ಎಲ್ಲಾ ಥಿಯೇಟರ್ ನಂತೆ ಅಲ್ಲಿ ಇಂಟರ್ ವೆಲ್‌ನಲ್ಲಿ ಸ್ನಾಕ್ಸು ಅಂತೆಲ್ಲ ಇಲ್ಲ. ಒಂದು ಮೂಲೆ. ಅದು ಗಂಡಸರೆಲ್ಲಾ ಬೀಡಿ ಸಿಗರೇಟು ಸೇದಲು ಜಾಗ. ಮತ್ತೊಂದು ಮೂಲೆಯಲ್ಲಿ ಒಂದು ಗೋಡೆ. ಅಲ್ಲಿ ಮಹಿಳೆಯರು ತಮ್ಮ ಸ್ವಕಾರ್ಯಗಳನ್ನು ಅಂದ್ರೆ ನಿತ್ಯಕರ್ಮಗಳಲ್ಲ, ಮಹಿಳೆಯರು ಕೆಲಸ ಮುಗಿಸಿ ಬಂದು ಸಿಗರೇಟೋ ಬೀಡಿನೋ ಹತ್ತಿಸಿ, ಯಾರಾದ್ರು ನೋಡ್ತಾರೆ ಅನ್ನೊ ಭಯವಿಲ್ದೆ ಒಂದು ಪಫ್ ತಗೊಂಡು ನಿರಾಳವಾಗಿ ಜಗತ್ತಿನ ಎಲ್ಲಾ ಸಮಸ್ಯೆಗಳು ಪರಿಹಾರವಾದಂತೆ ಹೊಗೆ ಬಿಡಲು ಒಂದು ಸುರಕ್ಷಿತ ಸ್ಥಳ. ಕೆಲವರು ಒಸಿನೋ ಓಲ್ಡ್ ಮಾಂಕ್ ಒಂದು ಸಿಪ್ ಹೀರಿ ತಮ್ಮ ಸಮಸ್ಯೆಗಳನ್ನು ಮರೆತಂತೆ ಅನಿಸುವುದು ಸಾಮಾನ್ಯ. ಅಲ್ಲಿ ಬರುವ ಹೆಂಗಸರು ಮತ್ತು ಕೆಲವು ಹಿಜ್ರಾಗಳು ಅವರ ಕಥೆಗಳು, ಅವರ ಜೀವನ ಆ ಜಾಗಕ್ಕೆ ಆ ಗೋಡೆಗೆ ಚೆನ್ನಾಗಿ ಗೊತ್ತು. ಮೇ ಬಿ ಅದರ ಓನರ್ಗೆ ಹೆಣ್ಣಿನ ಹೃದಯವಿದ್ದು ಬಡವರು ಎಂದರೆ ಅವರು ಬದುಕುವ ತೀವ್ರತೆಗಳನ್ನು ಅರ್ಥಮಾಡಿಕೊಂಡು ‘ನಮ್ಮ’ ನೆಲೆ ಎಂದು ಸೇರಿಸಿಕೊಳ್ಳುವ ತಾಯ್ತನವಿತ್ತು. ಆ ಜಾಗಕ್ಕೂ ಅದೇ ತಾಯ್ತನವಿತ್ತು. ಮಿಯಾನ್‌ಗು, ಆ ಥಿಯೇಟರ್ಗೂ, ಟೀ ಅಂಗಡಿ ಚಾಚಾನಿಗು, ಅವಳ ಮೇಲೆ ಅಂದ್ರೇ ಆ ಸೆಕ್ಸ್ ವರ್ಕರ್ ಮೇಲೆ ತುಂಬಾ ಕಳಕಳಿ. ಅದಕ್ಕೆ ಅವಳಿಗೆ ಆ ಥಿಯೆಟರಿನಲ್ಲಿ ತನ್ನ ಕೆಲಸದ ಜಾಗ ಖಾಯಂ. ಮಿಯಾನ್ ಅವಳನ್ನು ‘ಏ ಸೂಳೆ’ ಅಂತ ಮತ್ತೆ ಅವಳೂ ಮಿಯಾನ ‘ಸೂಳೆ’ ಅಂತ ಕರೀತಿದ್ಲು. ಮೊಹತ್ರಮಾ ಮಿಯಾನ್ ಗೆ ಮನಸ್ಸಾಯಿತೆಂದರೆ ಇಡೀ ಚಿತ್ರಮಂದಿರದಲ್ಲಿರುವವರಿಗೆಲ್ಲಾ ಬಿರಿಯಾನಿ ಕೊಡುಸ್ತಿದ್ದ. ಆ ಬಿರಿಯಾನಿ ಮಾಡೋದು ಯಾರು? ಈ ಎಲ್ಲಾ ಸೆಕ್ಸ್ ವರ್ಕರ್ಸ್. ಆ ರುಚಿನೇ ಬೇರೆ. ಇಡೀ ಕರ್ನಾಟಕದಲ್ಲಿ ಸಿಗಲ್ಲ. ಮಿಯಾನ್ ಮೇಲಿರುವ ಎಲ್ಲಾ ಪ್ರೀತಿಯನ್ನ ಅದರಲ್ಲಿ ಧಾರೆ ಎರದಿರುತಿದ್ರು. ಮಿಯಾನ್ ಯಾವಾಗಲೂ ಆ ಸೆಕ್ಸ್ ವರ್ಕರ್ ಮಗಳ ಓದಿನ ಬಗ್ಗೆ ವಿಚಾರಿಸುತ್ತಿದ್ದು ಅವಳ ಓದಿಗೆ ಸಹಾಯ ಮಾಡುತ್ತಿದ್ದ.
ಅಂದೂ ಇವಳು ಕೆಲಸ ಮುಗಿಸಿ ಆಚೆ ಬಂದು ತನ್ನ ಸಿಗರೇಟ್ ಹೊಡೆಯಲು ಗೋಡೆ ಹಿಂದೆ ಹೋಗುತ್ತಿರುವ ಸಮಯದಲ್ಲಿ ಮಿಯಾನ್ ಅವಳನ್ನು ನೋಡಿ “ಏನೇ ಸೂಳೆ, ಚೆನ್ನಾಗ್ ಎಣಿಸ್ಕೊಂಡ್ಯಾ ಇಲ್ಲಾಂದ್ರೆ ಹೇಳು ನಾನ್ ಕೊಡ್ತೀನಿ ನಂಗೊತ್ತು ನೀನು ಕೆಲ್ಸ ಮಾಡೋದೇ ಲುಕ್ಸಾನ್ ನಲ್ಲಿ, ಈಗ್ ಹೇಗಿದ್ದೀಯ? ಒಬ್ಳೆ ಇದ್ಯಾ”.….. ಮಿಯಾನ ಸಾವಿರ ಪ್ರಶ್ನೆಗಳಿಗೆ ಅವಳು ಉತ್ತರ ಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವಳು ಎಲ್ಲಾದಕ್ಕೂ ತಲೆ ಅಲ್ಲಾಡಿಸಿ ಗೋಡೆಯ ಹಿಂದೆ ಧಾವಿಸಿದಳು. ಮಿಯಾನ್ ಸ್ವಲ್ಪ ಕಸಿವಿಸಿ ಆಗಿ, “ಇವಳೇಕೆ ಹೀಗೆ ಮೌನವಾಗಿ ಓಡಿ ಹೋದ್ಲು?” ಅಂತ ಹೇಳಿಕೊಂಡ.
****
ಕಾಳಿ/ದುರ್ಗಿ/ಲೈಲ/ಸಿಲುಕ್/ಮೇರಿ ಹೀಗೆ ಹಲವಾರು ಹೆಸರುಗಳಿರುವ ಇವಳು ಆ ಗೋಡೆಯ ಹತ್ರ ಹೋಗಿ ಒಂದು ಸಿಗರೆಟ್ ಹಚ್ಚಿ ಒಂದು ದಟ್ಟವಾದ ಪಫ್ ತೆಗೆದುಕೊಂಡು ಬಾಯಿಂದ ಮೂಗಿಂದ ಹೊಗೆ ಬಿಡುತ್ತಾ ”ಯಾಕಾದ್ರು ಅತ್ತೆ” ಅಂತ ಆತಂಕವಾಗಿ ತಲೆ ಚಚ್ಕೊಂಡ್ಳು. ಅದನ್ನೇ ಯೋಚ್ನೆ ಮಾಡ್ತಾ ಮನಸ್ಸು ದೊಡ್ಡ ಹಳ್ಳಕ್ಕೆ ಬಿದ್ದಂತಾಗಿ ಕಣ್ಣಲ್ಲಿ ಮತ್ತೆ ನೀರು ಬರಲಾರಂಭಿಸಿತು. ಅವಳಿಗೆ ಅವತ್ತು ಬೆಳಿಗ್ಗೆಯಿಂದ ಏನೂ ಬೇಡ, ಯಾರೂ ಬೇಡ, ಬದುಕೇ ಬೇಡ ಅಂತ ಅನಿಸುತ್ತಿತ್ತು. ಮಗಳ ಮುಖ ಕಣ್ ಮುಂದೆ ಹಾದು ಹೋಗುತ್ತಿತ್ತು. ಇತ್ತೀಚೆಗೆ ಅವಳು ಥಿಯೇಟರಿನಲ್ಲಿ ಕೆಲಸಕ್ಕೆ ಹೋದಾಗಲೆಲ್ಲಾ ಮಂಕು ಬಡಿದಂಗೆ ಎಲ್ಲೋ ಯೋಚ್ನೆ ಮಾಡ್ತಾ ತನ್ನ ಕೆಲಸನ ಹುರುಪಿಲ್ಲದೇ ಮಾಡ್ತಿದ್ಲು.
ಮೀನ ಮತ್ತು ಇವಳು ಬಹಳ ಸ್ನೇಹಿತರು. ಆದ್ರೆ ಆಗಾಗ ಅವರಿಬ್ಬರು ಗಿರಾಕಿ ವಿಶಯಕ್ಕೆ ಜಗಳಕ್ಕೆ ಇಳೀತಾರೆ. ಕೆಲವೊಮ್ಮೆ ಅವರಿಬ್ಬರೂ ಗಿರಾಕಿಗಳನ್ನ ಹಂಚ್ಕೊತಾರೆ. ಮೀನ ಇವಳಿಗಿಂತ ಸ್ವಲ್ಪ ಚಿಕ್ಕವಳು. ಆದ್ರೆ ಇವರಿಬ್ಬರೂ 40ರ ಹರೆಯದಲ್ಲಿದ್ದಾರೆ. ಈ ಥಿಯೇಟರ್ ಫೀಲ್ಡ್ ನಲ್ಲಿ ಇವರಿಬ್ಬರೇ ಕೆಲಸ ಮಾಡೋದು. ಬೇರೆಯವರೆಲ್ಲ “ಓಹ್ ಇಬ್ಬರು ಮುದುಕೀರು ಅಂತ ಬಿಟ್ಬಿಟಿದ್ದಾರೆ”.. ಮೀನಾ ಒಬ್ಳು ಹಿಜ್ರಾ. ಅವಳು ತುಂಬಾ ಧೈರ್ಯವಂತೆ. ಅವಳ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ನಿಷ್ಠೂರವಾಗಿ ಮಾತಾಡ್ತಾಳೆ. ಮೀನಾ ಮತ್ತು ಇವಳು ತುಂಬಾ ಆಪ್ತರು. ಮೀನಾಗೂ ಒಂದು ಮಗು ಇದೆ. ಮೀನಾಗೂ ಇವಳಿಗೂ ಒಂದೇ ಒಂದು ವಿಷಯಕ್ಕೆ ವ್ಯತ್ಯಾಸ….. ಮಕ್ಕಳ ಬಗ್ಗೆ….. ಮೀನಾ ತನ್ನ ಮಗಳಿಗೆ ತಾನೇನು, ಏನು ಕೆಲಸ ಮಾಡೋದು, ಹೇಗೆ ತಾನು ಒಂದು ಕಾಲದಲ್ಲಿ ಅಪ್ಪ ಆಗಿದ್ದು ಈಗ ಅಮ್ಮನಾಗಿ ಮಗಳನ್ನು ನೋಡಿಕೊಳ್ಳುತ್ತ ಇದ್ದಾಳೆ, ಈ ಕೆಲಸ ಅಂದ್ರೆ ಸೆಕ್ಸ್ ವರ್ಕ್ ಮಾಡಿ ಬದುಕುತ್ತಿದ್ದಾಳೆ ಎಂದು ತಿಳಿಸಿ ಹೇಳಿದ್ದಾಳೆ. ಮೀನಳ ಮಗಳಿಗೆ ಈಗ 12 ವರ್ಷ ಅಷ್ಟೆ. ಆ ಮಗು ತುಂಬಾ ಅಪ್ ಟು ಡೇಟ್ ಇರ್ತಾಳೆ. ಆದ್ರೆ ಇವಳು…… ತನ್ನ ಮಗಳನ್ನು ಬೆಂಗಳೂರಿಗೆ ಜೊತೆ ಕರೆದುಕೊಂಡು ಬಂದಾಗ ಆಕೆಗೆ 13 ವಯಸ್ಸಿತ್ತು. ಇವಳು ತಾನು ಸೆಕ್ಸ್ ವರ್ಕ್ ಮಾಡ್ತೀನಿ ಅಂತ ಮಗಳ ಹತ್ರ ಹೇಳಲೇ ಇಲ್ಲ. ಇವಳು ಮಗಳಿಗೆ ಹೇಳಿದ್ದು ತಾನು ಮನೆ ಕೆಲಸ ಮಾಡ್ತೀನಿ ಅಂತ… ನಂತರ ಗಾರ್ಮೆಂಟ್ಸ್ ಕೆಲಸ ಮಾಡ್ತೀನಿ ಅಂದ್ಲು… ಎನ್ ಜಿ ಒ ಕೆಲಸ ಮಾಡ್ತೀನಿ ಅಂದ್ಲು… ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳ್ತಿದ್ಲು. ಮಗಳ ಮುಂದೆ ಮೇಕಪ್ ಮಾಡ್ಕೊಬೇಕಲ್ಲ ಅದಕ್ಕೆ ಪಾರ್ಲರ್ ನಲ್ಲಿ ಕೆಲಸ ಮಾಡ್ತಿನಿ ಅಂತ ಕೂಡ ಹೇಳಿದ್ಲು. “ಬೇಡ ಮಗಳ ಹತ್ರ ಸುಳ್ಳು ಹೇಳ್ಬೇಡ, ಒಂದ್ ದಿನ ಭಾರಿ ಬೀಳುತ್ತೆ” ಅಂತ ಮೀನಾ ಎಷ್ಟು ಹೇಳಿದರೂ ಇವಳು ಕೇಳುತ್ತಲೇ ಇರಲಿಲ್ಲ. ಥಿಯೇಟರಿಂದ ಸುಮಾರು 15 ಕಿಲೋ ಮೀಟರ್ ದೂರ ಮನೆ ಮಾಡಿ ಮಗಳನ್ನು ಓದಿಸುತ್ತಿದ್ದಳು.
