ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್ ಬಿ ಐ ಗವರ್ನರ್, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್ ಮನಮೋಹನ ಸಿಂಗ್ ಅವರೊಳಗಿದ್ದ. ದೇಶದ ನಾಯಕತ್ವ ವಹಿಸಿಕೊಳ್ಳುವವರು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದರು ಅವರು – ಶ್ರೀನಿವಾಸ ಕಾರ್ಕಳ.
ವಿನಯ, ಸರಳತೆ, ಋಜುತ್ವ, ಪ್ರಾಮಾಣಿಕತೆ, ಕರುಣೆ, ಸಜ್ಜನಿಕೆ ಇತ್ಯಾದಿ ವಿಶಿಷ್ಟ ಮಾನವೀಯ ಗುಣಗಳ ಮೂರ್ತಿವೆತ್ತಂತಿದ್ದ ಡಾ. ಮನಮೋಹನ ಸಿಂಗ್ ಅವರ ವೈಯಕ್ತಿಕ ನಡೆವಳಿಕೆಯ ಕೆಲವು ಕುತೂಹಲಕರ ಘಟನೆಗಳು ಇಂತಿವೆ.
ಮಾರುತಿ 800 ನ ಕತೆ
“ಡಾ. ಸಾಹೇಬರ ಬಳಿ ತನ್ನದೇ ಆದ ಒಂದು ಕಾರು ಇತ್ತು; ಮಾರುತಿ 800. ಅದು ಪ್ರಧಾನಿ ನಿವಾಸದ ಝಗಮಗಿಸುವ ಬಿ ಎಂ ಡಬ್ಲ್ಯೂ ಸರಕಾರಿ ಕಾರಿನ ಹಿಂದೆ, ಮೂಲೆಯಲ್ಲಿ ಮುದುಡಿ ನಿಂತಿರುತ್ತಿತ್ತು. ʼಅಸೀಮ್, ನನಗೆ ಈ ಕಾರಿನಲ್ಲಿ ಹೋಗುವುದು ಸುತರಾಂ ಇಷ್ಟವಿಲ್ಲ. ನನ್ನ ಕಾರಾದರೋ ಅದು ನೋಡುʼ ಎಂದು ಅವರು ಮಾರುತಿ ಕಾರನ್ನು ತೋರಿಸುತ್ತಿದ್ದರು. ʼಸರ್, ಈ ಕಾರು ನಿಮ್ಮ ಶ್ರೀಮಂತಿಕೆಗಾಗಿ ಇರುವುದಲ್ಲ. ಇದರ ಭದ್ರತಾ ವ್ಯವಸ್ಥೆಯ ಕಾರಣವಾಗಿಯೇ ಎಸ್ ಪಿ ಜಿ ಯವರು ಇದನ್ನು ಖರೀದಿಸಿದ್ದಾರೆʼ ಎಂದು ನಾನು ಸರಕಾರಿ ಕಾರನ್ನು ತೋರಿಸುತ್ತಿದ್ದೆ. ಆದರೆ ದುಬಾರಿ ಸರಕಾರಿ ಕಾರುಗಳ ಮೆರವಣಿಗೆ ಮಾರುತಿ ಕಾರಿನ ಪಕ್ಕದಲ್ಲಿ ಸಾಗುವಾಗ ಡಾ ಸಿಂಗ್ ಭಾರ ಹೃದಯದೊಂದಿಗೆ ಅದರತ್ತ ನೋಡುತ್ತಿದ್ದರು. ʼನಾನು ಮಧ್ಯಮ ವರ್ಗದ ವ್ಯಕ್ತಿ, ಸಾಮಾನ್ಯರ ಬಗ್ಗೆ ಚಿಂತಿಸುವುದು ನನ್ನ ಕೆಲಸ, ಕೋಟಿ ಬೆಲೆ ಬಾಳುವ ಕಾರು ಪ್ರಧಾನಿಯದ್ದು, ಆದರೆ ನನ್ನ ಕಾರಾದರೋ ಈ ಮಾರುತಿ ಎಂಬಂತಿತ್ತು ಆ ಭಾವ”. ಎಂದು ಹೇಳುತ್ತಾರೆ ಡಾ. ಸಿಂಗ್ ಅವರ ಬಾಡಿ ಗಾರ್ಡ್ ಆಗಿ ೨೦೦೪ ರಿಂದ ಮೂರು ವರ್ಷಗಳ ಕಾಲ ಅವರ ಜತೆಗಿದ್ದ ಅಸೀಮ್ ಅರುಣ್.
