ನವದೆಹಲಿ: ವಜ್ರ ಕತ್ತರಿಸುವುದಕ್ಕೆ ಅಗಾಧ ಕುಶಲತೆ ಮತ್ತು ಸ್ಪಷ್ಟ ನಿಖರತೆಯ ಅಗತ್ಯವಿದೆ. ಈ ಕೆಲಸದಲ್ಲಿ ತೊಡಗಿರುವ ವ್ಯಕ್ತಿ ಒಂದು ಕಣ್ಣು ಕಳೆದುಕೊಂಡಿದ್ದರೂ, ಆತನದ್ದು ಶೇ. 100ರಷ್ಟು ಅಂಗವೈಕಲ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇರಳದ ಜಯನಂದನ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅರ್ಜಿದಾರರಿಗೆ ಶೇ. 8ರ ಬಡ್ಡಿಯೊಂದಿಗೆ ಒಟ್ಟು ರೂ.15,98,000 ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದೆ. ಈ ಹಿಂದೆ 39 ವರ್ಷದ ಜಯನಂದನ್ ಅವರು ಶೇ. 65ರಷ್ಟು ಅಂಗವೈಕಲ್ಯ ಹೊಂದಿರುವುದಾಗಿ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ, ಜಯನಂದನ್ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಹಾಗೂ ಮನಮೋಹನ ಅವರು ಇದ್ದ ನ್ಯಾಯಪೀಠ ಮೇಲ್ಮನವಿಯ ವಿಚಾರಣೆ ನಡೆಸಿತು.
ಜಯನಂದನ್ ಅವರು 2005ರ ಫೆಬ್ರುವರಿ 15ರಂದು ಕುನ್ನಂಕುಳಂ ವಡಂಕೇರಿಗೆ ಬೈಕ್ ಮೇಲೆ ತೆರಳುತ್ತಿದ್ದ ವೇಳೆ, ಆಟೊವೊಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ತ್ರಿಶ್ಶೂರಿನ ಮೋಟಾರ್ ಅಪಘಾತ ಕ್ಲೇಮುಗಳ ನ್ಯಾಯಮಂಡಳಿಯು ಜಯನಂದನ್ ಅವರ ಅಂಗವೈಕಲ್ಯ ಶೇ 49ರಷ್ಟು ಎಂದು ತೀರ್ಮಾನಿಸಿ, ಅವರಿಗೆ ಶೇ8ರ ಬಡ್ಡಿಯೊಂದಿಗೆ ₹8.70 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಪರಿಹಾರ ಮೊತ್ತವನ್ನು ರೂ.10,57,500ಕ್ಕೆ ಹೆಚ್ಚಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಇದೀಗ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ.