ಮನುವಾದಿ ಸೆನ್ಸಾರ್ ಮಂಡಳಿಯ ಬದಲಾವಣೆಗಳಿಗೆ ಸಡ್ಡು ಹೊಡೆದು ದೇಶಾದ್ಯಂತ ಪ್ರೇಕ್ಷಕರು ‘ಫುಲೆ’ ಸಿನೆಮಾವನ್ನು ವೀಕ್ಷಿಸಿ, ಬೆಂಬಲಿಸಿ ಯಶಸ್ವಿಗೊಳಿಸಬೇಕಿದೆ. ಸೆನ್ಸಾರ್ ಮಂಡಳಿಯ ಮನುವಾದಿಗಳು ಹಾಗೂ ಅದರ ಹಿಂದಿರುವ ಸನಾತನವಾದಿ ಸಂಘಿ ಶಕ್ತಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ. ಇದೇ ಸಾಮಾಜಿಕ ಸುಧಾರಕರಾದ ಫುಲೆ ದಂಪತಿಗಳಿಗೆ ತೋರುವ ಗೌರವವಾಗಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
‘ಫುಲೆ’ ಚಲನಚಿತ್ರದ ಬಿಡುಗಡೆಯ ದಿನಾಂಕ ಎಪ್ರಿಲ್ 11 ರಿಂದ ಎಪ್ರಿಲ್ 21 ಕ್ಕೆ ಬದಲಾಗಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸೆನ್ಸಾರ್ ಬೋರ್ಡ್ ನವರ ಪೂರ್ವಗ್ರಹ ಪೀಡಿತ ಆಕ್ಷೇಪಣೆಗಳು.
ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದ ಅಡಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ (CBFC) ಎನ್ನುವ ಸಿನೆಮಾ ಸೆನ್ಸಾರ್ ಮಂಡಳಿಯೊಂದು ಅಸ್ತಿತ್ವದಲ್ಲಿದೆ. ಇದಕ್ಕೆ ಒಬ್ಬರು ಅಧ್ಯಕ್ಷರು ಹಾಗೂ 12 ರಿಂದ 25 ಜನ ಸದಸ್ಯರುಗಳನ್ನು ಕೇಂದ್ರ ಸರಕಾರ 3 ವರ್ಷದ ಅವಧಿಗೆ ಆಯ್ಕೆ ಮಾಡುತ್ತದೆ. ಈಗ ಕೇಂದ್ರದಲ್ಲಿ ಆಳುತ್ತಿರುವುದು ಬಲಪಂಥೀಯ ಸನಾತನವಾದಿ ಹಿಂದುತ್ವ ಪ್ರತಿಪಾದಕ ಪ್ರಭುತ್ವ. ಹೀಗಾಗಿ ತನ್ನ ಸಿದ್ಧಾಂತಕ್ಕೆ ಬದ್ಧತೆ ತೋರುವವರನ್ನೇ ಸೆನ್ಸಾರ್ ಬೋರ್ಡಿಗೆ ನೇಮಕಾತಿ ಮಾಡಲಾಗಿದೆ. ಹೀಗಾಗಿ “ದಿ ಕಾಶ್ಮೀರ ಫೈಲ್ಸ್” ಎನ್ನುವ ಮತಾಂಧ ಸಿನೆಮಾದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿ, ಕೇಸರಿ ಸಿದ್ಧಾಂತದ ಸಮರ್ಥಕ ಟಿ.ಎಸ್. ನಾಗಾಭರಣ ಮುಂತಾದವರು ಪ್ರಸ್ತುತ ಕೇಂದ್ರ ಸೆನ್ಸಾರ್ ಬೋರ್ಡಿನ ಸದಸ್ಯರಾಗಿದ್ದಾರೆ. ಪ್ರಸೂನ್ ಜ್ಯೋಶಿ ಎಂಬ ಬ್ರಾಹ್ಮಣ 2017 ರಿಂದ ಕೇಂದ್ರ ಸೆನ್ಸಾರ್ ಬೋರ್ಡಿನ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಬಹುತೇಕ ಮನುವಾದಿಗಳೇ ಸೆನ್ಸಾರ್ ಮಂಡಳಿಯಲ್ಲಿ ತುಂಬಿರುವಾಗ ಮತಾಂಧತೆಯನ್ನು ವೈಭವೀಕರಿಸುವ, ಮತೀಯ ಭಾವನೆಗಳನ್ನು ಪ್ರಚೋದಿಸುವಂತಹ, ಚರಿತ್ರೆಯನ್ನು ತಿರುಚಿ ಹೇಳುವಂತಹ “ದಿ ಕಾಶ್ಮೀರ್ ಫೈಲ್ಸ್”, “ಕೇರಳ ಸ್ಟೋರಿ”, “ಛಾವಾ” ದಂತಹ ಸಿನೆಮಾಗಳು ಸೆನ್ಸಾರ್ ಕಟ್ ಇಲ್ಲದೇ ಅನುಮತಿ ಪಡೆದು ಬಿಡುಗಡೆಯಾಗುತ್ತವೆ. ಆದರೆ ಚಾರಿತ್ರಿಕ ಸತ್ಯವನ್ನು ಅನಾವರಣಗೊಳಿಸುವ ಸಿನೆಮಾಗಳು ಸೆನ್ಸಾರ್ ಮಂಡಳಿಯವರ ಅವಕೃಪಗೆ ಪಾತ್ರವಾಗಿ ಕತ್ತರಿ ಪ್ರಯೋಗಕ್ಕೆ ಒಳಗಾಗುತ್ತವೆ.
ಈಗ ಸೆನ್ಸಾರ್ ಮಂಡಳಿಯ ಹಿಂದುತ್ವವಾದಿಗಳ ಅಸಹನೆಗೆ ‘ಫುಲೆ’ ಸಿನೆಮಾ ಬಲಿಯಾಗಿದೆ. ವೈದಿಕಶಾಹಿಯ ವಿರುದ್ಧ ಸಿಡಿದೆದ್ದ ಬುದ್ಧ, ಬಸವ, ಪೆರಿಯಾರ್, ಅಂಬೇಡ್ಕರ್ ಎಂದರೆ ಈ ಮನುವಾದಿಗಳಿಗೆ ಅತೀವ ಅಸಹನೆ. ಇನ್ನು ಬ್ರಾಹ್ಮಣಶಾಹಿಯನ್ನು ಎದುರಿಸಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದ ಜ್ಯೋತಿಭಾ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಎಂದರೆ ಬ್ರಾಹ್ಮಣ್ಯದ ಕುಡಿಗಳಿಗೆ ಸಂಕಟ ಶುರುವಾಗುತ್ತದೆ. ಇಂತಹ ಫುಲೆ ದಂಪತಿಗಳ ಕುರಿತು ಹಿಂದಿ ಸಿನೆಮಾ ನಿರ್ಮಿಸಿ ವೈದಿಕಶಾಹಿ ವಿಕೃತಿಯನ್ನು ಬಯಲುಗೊಳಿಸಿದರೆ ಮತೀಯವಾದಿ ಸೆನ್ಸಾರ್ ಬೋರ್ಡಿನವರು ಚಾರಿತ್ರಿಕ ಸತ್ಯವೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇವರು ಒಪ್ಪಿಕೊಂಡರೂ ಸಂಘ ಪರಿವಾರದ ನೇತಾರರು ಸಹಿಸಲಾರರು. ಸಂಘದ ಹಂಗಿನಲ್ಲಿರುವ ಸೆನ್ಸಾರ್ ಬೋರ್ಡಿನ ಮನುವಾದಿ ಸದಸ್ಯರುಗಳು ಫುಲೆ ಚಿತ್ರಕ್ಕೆ ಸೆನ್ಸಾರ್ ಕತ್ತರಿಯನ್ನು ಪ್ರಯೋಗಿಸಿದ್ದಾರೆ. ಸೆನ್ಸಾರ್ ನವರ ಆದೇಶದ ಮೇರೆಗೆ ಸಿನೆಮಾದಲ್ಲಿ ಒಟ್ಟು 12 ಬದಲಾವಣೆಗಳನ್ನು ಮಾಡಬೇಕಾಗಿದ್ದರಿಂದ ಈ ಚಲನಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ದಲಿತರು ಪೊರಕೆ ಕಟ್ಟಿಕೊಂಡು ನಡೆದಾಡಬೇಕು ಎನ್ನುವ ಚಾರಿತ್ರಿಕ ಸತ್ಯವನ್ನು ತಿರುಚಿ ” ನಮ್ಮನ್ನು ದೂರವಿಡಬೇಕು” ಎಂದು ಬದಲಾಯಿಸಬೇಕಂತೆ. 3000 ವರ್ಷದ ಗುಲಾಮಗಿರಿ ಬದಲು ‘ಕೆಲವು ವರ್ಷಗಳ ಹಿಂದಿನ ಗುಲಾಮಗಿರಿ’ ಎಂದು ಬದಲಾಯಿಸಬೇಕಂತೆ. ಪೇಶ್ವೆಗಳು ಇದ್ದಿದ್ದರೆ ಕೈಕಾಲುಗಳನ್ನು ಬೇರೆ ಮಾಡುತಿದ್ದರು ಎನ್ನುವುದನ್ನು ‘ರಾಜರು ಇದ್ದಿದ್ದರೆ’ ಎಂದು ಬದಲಾಯಿಸಬೇಕಂತೆ. ಮನುವಾದಿ ಜಾತಿ ಪದ್ದತಿ ಕುರಿತ ಮಾತುಗಳು ಇರಬಾರದಂತೆ.
ಹಾಗಾದರೆ ಸನಾತನಿಗಳ ಶಡ್ಯಂತ್ರದ ವಿರುದ್ಧ ಹೋರಾಡಿದ ಫುಲೆ ದಂಪತಿಗಳ ಸಿನೆಮಾದಲ್ಲಿ ಬೇರೆ ಏನು ತೋರಿಸಬೇಕು? ಇತಿಹಾಸದಲ್ಲಿ ಆಗಿದ್ದನ್ನು ಯಥಾವತ್ತಾಗಿ ದೃಶ್ಯಮಾಧ್ಯಮದಲ್ಲಿ ತೋರಿಸಲೇ ಬಾರದು ಎಂದರೆ ಚರಿತ್ರೆಗೆ ಮಾಡುವ ಅಪಮಾನವಲ್ಲವೇ? ‘ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ’ಗಳಂತಹ ಮತೀಯ ದ್ವೇಷ ಪ್ರೇರೇಪಿಸುವ ಕಪೋಲ ಕಲ್ಪಿತ ಸಿನೆಮಾಗಳನ್ನು ಇದೇ ಸೆನ್ಸಾರ್ ಮಂಡಳಿ ಅಪ್ಪಿ ಒಪ್ಪಿ ಅನುಮತಿ ಕೊಡುತ್ತದೆ. ಅಂತಹ ಮತಾಂಧತೆ ಪೀಡಿತ ಸಿನೆಮಾವನ್ನು ಪ್ರಧಾನಿಯಾದಿಯಾಗಿ ಸಂಘ ಪರಿವಾರ ಮೆಚ್ಚಿ ಪ್ರಚಾರ ಮಾಡಲು ಮುಂದಾಗುತ್ತದೆ. ಆದರೆ ಚಾರಿತ್ರಿಕ ಸತ್ಯ ಘಟನೆಗಳನ್ನು ಆಧರಿಸಿದ ‘ಫುಲೆ’ ಯಂತಹ ಸಿನೆಮಾದ ಪ್ರಮುಖ ಭಾಗಗಳನ್ನು, ಮುಖ್ಯ ಸಂಭಾಷಣೆಗಳನ್ನು ಬದಲಾಯಿಸಲೇ ಬೇಕೆಂದು ಮನುವಾದಿ ಮಂಡಳಿ ಆದೇಶಿಸುತ್ತದೆ.