********
ಸಿಗರೇಟ್ ಸೇದುತ್ತಾ ಮತ್ತೆ ಯೋಚನೆಯಲ್ಲಿ ಬಿದ್ದಳು ಅವಳು. ಈ ಎಲ್ಲಾ ಹೆಂಗಸರಿಗೆ ಆ ಗೋಡೆ ಮೇಲೆ ಸಾಹಿತ್ಯವನ್ನು ಕೊರೆಯಲಾಗಿತ್ತು. “ಒಳ್ಳೆ ತೂತಿಗೆ &^^%$##@!* ಸಂಪರ್ಕಿಸಿ”, “ರಾಮಿ ಹರಾಮಿ, ಈ ಗೋಡೆಯ ಐಸ್ವರ್ಯ”, ಏನು ಬೇಕಿದ್ರೂ ಸಂಪರ್ಕಿಸಿ (*&^%$#@!@ )ಒಂದಕ್ಕ್ ಒಂದ್ ರೇಟು – ಲೈಲ”….. ಹೀಗೆ ಆ ಗೋಡೆ ಈ ಎಲ್ಲಾ ಹೆಂಗಸರ ಕೆಲಸವನ್ನ ಬಹಳ ಅವಮಾನಕರವಾಗಿ ಚಿತ್ರಿಸುತ್ತಿತ್ತು. ಅದು ಹೇಗೆ ಯಾರು ಯಾವಾಗ ಬಂದು ಬರೆಯುತ್ತಿದ್ದರೋ. ಅವಳು ಸಿಗರೇಟು ಹೊಗೆ ಬಿಡುತ್ತಾ ಮನಸ್ಸಿನಲ್ಲಿ ಅಂದ್ಕೊಂಡ್ಳು “ಈ ಗಂಡಸರಿಗೆ ತೆವಲು… ಮಾಡೋದು ಸಾಲದು ಅಂತ ಸಾಹಿತ್ಯ ಚಿತ್ತಾರ ಗೋಡೆಯ ಮೇಲೆ ಬೇರೆ. ಮಾಡಕ್ಕೂ ಬರಲ್ಲ.. ಇಲ್ಲಿ ಚಿತ್ರ ಬಿಡಿಸಕ್ಕೂ ಬರಲ್ಲ”. ಅದನ್ನು ನೋಡಿದಾಗ ತಾನೆ ಕೊರೆದ ಸಾಹಿತ್ಯವೂ ಕಂಡಿತು. ತಡೆಯಲಾರದಂತ ಅಳು ಒತ್ತರಿಸಿ ಬಂತು. ಆ ನೆನಪು ಮನಸ್ಸಿನಿಂದ ಹೋಗೋದೇ ಇಲ್ವಲ್ಲ ಅಂತ ದು:ಖಿಸಿದಳು.
ಭಾಗ ಒಂದು ಓದಿದ್ದೀರಾ? ಮನೋರಮ ಎಂಬ ಥಿಯೇಟರಿನ ಒಡಲ ಕಥೆಗಳು
ಆವತ್ತು ಇಡೀ ಚಿತ್ರಮಂದಿರನೇ ಗೊಳೋ ಅತ್ತಿತ್ತು. ಆ ದಿನ, ಅವಳು ಒಂದು ಗಿರಾಕಿ ಮುಗಿಸಿ ಬಂದು ಆ ಗೋಡೆಯ ಹಿಂದೆ ನಿಂತಳು. ಅಷ್ಟು ಹೊತ್ತಿಗೆ ಮೀನ ಕೂಡ ಗಿರಾಕಿ ಮುಗಿಸಿ ಬಂದು ಇವಳ ಜೊತೆ ನಿಂತು ಬೀಡಿಗೆ ಕೈ ಒಡ್ಡಿದಳು. ಆಗ ಇವಳು “ಇಪ್ಪತ್ತೇಳನೇ ಬೀಡಿ ಸಾಲ ಕೊಡ್ತಿರೋದು ನೆನಪಿರಲಿ” ಅಂತ ಛೇಡಿಸಿದಳು. ಅದಕ್ಕೆ ಮೀನಾ “ಹೋಗೆಲೆ, ಇಪ್ಪತ್ತನಾಕನೇದು ಇಪ್ಪತ್ತೇಳಲ್ಲ” ಅಂದ್ಲು. ಅವಳ ಜೊತೆ ಹುಸಿ ಜಗಳ ಆಡ್ತಾ ಒಂದು ಬೀಡಿ ಬಾಯಿಗಿಟ್ಟಳು….ಹಾಗೇ ಒಂದು ಫೋನ್ ಬಂತು. ಇವಳು ಈ ಕಡೆಯಿಂದ ಒಂದೂ ಮಾತನಾಡದೆ ಬೀಡಿಯ ಮೇಲೆ ಬೀಡಿ ಹತ್ತಿಸಿ ಹತ್ತಿಸಿ ಮತ್ತೆ ಮತ್ತೆ ಕೇಳುತ್ತಾ “ಇನ್ನೊಂದ್ ಸರ್ತಿ ಹೇಳಿ, ಇನ್ನೊಂದ್ ಸರ್ತಿ ಹೇಳಿ” ಅಂತ ಅಂದಾಗ ಕೈಯಿಂದ ಫೋನ್ ಕೆಳಗೆ ಬಿತ್ತು. ಮೀನ “ಏನಾಯ್ತು ಹೇಳೇ ಏನಾಯ್ತು ಹೇಳೇ ಅಂತ ಕೇಳ್ತಾನೇ ಇದ್ಲು. ಇವಳು ಕಲ್ಲಿನಂತೆ ನಿಂತಿದ್ಲು. ಬಾಯಿಂದ ಮಾತೇ ಹೊರಡದಂತಾಯಿತು ಅವಳಿಗೆ..ಕಡೆಗೆ ಆ ಗೋಡೆಯ ಮೇಲೆ ಇರುವ ಸಾಹಿತ್ಯದ ಮಧ್ಯೆ ತಾನು ಕಲ್ಲು ತಗೊಂಡು ಬರೆದಳು “ತಾಯಿ ಸೂಳೆ – ಮಗಳು ಆತ್ಮಹತ್ಯೆ”.
