ಕುಂಭಮೇಳ ಬಿಂಬಿಸುವ ನಂಬಿಕೆ ಮತ್ತು ಮರೆಯಿಸುವ ವಾಸ್ತವ

Most read

ಇಶಿತಾ ಮಿಶ್ರ ಎಂಬ ಪತ್ರಕರ್ತೆ ಸಾಸಿವೆ ಕಾಳು ಬೀಳಲೂ ಜಾಗವಿಲ್ಲದಂತೆ ತುಂಬಿಹೋದ ಜನಜಂಗುಳಿಯಲ್ಲಿ ಹದಿನೆಂಟು ವರ್ಷದ ಪಂಕಜ್ ಕುಮಾರ್ ಟೀ ಮಾರಿ ನೋಟ್ ಪುಸ್ತಕಕ್ಕೆ  ಕಾಸು ಮಾಡಿಕೊಳ್ಳುವುದನ್ನು, ಮೂವತ್ತೆರಡು ವರ್ಷದ ರೋಹಿತ್ ಕುಮಾರ್ ಹಗಲು ಹೊತ್ತು ಸಿಮ್ ಕಾರ್ಡ್ ಮಾರಾಟ ಮಾಡಿ, ಸಂಜೆ ಯಾತ್ರಾರ್ಥಿಗಳಿಗೆ ಬೈಕ್ ರೈಡ್ ಸೇವೆ ಒದಗಿಸುವ ಕೆಲಸ ಮಾಡುವುದನ್ನು, ಎರಡು ಮಕ್ಕಳ ತಂದೆಯಾದ ಇವ ಸ್ನಾತಕೋತ್ತರ ಪದವಿ ಗಳಿಸಿಯೂ ನಿರುದ್ಯೋಗಿಯಾಗಿರುವುದನ್ನು ಗುರುತಿಸುತ್ತಾರೆ. ಇಂತಹಾ ಪಂಕಜ್ ಮತ್ತು ರೋಹಿತರಿಂದಲೇ ಕುಂಭಮೇಳ ತುಂಬಿ ಹೋಗಿರುವುದನ್ನು ಹೊರಪ್ರಪಂಚ ಗುರುತಿಸುವುದಿಲ್ಲ!! ವೃಂದಾ ಹೆಗ್ಡೆ, ಉಪನ್ಯಾಸಕರು.

ಭಾರತದ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಯಾಗಿದ್ದ ಫಾಲಿ ಎಸ್ ನಾರಿಮನ್ ರವರು ʼBefore  Memory  Fadesʼ ಎಂಬ ತಮ್ಮ ಆತ್ಮಕಥೆಯಲ್ಲಿ ಜನ ಅನ್ಯಾಯವನ್ನು ತಾಳಿಕೊಳ್ಳುವುದರ ಹಿಂದಿರುವ ಶಕ್ತಿಯನ್ನು ಗುರುತಿಸುತ್ತಾ ಲಾರ್ಡ್ ಪೆಥಿಕ್ ಲಾರೆನ್ಸ್ (1945ರಿಂದ 1947 ರವರೆಗೆ ಭಾರತದ ಕಾರ್ಯದರ್ಶಿಯಾಗಿದ್ದವರು) ತಮ್ಮ ಗೆಳೆಯ ಗಾಂಧೀಜಿಯವರಿಗೆ ಬರೆದ ಪತ್ರವನ್ನು ಉಲ್ಲೇಖಿಸುತ್ತಾರೆ.

ಜೀವನದ ಸಂಕಷ್ಟಗಳಿಂದ ಬೆಂದುಹೋದ ರೈತನೊಬ್ಬನಿಗೆ ಧರ್ಮಗುರುವೊಬ್ಬ ದೇವರಲ್ಲಿ ನಂಬಿಕೆಯಿರಿಸಲು ಹೇಳುತ್ತಾನೆ. ಆದರೆ ಆ ಬಡರೈತ “ಇಲ್ಲ ದೇವರಲ್ಲಿ ನನಗೆ ನಂಬಿಕೆಯಿಲ್ಲ. ಹಿಂದಿನ ವರ್ಷ ಅವ ನನ್ನ ಹಂದಿಯನ್ನು ಕಸಿದುಕೊಂಡ. ಹೋದ ವರ್ಷ ನನ್ನ ಹೆಂಡತಿಯನ್ನು ಕಿತ್ತುಕೊಂಡ. ನನ್ನ ಮನೆ ಸುಟ್ಟುಹೋಗುವಂತೆ ನೋಡಿಕೊಂಡ. ನನಗೆ ಅವನ ಮೇಲೆ ನಂಬಿಕೆಯಿಲ್ಲ. ಆದರೆ ಹೇಳ್ತೀನಿ ಕೇಳಿ, ಅವನ ಮೇಲೂ ಒಂದು ಶಕ್ತಿ ಎನ್ನುವುದಿದೆ. ದೇವನ ಆಟ ಮಿತಿಮೀರದಂತೆ ಅದು ನೋಡಿಕೊಳ್ಳುತ್ತದೆ.

