ಬೆಂಗಳೂರು: ನನ್ನ ಪ್ರಾಣಕ್ಕೆ ಅಪಾಯವಾದರೆ ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರೇ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಕುಸುಮಾ ಹನುಮಂತರಾಯಪ್ಪ ತಕ್ಕ ತಿರುಗೇಟು ನೀಡಿದ್ದಾರೆ. ಮುನಿರತ್ನಗೆ ಟಾಂಗ್ ನೀಡಿರುವ ಕುಸುಮಾ ಅವರು ‘ಇದು ನನ್ನ ಹಿನ್ನೆಲೆ’ ಎಂದು ಹೇಳುವ ಮೂಲಕ ಕುಟುಕಿದ್ದಾರೆ.
ಕುಸುಮಾ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, ನಾನು ಕುಸುಮಾ, ಇಂಜಿನಿಯರಿಂಗ್ ಹಾಗೂ ಎಂಎಸ್ ಸ್ನಾತಕೋತ್ತರ ಪದವೀಧರೆ, ಪ್ರಾಧ್ಯಾಪಕಿಯ ವೃತ್ತಿಯಲ್ಲಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನನ್ನ ತಂದೆ ಹನುಮಂತರಾಯಪ್ಪ ಬಿಎಂಟಿಸಿಯಲ್ಲಿ ಕಂಡಕ್ಟರ್ ವೃತ್ತಿಯಲ್ಲಿದ್ದು, ಸ್ವಯಂನಿವೃತ್ತಿ ಪಡೆದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ತಂಗಿ ಎಂಬಿಎ ಪದವೀಧರೆ. ಸಹೋದರ ಕೂಡ ಲಂಡನ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಕಾನೂನು ಪದವೀಧರ ಎಂದು ಹೇಳಿದ್ದಾರೆ.
ನನ್ನ ಹಿನ್ನೆಲೆ ಬಗ್ಗೆ ಮಾತನಾಡುವವರು ಒಮ್ಮೆ ಕಣ್ತೆರೆದು ನೋಡಲಿ ಎಂದಿರುವ ಕುಸುಮಾ, ಹತ್ತು ಅಂಶಗಳನ್ನು ಮುಂದಿಟ್ಟು ಮುನಿರತ್ನಗೆ ತಿರುಗೇಟು ನೀಡಿದ್ದಾರೆ.
1. ನಮ್ಮ ಕುಟುಂಬದಲ್ಲಿ ಯಾರೂ ಕೂಡ ಕ್ರಿಮಿನಲ್ ಹಿನ್ನಲೆಯುಳ್ಳವರಿಲ್ಲ. 2. ಯಾರೂ ಕೂಡ ಜಾತಿ ನಿಂದನೆ ಮಾಡಿಲ್ಲ.
3. ನನ್ನ ಕುಟುಂಬದ ಯಾರೊಬ್ಬರೂ ಕೂಡ ಹೆಣ್ಣುಮಕ್ಕಳ ಅವಹೇಳನ ಮಾಡಿಲ್ಲ.
4. ನನ್ನ ಕುಟುಂಬದ ಯಾವೊಬ್ಬ ಸದಸ್ಯರೂ ರೇಪ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿಲ್ಲ.
5. ನನ್ನ ಕುಟುಂಬದ ಯಾರೊಬ್ಬರೂ ಕಳ್ಳ ಬಿಲ್ ಮಾಡಿಸಿಕೊಂಡ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿಲ್ಲ.
6. ನಾನು ದಲಿತರ ಬಗ್ಗೆ ಯಾವುದೇ ರೀತಿಯ ತುಚ್ಚ ಮಾತುಗಳನ್ನು ಎಂದಿಗೂ ಆಡಿಲ್ಲ.
7. ನಮ್ಮ ಕುಟುಂಬದ ಯಾರೊಬ್ಬರೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿಲ್ಲ.
8. ನನ್ನ ವೈಯುಕ್ತಿಕ ಸ್ವಾರ್ಥ ಸಾಧನೆಗಾಗಿ ಯಾವ ಅಧಿಕಾರಿಗಳ ಅಮಾನತಿಗೆ ನಾನು ಕಾರಣಳಾಗಿಲ್ಲ.
9. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಮನೆಗೆ ಕರೆದು ಹಣ ನೀಡುವಂತೆ ಹೆದರಿಸಲಿಲ್ಲ.
10. ನನ್ನ ಸಹೋದರನ ವೃತ್ತಿ ವಕೀಲಿಕೆ, ಆತ ಯಾವುದೇ ರೌಡಿ ಶೀಟರ್ ಅಲ್ಲ. ನನ್ನ ಬಗ್ಗೆ ಆಧಾರರಹಿತವಾಗಿ ಮಾತನಾಡುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ನಿನ್ನೆಯೂ ಮುನಿರತ್ನ ಆರೋಪಕ್ಕೆ ತಿರುಗೇಟು ನೀಡಿದ್ದ ಕುಸುಮಾ, ಶಾಸಕ ಮುನಿರತ್ನ ಅವರ ಮೇಲಿನ ಮೊಟ್ಟೆ ಅಟ್ಯಾಕ್ ಚಿತ್ರದ ರಚನೆ ಹಾಗೂ ನಿರ್ಮಾಣ ಸ್ವತಃ ಅವರದ್ದೇ ಎಂದು ವ್ಯಂಗ್ಯವಾಡಿದ್ದರು. ದಲಿತರನ್ನು ತುಚ್ಚವಾಗಿ ನಿಂದಿಸಿ, ಒಕ್ಕಲಿಗ ಗುತ್ತಿಗೆದಾರನ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದ ಧ್ವನಿ FSL ರಿಪೋರ್ಟ್‌ನಲ್ಲಿ ಅವರದ್ದೇ ಎಂದು ಸಾಬೀತಾದ ನಂತರ ತರಹೇವಾರಿ ನಾಟಕಗಳು ಆರಂಭವಾಗಿವೆ. ಸಾರ್ವಜನಿಕವಾಗಿ ತನ್ನ ನಿಜರೂಪ ಬೆತ್ತಲಾದ ನಂತರ ಸಿಂಪತಿ ಗಿಟ್ಟಿಸಿಕೊಳ್ಳಲು “ಇಮೇಜ್ ಬಿಲ್ಡಿಂಗ್” ಆಕ್ಟಿವಿಟಿಯ ಒಂದು ಭಾಗವೇ ಇಂದಿನ ಪ್ರಹಸನ ಎಂದು ಕುಸುಮಾ ಅವರು ಲೇವಡಿ ಮಾಡಿದ್ದರು.