Thursday, December 12, 2024

ಸಮೀಕ್ಷೆಗಳೆಂಬ ಪೂರ್ವಯೋಜಿತ ಪ್ರಹಸನ

Most read

ಬಹುತೇಕ ಸಮೀಕ್ಷೆಗಳು ಕೇಂದ್ರ ಸರಕಾರದ ಕೃಪಾಪೋಷಿತ ಎಂದೆನಿಸುತ್ತವೆ. ಗೋದಿ ಮಾಧ್ಯಮಗಳ ಕೃತಕ ಸೃಷ್ಟಿ ಎಂಬಂತೆಯೂ ಭಾಸವಾಗುತ್ತದೆ. ಸಟ್ಟಾ ಬಜಾರ್ ಶೇರು ಮಾರುಕಟ್ಟೆಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ಪೂರಕವಾಗಿ ಸಮೀಕ್ಷೆಗಳು ಸೃಷ್ಟಿಯಾದಂತಿವೆ. ಆದರೆ ನಿಖರವಾದ ಅಂಕಿ ಅಂಶಗಳು ಜೂನ್ 4 ರಂದು ನಡೆಯುವ ಮತಗಳ ಎಣಿಕೆ ನಂತರವೇ ಗೊತ್ತಾಗುತ್ತದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ತಕ್ಷಣ ಫಲಿತಾಂಶದ ಕುರಿತು ಭವಿಷ್ಯ ಹೇಳುವ ಸಮೀಕ್ಷೆಗಳು ಒಂದರ ಹಿಂದೊಂದು ಉದುರತೊಡಗಿವೆ. ನಿಜಕ್ಕೂ ಬಹುತೇಕ ಎಲ್ಲಾ ಸರ್ವೇಗಳು ನನಗಂತೂ ದಿಗಿಲು ಹುಟ್ಟಿಸಿ ನನ್ನ ನಂಬಿಕೆಯನ್ನೇ ಬುಡಮೇಲು ಮಾಡಿದವು.

ಈ ದೇಶದ ಜನತೆ ಇಷ್ಟೊಂದು ಮೂರ್ಖರಾ?  ಬಣ್ಣದ ಸುಳ್ಳುಗಳಿಗೆ ಬಲಿಯಾಗಿ ಮತ್ತೆ ಮೋಸ ಹೋಗಲು ಸಿದ್ದರಾದರಾ? ಹಿಂದುತ್ವವಾದಿ ಪಕ್ಷಕ್ಕೆ ಮತ್ತೆ ಮತ ನೀಡಿ ಪ್ರಜಾಪ್ರಭುತ್ವವನ್ನೇ ಅಪಾಯಕ್ಕೀಡು ಮಾಡಿದರಾ? ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ತರುವವರನ್ನು ಬೆಂಬಲಿಸಿದರಾ? ಸರ್ವಾಧಿಕಾರದತ್ತ ಸಾಗುತ್ತಿರುವ ಮೋದಿಯವರ ನಡೆಯನ್ನೇ ಸಮರ್ಥಿಸಿಕೊಂಡರಾ? ನಿರುದ್ಯೋಗ ಯಾರನ್ನೂ ಬಾಧಿಸಲೇ ಇಲ್ವಾ? ದೇಶದ ಮೇಲೆ ಹೊರಿಸಲಾದ ಸಾಲದ ಹೊರೆ ಯಾರ ಗಮನಕ್ಕೂ ಬರಲೇ ಇಲ್ವಾ?  ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಇತ್ಯಾದಿಗಳ ಬೆಲೆ ಏರಿಕೆ ಯಾರಿಗೂ ಅತಿಯಾಯ್ತು ಅನ್ನಿಸಲೇ ಇಲ್ವಾ? ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದ ಚುನಾವಣಾ ಬಾಂಡ್ ಹಗರಣ ಮತದಾರರ ಮೇಲೆ ಯಾವ ಪರಿಣಾಮವನ್ನೂ ಬೀರಲೇ ಇಲ್ವಾ? ಕಳೆದ 10 ವರ್ಷಗಳಲ್ಲಿ ಯಾವುದೇ ಜನಮುಖಿ ಅಭಿವೃದ್ಧಿ ಕೆಲಸಗಳು ಆಗಿಲ್ಲವೆಂಬ ಅರಿವೂ ಜನರಿಗೆ ಬರಲೇ ಇಲ್ವಾ?  ಇಷ್ಟೆಲ್ಲಾ ಆದರೂ ಮತ್ತೆ ಈ ದೇಶದ ಬಹುಸಂಖ್ಯಾತ ಮತದಾರರು ಮೋದಿಯವರನ್ನೇ ಬೆಂಬಲಿಸುವ ನಿರ್ಧಾರ ತೆಗೆದುಕೊಂಡರಾ? ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತೀರ್ಮಾನ ಮಾಡಿದರಾ? ಜ್ವಲಂತ ವಾಸ್ತವದ ಸಮಸ್ಯೆಗಳಿಗಿಂತಲೂ ಅವಾಸ್ತವಿಕ ಭಾವನಾತ್ಮಕತೆ,  ಭ್ರಮೆಗೆ ಜನತೆ ಮರುಳಾದರಾ? ಎನ್ನುವ ಹಲವಾರು ಸಂದೇಹಗಳು ಬಾಧಿಸ ತೊಡಗಿದವು.