ಇಂತಹಾ ಅಚಲ ನಂಬಿಕೆಯೇ ಪ್ರಪಂಚವನ್ನು ಮುನ್ನಡೆಸುವುದು. ಅನ್ಯಾಯವನ್ನು ತಾಳಿಕೊಳ್ಳುವ ಶಕ್ತಿಯನ್ನು ಒದಗಿಸುವುದು. ಈಗ ನಡೆಯುತ್ತಿರುವ ಕುಂಭಮೇಳ ಬಿಂಬಿಸುವ ನಂಬಿಕೆಯೂ ಇಂತಹದೇ. ಇದರ ಹಿಂದೆ ಮರವೆಯಾಗುವ ಅನ್ಯಾಯದ ಅನಾವರಣ ಆಗಲೇಬೇಕಿದೆ.

ಯಾವುದೇ ಜಾತ್ರೆ, ಮೇಳ, ಸಮಾರಂಭಗಳಾಗಲಿ ಅದರ ಖರ್ಚು, ವೆಚ್ಚ, ದುಂದು, ದೌಲತ್ತಿನ ಜೊತೆ ಒಂದು ಸಮಾಧಾನಿಸು

ಮ್ಮೇಳನಗಳು ಅದರ ಗಾತ್ರಕ್ಕೆ ಅನುಸಾರವಾಗಿ ನೂರಾರು, ಸಾವಿರಾರು ಅಥವಾ ಲಕ್ಷಗಟ್ಟಲೆ ಜನಕ್ಕೆ ಉದ್ಯೋಗ ಒದಗಿಸುತ್ತವೆ ಎಂಬುದು.. ಅಂಬಾನಿ ಮಗನ ನಿಶ್ಚಿತಾರ್ಥ, ಮದುವೆಯೂ ಇದೇ ಸಮಾಧಾನದಲ್ಲಿ ಸಮಾಪ್ತಿಯಾದವು. ಕೆಲವು  ಆರ್ಥಿಕ ತಜ್ಞರೂ, ರಾಜಕಾರಣಿಗಳೂ  ಕೂಡ ಆರ್ಥಿಕತೆ ಮೇಲಿನಿಂದ ಅಂದರೆ ಶ್ರೀಮಂತರಿಂದ ಕೆಳಗೆ ಹನಿಹನಿಯಾಗಿ ಹರಿಯುವುದು ಎಂಬ ತತ್ವದಲ್ಲಿ ನಂಬಿಕೆಯಿರಿಸುತ್ತಾರೆ. ಹಾಗಾಗಿ ಶ್ರೀಮಂತ ಕೈಗಾರಿಕೋದ್ಯಮಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತಾರೆ.

ಇದು ಸಾಧುವೆ?

