ಪೊಲೀಸ್ ಕಮಿಷನರ್ ಜೊತೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದು ಆರ್.ಎಸ್.ಎಸ್ ನ ಸಮರಸತಾ ಸಂಗಮ ಕಾರ್ಯಕ್ರಮಕ್ಕಲ್ಲ ; ಬದಲಾಗಿ ಆರ್.ಎಸ್.ಎಸ್ ನ ಸಮರಸತಾ ಸಂಗಮ ಕಾರ್ಯಕ್ರಮಕ್ಕಾಗಿ ಸಿದ್ಧಗೊಳ್ಳುತ್ತಿದ್ದ ಮೈದಾನಕ್ಕೆ ! ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದ್ದ ಮೈದಾನಕ್ಕೆ ಭೇಟಿ ನೀಡಿದ್ದನ್ನೇ ‘ಕಾರ್ಯಕ್ರಮಕ್ಕೆ ಭೇಟಿ’ ಎಂದು ತಿರುಚಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆಯವರು ಆರ್.ಎಸ್.ಎಸ್ ಮತ್ತು ಹಿಂದುತ್ವ ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ರಾಜಕಾರಣಿಗಳು. ಕಾಂಗ್ರೆಸ್ ಮತ್ತು ಪ್ರಜ್ಞಾವಂತ ವಲಯ ಪ್ರಿಯಾಂಕ್ ಖರ್ಗೆ ಜೊತೆ ನಿಲ್ಲಬೇಕಿದೆ – ನವೀನ್ ಸೂರಿಂಜೆ, ಪತ್ರಕರ್ತರು
ಮಲ್ಲಿಕಾರ್ಜುನ ಖರ್ಗೆಯವರು 2002 ರ ಜನವರಿ ತಿಂಗಳಲ್ಲಿ, ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ “ಸಮರಸತಾ ಸಂಗಮ ” ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಕ್ಕೆ ಭೇಟಿ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಜವೇ ? ಸಚಿವ ಪ್ರಿಯಾಂಕ್ ಖರ್ಗೆಯವರು ‘ಆರ್ ಎಸ್ ಎಸ್ ನ ಪ್ರಚೋದನಕಾರಿ ಪಥಸಂಚಲನವನ್ನು ಶಾಲಾ ಕಾಲೇಜು, ದೇವಸ್ಥಾನ, ಸರ್ಕಾರಿ ಸ್ಥಳಗಳಲ್ಲಿ ನಿರ್ಬಂಧಿಸಿ’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದಂತೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ‘ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ ಸಮರಸತಾ ಸಂಗಮ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರಕ್ಕೆ ಭೇಟಿ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು 2002 ರ ಚಿತ್ರ ಸಮೇತ ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಆ ಬಳಿಕ ಆ ಫೋಟೋ ವೈರಲ್ ಆಗಿತ್ತು.
ವಾಸ್ತವವಾಗಿ 2002 ರಲ್ಲಿ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಆರ್.ಎಸ್.ಎಸ್ ನ ‘ಸಮರಸತಾ ಸಂಗಮ’ ಕಾರ್ಯಕ್ರಮಕ್ಕೆ ಭೇಟಿ ನೀಡಿರಲಿಲ್ಲ. 2002 ಜನವರಿ 24, 25, 26 ರಂದು ಬೆಂಗಳೂರಿನ ನಾಗವಾರದಲ್ಲಿ ಆರ್.ಎಸ್.ಎಸ್ ಸಮರಸತಾ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಾವಿರಾರು ಗಣವೇಷಧಾರಿಗಳು ಭಾಗವಹಿಸುವ ಈ ಕಾರ್ಯಕ್ರಮ ವಿವಾದ ಎಬ್ಬಿಸಿತ್ತು.