ಭಾಗ 2 ಓದಿದ್ದೀರಾ? ಮನೋರಮ ಥಿಯೇಟರಿನ ಒಡಲ ಕಥೆಗಳು- 2
ಮೀನಾ ಅದನ್ನು ಓದಿ ಜೋರಾಗಿ “ಚಾಚಾ ಬೇಗ ಬಾ” ಅಂತ ಕೂಗ್ತಾ ಅವಳನ್ನು ಹಿಡಿದಪ್ಪಿ ಅಳಕ್ಕೆ ಶುರು ಮಾಡಿದಳು. ಆದರೆ ಇವಳು ಕಲ್ಲಿನಂತೆ ನಿಂತವಳು ಅಲುಗಾಡಲೇ ಇಲ್ಲ. ಅವಳ ನೋಟ ಎಲ್ಲೋ ಕಳೆದು ಹೋಗಿತ್ತು. ಚಾಚಾ ಮತ್ತು ಮಿಯಾನ್ ಓಡಿ ಬಂದ್ರು. ಅರೆಬರೆ ವಿಷಯ ಮಾತ್ರ ಗೊತ್ತಾಗಿತ್ತು. ಅವಳ ಮೊಬೈಲು ಮತ್ತೆ ರಿಂಗಾಯ್ತು.. ಆಗ ಮೀನ ಫೋನ್ ತಗೊಂಡು ಆಕಡೆಯವರು ಹೇಳಿದನ್ನು ಕೇಳಿಸಿಕೊಂಡು ಜೋರಾಗಿ ಅಳ್ತಾ ಹೇಳಿದ್ಲು “ರಮಾ ಮನೇಲಿ ನೇಣಾಕ್ಕಂಡೌಳೆ”. ಆಗ ಚಾಚಾ, ಮಿಯಾನ್ ಮತ್ತು ಇತರರು ಹೌಹಾರಿ ನಿಂತರು. ಅವಳು ಹಾಗೇ ನಿಂತಿದ್ದಳು. ಕಣ್ಣೀರಿಲ್ಲ. ಮಿಯಾನ್ ಕಾರಲ್ಲಿ ಎಲ್ಲರೂ ಅವಳ ಮನೆಗೆ ಹೊರಟರು. ದಾರಿ ಉದ್ದಕ್ಕೂ ಮೀನ ಅವಳನ್ನು ಗಟ್ಟಿಯಾಗಿ ಅಪ್ಪಿ ಹಿಡಿದಿದ್ದಳು. ಮನೆಯ ಹತ್ರ ಜನ ತುಂಬಿದ್ದರು. ಹೆಣ ಇಳಿಸಿದ್ದರು.
(ಮುಂದುವರೆಯುವುದು)
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರು ಬರೆಯುವ ‘ರೂಮಿ ಕಾಲಂ’ ಪ್ರತಿ ಮಂಗಳವಾರ ಪ್ರಕಟವಾಗಲಿದೆ.