ಚುನಾವಣೋತ್ತರ ಸಮೀಕ್ಷೆಗಳು ಎಂಬುದೇ ಊಹಾಪೋಹಗಳ ಪ್ರಹಸನ. 18 ಲಕ್ಷ ಮತದಾರರು ಇರುವ ಮತಕ್ಷೇತ್ರದಲ್ಲಿ ಒಂದೆರಡು ಸಾವಿರ ಜನರ ಅಭಿಪ್ರಾಯವನ್ನು ನೇರವಾಗಿಯೋ ಇಲ್ಲಾ ಫೋನ್ ಮೂಲಕವೋ ಪಡೆದು, ಗೆಲುವಿನ ಗಾಳಿ ಎತ್ತ ಬೀಸುತ್ತಿದೆ ಎನ್ನುವ ಅಂದಾಜನ್ನು ಹಿಡಿದು ಮತದಾನೋತ್ತರ ಸಮೀಕ್ಷೆಗಳನ್ನು ಪೋಲ್ ಏಜನ್ಸಿಗಳು ಪ್ರಕಟಿಸುತ್ತವೆ. ಇವು ಹೇಳಿದ್ದೆಲ್ಲವೂ ನಿಜ ಆಗಲೇಬೇಕೆಂದೇನಿಲ್ಲ. ಕಳೆದ ಸಲ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ರಚಿಸುವುದೇ ಅನುಮಾನ ಎಂದು ಎಕ್ಸಿಟ್ ಪೋಲ್ ಗಳು ಸಾರಿದ್ದವು. ಆದರೆ ಕಾಂಗ್ರೆಸ್ ಪಕ್ಷ ಅದ್ದೂರಿಯಾಗಿ ಸಂಪೂರ್ಣ ಬಹುಮತ ಪಡೆದು ಸಮೀಕ್ಷೆ ಮಾಡಿದವರ ಕೆನ್ನೆಗೆ ಬಾರಿಸಿತು. ಅದೇ ರೀತಿ ದೆಹಲಿಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಇದೇ ಸಮೀಕ್ಷಾ ಪ್ರವೀಣರು ಭವಿಷ್ಯ ನುಡಿದಿದ್ದರು. ಆದರೆ ಆಪ್ ಪಕ್ಷ ಬಿಜೆಪಿಯನ್ನು ಗುಡಿಸಿ ಹಾಕಿತು. ಅದೇ ರೀತಿ 2014 ರ ಲೋಕಸಭಾ ಚುನಾವಣೆಯಲ್ಲಿ ಎನ್‌ ಡಿ ಎ ಒಕ್ಕೂಟ  257 ರಿಂದ 281  ಸೀಟು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ 335 ಸೀಟುಗಳ ಗೆಲುವು ದಾಖಲಾಗಿತ್ತು. ಯುಪಿಎ ನೂರಕ್ಕೂ ಹೆಚ್ಚಿ ಸೀಟ್ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್ ಹೇಳಿದರೆ ಗೆದ್ದಿದ್ದು ಕೇವಲ 59 ಸೀಟುಗಳು ಮಾತ್ರ. 