ಅಸೀಮ್ ಅರುಣ್ ಅವರು ಪ್ರಧಾನಿಗಳ ಭದ್ರತೆಗಿರುವ ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್- ಎಸ್ ಪಿ ಜಿ ಯ ಅತ್ಯಂತ ಒಳ ವರ್ತುಲದ ಕ್ಲೋಸ್ ಪ್ರೊಟೆಕ್ಷನ್ ಟೀಮ್ -ಸಿಪಿಟಿ ನಲ್ಲಿದ್ದವರು. ಸಿಪಿಟಿಯಲ್ಲಿರುವವರು ಒಂದು ಕ್ಷಣವೂ ಪ್ರಧಾನಿಯನ್ನು ಬಿಟ್ಟು ದೂರ ನಿಲ್ಲುವಂತಿಲ್ಲ.
ಏರ್ ಕಂಡೀಶನರ್
ಖ್ಯಾತ ಪತ್ರಕರ್ತ ಮತ್ತು ಲೇಖಕ ಸಲಿಲ್ ತ್ರಿಪಾಠಿಯವರು ಡಾ ಸಿಂಗ್ ಅವರ ಎಸಿಯ ಕತೆ ಹೇಳುತ್ತಾರೆ. ಅದು ಹೀಗಿದೆ-
1980 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆದಾಗ ಡಾ ಸಿಂಗ್ ಮುಂಬಯಿಯಲ್ಲಿ ವಾಸಿಸಲು ಬರಬೇಕಾಗುತ್ತದೆ. ಅಲ್ಲಿನ ಸೆಕೆ, ಬೆವರು ಸಹಿಸಲು ಅವರಿಗೆ ಅಸಾಧ್ಯವಾಗುತ್ತದೆ. ಒಂದು ಪಾರ್ಟಿಯಲ್ಲಿ ಅವರು ಇದನ್ನು ಮೆಲುದನಿಯಲ್ಲಿ ಹೇಳಿಕೊಳ್ಳುತ್ತಾರೆ ಕೂಡಾ. ಇದು ಅಲ್ಲೇ ಇದ್ದ ಒಬ್ಬ ಏರ್ ಕಂಡೀಷನರ್ ಕಂಪೆನಿಯ ಸಿಇಒ ಕಿವಿಗೆ ಬೀಳುತ್ತದೆ.
ಮಾರನೇ ದಿನ ಡಾ. ಸಿಂಗ್ ಬಲ್ಲಾರ್ಡ್ ಎಸ್ಟೇಟ್ ನ ತಮ್ಮ ಕಚೇರಿಯಲ್ಲಿದ್ದಾಗ, ಕೆಲವು ಸಿಬ್ಬಂದಿ ಅವರ ಮನೆಗೆ ಎಸಿ ಅಳವಡಿಸಿ ಹೋಗುತ್ತಾರೆ. ಡಾ ಸಿಂಗ್ ಮನೆಗೆ ಮರಳಿದಾಗ ಅವರಿಗೆ ಅಚ್ಚರಿಯಾಗುತ್ತದೆ. ತಾವು ಎಸಿಗೆ ಆರ್ಡರ್ ಕೊಟ್ಟಿರಲಿಲ್ಲವಲ್ಲ!. ಇದು ಹೇಗೆ ಬಂತು? ಮನೆಯವರ ಬಳಿ ಕೇಳಿದಾಗ ಯಾರಿಗೂ ಸರಿಯಾದ ಮಾಹಿತಿ ಇರಲಿಲ್ಲ. ಇದು ಕಚೇರಿಯಿಂದ ಬಂದಿರಬೇಕು ಎಂದು ಅವರೂ ಭಾವಿಸಿದ್ದರು.
