ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 13 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಶಾಸಕರಿಂದ ಚುನಾಯಿತರಾದ ಪರಿಷತ್ತಿನ 11 ಸದಸ್ಯರ ಅವಧಿ ಜೂನ್ 17 ರಂದು ಮುಕ್ತಾಯವಾಗುವುದರಿಂದ ಚುನಾವಣೆ ದಿನಾಂಕವನ್ನಿ ನಿಗಧಿಮಾಡಲಾಗಿದೆ.
ಚುನಾವಣೆಗೆ ಮೇ 27 ರಂದು ಅಧಿಸೂಚನೆ ಹೊರಡಿಸಲಿದ್ದು, ಜೂನ್ 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 4 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂನ್ 6 ಕೊನೆಯ ದಿನವಾಗಿದೆ. ಜೂನ್ 13 ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಈಗ ಹಾಲಿ ಸದಸ್ಯರಾದ ಅರವಿಂದಕುಮಾರ ಅರಳಿ, ಎನ್.ಎಸ್. ಬೋಸರಾಜ್, ಕೆ.ಗೋವಿಂದರಾಜ್, ಡಾ. ತೇಜಸ್ವಿನಿ ಗೌಡ, ಮುನಿರಾಜುಗೌಡ ಪಿ.ಎಂ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಬಿ.ಎಂ. ಫಾರೂಕ್, ಎನ್ ರವಿ ಕುಮಾರ್, ರಘುನಾಥ ರಾವ್ ಮಲ್ಕಾಪುರೆ, ಎಸ್.ರುದ್ರೇಗೌಡ ಮತ್ತು ಕೆ ಹರೀಶ್ ಕುಮಾರ್ ಅವರ ಕಾಲಾವಧಿ ಜೂನ್ ತಿಂಗಳ 17ಕ್ಕೆ ಮುಕ್ತಾಯವಾಗಲಿದ್ದು ಈ ಚುನಾವಣೆ ಅನಿವಾರ್ಯವಾಗಿದೆ.