ಕುಂಭ ಮೇಳ

ಆರ್ಥಿಕ ರೀತಿ ನೀತಿಗಳ ತಪ್ಪು ಲೆಕ್ಕಾಚಾರದಿಂದ ಒಂದು ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತದೆ ಮತ್ತು ಭಾರತದಂತಹ ಜಾತಿ, ಧರ್ಮ, ನಂಬಿಕೆ ಮುಂತಾದ ವಿಭಿನ್ನ ನೆಲೆಗಳಿರುವ ದೇಶದಲ್ಲಂತೂ ಅರಾಜಕತೆಯನ್ನೇ ಸೃಷ್ಟಿಸಿಬಿಡುತ್ತದೆ. ಸಾಮಾಜಿಕ ಪಿಡುಗುಗಳು ಹೊಸವೇಷದಲ್ಲಿ ತಲೆಎತ್ತುತ್ತವೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ  ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿಯರ ಸಂಗಮ ಸ್ಥಳ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆಯಷ್ಟೆ? ಕೇಸರಿ ಬಟ್ಟೆ ತೊಟ್ಟ ಚಿತ್ರ ವಿಚಿತ್ರ  ಸಾಧು ಸಂತರಿಂದ, ಭಕ್ತಾದಿಗಳಿಂದ, ದೊಡ್ಡ, ಸಣ್ಣ ವ್ಯಾಪಾರಿಗಳಿಂದ ಜ್ಯೋತಿಷಿ, ಭಕ್ತಾದಿಗಳಿಂದ ಕಾಲು ಹಾಕಲು ಜಾಗ ಇಲ್ಲದಂತೆ ಜನಪ್ರವಾಹ ಹರಿದಿದೆಯಷ್ಟೆ? ಇದು ಹೊರನೋಟಕ್ಕೆ ಪಕ್ಕಾ ಧಾರ್ಮಿಕ  ಉತ್ಸವವಾಗಿ, ನಂಬಿಕೆ, ಭಕ್ತಿಗಳು ಮೇಳೈಸಿ ಅನುಭಾವದ ಪ್ರಪಂಚವೇ ಸೃಷ್ಟಿಯಾದಂತೆ ಕಾಣುತ್ತದೆ.

ಆದರೆ ಭಕ್ತಿ, ನಂಬಿಕೆಗಳ ಹಿಂದೆ ಘೋರ ಸತ್ಯವೊಂದು ಅಡಗಿರುತ್ತದೆ. ಆ ಸತ್ಯ ಮುನ್ನೆಲೆಗೆ ನಿಶ್ಚಿತವಾಗಿ  ಬರಲೇಬೇಕಾಗಿದ್ದು. ಅದೇ ಆರ್ಥಿಕ ಅಸಮಾನತೆ.

ದಾರಿದ್ರ್ಯ, ಹಸಿವು, ಮೌಢ್ಯಗಳು ಯಾವುದೋ ಶತಮಾನದ ವಿದ್ಯಮಾನಗಳಲ್ಲ ಬದಲಿಗೆ ಪ್ರಸ್ತುತ ಕಾಲದ ಸತ್ಯಗಳಾಗಿವೆ. ಕೃಷಿ ಕಾರ್ಮಿಕರು ಪೇಟೆಗೆ ಬಂದು ಕಟ್ಟಡ ಕಾರ್ಮಿಕರಾಗಿ ಅಷ್ಟೋ ಇಷ್ಟೋ ಹಣ ಗಳಿಸುವುದು, ಮೈಕ್ರೋ ಫೈನಾನ್ಸ್ ನ ದೆಸೆಯಿಂದ ಗಾಡಿ ಖರೀದಿ, ಮನೆ ದುರಸ್ತಿ, ಅದ್ದೂರಿ ಮದುವೆ (ಎಲ್ಲವೂ ಸಾಲ ಮಾಡಿ) ಇವುಗಳು ಒಂದು ಥರದ ಆರ್ಥಿಕ ಏರುಗತಿಯ ಹುಸಿ ಚಿತ್ರವನ್ನು ಸೃಷ್ಟಿಸಿವೆ. ಯಾರನ್ನೇ ಕೇಳಿದರೂ ಈಗ ಮೊದಲಿನಷ್ಟು ಬಡತನ ಇಲ್ಲ ಎಂದೇ ಹೇಳುತ್ತಾರೆ. ಹುಲ್ಲಿನ ಗುಡಿಸಲು ಕಾಣುವುದು ಅಪರೂಪವಾಗಿದೆ. ಎಣ್ಣೆ ಕಾಣದ ತಲೆಯ, ಗೊಣ್ಣೆ ಸುರಿಸುವ ಮಕ್ಕಳ ಚಿತ್ರವೂ ಬದಲಾಗಿದೆ. ಭಿಕ್ಷುಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. (ಈಗ ಮತ್ತೆ ಆತಂಕ ಹುಟ್ಟಿಸುವಷ್ಟು ಏರುತ್ತಿದೆ ಅದು ಬೇರೆ ವಿಷಯ). ಈ ಹುಸಿ ಗುಳ್ಳೆ ಒಡೆಯಲು ಶುರುವಾಗಿದೆ. ಕೀವು ಸೋರಲು ಪ್ರಾರಂಭಿಸಿದೆ. ಮೈಕ್ರೋ ಫೈನಾನ್ಸ್  ನ ಕಾಟ ತಡೆಯಲಾರದೆ ಆತ್ಮಹತ್ಯೆಗಳು ನಡೆಯುತ್ತಿವೆ. ಮೈಕ್ರೋ ಫೈನಾನ್ಸ್  ನಡೆಸುವವರ ನೀತಿ ನಿಯಮಗಳ ಮೇಲೆ ನಿರ್ಬಂಧ, ಹತೋಟಿಯ ಕಾನೂನು ಬರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಮೈಕ್ರೋ ಫೈನಾನ್ಸ್ ಗಳು ಹುಟ್ಟಿಕೊಂಡದ್ದು ಹೇಗೆ?