ಡಾ. ಸಿಂಗ್ ಎಸಿ ಕಂಪೆನಿಗೆ ಫೋನ್ ಮಾಡಿದರು. ಆ ಎಸಿಯನ್ನು ಶುಭಾಶಯದೊಂದಿಗೆ ನಾವು ಕಳಿಸಿದ್ದು ಎಂದು ಆ ಕಂಪೆನಿಯ ಸಿಇಒ ಅವರ ಕಾರ್ಯದರ್ಶಿ ಹೇಳಿದರು. ಆದರೆ ಅದನ್ನು ಖರೀದಿಸುವಷ್ಟು ಹಣ ತನ್ನ ಬಳಿ ಇಲ್ಲ ಎಂದು ಸಿಂಗ್ ಹೇಳಿದರು. ಬೇಡ ಸರ್ ಅದು ಉಡುಗೊರೆ ಎಂದು ಕಾರ್ಯದರ್ಶಿ ಹೇಳಿದ. ಆದರೆ ನಾನು ಅದನ್ನು ಸ್ವೀಕರಿಸುವಂತಿಲ್ಲ, ದಯವಿಟ್ಟು ಅದನ್ನು ಒಯ್ಯಿರಿ ಎಂದು ಡಾ ಸಿಂಗ್ ಹೇಳಿದರು.
ಆಪತ್ಕಾಲದ ಗೆಳೆಯ
ಡಾ ಸಿಂಗ್ ತೀರಿಕೊಂಡಾಗ ಭಾವುಕ ಶ್ರದ್ಧಾಂಜಲಿ ಅರ್ಪಿಸಿದ ಮಲೇಶಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಇದುವರೆಗೆ ಯಾರಿಗೂ ಗೊತ್ತಿರದ ಒಂದು ಸಂಗತಿ ಬಹಿರಂಗಪಡಿಸುತ್ತಾರೆ. “ನಾನೂ, ಡಾ ಸಿಂಗ್ ಅವರೂ 1990 ರಲ್ಲಿ ನಮ್ಮ ನಮ್ಮ ದೇಶದ ವಿತ್ತ ಮಂತ್ರಿಗಳಾಗಿದ್ದೆವು. ಸಿಂಗ್ ಅವರ ನೇತೃತ್ವದಲ್ಲಿ ಇಂಡಿಯಾದಲ್ಲಿ ಆದ ಅಭೂತಪೂರ್ವ ಆರ್ಥಿಕ ಪರಿವರ್ತನೆಯನ್ನು ನಾನು ಕಣ್ಣಾರೆ ಕಂಡಿದ್ದೆ.
ಡಾ ಸಿಂಗ್ ಅವರು ರಾಜಕೀಯಕ್ಕೆ ಸಲ್ಲದ ವ್ಯಕ್ತಿ. ಆದರೆ ನೇರವಂತಿಕೆಯ ಮನುಷ್ಯ. ಮುತ್ಸದ್ದಿ. ಅವರು ಬಿಟ್ಟು ಹೋಗಿರುವ ಹೆಜ್ಜೆಗುರುತು ಮುಂದಿನ ತಲೆಮಾರು ತಲೆಮಾರುಗಳಿಗೆ ಸ್ಪೂರ್ತಿಯನ್ನು ನೀಡಲಿದೆ.
