ಲಕ್ಷ್ಮೀದೇವಿಯ ವಾಹನ ಮತ್ತು ದೀಪಾವಳಿ ಆಚರಣೆ

Most read

ಲಕ್ಷ್ಮಿಯ ವಾಹನವು ಗೂಬೆ ಎಂದು ಬಹಳ ಜನಕ್ಕೆ ಗೊತ್ತಿಲ್ಲ. ಕಾರಣವೆಂದರೆ ಬೇರೆ ಎಲ್ಲಾ ದೇವರ ಚಿತ್ರದೊಟ್ಟಿಗೆ ಅವರ ಕಾಲ ಬಳಿ ಅವರ ವಾಹನದ ಚಿತ್ರವೂ ಇರುತ್ತದೆ. ಆದರೆ ಲಕ್ಷ್ಮಿಯ ಫೋಟೋದಲ್ಲಿ ಎಲ್ಲಿಯೂ ಗೂಬೆ ಪಕ್ಷಿಯ ಚಿತ್ರ ಕಾಣಿಸುವುದೇ ಇಲ್ಲ. ಗೂಬೆ ಅಪಶಕುನವೆಂದು ಈ ಅನ್ಯಾಯವೇ? ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಎಲ್ಲಾ ಹಿಂದೂ ದೇವ ದೇವಿಯರ ಪೂಜೆಯ ಜತೆಗೇ ಅವರ ವಾಹನಗಳಿಗೂ ಪೂಜೆ ಮಾಡಿ ಕುಂಕುಮ ಹಚ್ಚಿ ನೈವೇದ್ಯ ಅರ್ಪಿಸಲಾಗುತ್ತದೆ. ಆದರೆ ಕೇವಲ ಒಂದೇ ಒಂದು ದೇವರ ವಾಹನಕ್ಕೆ ಪೂಜೆ ಆರತಿ ನೈವೇದ್ಯದ ಭಾಗ್ಯ ಇಲ್ಲ! ಅದು ಯಾರು ಗೊತ್ತೇ? ದೀಪಾವಳಿಯ ದಿನ ಸಂಪತ್ತು ಸಮೃದ್ಧಿಗಾಗಿ ನಾವು ಪೂಜೆ ಮಾಡುವ ಲಕ್ಷ್ಮೀದೇವಿಯ ವಾಹನ ಗೂಬೆ! (ತುಳುವಿನಲ್ಲಿ ಗುಮ್ಮೆ, ಹಿಂದಿಯಲ್ಲಿ “ಉಲ್ಲೂ”, ಇಂಗ್ಲಿಷಿನಲ್ಲಿ “ಔಲ್”). ಹೌದು, ಲಕ್ಷ್ಮಿಯ ವಾಹನವು ಗೂಬೆ ಎಂದು ಬಹಳ ಜನಕ್ಕೆ ಗೊತ್ತಿಲ್ಲ. ಕಾರಣ ಬೇರೆ ಎಲ್ಲಾ ದೇವರ ಚಿತ್ರದೊಟ್ಟಿಗೆ ಅವರ ಕಾಲ ಬಳಿ ಅವರ ವಾಹನದ ಚಿತ್ರವೂ ಇರುತ್ತದೆ. ಆದರೆ ಲಕ್ಷ್ಮಿಯ ಫೋಟೋದಲ್ಲಿ ಎಲ್ಲಿಯೂ ಗೂಬೆ ಪಕ್ಷಿಯ ಚಿತ್ರ ಕಾಣಿಸುವುದೇ ಇಲ್ಲ. ಗೂಬೆ ಅಪಶಕುನವೆಂದು ಈ ಅನ್ಯಾಯವೇ? ಗೂಬೆ ನಿಜವಾಗಿ ಬುದ್ಧಿವಂತಿಕೆ ಮತ್ತು ವಿವೇಕದ ಪ್ರತೀಕ. ಯೂರೋಪಿಯನ್ನರು ಗೂಬೆ ಬುದ್ಧಿವಂತಿಕೆ ಮತ್ತು ನ್ಯಾಯದ ಸಂಕೇತ ಎಂದು ಭಾವಿಸುತ್ತಾರೆ. ಆದರೂ ಭಾರತದಲ್ಲಿ ಗೂಬೆ ಯಾವಾಗಲಾದರೂ ರಾತ್ರಿ ತಪ್ಪಿ ಮನೆಯೊಳಗೆ ಬಂದರೆ ತಕ್ಷಣ ಜ್ಯೋತಿಷಿಯ ಹತ್ತಿರ ಓಡಿ ಶಕುನ ಕೇಳುವವರು ಹಾಗೂ ಮಹಾ ಮೃತ್ಯುಂಜಯ ಪೂಜೆ ಮಾಡಿಸುವವರೂ ಇದ್ದಾರೆ.  ಪುರಂದರದಾಸರು ಚಿಕ್ಕವರಿದ್ದಾಗ ತನ್ನ ತಾಯಿಗೆ “ಅಮ್ಮಾ ನೀ ಗುಮ್ಮನ ಕರೆಯದಿರು” ಎಂದು ಪದ್ಯದ ಮೂಲಕವೇ ಗೊಗ್ಗೊರೆಯುತ್ತಿದ್ದರಂತೆ!  ಹಿಂದಿ ಸಿನೆಮಾಗಳಲ್ಲಿ ಈಗಲೂ ಉಲ್ಲೂ ಕಾ ಪಟ್ಟಾ, ಉಲ್ಲೂ ಕಾ ದೂಮ್ ಎಂದೂ, ಕನ್ನಡ ಸಿನೆಮಾದಲ್ಲಿ ಲೋ ಗೂಬೆ ಎಂದು ಬಯ್ಯುವುದು ಸಾಮಾನ್ಯ. 

