ಬೆಂಗಳೂರು: ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿಯೊಬ್ಬಳು ಕಾಣೆಯಾದ 13 ವರ್ಷಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2012 ರಲ್ಲಿ ಬಂಟ್ವಾಳ ತಾಲೂಕಿನ ಕವಲಮುದುರು ಎಂಬ ಗ್ರಾಮದ ನಿವಾಸಿ ನಾರಾಯಣ ದೇವಾಡಿಗ ಅವರ ಪುತ್ರಿ 17 ವರ್ಷದ ಹೇಮಾವತಿ ಆಲಿಯಾಸ್ ಹೇಮಲತಾ ಅವರನ್ನು ಅಂಗನವಾಡಿ ಕಾರ್ಯಕರ್ತೆ ವಾಸಂತಿ ಎಂಬಾಕೆ ಕರೆದೊಯ್ದಿರುತ್ತಾರೆ.
ವಾಸಂತಿ ಅವರು ಮನಗೆ ಮರಳಿರುತ್ತಾರೆ. ಆದರೆ ಹೇಮಲತಾ ಮನೆಗೆ ಮರಳುವುದೇ ಇಲ್ಲ. ಆಕೆಯ ಸಹೋದರ ನಿತಿನ್ ದೇವಾಡಿಗ ಅವರು ಬಿಎಲ್ ಆರ್ ಪೋಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ನನ್ನ ಸಹೋದರಿ ಕಾಣೆಯಾಗುತ್ತಿದ್ದಂತೆ ಕೂಡಲೇ 2012 ರಲ್ಲೇ ನಾವು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದೆವು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆಕೆಯನ್ನು ಹುಡುಕುವುದಾಗಿ ಹೇಳಿ ದೂರು ದಾಖಲಿಸಿಕೊಳ್ಳದೆ ನಮ್ಮನ್ನು ಕಳುಹಿಸಿದರು. ಆದರೆ ಇದುವರೆಗೂ ನನ್ನ ಸಹೋದರಿಯನ್ನು ಅವರು ಹುಡುಕಲೇ ಇಲ್ಲ ಎಂದು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ವಾಸಂತಿ ನಮಗೆ ಹೇಮಲತಾ ನನ್ನ ಜತೆ ದೇವಸ್ಥಾನಕ್ಕೆ ಬರಲೇ ಇಲ್ಲ ಎಂದು ಸುಳ್ಳು ಹೇಳಿದಳು. ತನ್ನ ಜೀವನೋಪಾಯಕ್ಕೆ ಉದ್ಯೋಗ ಸಿಗಲಿದೆ ಎಂದು ಕೆಲಸ ಕಲಿಯಲು ನನ್ನ ಸಹೋದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಳು. ಈ ಹಿಂದೆಯೂ ವಾಸಂತಿ ನನ್ನ ಸಹೋದರಿಯನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಎರಡನೇ ಬಾರಿ ಹೋದಾಗ ನನ್ನ ಸಹೋದರಿ ಮರಳಿ ಬರಲೇ ಇಲ್ಲ ಎಂದು ವಿವರಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಳ್ಳಲೇ ಇಲ್ಲ. ನಾವು ಪ್ರಭಾವಿಗಳೂ ಅಲ್ಲ, ಆರ್ಥಿಕವಾಗಿ ಬಲಾಢ್ಯರಾಗಿರಲಿಲ್ಲ. ಧರ್ಮಸ್ಥಳದಲ್ಲಿ ಸಂಭವಿಸಿದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಶವಗಳನ್ನು ಹೂತು ಹಾಕಿರುವ ಪ್ರಕರಣ ಕುರಿತು ತನಿಖೆ ನಡೆಸಲು 2025ರ ಜುಲೈ 19 ರಂದು ಸರ್ಕಾರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸಿತು. ನನ್ನ ಸಹೋದರಿ ಹೇಮಲತಾ ಕಾಣೆಯಾಗಿರುವುದಾಗಿ ಎಸ್ ಐಟಿ ಗೆ ಮನವಿ ಸಲ್ಲಿಸಿದಾಗ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಿದರು.
ಎಸ್ ಐಟಿ ನೀಡಿರುವ ಸೀಕೃತಿ ಪತ್ರವನ್ನು ತೋರಿಸಿದಾಗ ಪುಂಜಾಲಕಟ್ಟೆ ಪೊಲೀಸರು ಅಂತಿಮವಾಗಿ 2025 ರ ಆಗಸ್ಟ್ 14 ರಂದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹೇಮಲತಾ ಅವರ ಮಾಹಿತಿ ಸಂಗ್ರಹಿಸಲು ಸ್ಥಳೀಯ ಪೊಲೀಸರು ಮೂರು ಬಾರಿ ದೇವಾಡಿಗ ಅವರ ಮನೆಗೆ ಭೇಟಿ ನೀಡಿದ್ದಾರೆ. ಪೊಲೀಸರು ವಾಸಂತಿ ಅವರ ಮನೆಗೂ ಭೇಟಿ ನೀಡಿದ್ದಾರೆ. ಮತ್ತೊಮ್ಮೆ ನಮ್ಮ ಮನೆಗೆ ಭೇಟಿ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಸಂತಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

