ಮಡಿಕೇರಿ: ನಾವು ಕೊಟ್ಟ ಎರಡು ಸಾವಿರದಿಂದ ತಾಯಂದಿರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿದ್ದಾರೆ. ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ ಐದಾರು ಸಾವಿರ ಉಳಿತಾಯವಾಗುತ್ತಿದೆ. ಹೀಗಿರುವಾಗ ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಮಹಿಳೆಯರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಮಾಡಿದ ಅಪಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರಿಂದ ನಾನು ಉತ್ತರ ಬಯಸಲ್ಲ. ಅವರು ಎನ್ ಡಿಎ ಅಭ್ಯರ್ಥಿಯಾಗಿರುವುದರಿಂದ ಪ್ರಧಾನಿ ಮೋದಿ ಇದಕ್ಕೆ ಉತ್ತರ ಕೊಡಬೇಕು. ನಿರ್ಮಲ ಸೀತಾರಾಂ, ಸ್ಮೃತಿ ಇರಾನಿ ಅವರು ಇದಕ್ಕೆ ಉತ್ತರ ಕೊಡಬೇಕು. ಇಂತವರನ್ನು ಎನ್ ಡಿಗೆ ಸೇರಿಕೊಂಡು ನನ್ನ ಅಕ್ಕ ತಂಗಿ ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ಇದನ್ನು ಯಾರೂ ಕ್ಷಮಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳಿ ಅಣ್ಣ ತಮ್ಮಂದಿರ ಮನೆಗೆ, ತವರು ಮನೆಗೆ, ತೀರ್ಥಯಾತ್ರೆಗೆ ಹೋಗಿ ಬರಲು ಅನುಕೂಲವಾಗಿದೆ. ಇದನ್ನು ನೀವು ದಾರಿ ತಪ್ಪುತಿದ್ದಾರೆ ಅಂಥ ಹೇಳುತ್ತೀರಿ. ಕುಮಾರ ಸ್ವಾಮಿಯವರೇ, ಇದೆಂಥ ಮಾತು ನಿಮ್ಮಿಂದ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಮಾತಿನಿಂದ ನನಗೆ ದುಃಖ ತಡೆದುಕೊಳ್ಳಲಾಗುತ್ತಿಲ್ಲ. ಮಹಿಳೆಯ ಹೋರಾಟಕ್ಕೆ ನಾನು ಅಡ್ಡ ಬರುವುದಿಲ್ಲ ಎಂದ ಡಿಕೆ ಶಿವಕುಮಾರ್, ಇದು ಬರೀ ಹೆಣ್ಣುಮಕ್ಕಳಿಗೆ ಆದ ಅವಮಾನವಲ್ಲ. ಇಡೀ ಮಾನವ ಕುಲಕ್ಕೆ ಆದ ಅವಮಾನ. ಇದಕ್ಕೆ ದೇಶದ ಪ್ರಧಾನಿ ಮೋದಿಯವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.