ಅಸಂಘಟಿತ ಕಾರ್ಮಿಕರಿಗೆ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳ ಹತ್ತಿರ ಸುಳಿಯುವ ಅವಕಾಶಗಳಿರುವುದಿಲ್ಲ. ನಿಗದಿತ ಆದಾಯ ಇರುವ ಜನರಿಗೆ ಮಾತ್ರ ಇಂತಹಾ ಬ್ಯಾಂಕುಗಳ ಸೌಲಭ್ಯ ಲಭ್ಯವಿರುತ್ತದೆ. ಬಡಜನರ ಆಶಾಕಿರಣವಾಗಿ ಬಾಂಗ್ಲಾ ದೇಶದಲ್ಲಿ ಈಗಿನ ಸರ್ಕಾರದ ಮುಖ್ಯ ಮಾರ್ಗದರ್ಶಕರಾಗಿರುವ ಪ್ರೊಫೆಸರ್ ಮೊಹಮ್ಮದ್ ಯೂನುಸ್ ರವರು 1976ರಲ್ಲಿ ಪ್ರಯೋಗಾರ್ಥವಾಗಿ ಶುರು ಮಾಡಿ ಯಶಸ್ವಿಯಾದ ಆರ್ಥಿಕ ಮಾದರಿ ಇದು. ಬಡಜನರ ಆರ್ಥಿಕ ಸಂಕಟ ಪರಿಹರಿಸಲು ಅವರು ಕಂಡುಕೊಂಡ ಮಾರ್ಗ. ಬ್ಯಾಂಕುಗಳು ಇವರ ಮನವಿಗೆ ಸ್ಪಂದಿಸದಿದ್ದಾಗ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆ ಮಾಡಿದ್ದು ಇವರ ಹೆಗ್ಗಳಿಕೆ. ನನಗೆ ನೆನಪಿರುವಂತೆ ಪ್ರತಿದಿನ ಒಂದು ರೂಪಾಯಿ ಮಿಗಿತಾಯದ ಯೋಜನೆ ಯೂನುಸ್ ಪ್ರಾರಂಭಿಸಿದ್ದು. ಬಡಜನರು ಅಲ್ಲಿಯವರೆಗೆ ತಮ್ಮದಲ್ಲ ಎಂದುಕೊಂಡ ‘ಉಳಿತಾಯ’ ಎಂಬ  ಪ್ರಾಥಮಿಕ ಆರ್ಥಿಕ ಹೆಜ್ಜೆಯನ್ನು ಇಡುವಂತೆ ಬಡವರ   ಬದುಕಿನಲ್ಲಿ  ಸಾಧ್ಯಗೊಳಿಸಿ, ತಮ್ಮದೇ ಉಳಿತಾಯವನ್ನು ಬಂಡವಾಳವಾಗಿಸಿಕೊಂಡು ತಾವೇ ನಿಭಾಯಿಸಿಕೊಳ್ಳುವಂತೆ ಗ್ರಾಮೀಣ ಬ್ಯಾಂಕುಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದು ಪ್ರೊಫೆಸರ್  ಯೂನುಸ್. ಈ ಯಶಸ್ಸು ಬೇರೆ ದೇಶಗಳಿಗೂ ಮಾದರಿಯಾಗಿ ಕಂಡು ಭಾರತದಲ್ಲೂ ಈ ಥರದ ಆರ್ಥಿಕ ಚಟುವಟಿಕೆ ಜಾರಿಗೆ ಬಂದಿತು. ಮೊದಮೊದಲು ಆಶಾದಾಯಕವಾಗಿ ಕಂಡ, ಲಾಭರಹಿತ ಸಂಸ್ಥೆಗಳು ನಡೆಸಿದ ಈ ಮೈಕ್ರೋ ಫೈನಾನ್ಸ್ ಎಂಬ ಆರ್ಥಿಕ ಚಟುವಟಿಕೆ ನಿಧಾನವಾಗಿ ಲಾಭಕೋರ ಸಂಸ್ಥೆಗಳ ಆಗಮನದಿಂದಾಗಿ ಹಳ್ಳಹಿಡಿಯತೊಡಗಿದವು. ಇದಕ್ಕೆ ಮುಖ್ಯ ಕಾರಣ ಸಾಲ ಬಯಸುವವರ ಸಂಖ್ಯೆ ಜಾಸ್ತಿಯಾಗತೊಡಗಿದ್ದು.

