ಮಕ್ಕಳ ಮನಸಿನಿಂದ ಮೊಬೈಲ್ ಕಳಚಲಿ

Most read

ಜೂನ್ ತಿಂಗಳು ಎಂಬುದು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲು  ಹಾಕುವ ತಿಂಗಳು. ಇಲ್ಲಿ ಮೊಬೈಲ್ ಎಂಬ ಉಪಕರಣ ಆ ಅಡಿಗಲ್ಲಿಗೆ ಅಡ್ಡ ಬರಬಾರದು. ಹಾಗಾಗಿ ಪೋಷಕರಾಗಿರುವ ನಾವು ಜಾಣ್ಮೆ ಮತ್ತು ತಾಳ್ಮೆಯಿಂದ ಅವರ ಮನಸನ್ನು ಮೊಬೈಲ್‌ ನಿಂದ ಸರಿಸಿ ಅಕ್ಷರದ ಕಡೆಗೆ ತಿರುಗಿಸ ಬೇಕಾಗಿದೆ – ಮಂಗಳ ಯಶವಂತಪುರ

ಜೂನ್ ತಿಂಗಳು ಬಂತೆಂದರೆ, ಮಕ್ಕಳ‌ ಮುಖದಲ್ಲೇನೋ ಹೊಸ ಕಳೆ. ಆಟದ ಸಾಮಾನುಗಳನ್ನು ಪಕ್ಕಕಿಟ್ಟು ಪುಸ್ತಕ ಜೋಡಣೆ,  ಸಮವಸ್ತ್ರದ ಶೂ, ಬ್ಯಾಗ್, ಜಾಮಿಟ್ರಿ ಬಾಕ್ಸ್‌ ಇದೆಲ್ಲವನ್ನು ಜೋಡಿಸಿಕೊಂಡು ಕಳೆಕಳೆಯ ಮುಖದಲ್ಲಿ ನಾನು ಶಾಲೆಗೆ ಹೋಗಲು ಸಿದ್ಧ ಎಂದು ನಿಲ್ಲುತಿದ್ದ ಗಾಂಭೀರ್ಯ ನಿಜಕ್ಕು ಖುಷಿ ಎನಿಸುತ್ತದೆ. ಆದರೆ, ಈ ತಂತ್ರಜ್ಞಾನದ ಯುಗದಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿ, ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆ, ಕುಂಟೆಬಿಲ್ಲೆ, ಗಿಲ್ಲಿಂದಾಂಡು, ಬುಗರಿ ಇಂತಹವುಗಳೆಲ್ಲವನ್ನೂ ಮೊಬೈಲ್ ಎಂಬ ಪುಟ್ಟ ಆಟಿಕೆ ನುಂಗಿ ಮಕ್ಕಳನ್ನು ಅದರೊಳಗೆ ಬಂಧಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ಅವರ ಮನಸನ್ನು ಸೆಳೆಯುವ ವೀಡಿಯೋಗಳು, ಅದರಲ್ಲಿ ತಾವೇ ತಯಾರಿಸುವ ವೀಡಿಯೋಗಳು, ಆಪ್ ಗಳು, ಇತ್ಯಾದಿಗಳು  ಮಕ್ಕಳ ದೈಹಿಕ ಚಟುವಟಿಕೆಯನ್ನು ಶೂನ್ಯಗೊಳಿಸಿ, ಮಾನಸಿಕ ಸ್ಥಿತಿಯನ್ನು ಘಾಸಿ ಗೊಳಿಸುತ್ತಿವೆ. ಮತ್ತು ಬೌದ್ಧಿಕ ಬೆಳವಣಿಗೆಗೆ ಮಾರಕವಾಗಿ ಈ ಅಸ್ತ್ರ ಮಕ್ಕಳನ್ನ ಕಟ್ಟಿಹಾಕುತಿದೆ. 

ಪೋಷಕರಾದ ನಾವು ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಸಮಜಾಯಿಸಲು ಆಗದೆ, ಕೈಯಾರೆ ನಾವೇ ಆ ಮೊಬೈಲ್ ನ್ನು ಮಕ್ಕಳ ಕೈಗೆ ಕೊಟ್ಟಿರುತ್ತೇವೆ ಅಥವಾ ಆ ಚಟಕ್ಕೆ ಬಿದ್ದ ಮಕ್ಕಳು ನಮ್ಮಲ್ಲಿ ಜೋತುಬಿದ್ದು ಮೊಬೈಲ್ ಕಸಿದು ಕೊಂಡಿರಲೂ ಬಹುದು. ಆದರೆ ಈ ದಿನ ಅದನ್ನು ಬಲವಂತವಾಗಿ ಅಲ್ಲದೇ ತುಂಬಾ ಜಾಣ್ಮೆಯಿಂದ ಮಕ್ಕಳ ಕೈಯಿಂದ ಅದನ್ನು ತೆಗದುಕೊಳ್ಳಬೇಕಾದ ಅನಿವಾರ್ಯತೆ ನಮಗೆ ಬಂದಿದೆ. ಮೊಬೈಲ್ ದಾಸರಾಗಿ ಬೆಟ್ಟಿಂಗ್, ಸ್ಟಾರ್, ಲೈಕ್, ಕಾಮೆಂಟ್ ಗಳ ಹೊಗಳಿಕೆ ಎಂಬ ಹುಚ್ಚುತನದ ಮಂಪರಿನಲ್ಲಿ ಬೇರೆ ಬೇರೆ ದಾರಿಗಳು ಮಕ್ಕಳನ್ನು ಕೈಬೀಸಿ ಕರೆಯುತಿವೆ. ಅದರ ಸತ್ಯಾ ಸತ್ಯತೆಯ ಅರಿವು ಪೋಷಕರಿಗೆ ಇದೆ. ಮೊಬೈಲ್ ಚಟಕ್ಕೆ ಬಿದ್ದ ಮಕ್ಕಳು ಸಾವಿನ ಮಡಿಲನ್ನೂ ಸೇರಿದ ಕೆಟ್ಟ ಸಂದರ್ಭಗಳು ಕಣ್ಣಮುಂದೆ ರಾಚುತ್ತಿವೆ.

ಈ ಜೂನ್ ತಿಂಗಳು ಎಂಬುದು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲು  ಹಾಕುವ ತಿಂಗಳು. ಇಲ್ಲಿ ಮೊಬೈಲ್ ಎಂಬ ಉಪಕರಣ ಆ ಅಡಿಗಲ್ಲಿಗೆ ಅಡ್ಡ ಬರಬಾರದು. ಹಾಗಾಗಿ ಪೋಷಕರಾಗಿರುವ ನಾವು ಜಾಣ್ಮೆ ಮತ್ತು ತಾಳ್ಮೆಯಿಂದ ಅವರ ಮನಸನ್ನು ಮೊಬೈಲ್‌ ನಿಂದ ಸರಿಸಿ ಅಕ್ಷರದ ಕಡೆಗೆ ತಿರುಗಿಸ ಬೇಕಾಗಿದೆ.

ಮಂಗಳ ಯಶವಂತಪುರ

ಎಚ್‌ ಡಿ ಕೋಟೆ

More articles

Latest article