ಕುಂಭಮೇಳ: ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಯೋಗಿ ಸರ್ಕಾರ ವಿಫಲ: ಅಖಿಲೇಶ್‌ ಆರೋಪ

Most read

ಕಾನ್ಪುರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಮತ್ತು ಅಪ್ರಾಮಾಣಿಕವಾಗಿದ್ದು, ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕುಂಭಮೇಳವನ್ನು ಆಯೋಜಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕುಂಭಮೇಳದಲ್ಲಿಯೂ ಬಹುದೊಡ್ಡ ಹಗರಣ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾಕುಂಭವು ನಂಬಿಕೆಯ ಸಂಕೇತವಾಗಿದೆ. ಆದರೆ ಬಿಜೆಪಿ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ನಾನು ಮಹಾ ಕುಂಭಕ್ಕೆ ಹೋಗಿದ್ದೆ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಹೇಳಲು ಸಾಧ್ಯವೇ ಇಲ್ಲ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲುಆದಿತ್ಯನಾಥ ಅವರು ಉರ್ದು ಭಾಷೆಯ ವಿಷಯವನ್ನು ಪ್ರಸ್ತಾಪಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಕನೌಜ್‌ ನ ದೇವಸ್ಥಾನಕ್ಕೆ ಹೋಗಿದ್ದೆ. ನಾನು ಹೋಗಿ ಬಂದ ನಂತರ, ಬಿಜೆಪಿಯವರು ದೇವಸ್ಥಾನವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿದರು. ಇದೀಗ ನಾನು ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದೇನೆ. ಬಿಜೆಪಿಯವರು ಗಂಗಾ ಮಾತೆಯನ್ನು ಯಾವುದರಿಂದ ಹೇಗೆ ಸ್ವಚ್ಛಗೊಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕಾನ್ಪುರದಲ್ಲಿ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಅಭಿವೃದ್ದಿಗೊಳ್ಳಬೇಕು. ಕಾನ್ಪುರಕ್ಕೆ ಒಂದು ಕಾಲದಲ್ಲಿ ಇದ್ದ ಹೆಸರು ಮತ್ತು ಖ್ಯಾತಿ ಮತ್ತೆ ಮರಳಿಬರಬೇಕು ಎಂದು ಆಶಿಸುತ್ತೇವೆ. ಕಾನ್ಪುರ ಜನರಿಗೆ ಉದ್ಯೋಗ ಒದಗಿಸುವುದರ ಜತೆಗೆ ರಾಜ್ಯದ ಆರ್ಥಿಕತೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿತ್ತು. ಆದರೆ ಬಜೆಟ್‌ನಲ್ಲಿ ಕಾನ್ಪುರಕ್ಕೆ ಅನ್ಯಾಯವಾಗಿದೆ ಎಂದು ಅಖಿಲೇಶ್‌ ಯಾದವ್‌ ಕಿಡಿಕಾರಿದ್ದಾರೆ.

More articles

Latest article