ಬೆಂಗಳೂರು: ಜುಲೈ 26ರಂದು ರಾಜ್ಯದ ಎಲ್ಲ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ವಿಶೇಷವೆಂದರೆ ಮದ್ಯದ ಅಂಗಡಿಗಳನ್ನು ಸ್ವತಃ ಮಾಲೀಕರುಗಳೇ ಬಂದ್ ಮಾಡಲಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಹೆಚ್ಚಿರುವ ಮಿತಿಮೀರಿದ ಭ್ರಷ್ಟಾಚಾರದಿಂದ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ ಎಂಬುದು ಮದ್ಯದಂಗಡಿ ಮಾಲೀಕರ ಅಳಲು. ಹೀಗಾಗಿ ಜುಲೈ 26ರಂದು ರಾಜ್ಯದ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿ ಮಾಲೀಕರು ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಬಾರ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕರುಣಾಕರ ಹೆಗಡೆ ಜುಲೈ 26ರಂದು ನಾವು ಎಲ್ಲ ಅಂಗಡಿಗಳನ್ನು ಮುಚ್ಚಲಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಚಾರ ಖಂಡಿಸಿ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಬೆಳಗ್ಗೆ 10 -30 ರಿಂದ ಸಂಜೆ 4-30 ವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದೆ.
ಜುಲೈ 26 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಲಿರುವ ಬಾರ್ ಮಾಲೀಕರ ಅಸೋಸಿಯೇಶನ್ ಸದಸ್ಯರು, ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಮದ್ಯ ಮಾರಾಟಗಾರರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ನಮ್ಮ ಬೇಡಿಕೆಗಳಿಗೆ ಸರ್ಕಾರಗಳಿಂದ ಯಾವುದೇ ರೀತಿಯ ಸ್ಫಂದನೆ ಸಿಗುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಗೆ ಒಳಗಾಗಿದ್ದೇವೆ. 40,000 ಸಾವಿರ ಕೋಟಿಯಷ್ಟು ತೆರಿಗೆ ಹಣವನ್ನು ಸರ್ಕಾರಕ್ಕೆ ಕೊಡುತ್ತೇವೆ. ಆದರೂ ನಮ್ಮ ಅಳಲನ್ನು ಆಲಿಸುವವರು ಇಲ್ಲದಂತಾಗಿದೆ ಎಂದು ಕರುಣಾಕರ್ ಹೆಗಡೆ ಹೇಳಿದ್ದಾರೆ.
ರಾಜ್ಯದಲ್ಲಿ ಮದ್ಯ ವಾಪಾರ ನಡೆಸುವುದೇ ಕಷ್ಟಕರವಾಗಿದೆ. ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಅಬಕಾರಿ ಇಲಾಖೆ ಕಿರುಕುಳ ಹೆಚ್ಚಾಗುತ್ತಿದೆ. ನಮ್ಮ ಸಮಸ್ಯೆಗಳ ಕುರಿತು ಪದೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಸರ್ಕಾರ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರದ ಕಣ್ಣು ತೆರೆಸಲು ಜು.26ರಂದು ಪ್ರತಿಭಟನೆಗೆ ಕರೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.