ಯೋಜನೆ ವಿಫಲವಾಗಲು ಮುಖ್ಯ ಕಾರಣ..

ಪ್ರೊಫೆಸರ್ ಮೊಹಮ್ಮದ್ ಯೂನುಸ್

ನಿಶ್ಚಿತ ಆದಾಯ ಪಡೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು. ಸರ್ಕಾರದ ಆರ್ಥಿಕ ನೀತಿಗಳ ಅನ್ವಯ ಸರ್ಕಾರಿ ನೌಕರಿಗಳ ಸಂಖ್ಯೆ ಕಡಿತವಾಗಿರುವುದರಿಂದ ನಿರುದ್ಯೋಗ ಸೃಷ್ಟಿ ಆಗಿರುವುದಂತೂ ಶತಸ್ಸಿದ್ಧ. ಕೃಷಿ ವಲಯದ ಕಡೆ ಸರ್ಕಾರಗಳು ತೋರುವ ದಿವ್ಯ ನಿರ್ಲಕ್ಷ್ಯ ಹೆಚ್ಚು ಹೆಚ್ಚು ಜನರನ್ನು ನಗರದತ್ತ ಮುಖ ಮಾಡಿಸಿತು. ಅಕ್ಷರವಂಚಿತ ಸಮುದಾಯಗಳು ಭದ್ರ ಬದುಕಿನ ಕನಸಿನೊಂದಿಗೆ ವಿದ್ಯಾಭ್ಯಾಸ ಮುಗಿಸುವ ಹೊತ್ತಿಗೆ ಅವಕಾಶ ಬರಿದಾದ ಪ್ರಪಂಚವನ್ನು ಎದುರುಗಾಣಬೇಕಾದ ಅವಸ್ಥೆ ಎದುರಾಯಿತು.!! ಸರ್ಕಾರಿ ಇಲಾಖೆಗಳಲ್ಲಿ ಲಕ್ಷ ಲಕ್ಷ ಉದ್ಯೋಗಗಳು ಖಾಲಿ ಬಿದ್ದು ಆ ಕೆಲಸಗಳನ್ನು ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳುವ ರೀತಿ ಜಾರಿಗೆ ಬಂದದ್ದು ವಿಷಾದಕರ.  ದಿನ ಮತ್ತು ಗಂಟೆಗಳ ಲೆಕ್ಕದಲ್ಲಿ ದುಡಿತ, ಆರೋಗ್ಯ ಭದ್ರತೆಯಾಗಲೀ, ವಿರಾಮವಾಗಲೀ ಇಲ್ಲದಿರುವುದು, ವೇತನ ಬದುಕನ್ನು ನಿಭಾಯಿಸಲು ಸಾಲದಿರುವುದು  ಈ ಸಮುದಾಯವನ್ನು ದಾರುಣತೆಯ ಅಂಚಿಗೆ ಎಳೆದೊಯ್ಯುತ್ತಿವೆ.. ಅಷ್ಟೋ ಇಷ್ಟೋ ಬರುವ ಸರ್ಕಾರದ ಕಲ್ಯಾಣ ಯೋಜನೆಗಳ ಅನುಕೂಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟಿವೆ. ಅದನ್ನೂ ಹೊಟ್ಟೆ ತುಂಬಿದವರೂ ಮತ್ತು ಹೊಟ್ಟೆ ತುಂಬದ ಅಜ್ಞಾನಿಗಳೂ ಅಣಕಿಸುವುದುಂಟು. ಇಂತಹ ಸಮುದಾಯ ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ ಗಳ ಸುಳಿಯಲ್ಲಿ ಸಿಗುತ್ತವೆ. ಹಣ ದುಪ್ಪಟ್ಟು ಆಗುವುದೆಂಬ ದುರಾಸೆಗೆ ಬಿದ್ದು ಫೈನಾನ್ಸ್ ಗಳಲ್ಲಿ ಹಣಹೂಡಿ, ವಂಚನೆಗೆ ಒಳಗಾಗಿ ಬೀದಿಪಾಲಾಗುವ ಒಂದು ಅಥವಾ ಇನ್ನೂ ಕಡಿಮೆ ಪ್ರತಿಶತ ಜನರನ್ನೇ ಎತ್ತಿ ತೋರಿಸುವುದರಿಂದ ಈ ಕ್ರೂರ ನಗ್ನಸತ್ಯ ಮರೆಯಾಗಿಬಿಡುತ್ತದೆ.