ಬಹಳ ಮಂದಿಗೆ ಗೊತ್ತಿರದ ಒಂದು ವಿಷಯ ಈ ಹೊತ್ತು ಹಂಚಿಕೊಳ್ಳ ಬಯಸುತ್ತೇನೆ. ನಾನು ಜೈಲಿನಲ್ಲಿದ್ದಾಗ ಅವರು ನನ್ನೆಡೆಗೆ ಕಾರುಣ್ಯದ ಹಸ್ತ ಚಾಚಿದರು. ಇದನ್ನು ಅವರು ಮಾಡಬೇಕಿರಲಿಲ್ಲ ಮತ್ತು ಆಗಿನ ಮಲೇಶಿಯಾ ಸರಕಾರಕ್ಕೆ ಅದು ಇಷ್ಟವೂ ಆಗಿರದು. ಆದರೆ ಸಿಂಗ್ ಅವರ ಜಾಯಮಾನವೇ ಹಾಗೆ. ಅವರು ನನ್ನ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡುವ ಪ್ರಸ್ತಾವ ಮುಂದಿಟ್ಟರು. ನಾನು ಅದನ್ನು ತಿರಸ್ಕರಿಸಿದೆನಾದರೂ, ಅಂತಹ ಒಂದು ನಡೆವಳಿಕೆ ಅವರ ಅಸಾಧಾರಣ ಮಾನವೀಯತೆ ಮತ್ತು ಔದಾರ್ಯವನ್ನು ತೋರಿಸುತ್ತದೆ.
ನಾನು ಜೈಲಿನಲ್ಲಿದ್ದ ಆ ದಿನಗಳಲ್ಲಿ ಒಬ್ಬ ನಿಜ ಗೆಳೆಯನಂತೆ ಡಾ ಸಿಂಗ್ ನನ್ನೊಡನೆ ನಿಂತರು. ಅಂತಹ ದೊಡ್ಡಗುಣವೇ ಅವರ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುತ್ತದೆ. ನನ್ನ ಹೃದಯದಲ್ಲಿ ಸದಾ ಅವರು ಅಚ್ಚಳಿಯದೆ ಉಳಿಯುತ್ತಾರೆ. ಗುಡ್ ಬೈ ನನ್ನ ಮಿತ್ರ, ನನ್ನ ಸಹೋದರ, ಮನಮೋಹನ್” ಎನ್ನುತ್ತಾರೆ ಅನ್ವರ್ ಇಬ್ರಾಹಿಂ.
ಜೆಎನ್ ಯು ಪ್ರಕರಣ
ಅಭಿನೇತ್ರಿ ಸ್ವರ ಭಾಸ್ಕರ್ ಮತ್ತು ಹೋರಾಟಗಾರ ಡಾ. ಉಮರ್ ಖಲೀದ್ ಒಂದು ಘಟನೆಯನ್ನು ನೆನಪಿಸುತ್ತಾರೆ. 2005 ರಲ್ಲಿ ಆಗಿನ ಪ್ರಧಾನಿ ಸಿಂಗ್ ಅವರು ಜೆ ಎನ್ ಯು ಗೆ ಭೇಟಿ ನೀಡಿದಾಗ ಸರಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸುತ್ತಾರೆ. ಎಡಪಕ್ಷದ ಒಂದಿಬ್ಬರು ವಿದ್ಯಾರ್ಥಿಗಳಂತೂ ಒಳಕ್ಕೆ ನುಗ್ಗಿ ಪ್ರಧಾನಿಯವರ ಕಾರ್ಯಕ್ರಮ ಹಾಳುಗೆಡಹುತ್ತಾರೆ. ಆದರೂ ಖಲೀದ್ ಹೇಳುವ ಪ್ರಕಾರ, ʼನಾನು ನಿಮ್ಮ ಮಾತನ್ನು ಒಪ್ಪದಿರಬಹುದು, ಆದರೆ ಆ ಮಾತನ್ನು ಆಡುವ ನಿಮ್ಮ ಹಕ್ಕನ್ನು ಜೀವ ಇರುವವರೆಗೂ ಸಮರ್ಥಿಸುವೆʼ ಎಂಬ ಮಾತಿನೊಂದಿಗೇ ಸಿಂಗ್ ಭಾಷಣ ಆರಂಭಿಸಿದರು.
