ಬೆಳಗಾವಿ : ಬೆಳಗಾವಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚುತ್ತಿದ್ದಂತೆ ಉಭಯ ಪಕ್ಷಗಳ ನಾಯಕಿಯರ ನಡುವಿನ ವೈಯಕ್ತಿಕ ದಾಳಿಗಳೂ ಚರ್ಚೆಗೆ ಗ್ರಾಸವಾಗುತ್ತಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿ ನಾಯಕಿ, ಮಾಜಿ ಸಂಸದೆ ಮಂಗಲಾ ಅಂಗಡಿ ಅವರ ನಡುವೆ ಪರಸ್ಪರರಲ್ಲಿ ನಡೆಯುತ್ತಿರುವ ‘ಕಿತ್ತುಕೊಳ್ಳುವ’ ಕಿತ್ತಾಟದ ರಾಜಕೀಯಕ್ಕೆ ಸದ್ಯ ಬೆಳಗಾವಿ ಸಾಕ್ಷಿಯಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ತಮ್ಮ ಪುತ್ರ ಮೃನಾಲ್ ಹೆಬ್ಬಾಳ್ಕರ್ ಪರ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಪ್ರಚಾರದ ವೇಳೆ ‘ಶೆಟ್ಟರ್ ತಮ್ಮ ಬೀಗರ ಟಿಕೆಟ್ ಕಿತ್ತುಕೊಂಡಿದ್ದಾರೆ’ ಎಂದಿದ್ದಾರೆ. ಇದಕ್ಕೆ ಮಾಧ್ಯಮ ಪ್ರಕಟಣೆಯ ಮೂಲಕ ಉತ್ತರ ಕೊಟ್ಟ ಮಾಜಿ ಸಂಸದೆ ಮಂಗಳಾ ಅಂಗಡಿ ಅವರು “ಎರಡನೇ ಬಾರಿ ಶಾಸಕಿಯಾದ ಕೂಡಲೇ ಸಚಿವೆಯಾಗಿರುವ ಲಕ್ಷ್ಮೀ ಅವರು ತಮ್ಮ ಪಕ್ಷದ ಹಿರಿಯ ನಾಯಕರ ಸಚಿವ ಸ್ಥಾನ ಕಿತ್ತುಕೊಂಡಿದ್ದಾರೆ” ಎಂದಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ನಾನು ಮಹಿಳಾ ಕೋಟಾದಡಿ ಸಚಿವ ಸ್ಥಾನ ಪಡೆದಿದ್ದೇನೆ. ಯಾರಿಂದಲೂ ಕಿತ್ತುಕೊಂಡಿಲ್ಲ” ಎಂದಿದ್ದಾರೆ.
“ಮಂಗಲಾ ಅಂಗಡಿ ವಯಸ್ಸಿನಲ್ಲಿ ನನಗಿಂತ ಹಿರಿಯರಾದರೂ ಅವರಿಗೆ ರಾಜಕೀಯ ಅನುಭವ ಕಡಿಮೆ. ಅವರು ಕಳೆದ ಉಪಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದು ಬಂದವರು. ಸಚಿವ ಸಂಪುಟ ರಚಿಸುವಾಗ ಮಹಿಳಾ ಕೋಟಾ ಅಂತಾ ಇರುತ್ತೆ. ರೂಪಾ ಶಶಿಧರ ಮತ್ತು ನಾನು ಎರಡನೇ ಬಾರಿ ಆಯ್ಕೆಯಾದ ಶಾಸಕಿಯರು. ರೂಪಾ ತಂದೆ ಮುನಿಯಪ್ಪನವರು ಸಚಿವರಾದ ಕಾರಣ ನನಗೆ ಮಹಿಳಾ ಕೋಟಾದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗುವ ಅದೃಷ್ಟ ಒಲಿಯಿತು. ಮಂಗಲಾ ಅಂಗಡಿ ಮುಗ್ದರಾಗಿರುವ ಕಾರಣ ಅವರಿಗೆ ಇಂತಹ ಸೂಕ್ಷ್ಮ ವಿಚಾರಗಳು ಗೊತ್ತಿಲ್ಲ. ಯಾರೋ ಬರೆದುಕೊಟ್ಟ ಹೇಳಿಕೆಗಳನ್ನು ಪತ್ರಿಕೆಗಳಿಗೆ ಅವರು ಬಿಡುಗಡೆ ಮಾಡಿದ್ದಾರೆ ಅಷ್ಟೇ” ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರಿಸಿದ್ದಾರೆ.