ಅಂದರೆ ಈ ಸಮೀಕ್ಷೆಗಳು ಹೇಳುವುದೆಲ್ಲಾ ಆಗುತ್ತದೆ ಎಂಬುದನ್ನು ನಂಬುವಂತಿಲ್ಲ. ಈ ಸಮೀಕ್ಷೆಗಳ ನಡುವೆಯೇ ಸಾಮ್ಯತೆಗಳಿರುವುದಿಲ್ಲ. 2024 ರ ಚುನಾವಣಾ ಫಲಿತಾಂಶ ಕುರಿತು ಪ್ರಕಟವಾದ ತರಾವರಿ ಸಮೀಕ್ಷೆಗಳಲ್ಲಿ ಪ್ರತಿ ಸಮೀಕ್ಷೆಗಳ ಅಂಕಿ ಅಂಶಗಳೂ ಭಿನ್ನವಾಗಿವೆ. ಸರಾಸರಿ ಲೆಕ್ಕ ಹಾಕಿದರೆ ಎನ್‌ ಡಿ ಎ ಮೈತ್ರಿಕೂಟ 281 ರಿಂದ 400 ರಷ್ಟು ಗೆಲುವು ದಾಖಲಿಸಬಹುದು ಎಂದಿದೆ. ಇಂಡಿಯಾ ಮೈತ್ರಿಕೂಟ 118 ರಿಂದ 169 ರಷ್ಟು ಸೀಟು ಗೆಲ್ಲಬಹುದು ಎನ್ನಲಾಗಿದೆ. ಇದರಲ್ಲಿ ಯಾವುದೂ ನಿಖರವಾಗಿಲ್ಲ. ಎಲ್ಲವೂ ಅಂದಾಜುಗಳಷ್ಟೇ. ಫಲಿತಾಂಶದ ಸಂಖ್ಯೆಗೆ ಹತ್ತಿರವಾದರೂ ಬರಬಹುದು ಇಲ್ಲವೇ ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರ ಅಡಿಮೇಲಾಗಬಹುದು. 

ಬಹುತೇಕ ಸಮೀಕ್ಷೆಗಳು ಕೇಂದ್ರ ಸರಕಾರದ ಕೃಪಾಪೋಷಿತ ಎಂದೆನಿಸುತ್ತವೆ. ಗೋದಿ ಮಾಧ್ಯಮಗಳ ಕೃತಕ ಸೃಷ್ಟಿ ಎಂಬಂತೆಯೂ ಭಾಸವಾಗುತ್ತದೆ. ಸಟ್ಟಾ ಬಜಾರ್ ಶೇರು ಮಾರುಕಟ್ಟೆಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ಪೂರಕವಾಗಿ ಸಮೀಕ್ಷೆಗಳು ಸೃಷ್ಟಿಯಾದಂತಿವೆ. ಆದರೆ ನಿಖರವಾದ ಅಂಕಿ ಅಂಶಗಳು ಜೂನ್ 4 ರಂದು ನಡೆಯುವ ಮತಗಳ ಎಣಿಕೆ ನಂತರವೇ ಗೊತ್ತಾಗುತ್ತದೆ. ಈ ಸಮೀಕ್ಷೆಗಳ ಅಸಲಿಯತ್ತು ಬಹಿರಂಗವಾಗುತ್ತದೆ. 

ಏನೇ ಆಗಲಿ ಈ ಸಲ ಮೋದಿ ಮಡಿಲ ಮಾಧ್ಯಮಗಳ ಲೆಕ್ಕಾಚಾರ ತಪ್ಪಾಗುವುದರಲ್ಲಿ ಸಂದೇಹವಿಲ್ಲ. ಕಳೆದ 2019 ರ ಚುನಾವಣೆಯಲ್ಲಿದ್ದಂತೆ ಈ ಸಲ ಮೋದಿ ಅಲೆ ಎಲ್ಲೂ ಇಲ್ಲ. ರಾಮ ಪುಲ್ವಾಮಗಳ ಭಾವನಾತ್ಮಕ ಇಶ್ಯೂಗಳಿಲ್ಲ. ಅಪೂರ್ಣ ರಾಮಮಂದಿರ ಉದ್ಘಾಟನೆ ಪ್ರಹಸನ ಅಂದುಕೊಂಡಷ್ಟು ಪರಿಣಾಮ ಬೀರಲಿಲ್ಲ. ಮೋದಿಯವರಿಂದ ಅಚ್ಚೇ ದಿನ್ ಬರುತ್ತದೆ ಎನ್ನುವ ಆಸೆ ನೆರವೇರಲಿಲ್ಲ. ನಿರುದ್ಯೋಗ, ಬೆಲೆ ಏರಿಕೆಗಳಿಂದ ಜನರು ಪರಿತಪಿಸುವುದು ತಪ್ಪಲಿಲ್ಲ. ರೈತರ ಆದಾಯ ದ್ವಿಗುಣವಾಗಲಿಲ್ಲ. ಪರಿಸ್ಥಿತಿ ಹೀಗಿರುವಾಗ ಮತ್ತೆ  ಚಾರ್ ಸೌ ಪಾರ್ ಎನ್ನುವುದನ್ನು ಬಿಜೆಪಿಗರೇ ನಂಬಲು ಸಿದ್ಧರಿಲ್ಲ. ಪರಿಸ್ಥಿತಿ ಹೀಗಿರುವಾಗ ಮೋದಿ ಪ್ರಾಯೋಜಿತ ಸಮೀಕ್ಷೆಗಳು ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆಯುತ್ತದೆ ಎಂದು ಅತಿರೇಕದ ಅಂಕಿ ಅಂಶಗಳನ್ನು ಪ್ರಕಟಿಸಿದರೆ ನಂಬುವುದು ಸಾಧ್ಯವಿಲ್ಲ. 

ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ. ಈ ಸಮೀಕ್ಷೆಗಳೆಲ್ಲಾ ಬಿಜೆಪಿ 21 ರಿಂದ 25 ಸೀಟುಗಳಲ್ಲಿ ಗೆಲ್ಲುತ್ತದೆ ಹಾಗೂ ಕಾಂಗ್ರೆಸ್ 3 ರಿಂದ 8 ಸೀಟುಗಳನ್ನು ಮಾತ್ರ ಪಡೆಯುತ್ತದೆ ಎಂದು ಹೇಳಿವೆ. ಈ ಸಮೀಕ್ಷೆ ಅಡಿಮೇಲಾಗುವ ಸಾಧ್ಯತೆಗಳೇ ಹೆಚ್ಚಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಹೆಚ್ಚು ಸೀಟ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಫಲಿತಾಂಶ ಪ್ರಕಟವಾದ ನಂತರ ಈ ಎಲ್ಲಾ ಸಮೀಕ್ಷೆಗಳು ಸುಳ್ಳಾಗುವುದರಲ್ಲಿ ಸಂದೇಹವೂ ಇಲ್ಲ. 

ಕರ್ನಾಟಕ ವಿಧಾನಸಭಾ ಚುನಾವಣೆಯ ಸಮೀಕ್ಷೆ

ಆದರೆ ಈ ಅತಿರೇಕದ ಸಮೀಕ್ಷೆಗಳನ್ನೇ ನಂಬಿ ನಷ್ಟಕ್ಕೀಡಾಗುವವರ ಸಂಖ್ಯೆ ಹೆಚ್ಚಿದೆ.  ಬೆಟ್ಟಿಂಗ್ ದಂಧೆ ಎಂಬುದು ದೇಶಾದ್ಯಂತ ಎದ್ದು ನಿಂತಿದೆ. ಸಮೀಕ್ಷೆಗಳ ಆಧಾರದಲ್ಲಿ ಬೆಟ್ಟಿಂಗ್ ಹಣ ಕಟ್ಟಿದ್ದೇ ಆದರೆ ಎಲ್ಲವನ್ನೂ ಕಳೆದುಕೊಳ್ಳುವುದು ನಿಶ್ಚಿತ. ಅದೇ ರೀತಿ ಶೇರು ಮಾರುಕಟ್ಟೆ ಸಹ ಅಸಹಜ ಏರಿಕೆ ಕಂಡು ಫಲಿತಾಂಶದ ನಂತರ ಇಳಿಯುತ್ತದೆ. ಕೆಲವರು ಲಾಭ ಮಾಡಿಕೊಂಡರೆ ಹಲವರು ನಷ್ಟಕ್ಕೀಡಾಗುತ್ತಾರೆ. ಈ ನಿಟ್ಟಿನಲ್ಲಿ ಈ ಸಮೀಕ್ಷೆಗಳನ್ನೇ ನಿರ್ಬಂಧಿಸುವುದು ಒಳಿತು. 

