Saturday, July 27, 2024

ಹಾಸನ ಜಿಲ್ಲೆಯಲ್ಲಿ ಕಾಡಾನೆಗೆ ಮತ್ತೊಂದು ಬಲಿ

Most read

ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರ್ಮಿಕ ವಸಂತ್ (45)  ಕಾಡಾನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ನಡೆದಿದೆ. ನಿರಂತರವಾಗಿ ಆನೆ ದಾಳಿಗಳಿಗೆ ಜನರು ಬಲಿಯಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಶವವನ್ನು ಸ್ಥಳದಿಂದ ಮೇಲೆತ್ತಲು ಬಿಡುವುದಿಲ್ಲ ಎಂದು ಅಲ್ಲಿನ ಸ್ಥಳಿಯ ಜನರು ಧರಣಿ ಆರಂಭಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಜನರಿಗೆ ಸಮಸ್ಯೆಯಾಗಿದ್ದ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿದ್ದ. ಇದಾಗಿ ಒಂದು ತಿಂಗಳಿಗೆ ಸರಿಯಾಗಿ ಒಂಟಿ ಸಲಗದ ದಾಳಿಗೆ ಅಮಾಯಕ ಕಾರ್ಮಿಕನೋರ್ವ ಬಲಿಯಾಗಿದ್ದಾನೆ.

ಗುರುವಾರ ಸಂಜೆ ಕೆಲಸ ಮುಗಿಸಿ ತನ್ನ ಗೆಳೆಯನ ಜೊತೆ ವಾಪಸ್ಸಾಗುವ ವೇಳೆ ಧಿಡೀರನೆ ಕಾಣಿಸಿಕೊಂಡ ಒಂಟಿ ಸಲಗ ವಸಂತ್ ಅವರ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಸ್ನೇಹಿತ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಂಜೆ ಸುಮಾರು 6-30ರ ವೇಳೆಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆಯ ಯಾವ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮೃತದೇಹ ಮೇಲೆತ್ತಲು ಸ್ಥಳೀಯರು ಬಿಡದೆ ಅಹೋರಾತ್ರಿ ಪ್ರತಿಭಟನೆ ಶುರುಮಾಡಿದ್ದರು.

ಹಾಸನ ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಕಾಫಿತೋಟ, ಗ್ರಾಮ, ಭತ್ತ ಗದ್ದೆಗಳಲ್ಲಿ ಓಡಾಡುತ್ತಾ ಬೆಳೆ ಹಾನಿ ಜೊತೆಗೆ ಜೀವ ಹಾನಿಯನ್ನೂ ಮಾಡುತ್ತಿವೆ. ಇದರಿಂದ ಪ್ರಾಣಿ ಮಾನವ ಸಂಘರ್ಷ ಅತೀ ಹೆಚ್ಚಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಕಳೆದ 20 ವರ್ಷಗಳಲ್ಲಿ ಜಿಲ್ಲೆಯಲ್ಲಿ 80ಕ್ಕೂಹೆಚ್ಚು ಜನರು ಕಾಡಾನೆಗಳ ದಾಳಿಗೆ ಬಲಿಯಾಗಿದ್ದರೆ.

More articles

Latest article