ಲಕ್ಷ್ಮೀ ಪೂಜೆ- ಸಾಂದರ್ಭಿಕ ಚಿತ್ರ

ಗೂಬೆ ಲಕ್ಷ್ಮಿಯ ವಾಹನ ಎಂದ ಮೇಲೆ ದೀಪಾವಳಿಯ ದಿನ ಸಂಜೆ ನಾವು ಲಕ್ಷ್ಮಿಯನ್ನು ಪೂಜೆಸಿ ಮನೆಯೊಳಗೆ/ ಅಂಗಡಿಯೊಳಗೆ ಬರಮಾಡಿಕೊಂಡಾಗ ಅವಳ ಜತೆ ಅವಳ ವಾಹನ ಬರದೇ ಇರುತ್ತದೆಯೇ? ನಿಜವಾಗಿ ಗೂಬೆ ನಿಶಾಚರ ಪಕ್ಷಿ. ಬೇರೆಲ್ಲಾ ಪಕ್ಷಿಗಳು ಹಗಲು ಹೊತ್ತಿನಲ್ಲಿ ಆಹಾರ ಹುಡುಕಿದರೆ ಗೂಬೆ ಮಾತ್ರ ರಾತ್ರಿ ಬೇಟೆ ಆಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಅದಕ್ಕೆ ದೊಡ್ಡ ದೊಡ್ಡ ಕಣ್ಣು ಇದ್ದರೂ ಹಗಲು ಹೊತ್ತಿನಲ್ಲಿ ಗೂಬೆಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಆದರೆ ರಾತ್ರಿ ಅದು ಸ್ಪಷ್ಟವಾಗಿ ನೋಡಬಲ್ಲದು. ಆದರೆ ಜಗಮಗ ಬೆಳಕು ಮತ್ತು ಪಟಾಕಿ ಸದ್ದು ಇರುವ ಸ್ಥಳದಲ್ಲಿ ಗೂಬೆ ಎಂದೂ ಬರುವುದಿಲ್ಲ. ಹಾಗಿದ್ದರೂ ಅಂತಹಾ ನಿಶಾಚರ ಪಕ್ಷಿಯನ್ನು ಬೆಳಕಿನ ಹಬ್ಬ ದೀಪಾವಳಿಯೊಂದಿಗೆ ತಳಕು ಹಾಕಿದ್ದು ವಿಚಿತ್ರವಲ್ಲವೇ? 