ನ್ಯಾಯಯುತವಾದ ಚುನಾವಣೆ ಆಗಿದ್ದೇ ಆದರೆ, ಎಲ್ಲೂ ಚುನಾವಣಾ ಅಕ್ರಮ ಹಾಗೂ ಮತಯಂತ್ರ ತಿರುಚುವಿಕೆ ಪ್ರಯತ್ನಗಳು ನಡೆಯದೇ ಇದ್ದರೆ ಈ ಸಲ ಬಿಜೆಪಿ ಅಷ್ಟೇ ಅಲ್ಲ ಎನ್‌ ಡಿ ಎ ಮೈತ್ರಿಕೂಟಕ್ಕೆ ಕನಿಷ್ಟ ಬಹುಮತವೂ ದಕ್ಕುವುದಿಲ್ಲ. ಇಷ್ಟೆಲ್ಲಾ ಸಾಮಾಜಿಕ ಕ್ಷೋಭೆಗಳ ನಡುವೆಯೂ, ಮೋದಿಯವರ ಮೇಲಿಟ್ಟಿದ್ದ ನಿರೀಕ್ಷೆಗಳೆಲ್ಲಾ ಹುಸಿಯಾದ ಮೇಲೂ ಸಮೀಕ್ಷೆಗಳು ಹೇಳಿದಂತೆ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿದ್ದೇ ಆದರೆ ಆಗ ಮತಯಂತ್ರದ ಮೇಲೆ ಇರುವ ಅನುಮಾನ ದಟ್ಟವಾಗುತ್ತದೆ. ಇವಿಎಂ ಮತಯಂತ್ರ ಹಾಗೂ ವಿ ವಿ ಪಾಟ್ ಗಳ ಸಂಖ್ಯೆಗಳನ್ನು ಎಣಿಕೆ ಮಾಡಿ ತಾಳೆ ನೋಡಲು ಅವಕಾಶ ಮಾಡಿಕೊಟ್ಟಿದ್ದರೆ ಒಂದಿಷ್ಟು ಸಂದೇಹ ಬಗೆಹರಿಯ ಬಹುದಾಗಿತ್ತು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್ ಅವಕಾಶ ನೀಡಲಿಲ್ಲ. ಮತಯಂತ್ರ ತಿರುಚುವಿಕೆ ಕುರಿತ ಅನುಮಾನ ಕಡಿಮೆಯಾಗಲಿಲ್ಲ. ಚುನಾವಣಾ ಆಯೋಗ ಪ್ರತಿ ಹಂತದ ಮತದಾನ ಮುಗಿದ ಕೂಡಲೇ ಮತಪ್ರಮಾಣದ ಅಂಕಿಅಂಶಗಳನ್ನು ಬಹಿರಂಗ ಪಡಿಸಬೇಕಿತ್ತು. ಆದರೆ ಅದನ್ನೂ ಹತ್ತು ದಿನಗಳಷ್ಟು ವಿಳಂಬಮಾಡಿ ಒಂದೂ ಮುಕ್ಕಾಲು ಕೋಟಿಯಷ್ಟು ಮತಗಳ ವ್ಯತ್ಯಾಸವನ್ನು ಪ್ರಕಟಿಸಿದ್ದರಿಂದಾಗಿ ಮತಯಂತ್ರ ತಿರುಚುವಿಕೆಯ ಸಂಭವನೀಯತೆ ಕುರಿತ ಸಂದೇಹ ಜಾಸ್ತಿ ಆಯ್ತು. ಮತದಾನದ ನಂತರ ಮತಪ್ರಮಾಣ ಪ್ರಕಟಿಸ ಬೇಕೆಂಬ ಒತ್ತಾಯಕ್ಕೆ ಸುಪ್ರೀಂಕೋರ್ಟ್ ಸಹ ತಣ್ಣೀರೆರಚಿತು. ಒಬ್ಬನೇ ಅಪ್ರಾಪ್ತ ಯುವಕ ಹತ್ತಾರು ಸಲ ಬಿಜೆಪಿಗೆ ಮತದಾನ ಮಾಡಿದ್ದೂ ವರದಿಯಾಯ್ತು. ಮತಯಂತ್ರಗಳನ್ನು ಇಟ್ಟಿದ್ದ ಕೊಠಡಿಯ ಸಿಸಿಟಿವಿ ಕಡಿತಗೊಳಿಸಿದ ಆರೋಪವೂ ಕೇಳಿಬಂತು. ಮೋದಿಯವರಿಂದಲೇ ಆಯ್ಕೆಯಾದ ಚುನಾವಣಾ ಆಯೋಗದ ಆಯುಕ್ತರು ಮೋದಿಯವರ ಪರವಾಗಿಯೇ ಕೆಲಸ ಮಾಡಿದ್ದಾರೆ ಎನ್ನುವ ಆರೋಪದಿಂದಾಗಿ ನ್ಯಾಯಯುತವಾದ ಚುನಾವಣೆ ನಡೆಸಲಾಗುವ ಬಗ್ಗೆ ಸಂದೇಹ ಮೂಡುವಂತಾಯಿತು. ಅಕ್ರಮ ಮಾರ್ಗದಲ್ಲಿ ಬಿಜೆಪಿ ಪರವಾಗಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಪೂರಕವಾಗಿ ಸಮೀಕ್ಷೆಗಳ ಅಂಕಿ ಸಂಖ್ಯೆಗಳನ್ನು ಹೊಂದಾಣಿಕೆ ಮಾಡಲಾಗಿದೆ ಎನ್ನುವ ಡೌಟ್ ಕಾಡತೊಡಗಿತು.

