ಹಿಂದಿಯೇತರ ಭಾಷೆಗಳ ಉಳಿವಿಗಾಗಿ ಭಾಷಾ ನಿರ್ದೇಶಕರ ನೇಮಕವಾಗಲಿ: ಡಾ. ಬಿಳಿಮಲೆ ಒತ್ತಾಯ

Most read

ಬೆಂಗಳೂರು: ದೇಶಾದ್ಯಂತ ಹಿಂದಿ ಹೇರಿಕೆಯ ಪ್ರಾಬಲ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಭಾರತೀಯ ರಾಜ್ಯಗಳು ಸಂಘಟಿತರಾಗಬೇಕಿದೆ. ಸಾಂವಿಧಾನಿಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಈ ರಾಜ್ಯಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದ್ದು, ಕರ್ನಾಟಕದಿಂದಲೇ ಈ ಹೋರಾಟ ಆರಂಭವಾಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ಸಂವಿಧಾನದ 350 (ಬಿ) ಅನುಚ್ಛೇದವು ಭಾಷಾ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ಭಾಷಾ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ನೀಡಿದ್ದು, ಹಿಂದಿಯೇತರ ರಾಜ್ಯಗಳ ಪರಸ್ಪರ ಭಿನ್ನಾಭಿಪ್ರಾಯಗಳು ಈ ಸಂಘಟಿತ ಹೋರಾಟಕ್ಕೆ ಅಡ್ಡಿಯಾಗಿರುವ ಕಾರಣ ಅಭಿಪ್ರಾಯ ಭೇದವನ್ನು ತೊಡೆದು ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳು ಒಗ್ಗೂಡಿ ಭಾಷಾ ನಿರ್ದೇಶಕರ ನೇಮಕಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯ ಈ ಕುರಿತಂತೆ ಮೊದಲ ಹೆಜ್ಜೆಯನ್ನು ಇಡುವುದು ಸಕಾಲಿಕ ನಿಲುವಾಗಲಿದೆ ಎಂದಿರುವ ಡಾ.ಬಿಳಿಮಲೆ, ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಭಾಷಾ ನಿರ್ದೇಶನಾಲಯವನ್ನು ಸ್ಥಾಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಸರ್ಕಾರವನ್ನು ಕೋರಿದ್ದಾರೆ. ಇದು ನೆರೆ ರಾಜ್ಯಗಳ ಹಾಗೂ ಕರ್ನಾಟಕದಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರುಗಳ ಸಂವಿಧಾನಿಕ ಹಕ್ಕುಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನ ಹಲವಾರು ಸ್ಥಳಗಳಲ್ಲಿ ಅಳವಡಿಸಿರುವ ಮಾರ್ಗಸೂಚನಾ ಫಲಕಗಳಲ್ಲಿ ಕೇವಲ ಆಂಗ್ಲಭಾಷೆಯೇ ವಿಜೃಂಭಿಸುತ್ತಿರುವುದು ವಿಷಾದನೀಯವಾದ ಸಂಗತಿಯಾಗಿದ್ದು, ಸರ್ಕಾರದ ವ್ಯವಸ್ಥೆಯೇ ಕನ್ನಡದ ಕುರಿತಂತೆ ನಕಾರಾತ್ಮಕ ಧೋರಣೆಯನ್ನು ತಳೆಯುವುದು ಖಂಡನೀಯ. ಎಂದಿದ್ದಾರೆ.

ಈ ಕುರಿತಂತೆ ಕೂಡಲೇ ತನಿಖೆ ನಡೆಸಿ ಕನ್ನಡ ವಿರೋಧಿ ಕೆಲಸ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ಡಾ.ಬಿಳಿಮಲೆ, ಇಷ್ಟರಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ನಗರ ಪೊಲೀಸ್ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ಸೂಚಿಸಿದ್ದಾರೆ.

More articles

Latest article