ಬೆಂಗಳೂರು: ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಕಚೇರಿಗಳು, ಅಂಗಡಿ – ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಆದೇಶವನ್ನು ಹೊರಡಿಸಿದ್ದೇವೆ.
ಬೇರೆ ಭಾಷೆಗಳನ್ನು ಗೌರವಿಸೋಣ. ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ. ಕರ್ನಾಟಕದ ಗಡಿ ಭಾಗದ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸಂದೇಶ ನೀಡಿ ಕನ್ನಡ ನಾಡು ನುಡಿ ಕುರಿತು ಸರ್ಕಾರದ ಬದ್ಧತೆಯನ್ನು ವಿವರಿಸಿದ್ದಾರೆ.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿಭಾಗದ ಕನ್ನಡ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷಾ ಪ್ರೇಮವನ್ನು ಮೂಡಿಸಲಾಗುತ್ತಿದೆ. ವಿಧಾನಸೌಧದ ಆವರಣದಲ್ಲಿರುವ ನಾಡದೇವಿ ಭುವನೇಶ್ವರಿಯ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಸಂಭ್ರಮದ ಕನ್ನಡ ರಾಜ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿ, ಕನ್ನಡದ ಕಹಳೆ ನಾಡಿನ ಉದ್ದಗಲಕ್ಕೂ ಮೊಳಗಲಿ ಎಂದು ಶುಭ ಹಾರೈಸಿದ್ದಾರೆ.
ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ. ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಈ ದಿನ ಹೆಮ್ಮೆಯಿಂದ ಸ್ಮರಿಸೋಣ.
ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಶಿಕ್ಷಣ, ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ, ಬದುಕು ಕಟ್ಟಿಕೊಂಡಿರುವ ಎಲ್ಲರೂ ಕನ್ನಡಿಗರೇ, ನಮ್ಮವರೇ. ನಾವು – ನೀವು ಎಲ್ಲರೂ ಸೇರಿ ಕನ್ನಡವನ್ನು ಬಳಸುವ, ಬೆಳೆಸುವ ಸಂಕಲ್ಪವನ್ನು ಈ ದಿನ ಸ್ವೀಕರಿಸೋಣ.
ನೆಲದ ಭಾಷೆ ಮನದ ಭಾಷೆಯಾಗಲಿ, ಕನ್ನಡದ ಚಿಗುರು ಎಲ್ಲರೆದೆಯೊಳಗೆ ಮೊಳಕೆಯೊಡೆಯಲಿ. ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ “ಮಾನವ ಕುಲ ತಾನೊಂದೇ ವಲಂ” ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.
ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ ಎಂದು ಕರೆ ನೀಡಿದ್ದಾರೆ.