ಲಕ್ಷ್ಮಿ ಹಗಲು ಹೊತ್ತಿನಲ್ಲಿ ನಮ್ಮ ಮನೆಗೆ ಬಂದರೆ ಅವಳ ವಾಹನ ಅವಳ ಜತೆ ನಮ್ಮ ಮನೆ-ಅಂಗಡಿಯೊಳಗೆ ಬರುವುದಿಲ್ಲವೇ?  ಕೆಲವು ಪ್ರಚಂಡ ತಲೆಯ ವೈದಿಕರು ಇದಕ್ಕೆ ಒಂದು ಸುಲಭದ ಪರಿಹಾರ ಹುಡುಕಿದ್ದಾರೆ. ಅವರು ಲಕ್ಷ್ಮಿಯ ವಾಹನವನ್ನೇ ಬದಲಿಸಿ ಬಿಟ್ಟಿದ್ದಾರೆ. ಸಣ್ಣ ಗೂಬೆಯ ಬದಲು ದೊಡ್ಡ ಆನೆಯನ್ನೇ ಲಕ್ಷ್ಮಿಯ ವಾಹನ ಎಂದು ಕೆಲವು ಚಿತ್ರಗಳಲ್ಲಿ ತೋರಿಸಲಾಗುತ್ತದೆ ಹಾಗೂ ಅವಳಿಗೆ ಗಜಲಕ್ಷ್ಮಿ ಎಂದು ಕರೆಯಲಾಗುತ್ತದೆ. ನಾನು ಪ್ರಶ್ನಿಸಿದ ಜನರಲ್ಲಿ ಶೇ.95 ಜನರಿಗೆ ಲಕ್ಷ್ಮಿಯ ವಾಹನ ಗೂಬೆ ಎಂದು ಗೊತ್ತೇ ಇರಲಿಲ್ಲ. ಕೆಲವರು ಆನೆಯೇ ಲಕ್ಷ್ಮಿಯ ವಾಹನ ಎಂದು ವಾದಿಸಿದರು. ಆದರೂ ಇಂದು ಅವರೆಲ್ಲಾ ಗಡದ್ದಾಗಿ ತಮ್ಮ ಮನೆಯಲ್ಲಿ ಹಾಗೂ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿದರು.

ಗೂಬೆ ಲಕ್ಷ್ಮಿಯ ವಾಹನ..

ಹಿಂದೂಗಳಲ್ಲಿ 33 ಕೋಟಿ ದೇವರು ಇದ್ದಾರಂತೆ, ಹಾಗೂ ಆವರಿಗೆ 33 ಕೋಟಿ ಬೇರೆ ಬೇರೆ ಪ್ರಾಣಿ-ಪಕ್ಷಿಗಳು ವಾಹನವಾಗಿವೆಯಂತೆ. ಆದರೆ ಈ 33 ಕೋಟಿ ದೇವರ ಹೆಸರು ಮತ್ತು 33 ಕೋಟಿ ಪ್ರಾಣಿ-ಪಕ್ಷಿಗಳ ಹೆಸರು ಮಾತ್ರ ಯಾವುದೇ ಮಹಾನ್ ಹಿಂದೂ ವಿದ್ವಾಂಸನಿಗೂ ಗೊತ್ತಿಲ್ಲ. ಇದುವೇ ವೈದಿಕ ಪುರಾಣ ಕಥೆಗಳ ವಿಪರ್ಯಾಸ. ಪುರಾಣ ಕಾಲದಲ್ಲಿ ಕಾರು, ಬಸ್ಸು, ಬೈಕು, ಸೈಕಲ್, ಟ್ರ್ಯಾಕ್ಟರ್, ವಿಮಾನ, ರಾಕೆಟ್ಟು, ಮುಂತಾದ ಯಾಂತ್ರಿಕ ವಾಹನಗಳು ಇರಲಿಲ್ಲವಾದುದರಿಂದ ಪ್ರಾಣಿ-ಪಕ್ಷಿಗಳನ್ನೇ ದೇವರ ವಾಹನ ಮಾಡುವುದು ಆ ಕಾಲದಲ್ಲಿ ಅನಿವಾರ್ಯವಾಗಿತ್ತು. ಮೇಲಾಗಿ ಕೇವಲ ಭಾರತ ಮೂಲದ ಪ್ರಾಣಿ-ಪಕ್ಷಿಗಳನ್ನು ಮಾತ್ರ ದೇವರ ವಾಹನ ಮಾಡಲಾಯಿತು. ದೇವರ ವಾಹನ ಆಗುವುದರಿಂದ ವಂಚಿತವಾದ ಶುದ್ಧ ಭಾರತ ಮೂಲದ ಕೆಲವು ಪ್ರಾಣಿಗಳೆಂದರೆ ಕರಡಿ, ಚಿರತೆ, ತೋಳ, ನರಿ, ಕಾಡು ಹಂದಿ, ಕಾಡೆಮ್ಮೆ, ಖಡ್ಗ ಮೃಗ, ಮೊಲ, ಮಂಗ! (ತುಂಟ ಮಂಗ ಯಾವುದಾದರೂ ದೇವರ ವಾಹನ ಆಗಿದ್ದರೆ ಆ ದೇವರ ಅವಸ್ಥೆ ಎನಾಗುತ್ತಿತ್ತೋ ಪಾಪ?). ಆದರೆ ಒಂಟೆ ಮತ್ತು ಕಲ್ಕಿಯ ವಾಹನ ಬಿಳಿ ಕುದುರೆಯು ಭಾರತೀಯ ಮೂಲದ್ದಲ್ಲ.  ನಮ್ಮ ಜಂಬೂ ದ್ವೀಪದಲ್ಲಿ ಮೂಲತಃ ಇರದ ಪ್ರಾಣಿಗಳಾದ ಕಾಂಗರೂ, ಗೊರಿಲ್ಲ, ಜೀಬ್ರಾ, ಜಿರಾಫೆ, ಪಾಂಡಾ ಇವುಗಳು ಯಾವುದೇ ವೈದಿಕ ದೇವರ ವಾಹನವಾಗುವುದರಿಂದ ವಂಚಿತರಾದವು ಪಾಪ.  ಕತ್ತೆಯೂ ಒಂದು ದೇವಿಯ ವಾಹನ ಎಂಬುದು ಎಷ್ಟು ಜನರಿಗೆ ಗೊತ್ತಿದೆ? ಆ ದೇವಿ ಯಾರು ಗೊತ್ತೇ? ಅದು ಶೀತಲಾದೇವಿ. ಶೀತಲಾ ದೇವಿಯನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಪೂಜಿಸಲಾಗುತ್ತದೆ. ಪಾಪ ಹನುಮಂತನು ದೇವರಾದರೂ ಅವನಿಗೆ ಯಾವುದೇ ವಾಹನ ಇಲ್ಲ, ಯಾಕೆಂದರೆ ಆತನೂ ಅರ್ಧ ಪ್ರಾಣಿ ತಾನೇ! ಮೇಲಾಗಿ ಅವನು ಸ್ವತಃ ಆಕಾಶದಲ್ಲಿ ಹಾರಬಲ್ಲ. ಬಹುಶ: ಮನುಷ್ಯ ಜಾತಿಗೆ ಹತ್ತಿರವಾದ ಮಂಗ-ಚಿಂಪಾಂಜಿ-ಗೊರಿಲ್ಲ ಇವುಗಳನ್ನು ವಾಹನ ಮಾಡಿಲ್ಲ. ಇನ್ನು ನತದೃಷ್ಟ ಕರಡಿಯನ್ನು ಯಾರೂ ಯಾಕೆ ವಾಹನ ಮಾಡಿಕೊಳ್ಳಲಿಲ್ಲವೋ ಅರ್ಥವಾಗುತ್ತಿಲ್ಲ! 