ಅಭದ್ರ ಬದುಕು ನಂಬಿಕೆ, ಮೌಢ್ಯ, ದೇವರು ಇವುಗಳೊಟ್ಟಿಗೆ ನಿಕಟ ಸಂಬಂಧ ಹೊಂದಿದೆ. ತನ್ನ ಬದುಕಿನ ದಾರುಣತೆಯ ಮೂಲಕಾರಣ ಅರಿಯದ ಮುಗ್ಧ ಮನಸ್ಸು ಸಹಜವಾಗಿ ಶತಮಾನಗಳ ಇತಿಹಾಸವುಳ್ಳ ದೇವರು ನಂಬಿಕೆಗಳ ಮೊರೆ ಹೋಗುತ್ತದೆ. ಭಕ್ತಿಯಾಧಾರಿತ ಸಮಾರಂಭಗಳಿಗೆ ಹೆಚ್ಚು ಜನರು ನುಗ್ಗುವುದೂ ಇದೇ ಕಾರಣಕ್ಕೆ. ಕರ್ನಾಟಕದಲ್ಲಿ ಶಕ್ತಿ ಯೋಜನೆಯಿಂದ ಹಲವಾರು ಮಹಿಳೆಯರು ಗುಡಿ ಗುಂಡಾರ, ಧರ್ಮಕ್ಷೇತ್ರಗಳಿಗೆ ತಿರುಗುವುದೂ ಇದೇ ಕಾರಣಕ್ಕೆ. ಅಪಹಾಸ್ಯಕ್ಕೆ ಒಳಗಾದ ಶಕ್ತಿ ಕಲ್ಯಾಣ ಯೋಜನೆ ಪರವಾಗಿ ವಾದಿಸುವವರನ್ನೂ ಒಮ್ಮೊಮ್ಮೆ ಗೊಂದಲಕ್ಕೀಡು ಮಾಡುವುದೂ ಹೆಚ್ಚಿದ ಮಹಿಳೆಯರ ದೇವಾಲಯ ಸುತ್ತುವಿಕೆ.  ಆದರೆ ಆ ಮಹಿಳೆಯರ ಒಡಲ ಸಂಕಟ ಬೇರೆಯದೇ. ಅದೇ ಅಭದ್ರತೆ.

