 ಕೋಟಿ ರೂಪಾಯಿಗಳ ಅಂದಾಜು ಮಾಡಲಾಗಿದೆ ಎಂದರು.

ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರತ್ಯೇಕ ಸ್ಟಾರ್ಟ್‌ಅಪ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಸ್ಟಾರ್ಟಪ್ ಪಾರ್ಕ್‌ಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಬೆಂಗಳೂರಿನಲ್ಲಿ ಗುರುತಿಸಲಾಗಿದ್ದು, ಬೆಳಗಾವಿಯಲ್ಲಿ ಒಂದನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

More articles

Latest article