ಬೆಂಗಳೂರು: ಕುವೈತ್ ಅಗ್ನಿ ದುರಂತದಲ್ಲಿ ಸಾವಿಗೀಡಾಗಿರುವ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷದ ವಿಜಯ ಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಅವರ ಅವಲಂಬಿತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ ರೂ.ಗಳ ಪರಿಹಾರವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ವಾಹನ ಚಾಲಕರಾಗಿ ಕುವೈತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯ ವಿಜಯ ಕುಮಾರ್ ಅವರ ಕುಟುಂಬದಲ್ಲಿ ಅವರ ಅಣ್ಣ ತಮ್ಮಂದಿರುವ ಸೇರಿದಂತೆ 8 ಜನ ಅವಲಂಬಿತರಿದ್ದಾರೆ. ಇವರ ಜೀವನ ನಿರ್ವಹಣೆ ದುಸ್ತರವಾಗುವುದರಿಂದ ಕೇರಳ ಸರ್ಕಾರ ಅಗ್ನಿ ದರುಂತದಲ್ಲಿ ಮೃತರ ಕುಟಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿರುವಂತೆಯೇ ರಾಜ್ಯ ಸರ್ಕಾರವೂ ಆರ್ಥಿಕ ನೆರವು ಘೋಷಿಸಬೇಕೆಂದು ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮನವಿ ಮಾಡಿದ್ದರು.
ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಮೃತ ವಿಜಯಕುಮಾರ್ ಕುಟುಂಬಕ್ಕೆ ಐದು ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒದಗಿಸಲು ಸೂಚಿಸಿದ್ದಾರೆ.
ಕುವೈತ್ ನಲ್ಲಿ ಭಾರತೀಯರೇ ಇದ್ದ ಕಟ್ಟಡವೊಂದಕ್ಕೆ ಬೆಂಕಿ ಬಿದ್ದ ಪರಿಣಾಮವಾಗಿ 45 ಮಂದಿ ಭಾರತೀಯರು ಮೃತಪಟ್ಟಿದ್ದರು. ಕರ್ನಾಟಕದ ಕಲಬುರ್ಗಿಯ ವಿಜಯಕುಮಾರ್ ಮೃತಪಟ್ಟ ದುರ್ದೈವಿಗಳಲ್ಲಿ ಒಬ್ಬರಾಗಿದ್ದಾರೆ.