ಕುಂಭಮೇಳದಲ್ಲಿ ಕಾಲ್ತುಳಿತದ ದುರಂತ

ಜನವರಿ 25ರ  ‘ದ ಹಿಂದೂ ‘ ಆಂಗ್ಲ ದೈನಿಕದಲ್ಲಿ ಕುಂಭಮೇಳದ ಕಥಾನಕ ಇದೆ. ಇಶಿತಾ ಮಿಶ್ರ ಎಂಬ ಪತ್ರಕರ್ತೆ ಸಾಸಿವೆ ಕಾಳು ಬೀಳಲೂ ಜಾಗವಿಲ್ಲದಂತೆ ತುಂಬಿಹೋದ ಜನಜಂಗುಳಿಯಲ್ಲಿ ಹದಿನೆಂಟು ವರ್ಷದ ಪಂಕಜ್ ಕುಮಾರ್ ಟೀ ಮಾರಿ ನೋಟ್ ಪುಸ್ತಕಕ್ಕೆ  ಕಾಸು ಮಾಡಿಕೊಳ್ಳುವುದನ್ನು, ಮೂವತ್ತೆರಡು ವರ್ಷದ ರೋಹಿತ್ ಕುಮಾರ್ ಹಗಲು ಹೊತ್ತು ಸಿಮ್ ಕಾರ್ಡ್ ಮಾರಾಟ ಮಾಡಿ, ಸಂಜೆ ಯಾತ್ರಾರ್ಥಿಗಳಿಗೆ ಬೈಕ್ ರೈಡ್ ಸೇವೆ ಒದಗಿಸುವ ಕೆಲಸ ಮಾಡುವುದನ್ನು, ಎರಡು ಮಕ್ಕಳ ತಂದೆಯಾದ ಇವ ಸ್ನಾತಕೋತ್ತರ ಪದವಿ ಗಳಿಸಿಯೂ ನಿರುದ್ಯೋಗಿಯಾಗಿರುವುದನ್ನು ಗುರುತಿಸುತ್ತಾರೆ. ಇಂತಹಾ ಪಂಕಜ್ ಮತ್ತು ರೋಹಿತರಿಂದಲೇ ಕುಂಭಮೇಳ ತುಂಬಿಹೋಗಿರುವುದನ್ನು ಹೊರಪ್ರಪಂಚ ಗುರುತಿಸುವುದಿಲ್ಲ!! ಈ ರೋಹಿತನ ನಂಬಿಕೆಯನ್ನು ಗುರುತಿಸುವ ಇಶಿತಾ ಕುಂಭಮೇಳದ ನಿಜ ಸ್ವರೂಪವನ್ನು ತೆರೆದಿಡುತ್ತಾರೆ. ರೋಹಿತ ಅಲ್ಲಿ ಗಾಜಿನ ಆಮೆಯನ್ನು ಕೊಂಡುಕೊಳ್ಳುತ್ತಾನೆ. ಮನೆಗೆ ಅಲಂಕಾರಿಕ ವಸ್ತುವಾಗಿ ಅಥವಾ ಮಕ್ಕಳಿಗೆ ಆಟಿಕೆಯಾಗಿ ಅಲ್ಲ. ಬದಲು ದುಬಾರಿಯೆನಿಸಿದರೂ ಈ ವಸ್ತು ತನ್ನ ಬದುಕಿನ ದಿಕ್ಕನ್ನು ಬದಲಿಸಬಹುದು ಎಂಬ ನಂಬಿಕೆಯಿಂದ ಖರೀದಿಸುತ್ತಾನೆ. ಮಾರಾಟಗಾರನ ಬಳಿ ಅದನ್ನು ಹೇಗೆ ಪೂಜೆ ಮಾಡುವುದೆಂದು ಕೇಳುತ್ತಾನೆ. ಅವನು ತಡಮಾಡದೆ, ತಡವರಿಸದೆ ವಿವರಿಸುತ್ತಾನೆ. ‘ಹಾಲಿನಲ್ಲಿ ತೊಳೆದು, ದೀಪ ಹಚ್ಚು’ ಎಂದು. ಗುಲಾಬಿ ಕನಸುಗಳೊಂದಿಗೆ ರೋಹಿತ್ ಕುಮಾರ್ ಗಾಜಿನ ಆಮೆಯನ್ನು ಜೋಪಾನವಾಗಿ ಮನೆಗೊಯ್ಯುತ್ತಾನೆ.  

ಹೊರನೋಟಕ್ಕೆ ಮೌಢ್ಯವಾಗಿ ಕಾಣುವ ರೋಹಿತ್ ಕುಮಾರನ ನಡವಳಿಕೆಯ ಹಿಂದೆ ಎಂಥಾ ಅಗಾಧ ದಾರುಣ ಪ್ರಪಂಚವಿದೆ!!

ಕಾಲ್ತುಳಿತಕ್ಕೆ ಸಿಕ್ಕಿ ಮರಣ ಹೊಂದಿದ ಎಲ್ಲರ ಕೈಯಲ್ಲಿ ಗಾಜಿನ ಆಮೆ ಇರುವುದು ಖಂಡಿತಾ.

ವೃಂದಾ ಹೆಗ್ಡೆ

ಉಪನ್ಯಾಸಕರು

ಇದನ್ನೂ ಓದಿ- ಸನಾತನ ಸಿದ್ಧಾಂತ ಮತ್ತು ಮಹಾಕುಂಭಮೇಳ ದುರಂತ

More articles

Latest article