ಗಜಲಕ್ಷ್ಮಿ

ಸುಬಹ್ಮಣ್ಯ ದೇವರ ಹೆಂಡತಿ ಷಷ್ಟಿದೇವಿ ಅರ್ಥಾತ್ ದೇವಸೇನಾ. ಅವಳ ವಾಹನ ಕರಿ ಬೆಕ್ಕು. ಸುಬ್ರಹ್ಮಣ್ಯ ದೇವರನ್ನು ದಕ್ಷಿಣ ಭಾರತದ ಎಲ್ಲೆಡೆ ಪೂಜಿಸುತ್ತಾರೆ, ಆದರೆ ಆತನ ಹೆಂಡತಿಯಾದ ಷಷ್ಟಿಯನ್ನು ಮಾತ್ರ ದಕ್ಷಿಣದಲ್ಲಿ ಪೂಜಿಸುವುದಿಲ್ಲ, ಕೇವಲ ಬಂಗಾಳ-ಬಿಹಾರದಲ್ಲಿ ಮಾತ್ರ ದೀಪಾವಳಿಯ ಬಳಿಕ ಆರನೆಯ ದಿನಕ್ಕೆ ಷಷ್ಟಿದೇವಿಯ ಪೂಜೆ ಆಗುತ್ತದೆ. ಅದಕ್ಕೆ ಛಟ್ ಪೂಜಾ ಅನ್ನುತ್ತಾರೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೊಡುವ ಹಾಗೂ ರೈತರ ಫಸಲು ಉತ್ತಮಗೊಳಿಸುವ ಶುಭಕಾರಕ ದೇವಿ ಈ ಷಷ್ಟಿ. ಆದರೂ ದಕ್ಷಿಣದಲ್ಲಿ ಷಷ್ಟಿಯ ಜನಪ್ರಿಯತೆ ಕಡಿಮೆ. ಭೈರವ ದೇವರ ವಾಹನ ನಾಯಿ. ದತ್ತಾತ್ರೇಯ ದೇವರ ಜತೆಗೂ ನಾಯಿಗಳಿರುತ್ತವೆ. ಶಿವನ ವಾಹನ ನಂದಿ, ವಿಷ್ಣುವಿನ ವಾಹನ ಗರುಡ, ದುರ್ಗೆಯ ವಾಹನ ಹುಲಿ ಅಥವಾ ಸಿಂಹ, ಗಣಪತಿಗೆ ಇಲಿ, ಕಾರ್ತಿಕೇಯನಿಗೆ ನವಿಲು, ಸರಸ್ವತಿ ಮತ್ತು ಬ್ರಹ್ಮನ ವಾಹನ ಹಂಸ. ಶನಿದೇವರ ವಾಹನ ಕಾಗೆ, ವರುಣನ ವಾಹನ ಮೊಸಳೆ, ಸದಾ ಚಲಿಸುತ್ತಿರುವ ವಾಯುವಿಗೆ ವಾಹನ ಬೇಕಿಲ್ಲವಾದರೂ ಜಿಂಕೆಯೇ ವಾಯುವಿನ ವಾಹನ, ಹತ್ತಿರ ಬಂದಿದ್ದನ್ನೆಲ್ಲ ತಕ್ಷಣ ಸುಡುವ ಅಗ್ನಿಗೂ ಒಂದು ವಾಹನವಿದೆ, ಅದು ಟಗರು!  ಸೂರ್ಯನ ವಾಹನ ಕುದುರೆ. ದೇವರಾಜ ಇಂದ್ರನಿಗೆ ಐರಾವತವಿದೆ, ಮೃತ್ಯು ಮತ್ತು ಧರ್ಮದೇವತೆ ಯಮರಾಜನ ವಾಹನ ಕೋಣ, ಮಣಿಕಂಠ ಅಯ್ಯಪ್ಪನ ವಾಹನ ಹುಲಿ, ಕಾಮದೇವನ ವಾಹನ ಗಿಳಿ.  

ಇಡೀ ಪ್ರಪಂಚವನ್ನೇ ಆವರಿಸಿರುವ ದೇವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಪ್ರಮೇಯವೇ ಬರುವುದಿಲ್ಲ. ಕಾರಣ ಆ ದಿವ್ಯ ಶಕ್ತಿ ಪ್ರತಿಯೊಂದು ಸ್ಥಳದಲ್ಲೂ ಪ್ರತಿಯೊಂದು ಕಣದಲ್ಲೂ ಇರುವಾಗ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಅವಶ್ಯಕತೆಯೇ ಆ ದೇವರಿಗಿಲ್ಲ. ಹಾಗಾಗಿ ದೇವರೆಂಬ ಸರ್ವಶಕ್ತ ದಿವ್ಯಶಕ್ತಿಗೆ ವಾಹನಗಳೇ ಬೇಕಿಲ್ಲ. ಆದರೂ ದೇವರು ಚಿತ್ರವಿಚಿತ್ರ ಪ್ರಾಣಿ-ಪಕ್ಷಿಗಳ ಮೇಲೆ ಸವಾರಿ ಮಾಡುತ್ತಾರೆ ಎಂದು ನಾವು ಬಾಲಿಶವಾಗಿ ಚಿತ್ರಿಸುವುದು ಬಹುಶ ಆ ದೇವರಿಗೆ ನಾವು ಮಾಡುವ ಘೋರ ಅವಮಾನವಲ್ಲವೇ?  ಆ ಕಾಲಕ್ಕೆ ಈಗಿನ ಕಾರು, ಟೆಂಪೋ, ವಿಮಾನ, ಹೆಲಿಕಾಪ್ಟರ್ ರಾಕೆಟ್ ಮುಂತಾದ ಯಾಂತ್ರಿಕ ವಾಹನಗಳೂ ಇದ್ದಿದ್ದರೆ ಅವು ಯಾವೆಲ್ಲ ವೈದಿಕ ದೇವರ ವಾಹನಗಳಾಗುತ್ತಿದ್ದವು ಎಂಬುದನ್ನು ಕಲ್ಪಿಸಿಕೊಳ್ಳಿ !

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

ಇದನ್ನೂ ಓದಿ- ವೈದಿಕ ಹಬ್ಬಗಳು, ದೈವಗಳ ಮೂಲವು ಬೌದ್ಧ–ಜೈನ ಧರ್ಮಗಳಲ್ಲಿದೆಯೇ?

More articles

Latest article