ಮುಂದೆ ವಿವಿ ಆಡಳಿತದಿಂದ ವಿಚಾರಣೆ ನಡೆದು ಇಬ್ಬರು ವಿದ್ಯಾರ್ಥಿಗಳನ್ನು ಹೊರಹಾಕಲು ನಿರ್ಧರಿಸಲಾಗುತ್ತದೆ. ಇದನ್ನು ಅರಿತ ಪ್ರಧಾನಿ ಕಚೇರಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳನ್ನು ಹೊರಹಾಕಬೇಡಿ ಅವರು ತಮ್ಮದೇ ಆದ ಪ್ರಜಾತಾಂತ್ರಿಕ ಹಕ್ಕಿನ ಅಡಿಯಲ್ಲಿ ಪ್ರತಿಭಟಿಸಿದ್ದಾರೆ ಎಂದು ವಿನಂತಿಸಿಕೊಳ್ಳುತ್ತಾರೆ. ಪ್ರಧಾನಿಯ ಮಾತನ್ನು ವಿವಿ ಮಾನ್ಯ ಮಾಡುತ್ತದೆ.
ಲಾಭದ ಹಣ ಪ್ರಧಾನಿ ನಿಧಿಗೆ
ಅನಿರೀಕ್ಷಿತವಾಗಿ ತನಗೆ ಆದ ಹಣಕಾಸು ಲಾಭವನ್ನು ಡಾ ಸಿಂಗ್ ಅವರು ಪ್ರಧಾನಿ ಪರಿಹಾರ ನಿಧಿಗೆ ಅರ್ಪಿಸಿದ ಪ್ರಾಮಾಣಿಕತೆಯ ಕತೆಯನ್ನು ರಾಮು ದಾಮೋದರನ್ ಹೇಳುತ್ತಾರೆ. ರಾಮು ಅವರು ಆಗಿನ ಪ್ರಧಾನಿ ನರಸಿಂಹ ರಾವ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು.
“ನನ್ನ ಮತ್ತು ಡಾ ಮನಮೋಹನ ಸಿಂಗ್ ಅವರ ಮೊದಲ ಭೇಟಿ ಸಂಭವಿಸಿದ್ದು 1991 ರಲ್ಲಿ. ಪ್ರಧಾನಿ ನರಸಿಂಹರಾವ್ ಅವರ ಕಚೇರಿಯಲ್ಲಿ ನಾನು ಕೆಲಸಕ್ಕೆ ಸೇರಿದ ಮೊದಲ ದಿನ. ಕೆಲವು ದಿನಗಳ ಹಿಂದೆಯಷ್ಟೇ ರುಪಾಯಿಯ ಅಪಮೌಲ್ಯೀಕರಣ (ಡಿವಾಲ್ಯುಯೇಶನ್) ನಡೆದಿತ್ತು. ಡಾ ಸಿಂಗ್ ಅವರು ಪ್ರಧಾನಿಯ ರೇಸ್ ಕೋರ್ಸ್ ರಸ್ತೆ ಕಚೇರಿಗೆ ಬಂದು ಕಾರಿನಿಂದ ನೇರವಾಗಿ ನನ್ನ ಕೊಠಡಿಗೆ ಬಂದರು. ಅವರ ಕೈಯಲ್ಲಿ ಒಂದು ಸಣ್ಣ ಲಕೋಟೆ ಇತ್ತು. ಅದನ್ನು ಅವರು ನನಗೆ ಕೊಟ್ಟು, ಇದನ್ನು ದಯವಿಟ್ಟು ಪ್ರಧಾನಿಗಳ ಪರಿಹಾರ ನಿಧಿಗೆ ಜಮೆ ಮಾಡಿ ಎಂದರು.