2001 ಡಿಸೆಂಬರ್ ತಿಂಗಳು ಇಡೀ ಕರ್ನಾಟಕ ರಾಜ್ಯ ಕೋಮುಸೂಕ್ಷ್ಮವಾಗಿ ಪರಿವರ್ತನೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆದಿದ್ದವು. ಈ ಕೋಮುಗಲಭೆ ಇಡೀ ರಾಜ್ಯಕ್ಕೆ ಪಸರಿಸುವ ಸಾಧ್ಯತೆಗಳಿದ್ದವು. ಇದೇ ಅವಧಿಯಲ್ಲಿ ಮುಸ್ಲಿಂ ಸಂಘಟನೆಯಾದ ಕೆಎಫ್‌ಡಿ ಕರ್ನಾಟಕದಲ್ಲಿ ಸ್ಥಾಪನೆಯಾಯಿತು. ಇದಾಗಿ ಕೇವಲ ಒಂದೇ ತಿಂಗಳಲ್ಲಿ ದೇಶದಾದ್ಯಂತ ಇರುವ ಆರ್.ಎಸ್.ಎಸ್ ಕಾರ್ಯಕರ್ತರು ಭಾಗವಹಿಸುವ ‘ಸಮರಸತಾ ಸಂಗಮ’ ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಯಿತು.
ಸಮರಸತಾ ಸಂಗಮ ಎಂಬ ಆರ್.ಎಸ್.ಎಸ್ ಕಾರ್ಯಕ್ರಮ ನಡೆಯುವ ಮತ್ತು ಮೆರವಣಿಗೆ ಹೊರಡುವ ಪ್ರದೇಶಗಳು ಆಗಿನ ಭಾರತೀನಗರ ವಿಧಾನಸಭಾ ಕ್ಷೇತ್ರ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಆಗ ಭಾರತೀ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆ ಅಲೆಕ್ಸಾಂಡರ್ ಎಂಬ ಕಾಂಗ್ರೆಸ್ ಶಾಸಕರೂ, ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸನ್ನ ಕುಮಾರ್ ಎಂಬ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿದ್ದರು. ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗಲಭೆ ಎಬ್ಬಿಸುವ ಹುನ್ನಾರವನ್ನು ಆರ್.ಎಸ್.ಎಸ್ ಸಮರಸತಾ ಸಂಗಮದ ಮೆರವಣಿಗೆ ಹೊಂದಿತ್ತು. ಈ ಬಗ್ಗೆ ಗುಪ್ತಚರ ಮಾಹಿತಿ ಪಡೆದುಕೊಂಡ ಮಲ್ಲಿಕಾರ್ಜುನ ಖರ್ಗೆಯವರು ಆರ್.ಎಸ್.ಎಸ್ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಆರ್.ಎಸ್.ಎಸ್ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಎಚ್ ಟಿ ಸಾಂಗ್ಲಿಯಾನ ಜೊತೆ ಭೇಟಿ ನೀಡಿದ್ದರು.
ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಗೃಹ ಸಚಿವರಾಗಿ ಅವರ ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಕಮಿಷನರ್ ಜೊತೆ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದು ಆರ್.ಎಸ್.ಎಸ್ ನ ಸಮರಸತಾ ಸಂಗಮ ಕಾರ್ಯಕ್ರಮಕ್ಕಲ್ಲ ; ಬದಲಾಗಿ ಆರ್.ಎಸ್.ಎಸ್ ನ ಸಮರಸತಾ ಸಂಗಮ ಕಾರ್ಯಕ್ರಮಕ್ಕಾಗಿ ಸಿದ್ಧಗೊಳ್ಳುತ್ತಿದ್ದ ಮೈದಾನಕ್ಕೆ ! . ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದ್ದ ಮೈದಾನಕ್ಕೆ ಭೇಟಿ ನೀಡಿದ್ದನ್ನೇ ‘ಕಾರ್ಯಕ್ರಮಕ್ಕೆ ಭೇಟಿ’ ಎಂದು ತಿರುಚಲಾಗಿದೆ. ಆರ್.ಎಸ್.ಎಸ್ ಸಮರಸತಾ ಸಂಗಮ ಕಾರ್ಯಕ್ರಮ ನಡೆದಿದ್ದು 2002 ಜನವರಿ 24, 25, 26 ರಂದು. ಮಲ್ಲಿಕಾರ್ಜುನ ಖರ್ಗೆಯವರು ಗೃಹ ಸಚಿವರಾಗಿ ಸಮರಸತಾ ಸಂಗಮಕ್ಕೆ ಭೇಟಿ ನೀಡಿದ್ದು ಜನವರಿ 20 ರಂದು !
