ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ?: ಸಿಎಂ ಪರ ರವಿವರ್ಮ ಕುಮಾರ್ ವಾದ

Most read

ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆದಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ. ಸಿಎಂ ಪರ ವಕೀಲ ರವಿವರ್ಮ ಕುಮಾರ್ ವಾದ ಮಂಡನೆ ಮಾಡುತ್ತಿದ್ದಾರೆ.

ಹಿಂದಿನ ವಿಚಾರಣೆ ವೇಳೆ ಸಿಎಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸೆಕ್ಷನ್ 17A ಅಡಿ ಮಾನದಂಡ ಪಾಲನೆಯಾಗಿಲ್ಲ. ರಾಜ್ಯಪಾಲರ ಪ್ರಾಸಿಕ್ಯೂಷನ್ ರದ್ದುಪಡಿಸಬೇಕು ಎಂದು ವಾದ ಮಂಡನೆ ಮಾಡಿದ್ದರು. ಆ ವಾದಕ್ಕೆ ಇವತ್ತು ಪ್ರತಿವಾದ ಮುಂದುವರೆದಿದೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. 5 ಅಂಶಗಳ ಆಧಾರದಲ್ಲಿ ವಾದ ಮಂಡಿಸುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಿಎಂ ಪರ ವಕೀಲ ರವಿವರ್ಮ ಕುಮಾರ್, ರಾಜ್ಯಪಾಲರ ಆದೇಶದ ಒಂದು ಪ್ಯಾರಾ ಓದೋದಾಗಿ ಮನವಿ ಮಾಡಿದರು.

‘ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳಡಿಯಲ್ಲಿ ತನಿಖೆಗೆ ಅನುಮತಿ ನೀಡಲಾಗಿದೆ. ಆರೋಪಿತ ಘಟನೆ ನಡೆದಾಗ ಭಾರತೀಯ ನ್ಯಾಯ ಸಂಹಿತೆ ಜಾರಿಯಲ್ಲಿರಲಿಲ್ಲ. ಹೀಗಾಗಿ ರಾಜ್ಯಪಾಲರ ಅನುಮತಿಯೇ ಕಾನೂನುಬಾಹಿರ. ಐಪಿಸಿ ಸೆಕ್ಷನ್‌ನಡಿ ಅನುಮತಿ ನೀಡುತ್ತೇನೆಂದು ಹೇಳಬಹುದಿತ್ತು. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಲ್ಲವೆಂಬುದಕ್ಕೆ ಇದು ಸಾಕ್ಷಿ. ಸಿಎಂ ಪತ್ನಿ ಪಾರ್ವತಿ ಹಾಗೂ ಅವರ ಸಹೋದರನ ವಿರುದ್ಧ ಆರೋಪವಿದೆ. ಪತ್ನಿ ಹಾಗೂ ಮೈದುನನ ಲೋಪಗಳಿಗೆ ಸಿಎಂ ಜವಾಬ್ದಾರಿಯಾಗುತ್ತಾರೆಯೇ?’ ಹೀಗೆಂದು ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.

ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ ಮೆಹ್ತಾ, ಪತ್ನಿ ಪರವಾಗಿ ಪತಿಗೆ ಪವಿತ್ರವಾದ ಹೊಣೆಗಾರಿಕೆ ಇರುತ್ತದೆ. ಎಲ್ಲಾ ಲೋಪಗಳನ್ನೂ ಪತಿ ಪತ್ನಿ ಮೇಲೆ ಹೊರಿಸಬಾರದು ಎಂದು ಹೇಳಿದರು.

More articles

Latest article