ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಬೇಕೆಂದು ಮೈಸೂರು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋಲು ಕಂಡ ಎಂ ಲಕ್ಷ್ಮಣ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ ಅನ್ನಿಸುತ್ತೆ ಅದಕ್ಕೆ ನಮಗೆ ಬೆಂಬಲ ನೀಡಿಲ್ಲ. ಸದಾ ಗ್ಯಾರಂಟಿ ವಿರುದ್ಧ ಮಾತನಾಡುತ್ತಿರುವ ಬಿಜೆಪಿಗೆ (BJP) ಮತ ಹಾಕಿ ಗೆಲ್ಲಿಸಿದ್ದಾರೆ. ಇದರ ಅರ್ಥ ಅವರಿಗೆ ಗ್ಯಾರಂಟಿ ಯೋಜನೆ ಇಷ್ಟವಿಲ್ಲ ಎಂದರ್ಥ. ಹಾಗಾಗಿ ಈ ಗ್ಯಾರಂಟಿ ಯೋಜನೆಯನ್ನ ನಿಲ್ಲಿಸಬೇಕೆಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಣ್, ಚುನಾವಣೆಯಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಮತ ಹಾಕಿ ಜನರು ಗ್ಯಾರಂಟಿ ಇಷ್ಟವಿಲ್ಲವೆಂದು ಫಲಿತಾಂಶ ಮೂಲಕ ತೋರಿಸಿದ್ದಾರೆ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡ್ತಿದ್ರೂ ಜನ ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಾ ಅರ್ಥ ಅಲ್ವಾ? ಈ ಬಗ್ಗೆ ಸಿಎಂ ಮರು ಪರಿಶೀಲನೆ ಮಾಡಬೇಕು ನಾನು ಮನವಿ ಮಾಡಿತ್ತೇನೆ ಎಂದರು.
ಫ್ರೀ ಬಸ್, 2000 ರೂಪಾಯಿ, ಉಚಿತ ಕರೆಂಟ್ ಇವೆಲ್ಲವನ್ನ ಶೇ 70 ರಷ್ಟು ಮೇಲ್ಜಾತಿಯವರೇ ತೆಗೆದುಕೊಳ್ಳುತ್ತಿದ್ದಾರೆ. 25 ಸಾವಿರ ಸಂಪಾದಿಸುವವರು, 25 ಲಕ್ಷದ ಕಾರು ಇಟ್ಟಿಕೊಂಡಿರುವವರು ಇವೆಲ್ಲಾ ಯೋಜನೆಯನ್ನ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಇವೆಲ್ಲಾ ಯೋಜನೆಗಳನ್ನು ಕಟ್ ಮಾಡಿ, ಅಭಿವೃದ್ಧಿ ಯೋಜನೆಗಳಿಗೆ ಹಣ ಕೊಡಿ ಎಂದು ಕೇಳಿಕೊಳ್ಳುತ್ತಿದ್ದರು. ಇದೀಗ ಜನರು ಮತದಾನದ ಮೂಲಕ ಅವರಿಗೆ ಬೆಂಬಲ ಕೊಟ್ಟಿದ್ದಾರೆ. ಹಾಗಾಗಿ ಗ್ಯಾರಂಟಿ ಯೋಜನೆಯನ್ನ ಮರು ಪರಿಶೀಲನೆ ಮಾಡುವ ಅಗತ್ಯವಿದೆ. ಜನರಿಗೆ ಇಷ್ಟವಿಲ್ಲ, ಅಂತಹ ಯೋಜನೆಗಳನ್ನುಕೊಡಬೇಡಿ ಎಂದು ನಮಗೆ ಮತದಾರರು ತಮ್ಮ ಮತದಾನದ ಮೂಲಕ ತಿಳಿಸಿದ್ದಾರೆ. ಹಾಗಾಗಿ ಸಿಎಂ ಈ ಬಗ್ಗೆ ಗಮನ ಹರಿಸಬೇಕೆಂದು ತಿಳಿಸಿದ್ದಾರೆ.
ಈ ಯೋಜನೆಗಳನ್ನು ಅಗತ್ಯವಿದ್ದವರಿಗೆ ಕೊಡಿ, ಮೇಲ್ಜಾತಿಯವರಿಗೆ ಕೊಡಬೇಡಿ. ಅವರು ತಮ್ಮ ಮತದ ಮೂಲಕ ನಮಗೆ ಕಾಂಗ್ರೆಸ್ ಗ್ಯಾರಂಟಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ.