ಬೆಂಗಳೂರು: ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದಡಿಯಲ್ಲಿ ಮಾಜಿ ರೌಡಿ ಶೀಟರ್ ಬಿ.ಎಂ.ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಹಾಗೂ ಆತನ ಗನ್‌ಮ್ಯಾನ್ ವಿಜೇಶ್ ಕುಮಾರ್ ನನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫೈಟರ್ ರವಿ ಹಾಗೂ ಆತನ ಗನ್‌ಮ್ಯಾನ್ ಇಬ್ಬರೂ ಪಿಸ್ತೂಲ್ ತೋರಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉದ್ಯಮಿ ಸೋಮಶೇಖರ್ ದೂರು ನೀಡಿದ್ದರು. ಇವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನೂ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಎಂದು ಪೊಲೀಸರು ಹೇಳಿದ್ದಾರೆ.
ಸೋಮಶೇಖರ್ ಅವರು ಶ್ರೀಕಾಂತ್ ಎಂಬುವರಿಗೆ ಸಾಲದ ರೂಪದಲ್ಲಿ ರೂ.75 ಲಕ್ಷ ಕೊಟ್ಟಿದ್ದರು. ಮರಳಿ ಹಣವನ್ನು ಪಡೆಯುವ ಸಲುವಾಗಿ ಆಗಾಗ್ಗೆ ಶ್ರೀಕಾಂತ್ ಅವರನ್ನು ಸೋಮಶೇಖರ್ ಭೇಟಿ ಮಾಡುತ್ತಿದ್ದರು. ಆಗ ಮಧ್ಯಪ್ರವೇಶಿಸಿದ್ದ ಫೈಟರ್ ರವಿ, ಶ್ರೀಕಾಂತ್ ಬಳಿ ಹಣ ಕೇಳಬಾರದು ಎಂದು ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಫೈಟರ್ ರವಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಗೆ ಪ್ರಯತ್ನ ನಡೆಸಿದ್ದ. ಆದರೆ ಟಿಕೆಟ್ ಸಿಕ್ಕಿರಲಿಲ್ಲ. ನಂತರ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ. ರವಿ ಈ ಹಿಂದೆ ರೌಡಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ. ಈ ಸಂಬಂಧ ಹಲವು ಪ್ರಕರಣಗಳು ಫೈಟರ್ ರವಿ ಮೇಲೆ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.