ಮಹದೇವಪುರ ವಲಯದಲ್ಲಿ ಸಕ್ರಿಯಗೊಂಡ ರಸ್ತೆ ಗುಂಡಿ ಮುಚ್ಚುವ ಕಾರ್ಯ

Most read

ಮಹದೇಪುರ ವಲಯ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆಯೆಂದು ವಲಯ ಆಯುಕ್ತರಾದ ಶ್ರೀ ರಮೇಶ್, ಐ.ಎ.ಎಸ್ ರವರು ತಿಳಿಸಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಐಟಿಪಿಎಲ್ ರಸ್ತೆ ದೊಡ್ಡನೆಕುಂದಿ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆ ಕತ್ತರಿಸಿರುವ ಭಾಗದಲ್ಲಿ ಕೆಲಸ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಇಲಾಖೆಯಿಂದಲೇ ದುರಸ್ತಿ ಕಾರ್ಯ ಮಾಡಬೇಕಿರುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಕತ್ತರಿಸುವ ಕಡೆ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಸದರಿ ಇಲಾಖೆಯಿಂದಲೇ ದುರಸ್ತಿ ಕಾರ್ಯ ಮಾಡಬೇಕಿದ್ದು, ಈ ರಸ್ತೆ ದುರಸ್ತಿ ಕಾರ್ಯ ಮಾಡಿಸಲಾಗುತ್ತಿದೆ ಎಂದು ಹೇಳಿದರು.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಗಮನ ಹಾಗೂ ಸಹಾಯ ತಂತ್ರಾಂಶದಲ್ಲಿ ಬಂದಂತಹ ದೂರುಗಳಿಗೆ ಸಂಬಂಧಿಸಿದಂತೆ ಬಹುತೇಕ ದೂರುಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಅದಲ್ಲದೆ ಇಂಜಿನಿಯರ್ ಗಳು ಕೂಡಾ ರಸ್ತೆಗಳನ್ನು ಪರಿಶೀಲಿಸಿ ರಸ್ತೆ ಗುಂಡಿಗಳನ್ನು ಗುರುತಿಸಿ ಅದನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ ರವರು ಮಾತನಾಡಿ, ಮಹದೇವಪುರ ವಲಯವು ಹೆಚ್ಚು ಕೈಗಾರಿಕಾ/ಖಾಸಗಿ ಸಂಸ್ಥೆಗಳನ್ನು ಹೊಂದಿರುವ ವಲಯವಾಗಿದ್ದು, ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಪ್ರದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಎಲ್ಲಿಯೂ ಗುಂಡಿಗಳಿರದಂತೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

436 ಕಿ.ಮೀ ರಸ್ತೆಗೆ ಡಾಂಬರೀಕರಣ:

ಮಹದೇವಪುರ ವ್ಯಾಪ್ತಿಯಲ್ಲಿ ಬರುವ 2136.91 ಕಿ.ಮೀ ಉದ್ದದ ರಸ್ತೆಯ ಪೈಕಿ 436.2 ಕಿ.ಮೀ ಉದ್ದದ 4348 ರಸ್ತೆಗಳಲ್ಲಿ ಮೇಲ್ಮೈ ಪದರ ಹಾಳಾಗಿದ್ದು, ಮರು ಡಾಂಬರೀಕರಣ ಮಾಡಬೇಕಿದೆ. ಈ ಸಂಬಂಧ ಕೆಲ ರಸ್ತೆಗಳಲ್ಲಿ ಡಾಂಬರೀಕರಣ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಾಂಬರೀಕರಣ ಕೈಗೊಳ್ಳಬೇಕಿರುವ ರಸ್ತೆಗಳನ್ನು ಹಂತ-ಹಂತವಾಗಿ ಕೈಗೆತ್ತಿಕೊಂಡು ಡಾಂಬರೀಕರಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದೆಂದು ಮುಖ್ಯ ಅಭಿಯಂತರರಾದ ಲೋಕೇಶ್ ರವರು ತಿಳಿಸಿದರು.

42 ಹಳ್ಳಿಗಳ ಬಾಕಿ 150 ಕಿ.ಮೀ ರಸ್ತೆಗಳ ಅಭಿವರದ್ಧಿ:

ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 110 ಹಳ್ಳಿಗಳ ಪೈಕಿ ಮಹದೇವಪುರ ವಲಯ ವ್ಯಾಪ್ತಿಗೆ 42 ಹಳ್ಳಿಗಳು ಬರಲಿದ್ದು, 748.68 ಕಿ.ಮೀ ಉದ್ದದ ರಸ್ತೆಗಳು ಬರಲಿವೆ. ಈ ಪೈಕಿ ಈಗಾಗಲೇ 598.68 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಿದ್ದು, ಬಾಕಿ 150 ಕಿ.ಮೀ ಉದ್ದದ ರಸ್ತೆ ಅಭಿವರದ್ಧಿಯಾಗಬೇಕಿದೆ.

ಮಹದೇವಪುರ ವಲಯದ ಪ್ರಮುಖ ಅಂಶಗಳು:

  • ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 2
  • ವಾರ್ಡ್ ಗಳ ಸಂಖ್ಯೆ: 22
  • ವಾರ್ಡ್ ರಸ್ತೆಗಳ ಸಂಖ್ಯೆ: 13759
  • ವಾರ್ಡ್ ರಸ್ತೆಗಳ ಉದ್ದ: 1896.8 ಕಿ.ಮೀ
  • ಪ್ರಮುಖ ರಸ್ತೆಗಳ ಸಂಖ್ಯೆ: 72
  • ಪ್ರಮುಖ ರಸ್ತೆಗಳ ಉದ್ದ: 240.11 ಕಿ.ಮೀ
  • ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 2136 .91 ಕಿ.ಮೀ

ಈ ವೇಳೆ ಕಾರ್ಯಪಾಲಕ ಅಭಿಯಂತರರಾದ ಉದಯ್ ಚೌಗುಲೆ, ರವಿ ಕುಮಾರ್, ಸಹಾಯ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

More articles

Latest article