ಕೇಂದ್ರ ವನ್ಯಜೀವಿ ಮಂಡಳಿಯಿಂದ ʼಮಹದಾಯಿ, ಕಳಸಾ- ಬಂಡೂರಿʼ ಅನುಮತಿ ತಿರಸ್ಕಾರ: ಸರ್ವಪಕ್ಷ ಸಭೆ ಕರೆಯಲು ಸಿಎಂಗೆ ಕೋನರೆಡ್ಡಿ ಪತ್ರ

Most read

 ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯವರು ಪ್ರಸ್ತಾವನೆ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕೆಂದು ನವಲಗುಂದ ಶಾಸಕ ಎನ್. ಹೆಚ್. ಕೋನರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಕೋನರೆಡ್ಡಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಮಹದಾಯಿ ನ್ಯಾಯಾಧೀಕರಣ ಐ-ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರನ್ನು ಉಪಯೋಗಿಸಲು ಆದೇಶ ನೀಡಿದ ನಂತರ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರದ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಅನುಮೋದನೆ ನೀಡದೇ, ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಇದಲ್ಲದೇ, ರಾಜ್ಯದಿಂದ ಪ್ರಸ್ತಾವನೆಯೇ ಇಲ್ಲದ ಗೋವಾ-ತಮ್ನಾರ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿ, ಉತ್ತರ ಕರ್ನಾಟಕದ ಬಹುದಿನದ ಬೇಡಿಕೆ ಮಹದಾಯಿ, ಕಳಸಾ-ಬಂಡೂರಿ ಜಾರಿ ಮಾಡಲು ಕೇಂದ್ರದ ವನ್ಯಜೀವಿ ಮಂಡಳಿ ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೆಂದರೆ ಮಹದಾಯಿ ಯೋಜನೆ. ಇಲ್ಲಿನ ನೀರನ್ನು ಮಲಪ್ರಭಾ ನದಿಗೆ ಸೇರಿಸಿದರೆ 4 ಜಿಲ್ಲೆ 13 ತಾಲೂಕಿನ ನಗರ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಈಗಾಗಲೇ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಆದರೆ, ಇತ್ತೀಚೆಗೆ ವನ್ಯಜೀವಿ ಮಂಡಳಿ ತಿರಸ್ಕರಿಸಿದ ನಂತರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಅನುಮತಿ ಪಡೆಯಲು ಕೂಡಲೇ ಸರ್ವಪಕ್ಷದ ಸಭೆ ಕರೆಯಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಶಾಸಕ ಕೋನರೆಡ್ಡಿ ಮನವಿ ಮಾಡಿದ್ದಾರೆ.

More articles

Latest article