ಇತ್ತೀಚೆಗೆ ಗೋದ್ರೋತ್ತರ ಮುಸ್ಲಿಂ ಹತ್ಯಾಕಾಂಡದ ದೃಶ್ಯಗಳನ್ನು ಆಧರಿಸಿ ಎಲ್ 2-ಎಂಪುರಾನ್ ಎನ್ನುವ ಮಲಯಾಳಿ ಸಿನೆಮಾಕ್ಕೂ ಸಹ 24 ಬದಲಾವಣೆ ಮಾಡಲು ಸೆನ್ಸಾರ್ ಬೋರ್ಡ್ ಆದೇಶಿಸಿತ್ತು. ಏನೇ ಬದಲಾವಣೆ ಮಾಡಿದರೂ ಈ ಪ್ರಾದೇಶಿಕ ಭಾಷೆಯ ಸಿನೆಮಾವನ್ನು ಪ್ರೇಕ್ಷಕರು ಅಭೂತಪೂರ್ವವಾಗಿ ಗೆಲ್ಲಿಸಿದ್ದರು. ಮೋಹನ್ ಲಾಲ್ ನಟನೆಯ ಎಂಪುರಾನ್ ಮೂರೇ ದಿನಕ್ಕೆ ನೂರು ಕೋಟಿ ಸಂಪಾದಿಸಿ ಮಲಯಾಳಿ ಸಿನೆಮಾ ಕ್ಷೇತ್ರದ ದಾಖಲೆಗಳನ್ನು ಮುರಿದು ಹಾಕಿತ್ತು.
ಅದೇ ರೀತಿ ಮನುವಾದಿ ಸೆನ್ಸಾರ್ ಮಂಡಳಿಯ ಬದಲಾವಣೆಗಳಿಗೆ ಸಡ್ಡು ಹೊಡೆದು ದೇಶಾದ್ಯಂತ ಪ್ರೇಕ್ಷಕರು ‘ಫುಲೆ’ ಸಿನೆಮಾವನ್ನು ವೀಕ್ಷಿಸಿ, ಬೆಂಬಲಿಸಿ ಯಶಸ್ವಿಗೊಳಿಸಬೇಕಿದೆ. ಸೆನ್ಸಾರ್ ಮಂಡಳಿಯ ಮನುವಾದಿಗಳು ಹಾಗೂ ಅದರ ಹಿಂದಿರುವ ಸನಾತನವಾದಿ ಸಂಘಿ ಶಕ್ತಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ. ಇದೇ ಸಾಮಾಜಿಕ ಸುಧಾರಕರಾದ ಫುಲೆ ದಂಪತಿಗಳಿಗೆ ತೋರುವ ಗೌರವವಾಗಿದೆ. ‘ಫುಲೆ’ ಯಂತಹ ಸಿನೆಮಾಗಳ ಯಶಸ್ಸಿನಲ್ಲಿ ವೈದಿಕಶಾಹಿ ಮತಾಂಧ ಶಕ್ತಿಗಳ ಸೋಲಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://‘ಫುಲೆ’ ಹಿಂದಿ ಸಿನೆಮಾಗೆ ಆಕ್ಷೇಪ: ಪ್ರಜಾಪ್ರಭುತ್ವವಾದಿಗಳು ಮೌನ ಮುರಿಯಬೇಕು https://kannadaplanet.com/objection-to-hindi-movie-phule/