ಒಟ್ಟಾರೆಯಾಗಿ ನ್ಯಾಯುತವಾದ ರೀತಿಯಲ್ಲಿ ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ ಆಗಿದ್ದೇ ಆದರೆ ಈ ಸಲ ಎನ್‌ ಡಿ ಎ ಮಿತ್ರಕೂಟದ ಸೋಲು ಖಚಿತ. ಕನಿಷ್ಠ ಬಹುಮತ ಪಡೆಯುವ ಸಂಭವನೀಯತೆಯೂ ಮೋದಿಯವರಿಗೆ ಅಸಾಧ್ಯ. ಆಗ ಇಂಡಿಯಾ ಮೈತ್ರಿ ಕೂಟದ ಕೆಲವು ಪಕ್ಷಗಳು ಹಾಗೂ ಗೆದ್ದ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದು ಮೋದಿಯವರು ಸರಕಾರ ರಚನೆ ಮಾಡುವ ಸಾಧ್ಯತೆಗಳೇ ಹೆಚ್ಚಿವೆ. ಇಂಡಿಯಾ ಒಕ್ಕೂಟ ಒಗ್ಗಟ್ಟನ್ನು ಕಾಪಾಡಿಕೊಂಡರೆ ಆ ಸಾಧ್ಯತೆಯೂ ಕ್ಷೀಣ. 

ಏನಾದರಾಗಲಿ ಈ ಚುನಾವಣೆಯಲ್ಲಿ ಬಿಜೆಪಿ ಸೋತಷ್ಟೂ ಸಂವಿಧಾನ ಸುರಕ್ಷಿತವಾಗಿರುತ್ತದೆ. ಹೆಚ್ಚು ಸೀಟುಗಳನ್ನು ಗೆದ್ದಷ್ಟೂ ಪ್ರಜಾಪ್ರಭುತ್ವ ಅಪಾಯಕ್ಕೊಳಗಾಗುತ್ತದೆ. ಅತೀ ಹೆಚ್ಚು ಬಹುಮತ ಬಂದಿದ್ದೇ ಆದರೆ ಮೋದಿಯವರ ಹಿಂದುತ್ವವಾದಿ ಸರ್ವಾಧಿಕಾರಿ ಸರಕಾರ ಆಳುತ್ತದೆ. ದೇಶದ ಸಂಪನ್ಮೂಲಗಳೆಲ್ಲಾ ಕಾರ್ಪೋರೇಟ್ ಕಂಪನಿಗಳ ಪಾಲಾಗುತ್ತವೆ. ಏನಾಗುತ್ತದೆ ಎಂಬುದು ಜೂನ್ 4 ರ ಮತ ಎಣಿಕೆ ಫಲಿತಾಂಶದ ನಂತರ ಸ್ಪಷ್ಟವಾಗುತ್ತದೆ.

 ಶಶಿಕಾಂತ ಯಡಹಳ್ಳಿ

ರಾಜಕೀಯ ಚಿಂತಕರು

ಇದನ್ನೂ ಓದಿ- ಲೋಕಸಭಾ ಚುನಾವಣೆ 2024- ಫಲಿತಾಂಶ ಏನಾಗಬಹುದು?

More articles

Latest article