ಅವರು ನಿರ್ಗಮಿಸಿದ ಬಳಿಕ ನಾನು ಆ ಲಕೋಟೆ ತೆರೆದು ನೋಡಿದೆ. ಅದರಲ್ಲಿ ಭಾರೀ ದೊಡ್ಡ ಮೊತ್ತದ ಚೆಕ್ ಇತ್ತು. ರುಪಾಯಿ ಅಪಮೌಲ್ಯದ ಕಾರಣವಾಗಿ ವಿದೇಶದ ನನ್ನ ಸಂಪತ್ತಿನಲ್ಲಿ ಆದ ಹೆಚ್ಚುವರಿ ಲಾಭಾಂಶ ಇದರಲ್ಲಿದೆ ಎಂದು ಒಂದು ಪುಟ್ಟ ಟಿಪ್ಪಣಿ ಕೂಡಾ ಜತೆಗಿತ್ತು!
ಸತ್ಯವಾದ ಭವಿಷ್ಯ ನುಡಿಗಳು
ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿ ನಡೆದ ಮನುಷ್ಯ ಸರ್ದಾರ್ ಮನಮೋಹನ್ ಸಿಂಗ್ ಪ್ರಶ್ನೆಗಳಿಗೆ ಯಾವತ್ತೂ ಹೆದರುತ್ತಿರಲಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಅವರು 117 ಕ್ಕೂ ಅಧಿಕ ಪತ್ರಿಕಾಗೋಷ್ಠಿಯನ್ನು ನಡೆಸಿ ಅತ್ಯಂತ ಮುಜುಗರಕ್ಕೀಡು ಮಾಡುವ ಪ್ರಶ್ನೆಗಳನ್ನೂ ಸಮಾಧಾನ ಚಿತ್ತದಿಂದ ಉತ್ತರಿಸಿದರು. ಇಂತಹ ಒಂದು ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ನ ಮನೀಶ್ ಚಿಬ್ಬರ್ “ನಿಮ್ಮನ್ನು ದುರ್ಬಲ ಪ್ರಧಾನಿ ಎನ್ನುತ್ತಾರಲ್ಲ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?” ಎಂದು ಕೇಳುತ್ತಾರೆ. ಅದಕ್ಕೆ ಡಾ ಸಿಂಗ್ “ನಾನು ದುರ್ಬಲನೋ ಅಲ್ಲವೋ ಎಂಬುದನ್ನು ಇತಿಹಾಸ ನಿರ್ಧರಿಸುತ್ತದೆ. ಆದರೆ ಅಹಮದಾಬಾದ್ ನ ಬೀದಿಯಲ್ಲಿ ನರಮೇಧದ ಉಸ್ತುವಾರಿ ನಡೆಸುವುದು ಬಲಿಷ್ಠತೆಯ ಸಂಕೇತವಾದರೆ ಅಂತಹ ಬಲಿಷ್ಠ ನಾಯಕತ್ವ ಈ ದೇಶಕ್ಕೆ ಬೇಕಾಗಿಲ್ಲ” ಎಂದು ಅವರು ನಿಷ್ಠುರವಾಗಿ ಹೇಳಿದರು.
ʼಒಂದು ವೇಳೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದರೆ ದೇಶದ ಪಾಲಿಗೆ ಅದು ಒಂದು ಮಹಾ ವಿಪತ್ತು ಎನಿಸಲಿದೆʼ ಎಂದು ಅವರು ಹೇಳಿದ್ದರು. ನನ್ನ ಬಗ್ಗೆ ಈಗಿನ ಮಾಧ್ಯಮಗಳು ಕಾರುಣ್ಯ ಮಯಿಯಾಗಿರದಿರಬಹುದು, ಇತಿಹಾಸ ಕಾರುಣ್ಯಮಯಿಯಾಗಿರಲಿದೆ ಎಂದಿದ್ದರು. ನರೇಂದ್ರ ಮೋದಿಯವರು ನೋಟು ನಿಷೇಧ ಮಾಡಿದಾಗ ʼಇದು ಸಂಘಟಿತ ಲೂಟಿ ಮತ್ತು ಕಾನೂನು ಬದ್ದ ದರೋಡೆʼ ಎಂದರು. ಅವರು ಹೇಳಿದ್ದೆಲ್ಲವೂ ನಿಜಗೊಂಡುದಕ್ಕೆ ದೇಶವೇ ಸಾಕ್ಷಿಯಾಗಿದೆ.
ಸಾಮಾಜಿಕ ನ್ಯಾಯ, ಸೆಕ್ಯುಲರಿಸಂ, ಪ್ರಜಾತಾಂತ್ರಿಕ ಮೌಲ್ಯಗಳ ಅಚಲ ಬದ್ಧತೆಯ ಕಾರಣವಾಗಿಯೇ ಅವರ ಕಾಲದಲ್ಲಿ ಉದ್ಯೋಗ ಭದ್ರತೆ (ನರೇಗಾ), ಆಹಾರ ಭದ್ರತೆ, ಮಾಹಿತಿ ಹಕ್ಕು (ಆರ್ ಟಿ ಐ), ಶಿಕ್ಷಣ ಹಕ್ಕು (ಆರ್ ಟಿ ಇ) ಇತ್ಯಾದಿಗಳಿಗೆ ಸಂಬಂಧಿಸಿದ ಚಾರಿತ್ರಿಕ ಕಾರ್ಯಕ್ರಮಗಳು, ಕಾನೂನುಗಳು ಜಾರಿಗೆ ಬಂದವು.
ಯಾರೇ ಆಗಲೀ ಅವರು ದೊಡ್ಡವರು ಎನಿಸಿಕೊಳ್ಳುವುದು ತಮ್ಮ ದೊಡ್ಡ ದೊಡ್ಡ ಸಾಧನೆಗಳು ಮತ್ತು ಸ್ಥಾನಮಾನಗಳಿಂದಲ್ಲ. ತಮ್ಮ ದೊಡ್ಡ ಗುಣಗಳಿಂದ. ದೇಶ ನಡೆಸುವುದಕ್ಕೆ ಮುಖ್ಯವಾಗಿ ಬೇಕಿರುವುದು ಭಾರೀ ಮೇಧಾವಿತನದ ದೊಡ್ಡ ಮಿದುಳಲ್ಲ. ಕಾರುಣ್ಯದ ಒಂದು ಪುಟ್ಟ ಆರ್ದ್ರ ಹೃದಯ. ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ, ಆರ್ ಬಿ ಐ ಗವರ್ನರ್, ಹಣಕಾಸು ಮಂತ್ರಿ, ಪ್ರಧಾನಿ ಇವೆಲ್ಲವುಗಳಾಚೆಗೆ ವಿನಯ, ಸರಳತೆ, ವೈಯಕ್ತಿಕ ಪ್ರಾಮಾಣಿಕತೆ ಇತ್ಯಾದಿ ಮಾನವೀಯ ಗುಣಗಳ ಒಬ್ಬ ಅಪ್ಪಟ ಮನುಷ್ಯ ಸರ್ದಾರ್ ಮನಮೋಹನ ಸಿಂಗ್ ಅವರೊಳಗಿದ್ದ. ದೇಶದ ನಾಯಕತ್ವ ವಹಿಸಿಕೊಳ್ಳುವವರು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದರು ಅವರು. ಈ ಗುಣಗಳು ಈಗ ದೇಶದ ಚುಕ್ಕಾಣಿ ಹಿಡಿದವರಲ್ಲಿ ಇದೆಯೇ ಎಂದು ಹುಡುಕಿ ನೋಡಿ. ಆಗ ನಿಮಗೆ ಅನೇಕ ಕಟು ಸತ್ಯಗಳು ಗೋಚರಿಸಿಯಾವು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ – ನುಡಿ ನಮನ | ಡಾ.ಮನಮೋಹನ್ ಸಿಂಗ್ ಎನ್ನುವ ‘ರಾಜ’ ಕಾರಣ