2002 ಜನವರಿ 26 ರಂದು ಸಾವಿರಾರು ಆರ್.ಎಸ್.ಎಸ್ ಸ್ವಯಂಸೇವಕರು ಸಮರಸತಾ ಸಂಗಮದಲ್ಲಿ ಭಾಗವಹಿಸಲಿದ್ದರು. ಮೆರವಣಿಗೆಯು ಸಂಜೆ 4 ಗಂಟೆಗೆ ಯಲಹಂಕದಿಂದ ಪ್ರಾರಂಭವಾಗಿ, ಗಂಗಾನಗರ, ಆರ್‌ಟಿ ನಗರ, ಜಕ್ಕರಾಯನಕೆರೆ, ಕಾಡುಗೋಡನಹಳ್ಳಿ, ವೈಯಾಲಿಕಾವಲ್ ಆಟದ ಮೈದಾನಗಳ ಮೂಲಕ ಹಾದು ಪಾಟರಿ ರಸ್ತೆಯಲ್ಲಿ ಕೊನೆಗೊಳ್ಳಲಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಕೇವಲ ಮೈದಾನ ವೀಕ್ಷಿಸದೇ ಮೆರವಣಿಗೆ ನಡೆಯುವ ಎಲ್ಲಾ ರಸ್ತೆ, ಪ್ರದೇಶಗಳನ್ನು ವೀಕ್ಷಿಸಿ ಆಯಾ ಠಾಣೆಯ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುತ್ತಾರೆ.
ಆರ್.ಎಸ್.ಎಸ್ ಪಥಸಂಚಲನದ ಬಳಿಕ ಬೆಂಗಳೂರಿನಲ್ಲಿ ಗಲಭೆ ಆಗುತ್ತದೆ ಎಂಬ ಮಾಹಿತಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗಿತ್ತು. ಹಾಗಾಗಿ ಅವರು ಅದನ್ನು ತಡೆಯಲು ಶತಪ್ರಯತ್ನ ಮಾಡಿ ಸಫಲರಾಗುತ್ತಾರೆ. ಆರ್ ಎಸ್ ಎಸ್ ಸಮರಸತಾ ಸಂಗಮದ ಮೂರೂ ದಿನ ಕೋಮುಗಲಭೆಗಳು ನಡೆಯಲಿಲ್ಲ. ಆದರೆ 2002 ಜೂನ್ ತಿಂಗಳಲ್ಲಿ ಬೆಂಗಳೂರಿನ ತಿಲಕ್ ನಗರದಲ್ಲಿ ಕೋಮುಗಲಭೆ ನಡೆಯಿತು. ಅದಕ್ಕೆ ಆರ್.ಎಸ್.ಎಸ್ ಪ್ರಚೋದನೆ ಇತ್ತು ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮತ್ತು ಹಿಂದುತ್ವ ಕಾರ್ಯಕರ್ತರು ಹಲವು ಸುಳ್ಳುಗಳ ಅಪಪ್ರಚಾರ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆಯವರು ಆರ್.ಎಸ್.ಎಸ್ ಮತ್ತು ಹಿಂದುತ್ವ ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ರಾಜಕಾರಣಿಗಳು. ಕಾಂಗ್ರೆಸ್ ಮತ್ತು ಪ್ರಜ್ಞಾವಂತ ವಲಯ ಪ್ರಿಯಾಂಕ್ ಖರ್ಗೆ ಜೊತೆ ನಿಲ್ಲಬೇಕಿದೆ.
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧಕ್ಕೆ ಪ್ರಿಯಾಂಕ್ ಖರ್ಗೆ ಪತ್ರ; ಕ್ರಮಕ್ಕೆ ಸಿಎಂ ಸೂಚನೆ