Saturday, December 7, 2024

ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟುಕು; ಕಾರಣ ಏನು ಗೊತ್ತೇ?

Most read

ಮಂಗಳೂರು: ವಿಧಾನ ಮಂಡಳ ಚಳಿಗಾಲದ ಅಧಿವೇಶನವನ್ನು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸಲಾಗಿದೆ. ಡಿ.9ರಿಂದ 19ರ ವರೆಗೆ ಮಾತ್ರ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ಈ ಮೊದಲು ಡಿ.9ರಿಂದ 20ರ ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಸಾಹಿತ್ಯ ಸಮ್ಮೇಳನ ಡಿ. 20ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಅದರಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕು. ಈ ವಿಷಯದಲ್ಲಿ ಈ ಅಧಿವೇಶನ ಸಫಲವಾದರೆ ನಾವು ಆ ಭಾಗದ ಜನರಿಗೆ ನೀಡುವ ಗೌರವವಾಗುತ್ತದೆ. ಇದೇ ಕಾರಣಕ್ಕೆ ಅಧಿವೇಶನದಲ್ಲಿ ರಾಜಕೀಯ ಘರ್ಷಣೆ ಮಾಡಬೇಡಿ ಎಂದು ಎಲ್ಲ ಪಕ್ಷಗಳಲ್ಲೂ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು. ರಾಜಕೀಯ ತಿಕ್ಕಾಟಗಳಿಗೆ ಡಿಸೆಂಬರ್ 9ರ ವರೆಗೆ ಅವಕಾಶ ಇದೆ. ಅಧಿವೇಶನ ಮುಗಿದ ನಂತರವೂ ಸಮಯ ಇದ್ಧೇ ಇರುತ್ತದೆ. ಆದ್ದರಿಂದ ವಿಧಾನಮಂಡಲದ  ಸುಗಮ ಕಲಾಪಗಳಿಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು.

ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಯಮದಂತೆ ಸದನ ನಡೆಸುತ್ತೇನೆ. ಸದನ ಸಲಹಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ  ಎಂದು ಉತ್ತರಿಸಿದರು. ಉಪ ಚುನಾವಣೆಯಲ್ಲಿ ಜಯಗಳಿಸಿರುವ ಮೂವರು ಶಾಸಕರಿಗೆ ಅಧಿವೇಶನದಲ್ಲಿಯೇ ಪ್ರಮಾಣವಚನ ಬೋಧಿಸಲಾಗುತ್ತದೆ ಎಂದೂ ತಿಳಿಸಿದರು.

More articles

Latest article