ಪ್ರಧಾನಿ ಮೋದಿ ರಾಜೀನಾಮೆ ನೀಡಿ ಆರ್‌ಎಸ್‌ಎಸ್‌ ಪ್ರಚಾರ ಪ್ರಮುಖ್ ಜವಾಬ್ದಾರಿ ವಹಿಸಿಕೊಳ್ಳಲಿ: ಬಿಕೆ ಹರಿಪ್ರಸಾದ್‌ ವಾಗ್ದಾಳಿ

Most read

ಬೆಂಗಳೂರು: ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಆರ್‌ಎಸ್‌ಎಸ್‌ ಸಂಘಟನೆಯ ಪ್ರಚಾರ ಪ್ರಮುಖ್ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಕಾಂಗ್ರೆಸ್‌ ಮುಖಂಡ ಮೇಲ್ಮನೆ ಸದಸ್ಯ ಬಿ ಕೆ ಹರಿಪ್ರಸಾದ್‌ ಟೀಕಿಸಿದ್ದಾರೆ.

ಎಕ್ಸ್‌ ಮೂಲಕ ಅವರು , ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂರು ವರ್ಷದ ನೆನಪಿಗೆ ಅಂಚೆ ಚೀಟಿ ಹಾಗೂ ನಾಣ್ಯ ಬಿಡುಗಡೆ ಮಾಡಿರುವುದು ಸಂವಿಧಾನಕ್ಕೆ ಬಗೆದ  ದ್ರೋಹ ಹಾಗೂ ಇತಿಹಾಸಕ್ಕೆ ಮಾಡಿದ ಅಪಚಾರ.

ಸ್ವತಂತ್ರ ಚಳುವಳಿಯ ವಿರೋಧಿಯಾಗಿದ್ದ  ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ನೂರುವರ್ಷದಿಂದಲೂ ಸಕ್ರೀಯವಾಗಿ ತೊಡಗಿಸಿಕೊಂಡಿದೆ. ದೇಶದ ಸೌಹಾರ್ದತೆ, ಐಕ್ಯತೆ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಆಶಯಗಳಿಗೆ ಸಂಘಪರಿವಾರ ಮಾಡಿರುವ ಗಾಯಗಳಿಗೆ ಲೆಕ್ಕವಿಲ್ಲ. ಭಾರತದ ಸಂವಿಧಾನದ ಬದಲು ಮನಸ್ಮೃತಿಯನ್ನು ಜಾರಿ ಮಾಡಲು ಹೊರಟಿರುವ ಮನುವಾದಿ ಸಂಘಟನೆಯನ್ನು ಪ್ರಧಾನಿ ಹುದ್ದೆಯಲ್ಲಿದ್ದು ಪ್ರಚಾರ ನಡೆಸುವುದು ಅಕ್ಷಮ್ಯ.

ಕೋಮುದ್ವೇಷ,ಕೊಲೆ,ಪಿತೂರಿ,ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಿರುವ ಸಂಘಟನೆಯ ಶತಮಾನೋತ್ಸದಲ್ಲಿ ಅಂಚೆ ಹಾಗೂ ನಾಣ್ಯ ಬಿಡುಗಡೆ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? 1963ರಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿರುವ ಸಂಘದ ಚಿತ್ರವನ್ನು ಅಂಚೆಯಲ್ಲಿ ಹಾಕಿರುವುದು ಇತಿಹಾಸದ ವ್ಯಂಗ್ಯ, ಸಂಘ ಸುಳ್ಳನ್ನೇ ಸತ್ಯವನ್ನಾಗಿಸುವ ವ್ಯರ್ಥ ಪ್ರಯತ್ನವಷ್ಟೇ.

ನಾಣ್ಯದಲ್ಲಿ ಆರ್.ಎಸ್.ಎಸ್.ಪ್ರತಿಪಾದಿಸುವ ಭಾಗವಧ್ವಜವನ್ನು ಸೇರಿಸುವ ಮೂಲಕ ಸಂವಿಧಾನದ ಧರ್ಮನಿರಪೇಕ್ಷ ಸಿದ್ದಾಂತವನ್ನು ಅವಮಾನಿಸಿದೆ.ಇಂತಹ ಕೃತ್ಯಗಳನ್ನ ಬಲವಾಗಿ ಖಂಡಿಸಿ, ಸಂವಿಧಾನ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ ಎಂದು ಹೇಳಿದ್ದಾರೆ.

More articles

Latest article